ಹಿಂದಕ್ಕೆ ಸರಿದ ನಂದಮೂರಿ ಬಾಲಕೃಷ್ಣ; ರಿಷಬ್ 'ಕಾಂತಾರ'-1 ಹಾದಿ ಸುಗಮ
ಸ್ಟಾರ್ ನಟರ ದೊಡ್ಡ ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆ ಆಗುವುದು ಸರಿಯಲ್ಲ ಎನ್ನುವ ವಾದ ಇದೆ. ಎರಡೂ ಸಿನಿಮಾಗಳು ಒಮ್ಮೆಲೆ ಬಿಡುಗಡೆಯಾದರೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುತ್ತದೆ. ಥಿಯೇಟರ್ ಸಮಸ್ಯೆ ಕೂಡ ಎದುರಾಗುತ್ತದೆ. ಕೆಲವೊಮ್ಮೆ ಯಾವುದೋ ಒಂದು ಚಿತ್ರಕ್ಕೆ ಹಿನ್ನಡೆ ಆಗುತ್ತದೆ.
ಹಬ್ಬದ ಸಂಭ್ರಮದಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಈ ವರ್ಷ ಸಂಕ್ರಾಂತಿಗೆ ತೆಲುಗು, ತಮಿಳಿನ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸಿದ್ದವು. ಎರಡು ವಾರದ ಹಿಂದೆ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ರಜನಿಕಾಂತ್ ನಟನೆಯ ಕೂಲಿ ಹಾಗೂ ಬಾಲಿವುಡ್ ಸಿನಿಮಾ 'ವಾರ್- 2' ತೆರೆಗಪ್ಪಳಿಸಿದ್ದವು. ಬಾಕ್ಸಾಫೀಸ್ ಕ್ಲ್ಯಾಶ್‌ನಲ್ಲಿ 'ಕೂಲಿ' ಸಿನಿಮಾ ಕೈ ಮೇಲಾಗಿತ್ತು.

ಸೆಪ್ಟೆಂಬರ್ 25ರಂದು ಬಾಲಕೃಷ್ಣ ನಟನೆಯ 'ಅಖಂಡ'-2 ಸಿನಿಮಾ ಬಿಡುಗಡೆ ಆಗಬೇಕಿತ್ತು. ಅದೇ ದಿನ ಪವನ್ ಕಲ್ಯಾಣ್ ನಟನೆಯ 'OG' ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿತ್ತು. ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಗ್ಯಾರಂಟಿ ಎನ್ನುವ ಚರ್ಚೆ ಶುರುವಾಗಿತ್ತು. ಆದರೆ ಇದೀಗ 'ಅಖಂಡ'-2 ಸಿನಿಮಾ ರಿಲೀಸ್ ಡೇಟ್ ಮುಂದೂಡಿ ಚಿತ್ರತಂಡ ಮಾಹಿತಿ ನೀಡಿದೆ. ಇದು ಸಹಜವಾಗಿಯೇ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಸಂತಸ ತಂದಿದೆ.
4 ವರ್ಷಗಳ ಹಿಂದೆ ಬೋಯಪಾಟಿ ಶ್ರೀನು ನಿರ್ದೇಶನದ 'ಅಖಂಡ' ಸಿನಿಮಾ ತೆರೆಕಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಹಿಂದಿಗೂ ಡಬ್ ಆಗಿ ಸದ್ದು ಮಾಡಿತ್ತು. ಹಾಗಾಗಿ ಸಹಜವಾಗಿಯೇ ಸೀಕ್ವೆಲ್ ಬಗ್ಗೆ ನಿರೀಕ್ಷೆಯಿದೆ. ಈಗಾಗಳೇ ಚಿತ್ರದ ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. ಮತ್ತೊಮ್ಮೆ ಬಾಲಯ್ಯನ ಪವರ್‌ಫುಲ್ ಪರ್ಫಾರ್ಮನ್ಸ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ದಸರಾ ಹಬ್ಬಕ್ಕಿಂತ 5 ದಿನ ಮುನ್ನ ಸಿನಿಮಾ ಬಿಡುಗಡೆ ಪ್ರಯತ್ನ ನಡೆದಿತ್ತು. ಆದರೆ ಈಗ ರಿಲೀಸ್ ಡೇಟ್ ಮುಂದೂಡಲಾಗಿದೆ.
