ಪ್ರಭಾಸ್ ಮದುವೆ, ಆರೋಗ್ಯದ ಬಗ್ಗೆ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಜಾತಕದ ಜ್ಞಾನವಿಲ್ಲ ಎಂದು ಶ್ಯಾಮಲಾ ದೇವಿ ವಾಗ್ದಾಳಿ!
ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು ಸಾಮಾನ್ಯವಾಗಿ ಪ್ರಸಿದ್ಧ ವ್ಯಕ್ತಿಗಳ ಭವಿಷ್ಯದ ಬಗ್ಗೆ ಜ್ಯೋತಿಷ್ಯ ನುಡಿಯುತ್ತಾರೆ. ಇತ್ತೀಚೆಗೆ ಅವರು ನಟ ಪ್ರಭಾಸ್ ಅವರ ಆರೋಗ್ಯ ಮತ್ತು ಮದುವೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಇದೀಗ ವೇಣು ಸ್ವಾಮಿ ಹೇಳಿಕೆ ವಿರುದ್ಧ ಪ್ರಭಾಸ್ ದೊಡ್ಡಮ್ಮ ಶ್ಯಾಮಲಾ ದೇವಿ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರಭಾಸ್ ದೊಡ್ಡಮ್ಮ ಶ್ಯಾಮಲಾ ದೇವಿ ಅವರು ಪ್ರಭಾಸ್ ಅವರ ತಾಯಿಗೆ ಮಾತ್ರ ಅವರ ಜಾತಕ ತಿಳಿದಿದೆ ಎಂದು ಹೇಳಿದ್ದಾರೆ. ವೇಣು ಸ್ವಾಮಿ ಅವರು ಪ್ರಭಾಸ್ ಬಗ್ಗೆ ಯಾವುದೇ ಸರಿಯಾದ ದೃಢೀಕರಣ ಅಥವಾ ಜಾತಕದ ಜ್ಞಾನವಿಲ್ಲದೆ ಭವಿಷ್ಯ ನುಡಿದಿದ್ದಾರೆ ಎಂದು ಟೀಕಿಸಿದ್ದಾರೆ.

ವೇಣು ಸ್ವಾಮಿ ವಿರುದ್ಧ ಪ್ರಭಾಸ್ ದೊಡ್ಡಮ್ಮ ಶ್ಯಾಮಲಾ ದೇವಿ ವಾಗ್ದಾಳಿ
ನಟ ಪ್ರಭಾಸ್ ಸದ್ಯ ಸೌತ್ ಇಂಡಸ್ಟ್ರಿಯ ಮೋಸ್ಟ್ ಎಲಿಜಬಲ್ ಬ್ಯಾಚುರಲ್. ಅವರ ಮದುವೆ ಬಗ್ಗೆ ಸಾಕಷ್ಟು ವದಂತಿಗಳು ಹರಡುತ್ತಿವೆ. ಇತ್ತೀಚೆಗೆ ಜ್ಯೋತಿಷಿ ವೇಣು ಸ್ವಾಮಿ ಕೂಡ ಈ ಬಗ್ಗೆ ಮಾಹಿತಿ ಭವಿಷ್ಯ ನುಡಿದಿದ್ದರು. ಇದಕ್ಕೆ ಪ್ರಭಾಸ್ ಕುಟುಂಬದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಶ್ಯಾಮಲಾ ದೇವಿ ಅವರು ವೇಣು ಸ್ವಾಮಿಯವರ ಹೇಳಿಕೆಗಳ ವಿರುದ್ಧ ಕಿಡಿ ಕಾರಿದ್ದಾರೆ.
'ಟ್ಯಾಗ್ ತೆಲುಗು' ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ನಟನ ವೃತ್ತಿಜೀವನವನ್ನು ರೂಪಿಸುವಲ್ಲಿ ಪ್ರಭಾಸ್ ಅವರ ದೊಡ್ಡಪ್ಪ ಕೃಷ್ಣಂ ರಾಜು ಅವರ ಶ್ರಮದ ಬಗ್ಗೆ ಮಾತನಾಡಿದ್ದಾರೆ. ಪ್ರಭಾಸ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಮಾರ್ಗದರ್ಶನ ನೀಡುವಲ್ಲಿ ಕೃಷ್ಣಂ ರಾಜು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಭಾಸ್ ಜಾತಕದ ವಿವರಗಳು ಅವರ ತಾಯಿಗೆ ಮಾತ್ರ ಗೊತ್ತು!
