ಪಾಕ್ ಸೇನೆಯಲ್ಲಿ ಪ್ರಭಾಸ್ ಸಿನಿಮಾ ನಾಯಕಿ ತಂದೆ?; ನನ್ನ ರಕ್ತದ ಕಣ ಕಣದಲ್ಲೂ...
ಕಾಶ್ಮೀರದ ಸುಂದರ ಪ್ರವಾಸಿ ತಾಣ ಪಹಲ್ಗಾಮ್ ಮೇಲೆ ಮೊನ್ನೆ (ಏ. 22) ಉಗ್ರರ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ 25ಕ್ಕೂ ಅಧಿಕ ಪ್ರವಾಸಿಗರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ದೇಶಾದ್ಯಂತ ಆಕ್ರೋಶ ಜೋರಾಗಿದೆ. ಪಾಕಿಸ್ತಾನದ ವಿರುದ್ಧ ಈಗಾಗಲೇ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರ ಪ್ರತೀಕಾರದ ಬಗ್ಗೆ ಚಿಂತಿಸುತ್ತಿದೆ.
ಪಾಕ್ ವಿರುದ್ಧ ದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಪಾಕಿಸ್ತಾನದ ಕಲಾವಿದರು, ತಂತ್ರಜ್ಞರು ಭಾರತೀಯ ಸಿನಿಮಾಗಳಲ್ಲಿ ನಟಿಸಬಾರದು. ಅವರನ್ನು ಬಾಯ್ಕಾಟ್ ಮಾಡಬೇಕು ಎನ್ನುವ ಆಗ್ರಹ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ಮೂಲಕದ ಕಲಾವಿದರು ತಂತ್ರಜ್ಞರ ಬಗ್ಗೆಯೂ ಕೆಲವರು ಅಸಮಾಧಾನ ಹೊರ ಹಾಕುತ್ತಿದ್ದಾರೆ. 'ಫೌಜಿ' ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿ ಇಮಾನ್ವಿ ನಟಿಸುತ್ತಿದೆ. ಆದರೆ ಆಕೆಯ ಮೂಲದ ಬಗ್ಗೆ ಇದೀಗ ಭಾರೀ ಚರ್ಚೆ ನಡೀತಿದೆ.

ಸೋಶಿಯಲ್ ಮೀಡಿಯಾದಲ್ಲಿ ನಟಿ ಇಮಾನ್ವಿ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಕೆಯ ತಂದೆ ಪಾಕಿಸ್ತಾನ ಸೇನೆಯಲ್ಲಿದ್ದರು ಎಂದು ಊಹಾಪೋಹ ಶುರುವಾಗಿದೆ. ಆಕೆ ಭಾರತದ ಚಿತ್ರದಲ್ಲಿ ನಟಿಸೋದು ಬೇಡ, ಆಕೆಯನ್ನು ಕೂಡಲೇ ಕೈಬಿಡಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಇಮಾನ್ವಿ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದಾರೆ. ನನಗೂ, ನನ್ನ ಕುಟುಂಬಕ್ಕೂ ಪಾಕಿಸ್ತಾನದ ಜೊತೆ ಯಾವುದೇ ನಂಟಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
'ಸಲಾರ್'-2 ಸಕ್ಸಸ್ ಬಳಿಕ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಸೀತಾರಾಮಂ' ಸಿನಿಮಾ ಖ್ಯಾತಿಯ ಹನು ರಾಘವಪುಡಿ ನಿರ್ದೇಶನದ 'ಫೌಜಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ಈ ಐತಿಹಾಸಿಕ ಕಥಾಹಂದರದ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಚಿತ್ರಕ್ಕೆ ನಾಯಕಿಯಾಗಿ ನಟಿ ಇಮಾನ್ವಿ ಆಯ್ಕೆ ಆಗಿದ್ದರು. ಈಗಾಗಲೇ ಭರದಿಂದ ಚಿತ್ರೀಕರಣ ಸಹ ಸಾಗುತ್ತಿದೆ.
ದೆಹಲಿ ಮೂಲದ ಇಮಾನ್ವಿ ಸಣ್ಣಪುಟ್ಟ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಒಳ್ಳೆ ಡ್ಯಾನ್ಸರ್. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಡ್ಯಾನ್ಸ್ ವೀಡಿಯೋಗಳಿಂದ ಗಮನ ಸೆಳೆದವರು. ಆಕೆಯ ಡ್ಯಾನ್ಸ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. ಲಕ್ಷಾಂತರ ಜನ ಆಕೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಪ್ರಭಾಸ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಕ್ರೇಜ್ ಹೆಚ್ಚಾಗಿತ್ತು.
ಇದ್ದಕ್ಕಿದಂತೆ ಆಕೆಯ ಮೂಲ ಯಾವುದು ಎನ್ನುವ ವಿಚಾರ ಚರ್ಚೆಗೆ ಬಂದು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ವದಂತಿ ಹರಿದಾಡುತ್ತಿದೆ. ಹಾಗಾಗಿ ಆಕೆ ಪ್ರತಿಕ್ರಿಯಿಸಿ ಸುದೀರ್ಘ ಪತ್ರ ಬರೆದುಕೊಂಡಿದ್ದಾರೆ. ನಮ್ಮ ಪೋಷಕರು ಅಮೆರಿಕಾದಲ್ಲಿ ಇದ್ದಿದ್ದು ನಿಜ. ನಾನು ಅಲ್ಲೇ ಹುಟ್ಟಿದ್ದು, ಆದರೆ ನಮ್ಮ ಕುಟುಂಬಕ್ಕೆ ಆಗಲಿ, ಸಂಬಂಧಿಕರಿಗೆ ಆಗಲಿ ಪಾಕ್ ಜೊತೆಗೆ ಯಾವುದೇ ಲಿಂಕ್ ಇಲ್ಲ. ಸುದ್ದಿ ವದಂತಿ ಹಬ್ಬಿಸಬೇಡಿ ಎಂದು ಇಮಾನ್ವಿ ಮನವಿ ಮಾಡಿದ್ದಾರೆ.
