ಪವನ್ ಕಲ್ಯಾಣ್ 'ಹರಿಹರ ವೀರ ಮಲ್ಲು' ಸಿನಿಮಾ ಸೆಟ್ಟಿನಲ್ಲಿ ಬೆಂಕಿ: ಕೋಟ್ಯಾಂತರ ರೂಪಾಯಿ ನಷ್ಟ
ಟಾಲಿವುಡ್‌ನ ಪವರ್‌ಸ್ಟಾರ್ ಪವನ್ ಕಲ್ಯಾಣ್ ಐತಿಹಾಸಿ ಸಿನಿಮಾದಲ್ಲಿ ನಟಿಸುತ್ತಿರೋದು ಗೊತ್ತೇ ಇದೆ. ಕೋಟ್ಯಾಂತರ ರೂಪಾಯಿ ಬಜೆಟ್‌ನಲ್ಲಿ 'ಹರಿಹರ ವೀರ ಮಲ್ಲು' ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೇ ಸಿನಿಮಾ ಸೆಟ್ಟಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ತೆಲಂಗಾಣದ ದುಂಡಿಗಲ್ನ ಬೀರಂಪೇಟ್‌ನಲ್ಲಿ 'ಹರಿಹರ ವೀರ ಮಲ್ಲು' ಸಿನಿಮಾದ ದೃಶ್ಯವನ್ನು ಚಿತ್ರೀಕರಿಸುವುದಕ್ಕೆ ಅದ್ಧೂರಿ ಸೆಟ್‌ಗಳನ್ನು ಹಾಕಲಾಗಿತ್ತು. ಈ ಸೆಟ್ಟಿನಲ್ಲಿ ಆಕಸ್ಮಿಕವಾಗಿ ಬೆಂಕಿ ಸಂಭವಿಸಿದ್ದು, ಬಹುತೇಕ ಸೆಟ್ಟು ಪೂರ್ತಿ ನಾಶಗೊಂಡಿದೆ. ಈ ಅವಘಡದಲ್ಲಿ ಜೀವ ಹಾನಿ ಹಾಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

ಅಂದ್ಹಾಗೆ ಈ ಘಟನೆ ಭಾನುವಾರ (ಮೇ 28) ರಾತ್ರಿ ಸಂಭವಿಸಿದೆ. ಮೂಲಗಳ ಪ್ರಕಾರ, ಪವನ್ ಕಲ್ಯಾಣ್ ನಟಿಸುತ್ತಿರುವ ಈ ಐತಿಹಾಸಿ ಸಿನಿಮಾಗಾಗಿ ಸುಮಾರು 6 ಕೋಟಿ ರೂಪಾಯಿ ವೆಚ್ಚದ ಸೆಟ್ ಅನ್ನು ಹಾಕಲಾಗಿತ್ತು. ಈಗ ಸೆಟ್ ಪೂರ್ತಿ ಬೆಂಕಿಗೆ ಆಹುತಿಯಾಗಿದ್ದು, ನಿರ್ಮಾಪಕರಿಗೆ ಭಾರೀ ನಷ್ಟ ಆಗಿದೆ.
'ಹರಿಹರ ವೀರ ಮಲ್ಲು' ಪವನ್ ಕಲ್ಯಾಣ್ ಸಿನಿಮಾದ ಶೂಟಿಂಗ್ ಶೇ.75ರಷ್ಟು ಮುಗಿದಿದ್ದು, ಇನ್ನೂ ಶೇ.25ರಷ್ಟು ಶೂಟಿಂಗ್ ಇನ್ನೂ ಬಾಕಿಯಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಆಂಧ್ರದಲ್ಲಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಚಿತ್ರೀಕರಣ ಮುಗಿಸುವುದಕ್ಕೆ ಚಿತ್ರತಂಡ ಮುಂದಾಗಿತ್ತು. ಪವನ್ ಕಲ್ಯಾಣ್ ಕೂಡ ಈ ಸಿನಿಮಾ ಮುಗಿಸಿ, ಚುನಾವಣೆಗೆ ಸಿದ್ಧರಾಗಲು ನಿರ್ಧರಿಸಿದ್ದರು.

