ನಿದ್ದೆ ಮಾತ್ರೆ ಸೇವಿಸಿ ಗಾಯಕಿ ಕಲ್ಪನಾ ರಾಘವೇಂದ್ರ ಆತ್ಮಹ* ಯತ್ನ
ತೆಲುಗಿನ ಜನಪ್ರಿಯ ಗಾಯಕಿ ಕಲ್ಪನಾ ರಾಘವೇಂದ್ರ ಆತ್ಮಹ*ಗೆ ಯತ್ನಿಸಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಡ್ಚಲ್ ಮಲ್ಕಾಜ್‌ಗಿರಿ ಜಿಲ್ಲೆಯ ನಿಜಾಮ್‌ಪೇಟೆಯಲ್ಲಿ ಆಕೆ ವಾಸವಿದ್ದರು.
ಮನೆಯಲ್ಲೇ ಕಲ್ಪನಾ ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹ*ಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಈ ವಿಷಯ ಮಂಗಳವಾರ ಬೆಳಕಿಗೆ ಬಂದಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

ಗಾಯಕಿಯಾಗಿ ಮೆರೆಯುತ್ತಿದ್ದ ಸಮಯದಲ್ಲೇ ಕಲ್ಪನಾ ರಾಘವೇಂದ್ರ ಯಾಕೆ ಆತ್ಮಹ*ಗೆ ಮುಂದಾದರೂ ಎಂದು ಟಾಲಿವುಡ್ ಅಂಗಳದಲ್ಲಿ ಚರ್ಚೆ ನಡೀತಿದೆ. ಕಿರುತೆರೆ ಸಂಗೀತ ಕಾರ್ಯಕ್ರಮಗಳ ತೀರ್ಪುಗಾರ್ತಿಯಾಗಿಯೂ ಕಲ್ಪನಾ ಗುರ್ತಿಸಿಕೊಂಡಿದ್ದರು. ಎರಡು ದಿನಗಳಿಂದ ಆಕೆ ಮನೆಯಿಂದ ಹೊರಗಡೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದು ಮನೆ ಬಾಗಿಲು ಮುರಿದು ಒಳಗೆ ಹೋದಾಗ ವಿಷಯ ಗೊತ್ತಾಗಿದೆ.
ಪೊಲೀಸರು ಮನೆ ಒಳಗೆ ಪ್ರವೇಶಿಸಿದಾಗ ಮಂಚದ ಮೇಲಿ ಕಲ್ಪನಾ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಇದ್ದರು. ಪಕ್ಕದಲ್ಲೇ ನಿದ್ರೆ ಮಾತ್ರೆ ಕಂಡುಬಂದಿತ್ತು. ಹಾಗಾಗಿ ಕೂಡಲೇ ಆಸ್ಪತ್ರೆಗೆ ಆಕೆಯನ್ನು ದಾಖಲಿಸಿದು ಎಂದು ವರದಿಯಾಗಿದೆ. ಪತಿಯ ಜೊತೆ ಕಲ್ಪನಾ ವಾಸವಿದ್ದರು. ಆದರೆ ಈ ಸಮಯದಲ್ಲಿ ಪತಿ ಮನೆಯಲ್ಲಿ ಇರಲಿಲ್ಲ. ಕುಟುಂಬ ಸದಸ್ಯರು ಸಂಪರ್ಕಕ್ಕೆ ಸಿಗುತ್ತಿಲ್ಲ. ಕಲ್ಪನಾ ಮೊಬೈಲ್ ಫೋನ್ ಸಹ ಕಾಣಿಸುತ್ತಿಲ್ಲ ಎಂದು ಹೇಳಲಾಗ್ತಿದೆ.
ಸಂಗೀತ ಕುಟುಂಬದಲ್ಲಿ ಹುಟ್ಟಿದವರು ಕಲ್ಪನಾ ರಾಘವೇಂದ್ರ. ತಂದೆ-ತಾಯಿ ಇಬ್ಬರೂ ಹಿನ್ನೆಲೆ ಗಾಯಕರು, ಸಹೋದರಿ ಕೂಡ ಗಾಯಕಿ. ಇನ್ನು ತಮ್ಮ 5ನೇ ವಯಸ್ಸಿನಲ್ಲೇ ಕಲ್ಪನಾ ಸಿನಿಮಾಗಳಲ್ಲಿ ಹಾಡಲು ಆರಂಭಿಸಿದ್ದರು. ಇಳಯರಾಜ, ಎ. ಆರ್ ರಹಮಾನ್, ಎಸ್. ಬಿ ಬಾಲಸುಬ್ರಮಣ್ಯಂ ಜೊತೆ ಕಲ್ಪನಾ ಕೆಲಸ ಮಾಡಿದ್ದಾರೆ. ಹಿನ್ನೆಲೆ ಗಾಯಕಿಯಾಗಿ ಹೆಚ್ಚು ಜನರಿಗೆ ಪರಿಚಯವಿರಲಿಲ್ಲ, ಆದರೆ ವೇದಿಕೆಗಳಲ್ಲಿ ಹಾಡು ಜನರಿಗೆ ಹತ್ತಿರವಾಗಿದ್ದಾರೆ.
