'ರಾಜಾಸಾಬ್' ಚಿತ್ರ ನೋಡಲು 'ಮೊಸಳೆ'ಗಳನ್ನು ಹಿಡ್ಕೊಂಡು ಚಿತ್ರಮಂದಿರಕ್ಕೆ ಬಂದ ಪ್ರಭಾಸ್ ಫ್ಯಾನ್ಸ್
ಬಾಹುಬಲಿ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಸಂಕ್ರಾಂತಿಗೂ ಮುನ್ನ ಚಿತ್ರಮಂದಿರಗಳಲ್ಲಿ ಪ್ರಭಾಸ್ ಅಭಿಮಾನಿಗಳಿಗೆ ಹಬ್ಬ ಮನೆ ಮಾಡಿದೆ. ಒಂದು ದಿನ ಮೊದ್ಲೆ ಪ್ರೀಮಿಯರ್ ಶೋಗಳು ನಡೆದಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.
ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ವೇಳೆ ಥಿಯೇಟರ್ ಹೊರಗೆ, ಒಳಗೆ ಅಭಿಮಾನಿಗಳ ಆರ್ಭಟ ಜೋರಾಗಿರುತ್ತದೆ. ಸ್ಕ್ರೀನ್ ಮುಂದೆ ಡ್ಯಾನ್ಸ್ ಮಾಡಿ ಜೈಕಾರ ಹಾಕಿ ಹಂಗಾಮಾ ಮಾಡುತ್ತಾರೆ. ಅದೇ ರೀತಿ 'ದಿ ರಾಜಾಸಾಬ್' ಸಿನಿಮಾ ನೋಡಲು ಪ್ರಭಾಸ್ ಅಭಿಮಾನಿಗಳು ಮೊಸಳೆಗಳನ್ನು ಹಿಡಿದು ಬಂದಿದ್ದಾರೆ. ಪ್ರೇಕ್ಷಕರ ನಡುವೆ ಮೊಸಳೆಗಳನ್ನು ಹಿಡಿದು ಡ್ಯಾನ್ಸ್ ಮಾಡಿದ್ದಾರೆ. ಕನ್‌ಫ್ಯೂಸ್ ಆಗಬೇಡಿ. ಅವು ನಿಜವಾದ ಮೊಸಳೆಗಳು ಅಲ್ಲ. ಬದಲಿಗೆ ಮೊಸಳೆಯ ಗೊಂಬೆಗಳು.

ಚಿತ್ರದಲ್ಲಿ ಪ್ರಭಾಸ್ ಮೊಸಳೆ ಜೊತೆ ಫೈಟ್ ಮಾಡುವ ಸನ್ನಿವೇಶ ಇದೆ. ಅದನ್ನು ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಚಿತ್ರಮಂದರಿಗಳಲ್ಲಿ 'ಮೊಸಳೆ' ಗೊಂಬೆಗಳನ್ನು ಹಿಡಿದು ಸಂಭ್ರಮಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಮೊದಲ ನೋಟದಲ್ಲಿ ಅವು ನಿಜವಾದ ಮೊಸಳೆಗಳಾ ಎಂದು ಅಚ್ಚರಿ ಆಗುತ್ತದೆ.
ಅಂದಹಾಗೆ ಅದು ನಿಜವಾದ ಮೊಸಳೆ ಅಥವಾ ಮೊಸಳೆ ಗೊಂಬೆ ಕೂಡ ಅಲ್ಲ. ಬದಲಿಗೆ AI ಬಳಸಿ ಸೃಷ್ಟಿ ಮಾಡಿರುವ ವೀಡಿಯೋಗಳು ಎನ್ನುವ ಚರ್ಚೆ ಕೂಡ ನಡೀತಿದೆ. 'ದಿ ರಾಜಾಸಾಬ್' ಚಿತ್ರದ 2ನೇ ಟ್ರೈಲರ್‌ನಲ್ಲಿ ಪ್ರಭಾಸ್ ಮೊಸಳೆ ಎತ್ತಿ ಬಿಸಾಕುವ ಸನ್ನಿವೇಶ ಇತ್ತು. ಅದನ್ನು ನೋಡಿ ಅಭಿಮಾನಿಗಳು ಹೀಗೆ ಡಮ್ಮಿ ಮೊಸಳೆಗಳನ್ನು ಚಿತ್ರಮಂದಿರಕ್ಕೆ ತಂದಿದ್ದಾರೆ ಎನ್ನಲಾಗ್ತಿದೆ. ಒಟ್ಟಾರೆ ಸೋಶಿಯಲ್ ಮೀಡಿಯಾದಲ್ಲಿ ರಾಜಾಸಾಬ್ ಆರ್ಭಟ ಜೋರಾಗಿದೆ.
