'ಸಲಾರ್' ರಿಲೀಸ್ ವೇಳೆ ದುರ್ಘಟನೆ: ಪ್ರಭಾಸ್ ಅಭಿಮಾನಿ ದುರಂತ ಸಾವು
ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಿಡುಗಡೆ ಸಮಯದಲ್ಲಿ ದುರಂತ ಸಂಭವಿಸಿದೆ. ಪ್ರಭಾಸ್ ಅಭಿಮಾನಿಯೊಬ್ಬ ವಿದ್ಯುತ್ ತಗುಲಿ ಕೊನೆಯುಸಿರೆಳೆದಿರುವ ಘಟನೆ ವರದಿಯಾಗಿದೆ. ಆಂಧ್ರದ ಧರ್ಮಾವರಂನಲ್ಲಿ ಈ ಘಟನೆ ಸಂಭವಿಸಿದೆ. 'ಸಲಾರ್' ಚಿತ್ರದ ಫ್ಲೆಕ್ಸ್ ಕಟ್ಟಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು ಬಾಲರಾಜು(29) ಎಂಬ ಅಭಿಮಾನಿ ಅಸುನೀಗಿದ್ದಾನೆ.
ಶ್ರೀಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಪಟ್ಟಣದಲ್ಲಿ ರಂಗಾ ಸಿನಿ ಕಾಂಪ್ಲೆಕ್ಸ್ ಎದುರು ಮನೆಯೊಂದರ ಮೇಲೆ ಬಾಲರಾಜು ಚಿತ್ರದ ಬ್ಯಾನರ್ ಕಟ್ಟಲು ಏರಿದ್ದ. 'ಸಲಾರ್' ಸಿನಿಮಾ ಬಿಡುಗಡೆ ಹಿನ್ನೆಲೆ ಅನಂತಪುರದ ತಪೋವನ ಮೂಲದ ಬಾಲರಾಜು ಹಾಗೂ ಆತನ ಗೆಳೆಯರು ಫ್ಲೆಕ್ಸಿ ಫ್ರೇಂ ಮಾಡಿಸಿ ಕಟ್ಟುತ್ತಿದ್ದರು. ಈ ವೇಳೆ ಸಂದರ್ಭ ಮನೆಯ ಮೇಲಿದ್ದ ವಿದ್ಯುತ್ ತಂತಿಗೆ ಫ್ರೇಮಿನ ಕಬ್ಬಿಣದ ರಾಡ್ ತಾಗಿ ಬಾಲರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದೇ ವೇಳೆ ವಿದ್ಯುತ್ ಶಾಕ್‌ನಿಂದ ಗಜೇಂದ್ರ ಎಂಬ ಮತ್ತೊಬ್ಬ ಯುವಕ ಗಾಯಗೊಂಡಿದ್ದಾನೆ. ಇನ್ನು ನಾಲ್ವರು ಯುವಕರು ಅಪಘಾತದಲ್ಲಿ ಪಾರಾಗಿದ್ದಾರೆ.

