'ಕಣ್ಣಪ್ಪ' ಚಿತ್ರದಲ್ಲಿ ಪ್ರಭಾಸ್ ಲುಕ್ ಬಹಿರಂಗ; ಯಾವ ಪಾತ್ರ?
ತೆಲುಗಿನ 'ಕಣ್ಣಪ್ಪ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರೀಕ್ಷೆ ಹುಟ್ಟಾಕ್ಕಿದೆ. ಮಂಚು ವಿಷ್ಣು ಹೀರೋ ಆಗಿ ನಟಿಸುತ್ತಿರುವ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಗೆಸ್ಟ್ ಅಪಿಯರೆನ್ಸ್ ಮಾಡುತ್ತಿದ್ದಾರೆ. ಮಲಯಾಳಂ ನಟ ಮೋಹನ್ ಲಾಲ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಪ್ರಭಾಸ್ ಕೂಡ ಚಿತ್ರದಲ್ಲಿದ್ದಾರೆ.
ಅಂದಹಾಗೆ 'ಕಣ್ಣಪ್ಪ' ಚಿತ್ರದಲ್ಲಿ ಹೀರೊ ಆಗಿ ನಟಿಸಬೇಕು ಎನ್ನುವುದು ಪ್ರಭಾಸ್ ಕನಸಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಚಿತ್ರದಲ್ಲಿ ಸಣ್ಣ ಪಾತ್ರ ಆದರೂ ಸರಿ ನಟಿಸಬೇಕು ಎಂದು ಒಪ್ಪಿಕೊಂಡಿದ್ದರು. ಶಿವನ ಪಾತ್ರದಲ್ಲಿ ಪ್ರಭಾಸ್ ನಟಿಸುತ್ತಾರೆ ಎಂದು ಗುಲ್ಲಾಗಿತ್ತು. ಬಳಿಕ ಅಕ್ಷಯ್ ಕುಮಾರ್ ಪಾತ್ರದಲ್ಲಿ ನಟಿಸುವುದು ಪಕ್ಕಾ ಆಯಿತು. ಹಾಗಿದ್ದರೆ ಯಂಗ್ ರೆಬಲ್ ಸ್ಟಾರ್ ಪಾತ್ರ ಏನು? ಎನ್ನುವುದು ಈಗ ರಿವೀಲ್ ಆಗಿದೆ.

ಖಡಕ್ ಪೋಸ್ಟರ್ ಸಮೇತ 'ಕಣ್ಣಪ್ಪ' ಚಿತ್ರದಲ್ಲಿ ಪ್ರಭಾಸ್ ಪಾತ್ರ ಪರಿಚಯಿಸಲಾಗಿದೆ. ಶಿವನ ಅನುಯಾಯಿ ದೈವಿಕ ರಕ್ಷಕ ರುದ್ರನ ಪಾತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ನಟಿಸುತ್ತಿದ್ದಾರೆ. ಮಹಾಕವಿ ಧೂರ್ಜಟಿ ಬರೆದ ಶ್ರೀಕಾಳಹಸ್ತೇಶ್ವರ ಮಹಾತ್ಮೆಯ ಭಕ್ತ ಕಣ್ಣಪ್ಪನ ಕಥೆಯಿಂದ ಸ್ಫೂರ್ತಿ ಪಡೆದು 'ಕಣ್ಣಪ್ಪ' ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಏಪ್ರಿಲ್ 25ಕ್ಕೆ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ.
