ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಎಲ್ಲಾ ಫೇಕ್; ಹೊಸ ಚರ್ಚೆ ಹುಟ್ಟಾಕ್ಕಿದೆ ಪೂಜಾ ಹೆಗ್ಡೆ ಹೇಳಿಕೆ
ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಲಕ್ಷ ಲಕ್ಷ ಫಾಲೋವರ್ಸ್ ಅವರಿಗೆ ಇರುತ್ತಾರೆ. ಕೆಲ ಸ್ಟಾರ್ ನಟ-ನಟಿಯರಿಗೆ ಕೋಟಿ ಕೋಟಿ ಫಾಲೋವರ್ಸ್ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲ ಉತ್ಪನ್ನಗಳ ಪ್ರಚಾರದ ಮೂಲಕ ಒಳ್ಳೆ ಆದಾಯ ಕೂಡ ಗಳಿಸುತ್ತಾರೆ.
ಸಿನಿಮಾ ತಾರೆಯರು ಮಾತ್ರವಲ್ಲ ಕಿರುತೆರೆ ನಟ-ನಟಿಯರು, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್ ಕೂಡ ಸೋಶಿಯಲ್ ಮೀಡಿಯಾ ಬಳಸಿಕೊಂಡು ಒಳ್ಳೆ ಸಂಪಾದನೆ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಗಿಂತ ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ತಾರೆಯರನ್ನು ಫಾಲೋ ಮಾಡುವವರೆಲ್ಲಾ ಬಂದು ಅವರ ಸಿನಿಮಾಗಳನ್ನು ನೋಡುವುದಿಲ್ಲ.

ನಟಿ ಪೂಜಾ ಹೆಗ್ಡೆ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಬಗ್ಗೆ ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಜಾನ್ವಿ ಕಪೂರ್ ಕೂಡ ಇದೇ ಮಾತು ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಇದ್ದಾರೆ, ನಮ್ಮ ಪೋಸ್ಟ್‌ಗಳಿಗೆ ಲೈಕ್ಸ್ ಕಾಮೆಂಟ್ಸ್ ಕೊಡುತ್ತಿದ್ದಾರೆ ಎಂದ ಮಾತ್ರಕ್ಕೆ ಅವರೆಲ್ಲರೂ ಬಂದು ನಮ್ಮ ಸಿನಿಮಾ ನೋಡಲ್ಲ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ.
ಕರಾವಳಿ ಬೆಡಗಿ ಪೂಜಾ ಹೆಗ್ಡೆ ನಟನೆಯ 'ರೆಟ್ರೋ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಚಿತ್ರದಲ್ಲಿ ಸೂರ್ಯ ಜೋಡಿಯಾಗಿ ಪೂಜಾ ಮಿಂಚಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಕೆಲ ಸಂದರ್ಶನಗಳಲ್ಲಿ ಆಕೆ ಮಾತನಾಡಿದ್ದಾರೆ. ಈ ವೇಳೆ ಸೋಶಿಯಲ್ ಮೀಡಿಯಾ ಜನಪ್ರಿಯತೆ ಬಗ್ಗೆಯೂ ಮಾತನಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ನನಗಿಂತ ಕಮ್ಮಿ ಫಾಲೋವರ್ಸ್ ಹೊಂದಿರುವ ನಟರ ಸಿನಿಮಾಗಳು ಬ್ಲಾಕ್‌ಬಸ್ಟರ್ ಆಗ್ತಿದೆ ಎಂದಿದ್ದಾರೆ. ಇದು ಕೆಲ ನಟರ ಅಭಿಮಾನಿಗಳಿಗೆ ಬೇಸರ ತಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ಎದುರಾಗುವ ನೆಗೆಟಿವ್ ಕಾಮೆಂಟ್ಸ್ ಬಗ್ಗೆ ಪೂಜಾ ಹೆಗ್ಡೆ ಮಾತನಾಡಿದ್ದಾರೆ. ತೆಲುಗು ಟಿವಿ5 ವಾಹಿನಿ ಸಂದರ್ಶನದಲ್ಲಿ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಸೋಶಿಯಲ್ ಮೀಡಿಯಾ ಹಾಗೂ ನಿಜವಾದ ಪ್ರಪಂಚ ಬೇರೆ ಬೇರೆ. ಅದು ನಿಜವಾದ ಪ್ರಪಂಚ ಅಲ್ಲ. ನಾನು, ಹೈದರಾಬಾದ್, ತಿರುಪತಿಗೆ ಬಂದಾಗ ಜನರನ್ನು ಭೇಟಿ ಆದಾಗ ಸಿಗುವ ಪ್ರೀತಿ ನಿಜವಾದ ಪ್ರೀತಿ. ಸೋಶಿಯಲ್ ಮೀಡಿಯಾದಲ್ಲಿ ಅರ್ಧಕರ್ಧ ಸುಳ್ಳು" ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ.

