ಚಿತ್ರರಂಗದಲ್ಲಿ 18 ವರ್ಷ ಪೂರೈಸಿದ ಪ್ರಭಾಸ್: ಅಭಿಮಾನಿಗಳಿಂದ ಸಂಭ್ರಮಾಚರಣೆ
ಭಾರತೀಯ ಸಿನಿಮಾರಂಗದ ಅತಿ ಬೇಡಿಕೆಯ ನಟರಲ್ಲಿ ಒಬ್ಬರು ಪ್ರಭಾಸ್. ಬಾಹುಬಲಿ ನಟ ಸಿನಿಮಾರಂಗ ಪ್ರವೇಶಿಸಿ ಇಂದಿಗೆ (ನವೆಂಬರ್ 11) ಬರೋಬ್ಬರಿ 18 ವರ್ಷ.
ಪ್ರಭಾಸ್ ನಟನೆಯ ಮೊದಲ ಸಿನಿಮಾ 'ಈಶ್ವರ್' ಬಿಡುಗಡೆ ಆಗಿದ್ದು ನವೆಂಬರ್ 11, 2002. ತಮ್ಮ ಮೊದಲ ಸಿನಿಮಾದಲ್ಲಿಯೇ ಗಮನ ಸೆಳೆದಿದ್ದರು ನಟ ಪ್ರಭಾಸ್. ಸರಿಯಾಗಿ 12 ವರ್ಷದ ಹಿಂದೆ ಪ್ರಾರಂಭವಾದ ಪ್ರಭಾಸ್ ಸಿನಿ ಜೀವನ ಏರುಗತಿಯಲ್ಲಿಯೇ ಸಾಗುತ್ತಿದೆ.
ಸಿನಿಮಾರಂಗದಲ್ಲಿ ಸತತ 18 ಉಳಿಯುವುದು ಹಾಗೂ ವರ್ಷ ಕಳೆದಂತೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಲೇ ಸಾಗುವುದು ಸಾಮಾನ್ಯ ಸಂಗತಿಯಲ್ಲ. ಹಾಗಾಗಿ ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ ಪ್ರಾಭಾಸ್ ಅಭಿಮಾನಿಗಳು. ಪ್ರಭಾಸ್ 18 ವರ್ಷ ಪೂರೈಸಿದ್ದಕ್ಕೆ ವಿಶೇಷ ಪೋಸ್ಟರ್ ಬಿಡುಗಡೆ ಸಹ ಮಾಡಲಾಗಿದೆ ಸಾಮಾಜಿಕ ಜಾಲತಾಣದಲ್ಲಿ.

ವರ್ಷಂ ಸಿನಿಮಾ ದೊಡ್ಡ ಹಿಟ್ ಆಗಿತ್ತು
ಪ್ರಭಾಸ್ ಅಭಿನಯದ ಮೊದಲ ಸಿನಿಮಾ ಈಶ್ವರ್ ಹಿಟ್ ಎನಿಸಿಕೊಂಡಿತ್ತು. ಎರಡನೇ ಸಿನಿಮಾ ರಾಘವೇಂದ್ರ ಸಾಧಾರಣ ಹಿಟ್ ಆಯಿತು. ಆದರೆ ಮೂರನೇ ಸಿನಿಮಾ ವರ್ಷಂ ಪ್ರಭಾಸ್ ಗೆ ಸ್ಟಾರ್ ಪಟ್ಟ ನೀಡಿತು. ಅಲ್ಲಿಂದ ಪ್ರಭಾಸ್ ಹಿಂತಿರುಗಿ ನೋಡಲೇ ಇಲ್ಲ.

18 ವರ್ಷದಲ್ಲಿ ಮಾಡಿರುವುದು 19 ಸಿನಿಮಾ!
ಈ 18 ವರ್ಷಗಳಲ್ಲಿ ಪ್ರಭಾಸ್ ಅಭಿನಯಿಸಿರುವುದು ಕೇವಲ 19 ಸಿನಿಮಾಗಳಲ್ಲಿಯಷ್ಟೆ. ವರ್ಷಕ್ಕೆ ಒಂದು ಸಿನಿಮಾ ಎಂಬ ನಿಯಮವನ್ನು ಚೆನ್ನಾಗಿ ಪಾಲಿಸಿಕೊಂಡು ಬಂದಿದ್ದಾರೆ ಪ್ರಭಾಸ್. ಪ್ರಭಾಸ್ ಒಂದು ಸಿನಿಮಾ ಒಪ್ಪಿಕೊಂಡರೆ ಅದು ಮುಗಿಯುವವರೆಗೂ ಮತ್ತೊಂದು ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಿಲ್ಲ.

ಅಭಿಮಾನಿಗಳಿಂದ ಸಂಭ್ರಮಾಚರಣೆ
ಅಭಿಮಾನಿಗಳಿಂದ ಪ್ರೀತಿಯಿಂದ ಡಾರ್ಲಿಂಗ್ ಎಂದು ಕರೆಸಿಕೊಳ್ಳುವ ಪ್ರಭಾಸ್, ಚಿತ್ರರಂಗದಲ್ಲಿ 18 ವರ್ಷ ಪೂರೈಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಭಾಸ್ ಅಭಿಮಾನಿಗಳು ನಟನ ವಿವಿಧ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವು ನಟ-ನಟಿಯರು ಸಹ ಪ್ರಭಾಸ್ 18 ವರ್ಷ ಪೂರೈಸಿದ್ದಕ್ಕೆ ನಟನಿಗೆ ಅಭಿನಂದನೆ ಹೇಳಿದ್ದಾರೆ.
Recommended Video

ಈ ವರ್ಷ ಪ್ರಭಾಸ್ ಸಿನಿಮಾ ಇಲ್ಲ
ಪ್ರಭಾಸ್ ಸದ್ಯಕ್ಕೆ 'ರಾಧೆ-ಶ್ಯಾಮ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ನಂತರ ಆದಿಪುರುಷ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ನಂತರ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಜೊತೆಗೆ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸಲಿದ್ದಾರೆ. ಆದರೆ ಈ ವರ್ಷ ಪ್ರಭಾಸ್ ನಟನೆಯ ಯಾವುದೇ ಸಿನಿಮಾ ಬಿಡುಗಡೆ ಆಗುವುದು ಅನುಮಾನ.


Click it and Unblock the Notifications











