ಅಬ್ಬಬ್ಬಾ.. ಪ್ಯಾನ್ ಇಂಡಿಯಾ ಅಲ್ಲ, ಅದಕ್ಕಿಂತ ಮೇಲೆ ಪ್ರಭಾಸ್ 'ಸ್ಪಿರಿಟ್'
ಚಿತ್ರರಂಗದಲ್ಲೀಗ ಪ್ಯಾನ್ ಇಂಡಿಯಾ ಸಿನಿಮಾಗಳ ದರ್ಬಾರ್ ನಡೀತಿದೆ. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಅದಕ್ಕೆ ನಾಂದಿ ಹಾಡಿತ್ತು. ಬಳಿಕ ಕನ್ನಡದ 'KGF' ಸರಣಿ ಈ ಕಾನ್ಸೆಪ್ಟ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತ್ತು. ಈಗ ಪ್ಯಾನ್ ಇಂಡಿಯಾಗಿಂತ ದೊಡ್ಡದಾಗಿ ಸಿನಿಮಾ ನಿರ್ಮಾಣ ನಡೀತಿದೆ.
ಈಗಾಗಲೇ ಪ್ಯಾನ್ ಇಂಡಿಯಾ ಬಿಟ್ಟು ಪ್ಯಾನ್ ವರ್ಲ್ಡ್ ಸಿನಿಮಾಗಳ ನಿರ್ಮಾಣಕ್ಕೆ ಫಿಲ್ಮ್ ಮೇಕರ್ಸ್ ತಯಾರಿ ನಡೆಸಿದ್ದಾರೆ. ಯಶ್ ನಟನೆಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳು ಈ ಹಾದಿಯಲ್ಲಿ ಮುಂದಿವೆ. ಇನ್ನು ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ನಟನೆಯ SSMB29 ಕೂಡ ಪ್ಯಾನ್ ವರ್ಲ್ಡ್ ಸಿನಿಮಾ. ಆ ಪಟ್ಟಿಗೆ ಅಲ್ಲು ಅರ್ಜುನ್ ಹಾಗೂ ಅಟ್ಲಿ ಸಿನಿಮಾ ಕೂಡ ಸೇರಿಕೊಂಡಿದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ 'ಸ್ಪಿರಿಟ್' ಎಂಬ ಸಿನಿಮಾ ಘೋಷಣೆ ಆಗಿದೆ. ಪ್ರಭಾಸ್ ಹೀರೊ ಆಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಅಧಿಕೃತವಾಗಿ ಸೆಟ್ಟೇರಲಿದೆ. ಸದ್ಯ ಚಿತ್ರದ ನಾಯಕಿಯಾಗಿ ತ್ರಿಪ್ತಿ ಡಿಮ್ರಿ ಆಯ್ಕೆ ಆಗಿದ್ದಾರೆ. ಇದೆಲ್ಲದರ ನಡುವೆ ಸಿನಿಮಾ 9 ಭಾಷೆಗಳಲ್ಲಿ ನಿರ್ಮಾಣವಾಗುವ ಬಗ್ಗೆ ಮಾಹಿತಿ ಸಿಕ್ಕಿದೆ. ಅದರಲ್ಲೂ ಮುಖ್ಯವಾಗಿ ಜಪನೀಸ್, ಚೀನಾ ಭಾಷೆಗಳಲ್ಲಿ ಸಿನಿಮಾ ಮೂಡಿ ಬರುವುದು ಕುತೂಹಲ ಮೂಡಿಸಿದೆ.
ಸಾಮಾನ್ಯವಾಗಿ ಭಾರತದಲ್ಲಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾಗಳು ನಿರ್ಮಾಣವಾಗುತ್ತವೆ. ದಶಕಗಳ ಹಿಂದೆಯೇ ಪ್ಯಾನ್ ಇಂಡಿಯಾ ಮಾದರಿಯಲ್ಲಿ ಒಂದೇ ಕಥೆಯನ್ನು ಎರಡ್ಮೂರು ಭಾಷೆಗಳಲ್ಲಿ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಕೆಲವೊಮ್ಮೆ ಕಲಾವಿದರನ್ನು ಬದಲಿಸಿ ಎರಡು ಭಾಷೆಗಳನ್ನು ಸಿನಿಮಾ ಕಟ್ಟಿಕೊಡುತ್ತಿದ್ದರು. ಅಥವಾ ಡಬ್ ಮಾಡುತ್ತಿದ್ದರು. ಬಳಿಕ ಈ ರೂಢಿ ತಪ್ಪಿ ಹೋಗಿತ್ತು.