ಕನ್ನಡ ಸೇರಿ 5 ಭಾಷೆಗಳಲ್ಲಿ 'ಕಣ್ಣಪ್ಪ' ಸಿನಿಮಾ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ 'ಬೇಡರ ಕಣ್ಣಪ್ಪ', 'ಶಿವ ಮೆಚ್ಚಿನ ಕಣ್ಣಪ್ಪ' ಇದೇ ಕಣ್ಣಪ್ಪನ ಕಥೆಯನ್ನು ಇದೀಗ ಹೊಸದಾಗಿ ಕೊಟ್ಟಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಕಣ್ಣಪ್ಪನ ಪಾತ್ರದಲ್ಲಿ ಮಂಚು ವಿಷ್ಣು ನಟಿಸುತ್ತಿದ್ದಾರೆ. ಅವರ ತಂದೆ ಮೋಹನ್ ಬಾಬು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮುಖೇಶ್ ಕುಮಾರ್ ಸಿಂಗ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಶರತ್‌ಕುಮಾರ್, ಮಧು, ಯೋಗಿ ಬಾಬು, ದೇವರಾಜ್, ಅಚ್ಯುತ್‌ಕುಮಾರ್ 'ಕಣ್ಣಪ್ಪ' ಚಿತ್ರದ ತಾರಾಗಣದಲ್ಲಿದ್ದಾರೆ. ಕಿರಾಟನಾಗಿ ಮೋಹನ್ ಬಾಬು, ಶಿವನಾಗಿ ಅಕ್ಷಯ್ ಕುಮಾರ್ ಹಾಗೂ ಪಾರ್ವತಿಯಾಗಿ ಕಾಜಲ್ ಅಗರ್‌ವಾಲ್ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ರುದ್ರನಾಗಿ ಪ್ರಭಾಸ್ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಸದ್ಯ ಬಿಡುಗಡೆ ಆಗಿರುವ ಪೋಸ್ಟರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮೊದಲಿನಿಂದಲೂ 'ಕಣ್ಣಪ್ಪ' ಚಿತ್ರದ ಪೋಸ್ಟರ್‌ಗಳು ನಿರಾಸೆ ಮೂಡಿಸುತ್ತಲೇ ಇದೆ. ಪ್ಯಾನ್ ಇಂಡಿಯಾ ಎಂದು ಹೇಳುತ್ತಾರೆ ಯಾಕೆ ಇಷ್ಟು ಕೆಟ್ಟದಾಗಿ ಪೋಸ್ಟರ್ ಡಿಸೈನ್ ಮಾಡುತ್ತಾರೆ ಎಂದು ಅಭಿಮಾನಿಗಳು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದ್ದಿದ್ದರಲ್ಲಿ ಪ್ರಭಾಸ್ ಪೋಸ್ಟರ್ ಪರವಾಗಿಲ್ಲ ಎನ್ನುವಂತಿದೆ. ಆದರೆ ಜಟಾಧಾರಿಯಾಗಿ ಆ ವಿಗ್, ಕಲರ್ ಗ್ರೇಡಿಂಗ್ ಯಾವುದು ಚೆನ್ನಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ ಬಹುತೇಕ ಸಿನಿಮಾ ಚಿತ್ರೀಕರಣ ನ್ಯೂಜಿಲೆಂಡ್ ಕಾಡಿನಲ್ಲಿ ಮಾಡಲಾಗಿದೆ. ಅರೇ 'ಕಣ್ಣಪ್ಪ'ನ ಕಥೆಯನ್ನು ಯಾಕೆ ವಿದೇಶದ ಕಾಡಿನಲ್ಲಿ ಚಿತ್ರಿಸುತ್ತಾರೆ ಎಂದು ಕೆಲವರು ಗೊಣಗಾಡಿದ್ದರು. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಶೆಲ್ಡನ್ ಚೌ ಛಾಯಾಗ್ರಹಣ ಹಾಗೂ ಸ್ಟೀಫನ್ ದೇವಸ್ಸಿ ಸಂಗೀತ 'ಕಣ್ಣಪ್ಪ' ಚಿತ್ರಕ್ಕಿದೆ.
ಪ್ರಭಾಸ್ ರೀತಿಯ ಘಟಾನುಘಟಿ ಕಲಾವಿದರು ನಟಿಸಿರುವುದರಿಂದ ಸಿನಿಮಾ ತಕ್ಕಮಟ್ಟಿಗೆ ನಿರೀಕ್ಷೆ ಹುಟ್ಟಾಕ್ಕಿದೆ. ಆದರೆ ಸದ್ಯ ಬಂದಿರುವ ಸ್ಯಾಂಪಲ್ಸ್ ಬೇಸರ ಮೂಡಿಸಿದೆ. ಈ ಹಿಂದೆ 'ಆದಿಪುರುಷ್' ಚಿತ್ರವನ್ನು ಇದೇ ರೀತಿ ತಿರುಚಿ ಎಡವಟ್ಟು ಮಾಡಿದ್ದರು. ಪೌರಾಣಿಕ, ಐತಿಹಾಸಿಕ ಕಥೆಗಳನ್ನು ಹೇಳುವಾಗ ಜಾಗ್ರತೆ ವಹಿಸಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಕನ್ನಡ ನಟ ಶಿವರಾಜ್‌ಕುಮಾರ್ ಕೂಡ 'ಕಣ್ಣಪ್ಪ' ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದೆ.


Click it and Unblock the Notifications