ಅಂದಹಾಗೆ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ'-1 ಸಿನಿಮಾ ಒಂದು ವಾರ ತಡವಾಗಿ ಅಂದರೆ ಅಕ್ಟೋಬರ್ 2ರಂದು ತೆರೆಗೆ ಬರಲಿದೆ. ಸೆಪ್ಟೆಂಬರ್ 25ರಂದು 'ಅಖಂಡ'-2 ಸಿನಿಮಾ ತೆರೆಗೆ ಬಂದಿದ್ದರೆ 'OG' ಚಿತ್ರಕ್ಕೆ ಮಾತ್ರವಲ್ಲ ಬಳಿಕ ಬಿಡುಗಡೆಯಾಗುವ 'ಕಾಂತಾರ- 1' ಚಿತ್ರದ ಮೇಲೂ ಪರಿಣಾಮ ಬೀರುತ್ತಿತ್ತು. ಇದೀಗ ರಿಷಬ್ ಸಿನಿಮಾ ಹಾದಿ ಕೂಡ ಸುಗಮವಾದಂತೆ ಆಗಿದೆ. ಎರಡೂ ಸಿನಿಮಾಗಳಲ್ಲಿ ದೈವ ಹಾಗೂ ಧಾರ್ಮಿಕ ವಿಚಾರಗಳು ಸಾಕಷ್ಟಿವೆ. ಉತ್ತರ ಭಾರತದಲ್ಲಿ ಇಂತಹ ಚಿತ್ರಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. 'ಅಖಂಡ' ಹಾಗೂ 'ಕಾಂತಾರ' ಚಿತ್ರಗಳ ವಿಚಾರದಲ್ಲಿ ಇದು ಸಾಬೀತಾಗಿತ್ತು.
'ಅಖಂಡ'-2 ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿರುವ ಬಗ್ಗೆ ಚಿತ್ರತಂಡ ಪತ್ರ ಬರೆದು ಸ್ಪಷ್ಟನೆ ನೀಡಿದೆ. "ಚಿತ್ರದ VFX, ಮತ್ತು ಪೋಸ್ಟ್-ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚಿನ ಸಮಯ ಬೇಕು. ಇದು ದೊಡ್ಡ ಸಿನಿಮಾ. ಹಾಗಾಗಿ ಹೆಚ್ಚಿನ ಮುತುವರ್ಜಿ ವಹಿಸಿ ಸಿನಿಮಾ ಕಟ್ಟಿಕೊಡಬೇಕು. ಅದಕ್ಕೆ ಮತ್ತಷ್ಟು ಸಮಯ ಬೇಕು. ಚಿತ್ರಕ್ಕಾಗಿ ಹಗಲು-ರಾತ್ರಿ ತಂಡ ಕೆಲಸ ಮಾಡುತ್ತಿದೆ. ಈ ಮುನ್ನ ಹೇಳಿದಂತೆ ಸೆಪ್ಟೆಂಬರ್ 25ರಂದು ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಶೀಘ್ರದಲ್ಲೇ ಸಿನಿಮಾ ಬಿಡುಗಡೆಯ ಹೊಸ ದಿನಾಂಕ ಘೋಷಿಸುತ್ತೇವೆ" ಎಂದು ಹೇಳಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ- 1' ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿಯಿದೆ. ಶೀಘ್ರದಲ್ಲೇ ಸಿನಿಮಾ ಪ್ರಚಾರ ಕೆಲಸಗಳು ಆರಂಭವಾಗುತ್ತದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರದ ಮೇಕಿಂಗ್ ವೀಡಿಯೋ ನೋಡಿ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎಂದು ಕೆಲವರು ಭವಿಷ್ಯ ನುಡಿಯುತ್ತಿದ್ದಾರೆ.


Click it and Unblock the Notifications