3 ಸಾವಿರಕ್ಕೂ ಅಧಿಕ ಸಂಗೀತ ಕಾರ್ಯಕ್ರಮಗಳಲ್ಲಿ ಕಲ್ಪನಾ ವೇದಿಕೆ ಏರಿ ಹಾಡು ಹಾಡಿದ್ದಾರೆ. 'ಪುನ್ನಗೈ ಮಣ್ಣನ್' ಎಂಬ ತಮಿಳು ಚಿತ್ರದಲ್ಲಿ ಬಾಲನಟಿಯಾಗಿಯೂ ಕಲ್ಪನಾ ಮಿಂಚಿದ್ದರು. 90ರ ದಶಕದಲ್ಲಿ ಸಿನಿಮಾಗಳಿಗೆ ಹಾಡು ಹಾಡಲು ಆರಂಭಿಸಿದರು. ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲಿ ಅವರು ಹಾಡು ಹಾಡಿದ್ದಾರೆ. ಕನ್ನಡದಲ್ಲಿ ಪ್ರಜ್ವಲ್ ದೇವರಾಜ್ ನಟನೆಯ 'ಗಲಾಟೆ' ಚಿತ್ರದ ಹಾಡೊಂದಕ್ಕೆ ದನಿಯಾಗಿದ್ದರು.
ನೈಜಾಂಪೇಟೆಯ ಶ್ರೀಶ್ರೀ ಹೋಲಿಸ್ಟಿಕ್ ಆಸ್ಪತ್ರೆಯಲ್ಲಿ ಗಾಯಕಿ ಕಲ್ಪನಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ಕಲ್ಪನಾ ವಾಸವಿದ್ದ ಅಪಾರ್ಟ್‌ಮೆಂಟ್ ಸೆಕ್ಯುರಿಟಿ ಗಾರ್ಡ್ ಹೇಳಿಕೆ ಪಡೆದಿದ್ದಾರೆ. ಆಕೆಯ ಫೋನ್ ಕರೆಗಳು, ವಾಟ್ಸಪ್ ಮೆಸೇಜ್‌ಗಳನ್ನು ಪರಿಶೀಲಿಸುತ್ತಿದ್ದಾರೆ.
ಗಾಯಕಿ ಕಲ್ಪನಾ ರಾಘವೇಂದ್ರ 2ನೇ ಪತಿಗೂ ವಿಷಯ ತಿಳಿಸಿದ್ದು ಅವರು ಚೆನ್ನೈನಿಂದ ಹೈದರಾಬಾದ್ ತಲುಪಿದ್ದಾರೆ. ಕಲ್ಪನಾ 2010ರಲ್ಲಿ ಮೊದಲ ಪತಿಯಿಂದ ವಿಚ್ಛೇದನ ಪಡೆದು ದೂರಾಗಿದ್ದರು. ಬಳಿಕ ಉದ್ಯಮಿ ಪ್ರಸಾದ್ ಪ್ರಭಾಕರ್ ಕೈ ಹಿಡಿದಿದ್ದರು. ಕಲ್ಪನಾ ಆತ್ಮಹ* ಯತ್ನದ ಬಗ್ಗೆ ತನಗೇನು ಗೊತ್ತಿಲ್ಲ ಎಂದು ಪ್ರಸಾದ್ ಹೇಳುತ್ತಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಪೊಲೀಸರು ಆತನ ಫೋನ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ವರದಿಯಾಗಿದೆ. ಹೆಚ್ಚಿನ ತನಿಖೆ ಮೂಲಕ ಆಕೆಯ ಈ ನಿರ್ಧಾರಕ್ಕೆ ಕಾರಣ ಏನು ಎನ್ನುವುದು ಗೊತ್ತಾಗಲಿದೆ.


Click it and Unblock the Notifications











