'ಅರ್ಜುನ್ ರೆಡ್ಡಿ' ನಿರ್ದೇಶಕನ ಜೊತೆ ಪ್ರಭಾಸ್ 25ನೇ ಚಿತ್ರ ಘೋಷಣೆ
ಕಳೆದ ಎರಡ್ಮೂರು ದಿನದಿಂದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ 25ನೇ ಚಿತ್ರದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯ್ತಿದ್ದರು. ಕೊನೆಗೂ ಆ ಅಪ್‌ಡೇಟ್ ಹೊರಬಿದ್ದಿದೆ. ಪ್ರಭಾಸ್ 25ನೇ ಚಿತ್ರವನ್ನು 'ಅರ್ಜುನ್ ರೆಡ್ಡಿ' ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ 'ಸ್ಪಿರಿಟ್' ಎಂದು ಹೆಸರಿಡಲಾಗಿದೆ.
ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಸ್ಪಿರಿಟ್ ಚಿತ್ರದ ಟೈಟಲ್ ಪೋಸ್ಟರ್ ಇಂದು (ಅಕ್ಟೋಬರ್ 7) ಅನಾವರಣಗೊಂಡಿದೆ.
ಚಿತ್ರದ ಪೋಸ್ಟರ್‌ನಲ್ಲಿ ಉಲ್ಲೇಖಿಸಿರುವಂತೆ ಈ ಸಿನಿಮಾ ಏಂಟು ಭಾಷೆಗಳಲ್ಲಿ ತೆರೆಗೆ ಬರ್ತಿದೆ. ಭಾರತದ ಐದು ಭಾಷೆ ಹಾಗೂ ವಿದೇಶದ ಮೂರು ಪ್ರಮುಖ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡ ಸೇರಿದಂತೆ ಜಪಾನಿಸ್, ಚೈನಿಸ್ ಹಾಗೂ ಕೊರಿಯನ್ ಭಾಷೆಯಲ್ಲಿ ಸ್ಪಿರಿಟ್ ಚಿತ್ರ ಪ್ರದರ್ಶನವಾಗಲಿದೆ. ಮುಂದೆ ಓದಿ...

ಭೂಷಣ್ ಕುಮಾರ್ ನಿರ್ಮಾಣ
ಬಾಲಿವುಡ್‌ನ ಖ್ಯಾತ ನಿರ್ಮಾಪಕ ಭೂಷಣ್ ಕುಮಾರ್, ಪ್ರಭಾಸ್ 25ನೇ ಸಿನಿಮಾ ಸ್ಪಿರಿಟ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಟಿ-ಸಿರೀಸ್‌ನಲ್ಲಿ ಬರುತ್ತಿರುವ 30ನೇ ಪ್ರಾಜೆಕ್ಟ್ ಇದು. ಇವರು ಜೊತೆ ಭದ್ರಕಾಳಿ ಪಿಕ್ಚರ್ಸ್ ಕೈ ಜೋಡಿಸಿದ್ದಾರೆ. ಭೂಷಣ್ ಕುಮಾರ್ ಈ ಹಿಂದೆ ಪ್ರಭಾಸ್ ನಟನೆಯ ಸಾಹೋ ಹಾಗೂ ಓಂ ರಾವತ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆದಿಪುರುಷ್ ಚಿತ್ರಗಳಿಗೆ ಬಂಡವಾಳ ಹಾಕಿದ್ದಾರೆ. ಈಗ ಮೂರನೇ ಬಾರಿ ಪ್ರಭಾಸ್ ಜೊತೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಹಳೆಯ ಕಮಿಟ್‌ಮೆಂಟ್ ಮುಗಿಯಬೇಕು
ಸ್ಪಿರಿಟ್ ಚಿತ್ರ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ಅವರೇ ಸ್ಕ್ರಿಪ್ಟ್ ಮಾಡಿದ್ದಾರೆ. ಸದ್ಯಕ್ಕೆ ಚಿತ್ರದ ಹೆಸರು ಮತ್ತು ನಿರ್ಮಾಪಕ ಹಾಗೂ ಎಷ್ಟು ಭಾಷೆಯಲ್ಲಿ ಸಿನಿಮಾ ಬರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇನ್ನುಳಿದಂತೆ ನಾಯಕಿ ಯಾರು, ಪ್ರಮುಖ ಕಲಾವಿದರು ಯಾರು ಹಾಗೂ ಯಾವಾಗ ಚಿತ್ರೀಕರಣ ಎನ್ನುವ ಮಾಹಿತಿ ಸಿಗಬೇಕಿದೆ. ಸದ್ಯದ ಬೆಳವಣಿಗೆ ಗಮನಿಸಿದರೆ ಪ್ರಭಾಸ್ ಅವರ ಹಳೆಯ ಕಮಿಟ್‌ಮೆಂಟ್‌ಗಳು ಮುಗಿದ ಬಳಿಕವಷ್ಟೇ ಸ್ಪಿರಿಟ್ ಆರಂಭವಾಗಲಿದೆ.