"ಮೊದಲನೆಯದಾಗಿ, ಪಹಲ್ಗಾಮ್‌ನಲ್ಲಿ ನಡೆದ ದುರಂತ ಘಟನೆಗೆ ನನ್ನ ಅತ್ಯಂತ ಪ್ರಾಮಾಣಿಕ ಮತ್ತು ಹೃತ್ಪೂರ್ವಕ ಸಂತಾಪ ವ್ಯಕ್ತಪಡಿಸಲು ಬಯಸುತ್ತೇನೆ. ಮುಗ್ಧ ಜೀವದ ಯಾವುದೇ ನಷ್ಟವು ದುರಂತ, ನನ್ನ ಹೃದಯಕ್ಕೆ ಭಾರವಾಗಿರುತ್ತದೆ. ಹಿಂಸಾತ್ಮಕ ಕೃತ್ಯಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ" ಎಂದು ಇಮಾನ್ವಿ ಪತ್ರ ಆರಂಭಿಸಿದ್ದಾರೆ.
ಬಳಿಕ ಮಾತು ಮುಂದುವರೆಸಿರುವ ನಟಿ ಇಮಾಮಾನ್ವಿ "ವಿಭಜನೆ ಮಾಡಲು, ದ್ವೇಷ ಹರಡಲು ನಕಲಿ ಆನ್‌ಲೈನ್ ಮಾಧ್ಯಮಗಳ ಮೂಲಕ ನನ್ನ ಗುರುತಿನ ಬಗ್ಗೆ ಮತ್ತು ನನ್ನ ಕುಟುಂಬದ ಬಗ್ಗೆ ಹಬ್ಬಿಸುತ್ತಿರುವ ಸುಳ್ಳು ವದಂತಿಗಳನ್ನು ಸ್ಪಷ್ಟನೆ ನೀಡಲು ಬಯಸುತ್ತೇನೆ. ನನ್ನ ಕುಟುಂಬದಲ್ಲಿ ಯಾರೂ ಪಾಕಿಸ್ತಾನಿ ಮಿಲಿಟರಿಯೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ ಅಥವಾ ಪ್ರಸ್ತುತ ಸಂಬಂಧ ಹೊಂದಿಲ್ಲ. ದ್ವೇಷವನ್ನು ಹರಡುವ ಏಕೈಕ ಉದ್ದೇಶಕ್ಕಾಗಿ ಆನ್‌ಲೈನ್‌ನಲ್ಲಿ ಕೆಲವರು ಸುಳ್ಳು ಸುದ್ದಿ ಸೃಷ್ಟಿಸಿದ್ದಾರೆ." ಎಂದು ಹೇಳಿದ್ದಾರೆ.
"ನಾನು ಹಿಂದಿ, ತೆಲುಗು, ಗುಜರಾತಿ ಮತ್ತು ಇಂಗ್ಲಿಷ್ ಮಾತನಾಡುವ ಹೆಮ್ಮೆಯ ಭಾರತೀಯ ಅಮೆರಿಕನ್. ನನ್ನ ಹೆತ್ತವರು ಅಮೆರಿಕಕ್ಕೆ ಕಾನೂನುಬದ್ಧವಾಗಿ ವಲಸೆ ಹೋಗಿದ್ದರು. ನಾನು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿದೆ. ಅವರು ಅಮೆರಿಕನ್ ಪೌರತ್ವ ಪಡೆದ ಕೂಡಲೇ. ನಾನು ನಟಿಯಾಗಿ, ನೃತ್ಯ ಸಂಯೋಜಕ ಕಲಾರಂಗದಲ್ಲಿ ವೃತ್ತಿಜೀವನವನ್ನು ಮುಂದುವರಿಸಿದೆ. ಭಾರತೀಯ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಪಡೆದಿದ್ದಕ್ಕಾಗಿ ನಾನು ನಂಬಲಾಗದಷ್ಟು ಕೃತಜ್ಞನಾಗಿದ್ದೇನೆ. ನನ್ನ ರಕ್ತದಲ್ಲಿ ಆಳವಾಗಿ ಹರಿಯುವ ಭಾರತೀಯ ಗುರುತು ಮತ್ತು ಸಂಸ್ಕೃತಿಯನ್ನು ಹೊಂದಿರುವ ವ್ಯಕ್ತಿಯಾಗಿ, ಈ ಮಾಧ್ಯಮವನ್ನು ವಿಭಜನೆಯ ರೂಪವಾಗಿ ಅಲ್ಲ, ಏಕತೆಯ ರೂಪವಾಗಿ ಬಳಸಲು ನಾನು ಆಶಿಸುತ್ತೇನೆ" ಎಂದು ನಟಿ ಇಮಾನ್ವಿ ತಿಳಿಸಿದ್ದಾರೆ.


Click it and Unblock the Notifications