"ಕೆಲವರು ಕಾಮೆಂಟ್ ಮಾಡುತ್ತಾರೆ. ಪ್ರೋಫೆಲ್ ಚೆಕ್ ಮಾಡಿದರೆ ಫೋಟೊ ಇರಲ್ಲ. ಅದೆಲ್ಲಾ ಬಾಟ್ಸ್, ಅದನ್ನು ನಿಜ ಎಂದುಕೊಳ್ಳವುದು ತಪ್ಪು. ಅದು ಮುಖ ಇಲ್ಲದ ಟ್ರೋಲ್ಸ್. ಅದು ನನ್ನ ಮೇಲೆ ಪರಿಣಾಮ ಬೀರುತ್ತದೆ. ಕಾರಣ ನಾನು ಮನುಷ್ಯಳೇ. ಆದರೆ ಅದೇ ನಿಜವಲ್ಲ. ನನಗೆ ಇನ್‌ಸ್ಟಾಗ್ರಾಮ್‌ನಲ್ಲಿ 27 ಮಿಲಿಯನ್ಸ್ ಫಾಲೋವರ್ಸ್ ಇದ್ದಾರೆ. ಆದರೆ ಅಷ್ಟು ಜನ ಟಿಕೆಟ್ ತಗೊಂಡು ಸಿನಿಮಾ ನೋಡಲ್ಲ. ಅದು ಮುಖ್ಯ ಅಲ್ವಾ?" ಎಂದು ಪೂಜಾ ಪ್ರಶ್ನಿಸಿದ್ದಾರೆ.
ಮಾತು ಮುಂದುವರೆಸಿರು ಪೂಜಾ ಹೆಗ್ಡೆ "ಕೆಲ ನಟರಿದ್ದಾರೆ. ಅವರ ಇನ್‌ಸ್ಟಾಗ್ರಾಮ್‌ನಲ್ಲಿ 5 ಮಿಲಿಯನ್ ಫಾಲೋವರ್ಸ್ ಕೂಡ ಇರಲ್ಲ. ಆದರೆ ಅವರು ಸೂಪರ್ ಸ್ಟಾರ್ ಆಗಿರುತ್ತಾರೆ. ಹಾಗಾಗಿ ಸೋಶಿಯಲ್ ಮೀಡಿಯಾ ಅನ್ನೋದು ನಿಜವಾದ ಪ್ರಪಂಚ ಎಲ್ಲ. ಹಾಗಾಗಿ ನೀವು ನಿಮ್ಮ ಕೆಲಸ ನೀವು ಮಾಡಿ. ಜನ ನೋಡಿ ಮೆಚ್ಚಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾ ಕಾಮೆಂಟ್ಸ್ ಬಿಟ್ಹಾಕಿ" ಎಂದು ಪೂಜಾ ಹೆಗ್ಡೆ ವಿವರಿಸಿದ್ದಾರೆ.
ಪೂಜಾ ಹೆಗ್ಡೆ ಹೇಳಿಕೆಯನ್ನು ಕೆಲವರು ವಿಭಿನ್ನವಾಗಿ ಅರ್ಥ ಮಾಡಿಕೊಂಡು ಟ್ರೋಲ್ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ನಟನಿಗಿಂತ ಕಮ್ಮಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಇರುವ ಕಲಾವಿದರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ತಮ್ಮ ನೆಚ್ಚಿನ ನಟರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯನ್ನು ಕೂಡ ಅಭಿಮಾನಿಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹಾಗಾಗಿ ಪೂಜಾ ಹೇಳಿಕೆ ವೈರಲ್ ಆಗುತ್ತಿದೆ.