ಸಲಾರ್-ಆದಿಪುರುಷ್ ಚಿತ್ರೀಕರಣ
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಪ್ರಭಾಸ್ 'ಸಲಾರ್' ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಸಹ ನಡೆಯುತ್ತಿದ್ದು, ಎರಡ್ಮೂರು ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇದರ ಜೊತೆ ಜೊತೆಗೆ ಹಿಂದಿಯಲ್ಲಿ ಓಂ ರಾವತ್ ನಿರ್ದೇಶಿಸುತ್ತಿರುವ ಪೌರಾಣಿಕ ಚಿತ್ರ ಆದಿಪುರುಷ್ ಚಿತ್ರೀಕರಣ ಸಹ ಆಗ್ತಿದೆ. ಈ ಎರಡು ಚಿತ್ರಗಳನ್ನು ಏಕಕಾಲದಲ್ಲಿ ಸಮಯ ಬಿಡುವು ಮಾಡಿಕೊಂಡು ಚಿತ್ರೀಕರಣ ಮಾಡ್ತಿದ್ದಾರೆ ಪ್ರಭಾಸ್.

ನಾಗ್ ಅಶ್ವಿನ್ ಪ್ರಾಜೆಕ್ಟ್
ನಾಗ್ ಅಶ್ವಿನ್ ಜೊತೆ ಸಿನಿಮಾವೊಂದಕ್ಕೆ ಕಾಲ್‌ಶೀಟ್ ಕೊಟ್ಟಿರುವ ಪ್ರಭಾಸ್, ಈ ಎರಡು ಚಿತ್ರ ಮುಗಿಸಿ ಶುರು ಮಾಡಲಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅಭಿನಯಿಸುತ್ತಿದ್ದಾರೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ರಾಧೆಶ್ಯಾಮ್ ಚಿತ್ರ ಜನವರಿ 13ಕ್ಕೆ ತೆರೆಗೆ ಬರಲಿದೆ. ಈ ನಡುವೆ ರಾಜಮೌಳಿ, ಪ್ರಶಾಂತ್ ನೀಲ್ ಜೊತೆ ಮತ್ತೆ ಸಿನಿಮಾಗಳು ಲೈನ್ ಅಪ್ ಆಗುತ್ತಿದೆ ಎಂಬ ಸುದ್ದಿಯೂ ವರದಿಯಾಗಿದೆ.

ಸಂದೀಪ್ ರೆಡ್ಡಿ ವಂಗಾ ಚಿತ್ರಗಳು
2017ರಲ್ಲಿ ವಿಜಯ್ ದೇವರಕೊಂಡ ನಟನೆಯ ಅರ್ಜುನ್ ರೆಡ್ಡಿ ಸಿನಿಮಾ ನಿರ್ದೇಶಿಸುವ ಮೂಲಕ ಸಂದೀಪ್ ರೆಡ್ಡಿ ವಂಗಾ ಡೈರೆಕ್ಷರ್ ಆಗಿ ಚಿತ್ರರಂಗ ಪ್ರವೇಶಿಸಿದರು. ಇದೇ ಚಿತ್ರವನ್ನು ಹಿಂದಿಯಲ್ಲಿ ಶಾಹೀದ್ ಕಪೂರ್ ಜೊತೆ 'ಕಬೀರ್ ಸಿಂಗ್' ಎನ್ನುವ ಹೆಸರಿನಲ್ಲಿ ಮಾಡಿ ಹಿಟ್ ಬಾರಿಸಿದರು. ಈಗ ಅನಿಮಲ್ ಎಂಬ ಚಿತ್ರ ಆರಂಭಿಸಿದ್ದಾರೆ. ಈ ನಡುವೆ ಪ್ರಭಾಸ್ ಜೊತೆ ಸ್ಪಿರಿಟ್ ಚಿತ್ರಕ್ಕೆ ಕಾಲ್‌ಶೀಟ್ ಪಡೆದುಕೊಂಡಿದ್ದಾರೆ.


Click it and Unblock the Notifications











