'ಬಾಹುಬಲಿ-3' ಪಕ್ಕಾನಾ? ಎಂದ ಪ್ರಭಾಸ್: ಮೌನಕ್ಕೆ ಜಾರಿದ ರಾಜಮೌಳಿ
ಅಭಿಮಾನಿಗಳು ಪ್ರಭಾಸ್ ನಟನೆಯ 'ಸಲಾರ್' ನೋಡುವುದಕ್ಕೆ ಕಾಯುತ್ತಿದ್ದಾರೆ. ಆದರೆ ಯಂಗ್ ರೆಬಲ್ ಸ್ಟಾರ್ ಮಾತ್ರ 'ಬಾಹುಬಲಿ- 3' ಗುಂಗಿನಲ್ಲಿದ್ದಾರೆ. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಸಿನಿಮಾಗಳು ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದು ಗೊತ್ತೇಯಿದೆ.
8 ವರ್ಷಗಳ ಹಿಂದೆ ಬಂದಿದ್ದ 'ಬಾಹುಬಲಿ: ದಿ ಬಿಗಿನಿಂಗ್' ಸಿನಿಮಾ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಪ್ಯಾನ್ ಇಂಡಿಯಾಮಟ್ಟದಲ್ಲಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬಳಿಕ ಚಿತ್ರದ ಮುಂದುವರೆದ ಭಾಗ 'ಬಾಹುಬಲಿ: ದಿ ಕನ್‌ಕ್ಲ್ಯೂಷನ್' ಬಂದು ಸಾವಿರ ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ದಕ್ಷಿಣ ಭಾರತದ ಸಿನಿಮಾಗಳು ಇಂತಾದೊಂದು ಸಕ್ಸಸ್ ಪಡೀಬಹುದು ಎಂದು ಸಾಧಿಸಿ ತೋರಿಸಿತ್ತು. ಡಬಲ್ ರೋಲ್‌ನಲ್ಲಿ ತಂದೆ ಮಗನಾಗಿ ಪ್ರಭಾಸ್ ಅಭಿನಯಕ್ಕೆ ಸಿನಿರಸಿಕರು ಫಿದಾ ಆಗಿದ್ದರು.

ಮಾಹಿಷ್ಮತಿ ಸಾಮ್ರಾಜ್ಯ, ಅಮರೇಂದ್ರ ಬಾಹುಬಲಿ ಹಾಗೂ ಬಲ್ಲಾಳದೇವನ ನಡುವೆ ಸಿಂಹಾಸನಕ್ಕಾಗಿ ಹೋರಾಟ, ರಾಜನಿಗೆ ನಿಷ್ಠನಾದ ಕಟ್ಟಪ್ಪ, ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳುವ ಮಹೇಂದ್ರ ಬಾಹುಬಲಿ, ದೊಡ್ಡಪ್ಪ ಮೋಸದಿಂದ ಕಿತ್ತುಕೊಂಡ ಸಿಂಹಾಸನವನ್ನು ಮರಳಿ ಪಡೆಯುವುದು, ತನ್ನ ತಾಯಿ ದೇವಸೇನಾಗೆ ಆದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು.
'ಸಲಾರ್' ರಿಲೀಸ್ ಹೊತ್ತಲ್ಲಿ ಪ್ರಭಾಸ್ 'ಬಾಹುಬಲಿ'-3 ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ 'ಸಲಾರ್' ಚಿತ್ರತಂಡವನ್ನು ನಿರ್ದೇಶಕ ರಾಜಮೌಳಿ ಸಂದರ್ಶನ ಮಾಡಿದ್ದಾರೆ. ಈ ವೇಳೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ಚರ್ಚೆ ನಡೆದಿದೆ. ಇದೇ ವೇಳೆ 'ಬಾಹುಬಲಿ'- 3 ಟಾಪಿಕ್ ಕೂಡ ಬಂದಿದೆ.
ಪ್ರಶಾಂತ್ ನೀಲ್ ಮಾತನಾಡುತ್ತಾ "ನಾನು ಇದುವರೆಗೆ 4 ಸಿನಿಮಾ ಮಾಡಿದ್ದೇನೆ.. ಆದರೆ ಯಾವ ಸಿನಿಮಾ ರಿಲೀಸ್‌ಗೂ ಇಷ್ಟು ಟೆನ್ಷನ್ ಆಗಿಲ್ಲ.. ಅದಕ್ಕೆ ಕಾರಣ.. ಸಲಾರ್‌ನಲ್ಲಿ ಹೆಚ್ಚು ಡ್ರಾಮಾ ಇದೆ.. ಈ ರೀತಿ ನನ್ನ ಸಿನಿಮಾಗಳಲ್ಲಿ ಡ್ರಾಮಾ ಟ್ರೈ ಮಾಡಿಲ್ಲ.. ಅದಕ್ಕೆ ಸ್ವಲ್ಪ ಟೆನ್ಷನ್.. ನಿಮ್ಮ ಸಿನಿಮಾಗಳಲ್ಲಿ ಡ್ರಾಮಾ ಚೆನ್ನಾಗಿ ವರ್ಕ್ ಔಟ್ ಆಗುತ್ತೆ.. 'ಸಲಾರ್' ಚಿತ್ರದಲ್ಲಿ ಅದು ಹೇಗಿರುತ್ತೆ ನೋಡೋಣ" ಎಂದಿದ್ದಾರೆ.

