'ಕಣ್ಣಪ್ಪ' ಸಿನಿಮಾ ಹಾರ್ಡ್ ಡ್ರೈವ್ ಸಮೇತ ಯುವತಿ ನಾಪತ್ತೆ; ಚಿತ್ರತಂಡ ಕಂಗಾಲು
ತೆಲುಗಿನ 'ಕಣ್ಣಪ್ಪ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಬೇಡರ ಕಣ್ಣಪ್ಪನ ಪಾತ್ರದಲ್ಲಿ ಮಂಚು ವಿಷ್ಣು ನಟಿಸಿದ್ದಾರೆ. ಮೋಹಲ್ ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್‌ರಂತಹ ಖ್ಯಾತ ನಟರು ಚಿತ್ರದ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಇದೀಗ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.
ಜೂನ್ 27ರಂದು 'ಕಣ್ಣಪ್ಪ' ಸಿನಿಮಾ ಬಿಡುಗಡೆ ಆಗಬೇಕಿದೆ. ಇಂತಹ ಹೊತ್ತಲ್ಲೇ ಚಿತ್ರದ ಫುಟೇಜ್ ಇದ್ದ ಹಾರ್ಡ್ ಡ್ರೈವ್ ಮಿಸ್ ಆಗಿದೆ. ಇಬ್ಬರು ಹಾರ್ಡ್ ಡ್ರೈವ್ ಕದ್ದೊಯ್ದಿದ್ದಾರೆ ಎಂದು ಚಿತ್ರತಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ವಿಷ್ಣು ತಂದೆ ಮೋಹನ್ ಬಾಬು ತಮ್ಮದೇ 24 ಫ್ರೇಮ್ಸ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಈ ಪೌರಾಣಿಕ ಕಥಾಹಂದರದ ಸಿನಿಮಾ ನಿರ್ಮಾಣ ಮಾಡಿದ್ದಾರೆ.

4 ಫ್ರೇಮ್ಸ್ ಫ್ಯಾಕ್ಟರಿ ಪ್ರೈವೇಟ್ ಲಿಮಿಟೆಡ್ ಕಂಪೆನಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೋಕಾಪೇಟೆಯ ಮೂಲಕದ ರೆಡ್ಡಿ ವಿಜಯಕುಮಾರ್ ಕೆಲಸ ಮಾಡುತ್ತಿದ್ದರು. 'ಕಣ್ಣಪ್ಪ' ಚಿತ್ರಕ್ಕೆ ಸಂಬಂಧಿಸಿದ ಕಂಟೆಂಟ್ ಇದ್ದ ಹಾರ್ಡ್ ಡ್ರೈವ್ ಅನ್ನು ಮುಂಬೈನ HIVE ಸ್ಟುಡಿಯೋಸ್ ಖಾಸಗಿ ಕೊರಿಯರ್ ಮೂಲಕ ಹೈದರಾಬಾದ್‌ನಲ್ಲಿರುವ ವಿಜಯ್ ಕುಮಾರ್ ಅವರ ಕಚೇರಿಗೆ ಕಳುಹಿಸಿತ್ತು. ಮೇ 25 ರಂದು ಆಫೀಸ್ ಬಾಯ್ ರಘು ಆ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದ. ಯಾರಿಗೂ ಹೇಳದೆ, ಆತ ಹಾರ್ಡ್ ಡ್ರೈವ್ ಅನ್ನು ಚರಿತಾ ಎಂಬಾಕೆಗೆ ಕೊಟ್ಟಿದ್ದಾನೆ.
ಸದ್ಯ ರಘು ಹಾಗೂ ಚರಿತಾ ಇಬ್ಬರೂ ಕಣ್ಮರೆ ಆಗಿದ್ದಾರೆ. ಹಾರ್ಡ್ ಡ್ರೈವ್ ಸಮೇತ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಗೊತ್ತಾಗಿದೆ. ತಮ್ಮ ಪ್ರಾಜೆಕ್ಟ್‌ಗೆ ನಷ್ಟವಾಗಬೇಕೆಂದು ಯಾರದ್ದೋ ಸೂಚನೆ ಮೇರೆಗೆ ಅವರಿಬ್ಬರು ಹೀಗೆ ಮಾಡಿದ್ದಾರೆ ಎಂದು ವಿಜಯ್ ಕುಮಾರ್ ಆರೋಪಿಸಿದ್ದಾರೆ. ಸದ್ಯ ಫಿಲ್ಮ್ ನಗರ್ ಪೊಲೀಸರು ದೂರು ದಾಖಲಿಕೊಂಡು ತನಿಖೆ ಆರಂಭಿಸಿದ್ದಾರೆ.
