ಮಲಯಾಳಂ ನಂತರ ತೆಲುಗು ಚಿತ್ರರಂಗದಲ್ಲಿ ಕಂಪನ, ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ..!
ಮಲಯಾಳಂ ಚಿತ್ರರಂಗದಲ್ಲಿ ಎದ್ದಿರುವ ಲೈಂಗಿಕ ದೌರ್ಜನ್ಯದ ಅಲೆ, ಚಿತ್ರರಂಗದಲ್ಲಿ ಅನೇಕರ ನಿದ್ದೆಯನ್ನು ಕೆಡಿಸಿದೆ. ಯಾವ ಕ್ಷಣದಲ್ಲಾದರೂ.. ಎಲ್ಲಿಂದಾದರೂ ಬಂದು.. ಯಾರಾದರೂ ತಮ್ಮ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಬಹುದು ಎನ್ನುವ ಭಯ ಅನೇಕರನ್ನು ಕಾಡುತ್ತಿದೆ. ಎಲ್ಲ ಭಾಷೆಯಲ್ಲಿಯೂ ಹೇಮಾ ಆಯೋಗದಂತೆ ಸಮಿತಿ ರಚನೆಯಾಗಬೇಕು ಎಂಬ ಮಾತು ಕೇಳಿ ಬರುತ್ತಿದೆ. ಇದು ಕೇವಲ ಮಲಯಾಳಂ ಚಿತ್ರರಂಗದ ಸಮಸ್ಯೆ ಅಲ್ಲ ಎಲ್ಲ ಭಾಷೆಯಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಇದಕ್ಕೆ ಪೂರಕವಾಗಿ ಮಲಯಾಳಂ ಚಿತ್ರರಂಗದ ನಂತರ ತೆಲುಗು ಚಿತ್ರರಂಗದಲ್ಲಿ ಕಂಪನ ಶುರುವಾಗಿದೆ. ಈಗಾಗಲೇ ಪ್ರಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಮೇಲೆ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದು, ಪ್ರಕರಣ ದಾಖಲಾಗಿದೆ. ವಿಚಾರಣೆ ಕೂಡ ನಡೆಯುತ್ತಿದೆ. ಇದರ ನಡುವೆ ಈಗ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ಪೂನಂ ಕೌರ್ ಲೈಂಗಿಕ ದೌರ್ಜನ್ಯದ ಬಾಂಬ್ ಸಿಡಿಸಿದ್ದಾರೆ. ತೆಲುಗು ಚಿತ್ರರಂಗ ಇನ್ನಾದರೂ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ಜಾನಿ ಮಾಸ್ಟರ್ ಪ್ರಕರಣ ಮುಂದಿಟ್ಟುಕೊಂಡು ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ವಾಗ್ದಾಳಿಯನ್ನು ಮಾಡಿರುವ ಪೂನಂ ಕೌರ್, ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ನಾನು ದೂರು ನೀಡಿದಾಗ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಚಿತ್ರರಂಗದ ಹಿರಿಯರಿಗೆ ನಾನು ದೂರು ನೀಡಿದ್ದೆ, ಆದರೆ ಪ್ರಯೋಜನವಾಗಲಿಲ್ಲ ಬದಲಿಗೆ ಚಿತ್ರರಂಗದಿಂದ ನಾನೇ ಸದ್ದಿಲ್ಲದೇ ದೂರವಾಗಬೇಕಾಯಿತು. ಇನ್ನಾದರೂ ಕ್ರಮ ಕೈಗೊಳ್ಳಬೇಕು ಈ ವಿಚಾರದ ಕುರಿತು ಚರ್ಚೆಯಾಗಬೇಕು, ಚಿತ್ರರಂಗದ ದೊಡ್ಡ ದೊಡ್ಡವರು ತ್ರಿವಿಕ್ರಮ್ ಶ್ರೀನಿವಾಸ್ ಅವರನ್ನು ಪ್ರಶ್ನೆ ಮಾಡಬೇಕು ಎಂದು ಪೂನಂ ಕೌರ್ ಬರೆದುಕೊಂಡಿದ್ದಾರೆ.