ಜ್ಯೂ. ಎನ್‌ಟಿಆರ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 8 ಮಿಲಿಯನ್ ಇದೆ. ಬಾಹುಬಲಿ ಪ್ರಭಾಸ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು 13 ಮಿಲಿಯನ್ ಮಂದಿ ಮಾತ್ರ ಫಾಲೋ ಮಾಡುತ್ತಿದ್ದಾರೆ. ಇನ್ನು ತಮಿಳು ನಟ ವಿಜಯ್‌ಗೆ ಕೂಡ 13 ಮಿಲಿಯನ್ ಫಾಲೋವರ್ಸ್ ಮಾತ್ರ ಇದ್ದಾರೆ. ಸದ್ಯ ಪೂಜಾ ಹೆಗ್ಡೆ ಹೇಳಿಕೆಯನ್ನು ಇದಕ್ಕೆ ಹೋಲಿಸಿ ಬೇರೆ ನಟರ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಪೂಜಾ ಇಂತಹ ನಟರ ಬಗ್ಗೆಯೇ ಹೇಳಿರೋದು ಎಂದು ವ್ಯಂಗ್ಯವಾಡುತ್ತಿದ್ದಾರೆ.
ಇತ್ತೀಚೆಗೆ ರಾಮ್‌ಚರಣ್ ನಟನೆಯ 'ಗೇಮ್‌ಚೇಂಜರ್' ಸಿನಿಮಾ ಹೀನಾಯವಾಗಿ ಸೋತಿತ್ತು. ರಾಮ್‌ಚರಣ್ ಇನ್‌ಸ್ಟಾಗ್ರಾಮ್ ಖಾತೆಯನ್ನು 27 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದಾರೆ. ಪೂಜೆ ಹೆಗ್ಡೆ ಹೇಳಿಕೆಯನ್ನು ಇದಕ್ಕೆ ಹೋಲಿಸಿ ಬೇರೆ ನಟರ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಮೆಗಾಪವರ್ ಸ್ಟರ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಎರಡೂವರೆ ಕೋಟಿ ಮಂದಿ ಫಾಲೋವರ್ಸ್ ಇದ್ದರೂ ಸಿನಿಮಾ ಯಾಕೆ ಸೋಲ್ತು ಎಂದು ಅಣಕವಾಡುತ್ತಿದ್ದಾರೆ.
ಸಾಕಷ್ಟು ಜನ ಪೂಜಾ ಹೆಗ್ಡೆ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವತ್ತು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದು ಸುಲಭವಲ್ಲ. ಜನ ಸೋಶಿಯಲ್ ಮೀಡಿಯಾದಲ್ಲಿ ಮುಳುಗಿ ಹೋಗಿದ್ದಾರೆ. ಒಳ್ಳೆ ಕಂಟೆಂಟ್ ಇರುವ ನಿರೀಕ್ಷೆ ಹುಟ್ಟು ಹಾಕುವ ಸಿನಿಮಾಗಳನ್ನು ಮಾತ್ರ ನೋಡಲು ಮುಂದಾಗುತ್ತಾರೆ. ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಸ್ಟಾರ್‌ಗಳ ಸ್ಟಾರ್‌ಡಮ್ ನಿರ್ಧರಿಸುವುದಿಲ್ಲ.
3 ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಕೂಡ ಇದೇ ರೀತಿ ಮಾತನಾಡಿದ್ದರು. "ನಟಿಯಾಗಿ ಸೋಶಿಯಲ್ ಮೀಡಿಯಾ ಜನಪ್ರಿಯತೆಗೂ ಸಿನಿಮಾಗಳಿಗೂ ಸಂಬಂಧವಿಲ್ಲ. ಅದರಿಂದ ಏನಾದರೂ ಉಪಯೋಗ ಆಗುವಂತೆ ಇದ್ದಿದ್ದರೆ, ಇನ್‌ಸ್ಟಾಗ್ರಾಮ್‌ನಲ್ಲಿ ನನ್ನನ್ನು 2 ಕೋಟಿ ಜನ ಫಾಲೋ ಮಾಡ್ತಾರೆ. ಅವರು ಮಾತ್ರ 'ಮಿಲಿ' ಸಿನಿಮಾ ನೋಡಿದ್ದರೆ ಬ್ಲಾಕ್‌ಬಸ್ಟರ್ ಹಿಟ್ ಆಗುತ್ತಿತ್ತು." ಎಂದು ಆಕೆ ಹೇಳಿದ್ದರು.