ಇದರ ಜೊತೆಗೆ ಜ್ಯೋತಿಷಿ ವೇಣು ಸ್ವಾಮಿ ಅವರ ಭವಿಷ್ಯದ ಬಗ್ಗೆ ಮಾತನಾಡಿ, "ಪ್ರಭಾಸ್ ಅವರ ಆರೋಗ್ಯದ ಬಗ್ಗೆ ಸಾಕಷ್ಟು ವದಂತಿಗಳಿವೆ. ಅವರ ಆರೋಗ್ಯ, ಮದುವೆ ಮತ್ತು ವೈಯಕ್ತಿಕ ಜೀವನದ ಬಗ್ಗೆ ಬಹಳಷ್ಟು ಜನರು ಮಾತನಾಡುವುದನ್ನು ನಾನು ನೋಡುತ್ತಿದ್ದೇನೆ. ಇಂತಹ ವದಂತಿಗಳನ್ನು ನೋಡಿದರೆ ನಮಗೆ ನೋವಾಗುತ್ತದೆ" ಎಂದಿದ್ದಾರೆ.
"ಪ್ರಭಾಸ್ ಅವರ ತಾಯಿಯನ್ನು ಹೊರತುಪಡಿಸಿ, ಅವರ ಜಾತಕದ ವಿವರಗಳು ಬೇರೆ ಯಾರಿಗೂ ತಿಳಿದಿಲ್ಲ. ಹಾಗಾಗಿ ಬೇರೆಯವರು ಅದರ ಬಗ್ಗೆ ಹೇಗೆ ಮಾತನಾಡುತ್ತಿದ್ದಾರೆ ಎಂಬುದೇ ನನಗೆ ಆಶ್ಚರ್ಯ. ಇಂತಹ ವದಂತಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಬೇಕು" ಎಂದು ಒತ್ತಾಯಿಸಿದ್ದಾರೆ. ಈ ಹಿಂದೆ ಪ್ರಭಾಸ್ ಭವಿಷ್ಯ ನುಡಿದಿದ್ದ ವೇಣು ಸ್ವಾಮಿ ಅವರ ಮದುವೆ ತುಂಬಾ ದಿನ ಇರುವುದಿಲ್ಲ. ಇದು ಅವರ ಆರೋಗ್ಯದ ಮೇಲೂ ಪ್ರಭಾವ ಬೀರಲಿದೆ ಎಂದಿದ್ದರು.
ಕೆಲವರು ಪ್ರಭಾಸ್ ಹೆಸರನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ನೆಗೆಟಿವ್ ಭವಿಷ್ಯವಾಣಿ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ವೇಣು ಸ್ವಾಮಿಯವರ ಭವಿಷ್ಯವನ್ನು ಆಧಾರರಹಿತವೆಂದು ತಳ್ಳಿಹಾಕಿದ್ದಾರೆ. ಜನರು ಯಾವಾಗಲು ಪಾಸಿಟಿವ್ ಆಗಿರಬೇಕು ಎಂದಿದ್ದಾರೆ.
ಪ್ರಭಾಸ್ ಮುಂದಿನ ಸಿನಿಮಾಗಳು
ಸದ್ಯ ಪ್ರಭಾಸ್ ಅವರ ಸಲಾರ್ ಭಾಗ 1 ಕದನ ವಿರಾಮ ಭರ್ಜರಿ ಸಕ್ಸಸ್ ಕಂಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಜನವರಿ 20 ರಂದು ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಕೂಡ ನಟಿಸಿದ್ದಾರೆ.
ಮುಂದೆ ನಾಗ್ ಅಶ್ವಿನ್ ಅವರ ಕಲ್ಕಿ AD 2898 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಸೇರಿದಂತೆ ದೊಡ್ಡ ತಾರಾ ಬಳಗವೇ ಸಿನಿಮಾದಲ್ಲಿದೆ. ಇದರ ಜೊತೆಗೆ ಪ್ರಭಾಸ್ ಸಂದೀಪ್ ವಂಗಾ ರೆಡ್ಡಿ ಅವರೊಂದಿಗೆ 'ಸ್ಪಿರಿಟ್' ಮತ್ತು ನಿರ್ದೇಶಕ ಮಾರುತಿ ಅವರೊಂದಿಗೆ 'ರಾಜಾ ಸಾಬ್' ಕೆಲಸಗಳು ಕೂಡ ನಡೆಯುತ್ತಿವೆ.


Click it and Unblock the Notifications