ತಪೋವನ ಮೂಲದ ಬಾಲರಾಜು ಕನಗಾನಪಲ್ಲಿ ಮಂಡಲದ ಮಾಮಿಲ್ಲಪಲ್ಲಿಯಲ್ಲಿ ಕೆಲ ದಿನಗಳಿಂದ ಸಣ್ಣ ವ್ಯಾಪಾರ ಮಾಡಿಕೊಂಡು ವಾಸವಾಗಿದ್ದ. ಸಲಾರ್ ಸಿನಿಮಾ ರಿಲೀಸ್ ಹಿನ್ನೆಲೆ ಬಾಲರಾಜು, ಸ್ನೇಹಿತರ ಜೊತೆ ಅನಂತಪುರದಿಂದ ಧರ್ಮಾವರಕ್ಕೆ ಬಂದಿದ್ದ. ಬಾಲರಾಜು ಪತ್ನಿ ಸಿರಿಶಾ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಧರ್ಮವರಂ ಒನ್ ಟೌನ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ ಕೂಡ ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಇಂತಹ ದುರಂತಗಳು ನಡೆದಿವೆ. ಆದರೂ ಕೂಡ ಅಭಿಮಾನಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಇನ್ನು ಬಾಲರಾಜು ಸಾವಿನ ನಂತರ ಸಂಬಂಧಿಕರು ಮತ್ತು ಸ್ನೇಹಿತರು ಸ್ಥಳದಲ್ಲಿ ಧರಣಿ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ವಿದ್ಯುತ್ ತಂತಿ ಎತ್ತರದಲ್ಲಿ ಇರಲಿಲ್ಲ. ಕೆಳಗೆ ಇತ್ತು. ಬಾಲರಾಜುಗೆ ವಿದ್ಯುತ್ ತಗುಲಲು ಇದೇ ಮುಖ್ಯ ಕಾರಣ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಆತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸಿದರು.
ಇದೇ ವರ್ಷ ತಮಿಳು ನಟ ಅಜಿತ್ ಅಭಿಮಾನಿಯೊಬ್ಬ 'ತುನಿವು' ಸಿನಿಮಾ ರಿಲೀಸ್ ವೇಳೆ ಮೃತಪಟ್ಟಿದ್ದ. ಚಲಿಸುತ್ತಿದ್ದ ಟ್ಯಾಂಕರ್ ಮೇಲೆ ಏರಿ ಸಂಭ್ರಮಚರಣೆಯಲ್ಲಿದ್ದಾಗ ಆಯತಪ್ಪಿ ಬಿದ್ದು ಅಸುನೀಗಿದ್ದ ಘಟನೆ ನಡೆದಿತ್ತು. ಚೆನ್ನೈನ ಕೋಯಂಬೆಡ್ ರೋಹಿಣಿ ಥಿಯೇಟರ್ ಬಳಿ ಈ ದುರಂತ ಸಂಭವಿಸಿತ್ತು. ಭರತ್ ಕುಮಾರ್(19) ಇನ್ನು ಅಭಿಮಾನಿ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದ.

ಇನ್ನು ತಮಿಳು ನಟ ಸೂರ್ಯ ಹುಟ್ಟುಹಬ್ಬದ ವೇಳೆ ಫ್ಲೆಕ್ಸ್ ಕಟ್ಟುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ಅಭಿಮಾನಿಗಳು ಮೃತಪಟ್ಟಿದ್ದ ಘಟನೆ ನಡೆದಿತ್ತು. ಆಂಧ್ರದ ನರಸರಾವ್ ಪೇಟೆಯ ಮೊಪ್ಪುವಾರಿಪಾಲೆಂನಲ್ಲಿ ಈ ದುರಂತ ಸಂಭವಿಸಿತ್ತು. ನಕ್ಕಾ ವೆಂಕಟೇಶ್ ಮತ್ತು ಪೋಲೂರಿ ಸಾಯಿ ಎಂಬ ಇಬ್ಬರು ಅಭಿಮಾನಿಗಳು ಫ್ಲೆಕ್ಸ್ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ ಕೊನೆಯುಸಿರೆಳೆದಿದ್ದರು.
'ಸಲಾರ್' ಚಿತ್ರಕ್ಕೆ ಪ್ರೇಕ್ಷಕರಿಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ದೇಶ ವಿದೇಶದಲ್ಲಿ ಸಿನಿಮಾ ತೆರೆಗಪ್ಪಳಿಸಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದರು. ಬೆಂಗಳೂರಿನಲ್ಲಿ ಬೆಳಗ್ಗೆ 5 ಗಂಟೆಗೆ ಸಾಕಷ್ಟು ಶೋಗಳು ಆರಂಭವಾಗಿತ್ತು. 'ಉಗ್ರಂ' ಕಥೆಯನ್ನೇ ಹೊಸ ರೂಪದಲ್ಲಿ ನೀಲ್ ಹೇಳಿದ್ದು ಅಭಿಮಾನಿಗಳಿಗೆ ಇಷ್ಟವಾಗಿದೆ. ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಗುತ್ತಿದೆ. 'ಡಂಕಿ' ಎದುರಿನ ಫೈಟ್‌ನಲ್ಲೂ ಗೆಲ್ಲುವ ಸುಳಿವು ಸಿಗುತ್ತಿದೆ.


Click it and Unblock the Notifications