ಪ್ರಶಾಂತ್ ನೀಲ್ ಮಾತಿಗೆ ರಾಜಮೌಳಿ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. "ಪ್ರಭಾಸ್ ಜೊತೆ ಡ್ರಾಮಾ ಚೆನ್ನಾಗಿ ವರ್ಕೌಟ್ ಆಗುತ್ತದೆ. ಅದರ ಬಗ್ಗೆ ನಿಜವಾಗಿ ಟೆನ್ಷನ್ ಆಗುವ ಅಗತ್ಯವಿಲ್ಲ. ಪ್ರಭಾಸ್ ಬಂದು ಹಾಗೆ ನಿಂತರೆ ಸಾಕು. ಜನ ಎಷ್ಟು ಹೊತ್ತಾದರೂ ಡ್ರಾಮಾ ನೋಡುತ್ತಲೇ ಇರುತ್ತಾರೆ. ಪ್ರಭಾಸ್‌ಗೆ ಅದೇ ದೊಡ್ಡ ಪಾಸಿಟಿವ್" ಎಂದಿದ್ದಾರೆ. ಇದಕ್ಕೆ ಕೂಡಲೇ ಪ್ರಭಾಸ್ ನಗುತ್ತಾ "ಹಾಗಾದ್ರೆ ನನ್ನ ಜೊತೆ 'ಬಾಹುಬಲಿ-3' ಕನ್ಫರ್ಮ್ ಅಲ್ವಾ? ಎಂದಿದ್ದಾರೆ. ಇದಕ್ಕೆ ರಾಜಮೌಳಿ ಉತ್ತರಿಸದೇ ನಗುತ್ತಲೇ ಟಾಪಿಕ್ ಡೈವರ್ಟ್ ಮಾಡಿದ್ದಾರೆ.
ನಿಜ ಹೇಳಬೇಕು ಅಂದ್ರೆ 'ಬಾಹುಬಲಿ' ಕಥೆ ಮುಗಿದ ಅಧ್ಯಾಯ. ರಾಜಮೌಳಿ ಅದನ್ನು ಮರೆತು ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ 'RRR' ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದರು. ಇದೀಗ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮುಂದಿನ ಸಿನಿಮಾ ಪ್ಲ್ಯಾನ್ ನಡೀಇದೆ. 'RRR' ಸೀಕ್ವೆಲ್ ಕೂಡ ಜಕ್ಕಣ್ಣ ನಿರ್ದೇಶನ ಮಾಡಲ್ಲ ಎಂದು ತಂದೆ ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಮೌಳಿ ಗಮನ ಈಗ ಬೇರೆ ಸಿನಿಮಾಗಳ ಕಡೆಯಿದೆ.
ಮಹೇಶ್ ಬಾಬು ಜೊತೆಗಿನ ಸಿನಿಮಾ ಮುಗಿದ ಮೇಲೆ ತಮ್ಮ ಕನಸಿಕ ಮಹಾಭಾರತ ಚಿತ್ರಕ್ಕೆ ಜಕ್ಕಣ್ಣ ಕೈ ಹಾಕುವ ಸಾಧ್ಯತೆಯಿದೆ. ಹಲವು ವರ್ಷಗಳಿಂದ ಮಹಾಭಾರತ ಕಾವ್ಯವನ್ನು ಮೌಳಿ ತೆರೆಗೆ ತರುವ ಬಗ್ಗೆ ಮಾತನಾಡುತ್ತಿದ್ದಾರೆ. ಹಲವು ಭಾಗಗಳಲ್ಲಿ ಕಥೆಯನ್ನು ಕಟ್ಟಿಕೊಡಲು ಮನಸ್ಸು ಮಾಡಿದ್ದಾರೆ. ಈಗ ಮಾಡುತ್ತಿರುವ ಸಿನಿಮಾಗಳ ಮೂಲಕ ತಮ್ಮ ಕನಸಿನ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ಹಾಗಾಗಿ 'ಬಾಹುಬಲಿ'-3 ಸಿನಿಮಾ ಮಾಡುವ ವಿಚಾರ ಸದ್ಯಕ್ಕಿಲ್ಲ. ಆದರೆ ಅಭಿಮಾನಿಗಳು ಮಾತ್ರ ಮತ್ತೆ ಮಾಹಿಷ್ಮತಿ ಪ್ರಪಂಚ ನೋಡಲು ಉತ್ಸುಕರಾಗಿದ್ದಾರೆ.


Click it and Unblock the Notifications