ಏಳೆಂಟು ವರ್ಷಗಳ ಹಿಂದೆ ಪ್ಯಾನ್ ಇಂಡಿಯಾ ಹೆಸರಿನಲ್ಲಿ ರಾಜಮೌಳಿ ಇದನ್ನು ಮತ್ತೆ ಆರಂಭಿಸಿದ್ದರು. ಒಂದು ಭಾಷೆಯಲ್ಲಿ ಸಿನಿಮಾ ನಿರ್ಮಿಸಿ ಬಳಿಕ ಅದನ್ನು ನಾಲ್ಕು ಭಾಷೆಗಳಿಗೆ ಡಬ್ ಮಾಡುವ ಲೆಕ್ಕಾಚಾರ ಆರಂಭವಾಗಿತ್ತು. ಇತ್ತೀಚೆಗೆ ಸಾಕಷ್ಟು ಸಿನಿಮಾಗಳು ಇದೇ ರೀತಿ ಪ್ರೇಕ್ಷಕರ ಮುಂದೆ ಬರ್ತಿವೆ. ತೆರೆಗೆ ಬರದಿದ್ದರೂ ಡಬ್ ಆಗಿ ಓಟಿಟಿಗೆ ಬರ್ತಿವೆ. ಕೆಲ ಸಿನಿಮಾಗಳನ್ನು ಇಂಗ್ಲೀಷ್ ಭಾಷೆಗೂ ಡಬ್ ಮಾಡುವ ಪ್ರಯತ್ನ ನಡೀತು.
ಯಶ್ ನಟನೆಯ 'ಟಾಕ್ಸಿಕ್' ಚಿತ್ರವನ್ನು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದೆ. ಜೊತೆಗೆ ದೇಶ ವಿದೇಶದ ಭಾಷೆಗಳಿಗೆ ಡಬ್ ಮಾಡುವ ಪ್ರಯತ್ನ ನಡೀತಿದೆ. ಮುಖ್ಯವಾಗಿ ಯೂರೋಪ್ ಭಾಷೆಗಳಿಗೆ ಚಿತ್ರವನ್ನು ಕೊಂಡೊಯ್ಯುವ ಲೆಕ್ಕಾಚಾರ ಜೋರಾಗಿದೆ. ಆದರೆ 'ಸ್ಪಿರಿಟ್' ಚಿತ್ರವನ್ನು ಭಾರತದ 5 ಭಾಷೆಗಳ ಜೊತೆಗೆ ಏಷ್ಯಾ ಜಪಾನೀಸ್, ಚೈನೀಸ್ ಭಾಷೆಗಳಿಗೆ ಡಬ್ ಮಾಡುವ ಸಿಕ್ಕಿದೆ.
ಭಾರತದ ಸಿನಿಮಾಗಳಿಗೆ ಜಪಾನ್ ಹಾಗೂ ಚೀನಾದಲ್ಲಿ ಕೆಲವೊಮ್ಮೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿರುವ ಉದಾಹರಣೆಯಿದೆ. ಇತ್ತೀಚಿನ ವರ್ಷಗಳಲ್ಲಿ 'ಬಾಹುಬಲಿ', 'KGF' ಸರಣಿ, 'RRR' ಸೇರಿದಂತೆ ಕೆಲ ಸಿನಿಮಾಗಳನ್ನು ದೊಡ್ಡಮಟ್ಟದಲ್ಲಿ ಬಿಡುಗಡೆ ಮಾಡಲಾಗಿತ್ತು. ಅಲ್ಲಿನ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. 'RRR' ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡವೇ ಜಪಾನ್ ಪ್ರವಾಸ ಕೈಗೊಂಡಿದ್ದು ಗೊತ್ತಿದೆ. ಹಾಗಾಗಿ 'ಸ್ಪಿರಿಟ್' ಚಿತ್ರವನ್ನು ಏಕಕಾಲಕ್ಕೆ ಜಪನೀಸ್, ಚೈನೀಸ್ ಭಾಷೆಗೆ ಡಬ್ ಮಾಡುವ ಪ್ಲ್ಯಾನ್ ನಡೀತಿದೆ.
ಈ ಹಿಂದೆ ಭಾರತದಲ್ಲಿ ತೆರೆಕಂಡು ಸಕ್ಸಸ್ ಕಂಡ ಸಿನಿಮಾಗಳನ್ನು ಮಾತ್ರ ಚೈನೀಸ್, ಜಪಾನೀಸ್ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದರು. ಆದರೆ ಸಂದೀಪ್ ರೆಡ್ಡಿ ವಂಗಾ ಏಕಕಾಲಕ್ಕೆ 9 ಭಾಷೆಗಳಲ್ಲಿ 'ಸ್ಪಿರಿಟ್' ಸಿನಿಮಾ ತೆರೆಗೆ ತರುವ ಸಾಹಸಕ್ಕೆ ಕೈ ಹಾಕಿದ್ದಾರೆ.
'ಸ್ಪಿರಿಟ್' ಚಿತ್ರಕ್ಕೆ ತ್ರಿಪ್ತಿ ಡಿಮ್ರಿ ನಾಯಕಿ ಎನ್ನುವುದನ್ನು 9 ಭಾಷೆಗಳಲ್ಲಿ ಬರೆದು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಹಾಗಾಗಿ ಅಷ್ಟು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗುವ ಸಾಧ್ಯತೆಯಿದೆ. ಟೀ-ಸೀರಿಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡುತ್ತಿದೆ. ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