ಇನ್ನೂ ಪೂನಂ ಕೌರ್, ತ್ರಿವಿಕ್ರಮ್ ಶ್ರೀನಿವಾಸ್ ಅವರ ವಿರುದ್ಧ ಇಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಲ್ಲವಾದರೂ, ಅನೇಕರು ಪೂನಂ ಮಾತನಾಡುತ್ತಿರುವುದು ಲೈಂಗಿಕ ಕಿರುಕುಳದ ಬಗ್ಗೆಯೇ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಮಸ್ಯೆಯನ್ನು ವಿಸ್ತಾರವಾಗಿ ಹೇಳದೇ ಕ್ರಮ ಕೈಗೊಳ್ಳಿ ಎಂದರೆ ಹೇಗೆ ತಾನೇ ಕ್ರಮ ಕೈಗೊಳ್ಳಲು ಸಾಧ್ಯ ಎನ್ನುವ ಪ್ರಶ್ನೆ ಮಾಡಿದ್ದಾರೆ. ನಿಜಕ್ಕೂ ನಿಮ್ಮ ನಡುವೆ ನಡೆದಿದ್ದೇನು ಎನ್ನುವುದನ್ನು ಬಹಿರಂಗವಾಗಿ ಹೇಳಿ ಎಂದು ಪೂನಂ ಕೌರ್ ಅವರಿಗೆ ಅನೇಕರು ಕೇಳಿದ್ದಾರೆ.
ಅಂದ್ಹಾಗೇ ಪೂನಂ ಕೌರ್ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ಕೆಂಡ ಕಾರುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಕೂಡ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ಪೂನಂ ಕೌರ್ ವಾಗ್ದಾಳಿ ನಡೆಸಿಕೊಂಡೇ ಬಂದಿದ್ದಾರೆ. ಆದರೆ ಈ ಹಿಂದೆಯೆಲ್ಲ ಪರೋಕ್ಷವಾಗಿ ಪೂನಂ ಕೌರ್ ಮಾತನಾಡುತ್ತಿದ್ದರು. ಬೇರೆಯವರ ವೃತ್ತಿ ಜೀವನ ಹಾಳು ಮಾಡಿದ ನಿರ್ದೇಶಕ ಎಂದು ಜರಿದಿದ್ದರು. ನನ್ನನ್ನೂ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಗುಡುಗಿದ್ದರು. ಇನ್ನೂ 2019ರಲ್ಲಿ ಸೈಬರ್ ಕ್ರೈಂಗೆ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ದೂರನ್ನು ಕೂಡ ಪೂನಂ ಕೌರ್ ನೀಡಿದ್ದರು.
ಈಗ ಪೂನಂ ಕೌರ್ ನೇರವಾಗಿ ಮತ್ತೊಮ್ಮೆ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ಮಾತನಾಡಿದ್ದಾರೆ. ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಉಳಿದಂತೆ 2005ರಲ್ಲಿ ಮಿಸ್ ಆಂಧ್ರ ಕಿರೀಟವನ್ನು ಮುಡಿಗೇರಿಸಿಕೊಂಡವರು ಪೂನಂ ಕೌರ್. 2006ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪೂನಂ ತೆಲುಗು ಜೊತೆ ತಮಿಳಿನಲ್ಲಿ ಕೂಡ ನಟಿಸಿದ್ದಾರೆ. ಹಿಂದಿಯಲ್ಲಿ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ. ಕನ್ನಡದಲ್ಲಿ ಡಾ.ಶಿವರಾಜ್ ಕುಮಾರ್ ಅಭಿನಯದ ಬಂಧು ಬಳಗ ಚಿತ್ರದಲ್ಲಿ ಕೂಡ ಪೂನಂ ಕೌರ್ ನಟಿಸಿದ್ದಾರೆ. ಆದರೆ ಹಿಂದಿ ಮತ್ತು ಕನ್ನಡದಲ್ಲಿ ಒಂದು ಚಿತ್ರದ ನಂತರ ಮತ್ತೊಂದು ಅವಕಾಶ ಇವರಿಗೆ ಸಿಗಲಿಲ್ಲ.


Click it and Unblock the Notifications