ಬಹುಕೋಟಿ ವೆಚ್ಚದಲ್ಲಿ 'ದಿ ರಾಜಾಸಾಬ್' ಸಿನಿಮಾ ನಿರ್ಮಾಣವಾಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವ ಸುಳಿವು ಸಿಕ್ತಿದೆ. ಪ್ರಭಾಸ್ ಚರೀಷ್ಮಾ ಸಿನಿಮಾವನ್ನು ಗೆಲ್ಲಿಸಬೇಕಿದೆ. ಈ ಹಾರರ್ ಕಾಮಿಡಿ ಚಿತ್ರದಲ್ಲಿ ಸಂಜಯ್ ದತ್, ಸಮುದ್ರ ಖನಿ ಸೇರಿ ದೊಡ್ಡ ತಾರಾಗಣವಿದೆ. ಟಿ ಜಿ ವಿಶ್ವ ಪ್ರಸಾದ್, ವಿವೇಕ್ ಕೂಚಿಬೋಟ್ಲ ಹಾಗೂ ಇಶಾನ್ ಸಕ್ಸೇನಾ ಚಿತ್ರಕ್ಕೆ ಹಣ ಹೂಡಿದ್ದಾರೆ.
ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್ ಹಾಗೂ ರಿದ್ದಿ ಕುಮಾರ್ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಇದೊಂದು ಹಾರರ್ ಕಾಮಿಡಿ ಥ್ರಿಲ್ಲರ್ ಸಿನಿಮಾ ಅನ್ನೋದು ವಿಶೇಷ. ಸಂಜಯ್ ದತ್ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಿಕ್ಕಾಪಟ್ಟೆ ಸ್ಟೈಲಿಶ್ ಅವತಾರದಲ್ಲಿ ಪ್ರಭಾಸ್ ಮಿಂಚಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಿದೆ.
ಈ ಬಾರಿ ಸಂಕ್ರಾಂತಿ ತೆಲುಗು, ತಮಿಳಿನ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. 'ದಿ ರಾಜಾ ಸಾಬ್' ಬಳಿಕ ಚಿರಂಜೀವಿ, ನಯನತಾರ ನಟನೆಯ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ತೆರೆಗೆ ಬರಲಿದೆ. ಜನವರಿ 12ಕ್ಕೆ ಸಿನಿಮಾ ಬಿಡುಗಡೆ ಆಗ್ತಿದೆ. ತಮಿಳಿನಲ್ಲಿ 'ಜನ ನಾಯಗನ್' ಹಾಗೂ 'ಪರಾಶಕ್ತಿ' ಚಿತ್ರಗಳು ಬಿಡುಗಡೆ ಆಗಬೇಕಿದೆ. ಸೆನ್ಸಾರ್ ಸಮಸ್ಯೆಯಿಂದ 'ಜನ ನಾಯಗನ್' ರಿಲೀಸ್ ತಡವಾಗುತ್ತಿದೆ. ಇನ್ನು ಕೆಲ ಸಿನಿಮಾಗಳು ಸುಗ್ಗಿ ಸಂಭ್ರಮ ಹೆಚ್ಚಿಸಲು ಕಾಯ್ತಿವೆ.


Click it and Unblock the Notifications