ಇನ್‌ಸ್ಟಾಗ್ರಾಮ್ ಫಾಲೋಯಿಂಗ್ ಸ್ಟಾರ್‌ಡಮ್‌ಗೆ ಸಂಕೇತ ಅಲ್ಲ ಎಂದು ಜಾನ್ವಿ ಕಪೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. "ಕಲಾವಿದರು ಸಮಾಜದ ಮೇಲೆ ಪ್ರಭಾವ ಬೀರುತ್ತಾರೆ. ಸ್ಟಾರ್‌ಡಮ್ ಹೆಚ್ಚಾದಂತೆ ಅದು ಹೆಚ್ಚುತ್ತದೆ. ಬರೀ ಇನ್‌ಸ್ಟಾಗ್ರಾಮ್ ಫಾಲೋಯಿಂಗ್ ಮಾತ್ರವೇ ಸ್ಟಾರ್‌ಡಮ್‌ಗೆ ಸಂಕೇತ ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ನನಗೆ ಒಳ್ಳೆ ಇಮೇಜ್ ಇದ್ದರೆ ಪ್ರೇಕ್ಷಕರಿಗೆ ನನ್ನ ಸಿನಿಮಾ ತಲುಪಿಸಲು ಮಾತ್ರ ಅದು ಸಹಕಾರಿ ಆಗುತ್ತದೆ. ಸೋಶಿಯಲ್ ಮೀಡಿಯಾ ಬರೀ ಬ್ರ್ಯಾಂಡಿಂಗ್, ಲೈಕ್ಸ್‌ಗೆ ಮಾತ್ರ" ಎಂದು ಜಾನ್ವಿ ಅಂದು ಹೇಳಿದ್ದರು.
ನಟಿ ಪೂಜಾ ಹೆಗ್ಡೆ ಆರಕ್ಕೇರದ ಮೂರಕ್ಕಿಳಿಯದ ನಟಿಯಾಗಿ ಉಳಿದುಬಿಟ್ಟಿದ್ದಾರೆ. ಸ್ಟಾರ್ ನಟರ ಜೊತೆ ನಟಿಸಿದರೂ ಪ್ರಯೋಜನವಾಗುತ್ತಿಲ್ಲ. ತೆಲುಗಿನಲ್ಲಿ ಸದ್ಯ ಯಾವುದೇ ಅವಕಾಶಗಳು ಸಿಗುತ್ತಿಲ್ಲ. ಹಾಗಾಗಿ ತಮಿಳು ಹಾಗೂ ಹಿಂದಿ ಸಿನಿಮಾಗಳ ಕಡೆ ಫೋಕಸ್ ಮಾಡಿದ್ದಾರೆ. ವಿಜಯ್ ನಟನೆಯ 'ಜನ ನಾಯಕನ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. 'ಕಾಂಚನಾ'-4 ಹಾಗೂ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಸಿನಿಮಾ ಕೂಡ ಕೈಯಲ್ಲಿದೆ.
ರಜನಿಕಾಂತ್ ನಟನೆಯ 'ಕೂಲಿ' ಚಿತ್ರದ ಸ್ಪೆಷಲ್ ಸಾಂಗ್‌ಗೆ ಪೂಜಾ ಹೆಜ್ಜೆ ಹಾಕುತ್ತಿದ್ದಾರೆ. ಸದ್ಯ 'ರೆಟ್ರೋ' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಚಿತ್ರದ 'ಕನ್ನಿಮಾ' ಸಾಂಗ್‌ನಲ್ಲಿ ಪೂಜಾ ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಕನ್ನಡ ಚಿತ್ರದಲ್ಲಿ ಕೂಡ ನಟಿಸ್ತೀನಿ ಎಂದಿದ್ದಾರೆ. ನಾನು ಕರ್ನಾಟಕದವಳು, ತುಳು ಹುಡುಗಿ. ಪೋಷಕರು, ಸಂಬಂಧಿಕರು ಕನ್ನಡ ಸಿನಿಮಾ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ. ಒಳ್ಳೆ ಅವಕಾಶ ಸಿಕ್ಕರೆ ನಟಿಸ್ತೀನಿ ಎಂದಿದ್ದಾರೆ.


Click it and Unblock the Notifications