ಅಂದಹಾಗೆ ಮೋಹನ್ ಬಾಬು ಹಾಗೂ ವಿಷ್ಣು ಕನಸಿನ ಸಿನಿಮಾ 'ಕಣ್ಣಪ್ಪ'. ಕನ್ನಡದಲ್ಲಿ ಡಾ. ರಾಜ್‌ಕುಮಾರ್ ನಟಿಸಿದ್ದ 'ಬೇಡರ ಕಣ್ಣಪ್ಪ' ಚಿತ್ರದ ಕಥೆಯನ್ನೇ ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಮುಖೇಶ್ ಕುಮಾರ್ ಸಿಂಗ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಂದಾಜು 150 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರ್ತಿದೆ. ಟೈಟಲ್ ರೋಲ್‌ನಲ್ಲಿ ವಿಷ್ಣು ನಟಿಸಿದ್ದಾರೆ. ಮಹದೇವ ಶಾಸ್ತ್ರಿ ಆಗಿ ಮೋಹನ್ ಬಾಬು, ನಾತನಾಥುಡು ಆಗಿ ಶರತ್ ಕುಮಾರ್, ಪನ್ನಗ ಆಗಿ ಮಧೂ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕಿರಾಟ ಆಗಿ ಮೋಹನ್ ಲಾಲ್, ರುದ್ರನಾಗಿ ಪ್ರಭಾಸ್, ಶಿವನಾಗಿ ಅಕ್ಷಯ್ ಕುಮಾರ್, ಪಾರ್ವತಿಯಾಗಿ ಕಾಜಲ್ ಅಗರ್‌ವಾಲ್ ಮಿಂಚಿದ್ದಾರೆ.
ನ್ಯೂಜಿಲೆಂಡ್ ಕಾಡಿನಲ್ಲಿ ಬಹುತೇಕ ಸಿನಿಮಾ ಚಿತ್ರೀಕರಣ ನಡೆದಿದೆ. ಆದರೆ ಚಿತ್ರದ ಪೋಸ್ಟರ್, ಟೀಸರ್ ಬಗ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ನಾಡಿನ ಕಣ್ಣಪ್ಪನ ಕಥೆಯನ್ನು ನ್ಯೂಜಿಲೆಂಡ್ ಕಾಡಿನಲ್ಲಿ ಚಿತ್ರೀಕರಿಸಿದ್ದು ಯಾಕೆ ಎಂದು ಕೂಡ ಕೆಲವರು ಚಕಾರ ಎತ್ತಿದ್ದಾರೆ.
'ಕಣ್ಣಪ್ಪ' ಚಿತ್ರದ ಒಟ್ಟು ಕಾಲಾವಧಿ 3 ಗಂಟೆ 10 ನಿಮಿಷ. ಅದರಲ್ಲಿ ರುದ್ರನಾಗಿ ಪ್ರಭಾಸ್ 30 ನಿಮಿಷ ಕಾಣಿಸಿಕೊಳ್ಳುತ್ತಾರೆ ಎಂದಿದ್ದರು. ಅದೇರೀತಿ ಮೋಹನ್ ಲಾಲ್ ಪಾತ್ರ 15 ನಿಮಿಷ ಇರುತ್ತದೆ. ಶಿವ- ಪಾರ್ವತಿ ಆಗಿ ಅಕ್ಷಯ್ ಕುಮಾರ್ ಹಾಗೂ ಕಾಜಲ್ 10 ನಿಮಿಷ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಆಗಿದ್ದು ದೊಡ್ಡದಾಗಿ ರಿಲೀಸ್ ಪ್ಲ್ಯಾನ್ ನಡೀತಿದೆ.


Click it and Unblock the Notifications