ರಾಜಕೀಯದ ಒತ್ತಡದ ನಡುವೆಯೇ 'ಹರಿಹರ ವೀರ ಮಲ್ಲು' ಸಿನಿಮಾವನ್ನು ಮುಗಿಸಿಕೊಡಬೇಕಾದ ಅನಿವಾರ್ಯತೆ ಇದೆ. ಈ ಬೆನ್ನಲ್ಲೇ ಸೆಟ್ಟಿಗೆ ಬೆಂಕಿ ಬಿದ್ದಿರೋದು ದೊಡ್ಡ ತಲೆ ನೋವಾಗಿದೆ. ಹೀಗಾಗಿ ಈ ಸಿನಿಮಾವನ್ನು ಮುಗಿಸುತ್ತಾರೋ ಇಲ್ಲವೋ ಅನ್ನೋ ಅನುಮಾನ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಕಾಡುವುದಕ್ಕೆ ಶುರುವಾಗಿದೆ.
'ಹರಿಹರ ವೀರ ಮಲ್ಲು' ಪವನ್ ಕಲ್ಯಾಣ್ ನಟಿಸುತ್ತಿರುವ ಮೊದಲ ಐತಿಹಾಸಿಕ ಸಿನಿಮಾ. ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದರೂ, ಕ್ರೇಜಿ ಫ್ಯಾನ್ ಫಾಲೋವಿಂಗ್ ಇದ್ದರೂ, ಇಂತಹದ್ದೊಂದು ಸಾಹಸಕ್ಕೆ ಪವನ್ ಕಲ್ಯಾಣ್ ಮುಂದಾಗಿರಲಿಲ್ಲ.
ಮೊಘಲ್ ಸಾಮ್ರಾಜ್ಯದ ವಿರುದ್ಧ ವೀರಾವೇಶದಿಂದ ಹೋರಾಡಿದ ವೀರ ಮಲ್ಲು ಚರಿತ್ರೆಯನ್ನು ತೆರೆಮೇಲೆ ತರಲಾಗುತ್ತಿದೆ. 17ನೇ ಶತಮಾನದ ಕಥೆಯಾಗಿರುವುದರಿಂದ ಅವರ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಾಗಿದೆ. ಪವನ್ ಕಲ್ಯಾಣ್‌ಗೆ ನಾಯಕಿಯರಾಗಿ, ನಿಧಿ ಅಗರ್ವಾಲ್ ಹಾಗೂ ನರ್ಗೀಸ್ ಫಕ್ರಿ ನಟಿಸುತ್ತಿದ್ದಾರೆ.
ಇದಲ್ಲದೆ ಪವನ್ ಕಲ್ಯಾಣ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. 'ಹರಿಹರ ವೀರ ಮಲ್ಲು', ಸಾಯಿ ಧರಂ ತೇಜ್ ಜೊತೆ 'ಬ್ರೋ', 'ಉಸ್ತಾದ್ ಭಗತ್ ಸಿಂಗ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ RRR ಸಿನಿಮಾದ ನಿರ್ಮಾಪಕ ಧಾನಯ್ಯ ನಿರ್ಮಿಸುತ್ತಿರುವ 'ಓಜಿ'(ಒರಿಜಿನಲ್ ಗ್ಯಾಂಗ್‌ಸ್ಟರ್) ಸಿನಿಮಾವನ್ನೂ ಕೈಗೆತ್ತಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಸುರೇಂದ್ರ ರೆಡ್ಡಿ ನಿರ್ದೇಶನದ ಸಿನಿಮಾ ನಟಿಸುತ್ತಿದ್ದಾರೆ ಎನ್ನಲಾಗಿದೆ.


Click it and Unblock the Notifications











