ಉತ್ತರಿಸದೇ ಬಿಟ್ಟ ಪ್ರಶ್ನೆಗಳೇನು? 'ಕಲ್ಕಿ'-2 ಟೈಟಲ್ ಇದೇನಾ? ಮುಂದಿನ ವಾರ ಸೀಕ್ವೆಲ್ ಶುರು?
ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿದೆ. ಇದು ಕೇವಲ ಮೊದಲ ಭಾಗ ಅಷ್ಟೆ. ಅಸಲಿ ಪಿಕ್ಚರ್ ಬಾಕಿಯಿದೆ ಎಂದು ಕ್ಲೈಮ್ಯಾಕ್ಸ್‌ನಲ್ಲಿ ಸುಳಿವು ಕೊಡಲಾಗಿದೆ. ಒಂದಷ್ಟು ಪ್ರಶ್ನೆಗಳನ್ನು ಪ್ರೇಕ್ಷಕರಿಗೆ ಬಿಟ್ಟು ಸೀಕ್ವೆಲ್ ಬಗ್ಗೆ ಕುತೂಹಲ ಮೂಡುವಂತೆ ಮಾಡಲಾಗಿದೆ.
'ಕಲ್ಕಿ 2898 AD' ಪಾರ್ಟ್-2 ಯಾವಾಗ ಬರುತ್ತೆ? ಟೈಟಲ್ ಏನು? ಆ ಕಥೆ ಹೇಗಿರುತ್ತದೆ? ಎನ್ನುವ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ. ಪ್ರಭಾಸ್ ಅಭಿಮಾನಿಗಳಂತೂ ಸೀಕ್ವೆಲ್ ನೋಡಲು ಚಾತಕ ಪಕ್ಷಿಗಳಂತೆ ಕಾಯುವಂತಾಗಿದೆ. ಸದ್ಯಕ್ಕೆ 'ಕಲ್ಕಿ' ಕಥೆ ಮುಂದುವರೆಸುವುದು ಅನುಮಾನ. ಕಾರಣ ಪ್ರಭಾಸ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ರಾಜಾ ಸಾಬ್', 'ಸ್ಪಿರಿಟ್' ಜೊತೆಗೆ ಮತ್ತೊಂದು ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಸಲಾರ್-2' ಕೂಡ ಬರಬೇಕಿದೆ.

ನಾಗ್ ಅಶ್ವಿನ್ ಕಲ್ಪನೆ, ಮೇಕಿಂಗ್ ನಿಜಕ್ಕೂ ಅದ್ಭುತ ಎಂದೇ ಹೇಳಬೇಕು. ಒಂದಷ್ಟು ತಪ್ಪುಗಳನ್ನು ಹೊರತುಪಡಿಸಿ 'ಕಲ್ಕಿ 2898 AD' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಗುತ್ತಿದೆ. ಅಂದಾಹು 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಗ್ರಾಫಿಕ್ಸ್, ಆಕ್ಷನ್ ಸೀಕ್ವೆನ್ಸ್, ಅಮಿತಾಬ್- ಪ್ರಭಾಸ್ ಜಿದ್ದಾಜಿದ್ದಿನ ಹೋರಾಟ ಅದ್ಭುತ ಅನುಭವ ನೀಡುತ್ತದೆ.
'ಕಲ್ಕಿ 2898 AD' ಸೀಕ್ವೆಲ್ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಹೇಳಿಕೊಂಡಿರಲಿಲ್ಲ. ಕ್ಲೈಮ್ಯಾಕ್ಸ್ ನೋಡಿದ ಮೇಲೆ ಅದು ಖಾತ್ರಿಯಾಗಿದೆ. ಸುಮತಿ(ದೀಪಿಕಾ ಪಡುಕೋಣೆ) ಗರ್ಭದಲ್ಲಿರುವ ಕಲ್ಕಿ ಇನ್ನು ಹುಟ್ಟಿಲ್ಲ. ಯಾಸ್ಕಿನ್(ಕಮಲ್ ಹಾಸನ್) ಅಂತ್ಯವಾಗಲಿಲ್ಲ. ಅಶ್ವತ್ಥಾಮನ ಶಾಪ ವಿಮೋಚನೆ ಇನ್ನು ಆಗ್ಲಿಲ್ಲ. ಕಾಂಪ್ಲೆಕ್ಸ್‌ಗೆ ಹೋಗುವ ಭೈರವನ ಕನಸು ನನಸಾಗಲಿಲ್ಲ. ಇನ್ನು ಯಾಸ್ಕಿನ್ ಮತ್ತಷ್ಟು ಶಕ್ತಿಶಾಲಿ ಆಗಿದ್ದಾನೆ. ಅಮರತ್ವ ಪಡೆಯುವ ಆತನ ಆಸೆ ಈಡೇರುತ್ತಾ? ಆತನ ಸಂಹಾರ ನಡೆಯಬೇಕಿದೆ. ಇನ್ನು ಭೈರವನ ಜನ್ಮ ರಹಸ್ಯ ತಿಳಿಯಬೇಕಿದೆ. ಆತನಿಗೆ ಅಷ್ಟೊಂದು ಶಕ್ತಿ ಬರಲು ಹೇಗೆ ಸಾಧ್ಯ ಎಂದು ಕೇಳುವಂತಾಗಿದೆ. ಹಾಗಾಗಿ ಆ ಪ್ರಶ್ನೆಗಳಿಗೆಲ್ಲಾ ಸೀಕ್ವೆಲ್‌ನಲ್ಲಿ ಉತ್ತರ ಸಿಗಬೇಕಿದೆ.

ಇದೀಗ ದುಷ್ಟ ಯಾಸ್ಕಿನ್ ಕೈಗೆ ಅರ್ಜುನನ ಗಾಂಡಿವ ಸಿಕ್ಕಿದೆ. ಹಾಗಾಗಿ ಆತ ಮಗದಷ್ಟು ಶಕ್ತಿವಂತನಾಗಿದ್ದಾನೆ. ಆತನ ಸಂಹಾರಕ್ಕೆ ಕಲ್ಕಿಯೇ ಅವತರಿಸಬೇಕಿದೆ. ಇನ್ನು ಭೈರವ- ಅಶ್ವತ್ಥಾಮನ ಹೋರಾಟವೂ ಕೊನೆಯಾಗಿಲ್ಲ. ಪ್ರಾಜೆಕ್ಟ್-K ಅಂದ್ರೆ ಏನು? ಭೈರವನಿಗೂ ಮಹಾಭಾರತದ ಕರ್ಣನಿಗೂ ಇರುವ ಲಿಂಕ್ ಏನು? ಎನ್ನುವ ಪ್ರಶ್ನೆಗೂ ಉತ್ತರ ಸಿಗಬೇಕಿದೆ. ಒಟ್ಟಾರೆ ದೊಡ್ಡಕಥೆಯನ್ನೇ ನಾಗ್ ಅಶ್ವಿನ್ ಕಟ್ಟಿಕೊಂಡಿರುವುದು ಗೊತ್ತಾಗುತ್ತಿದೆ. ಅದನ್ನೆಲ್ಲಾ ಮುಂದಿನ ಭಾಗದಲ್ಲಿ ಹೇಳಲಿದ್ದಾರೆ.
ಅಂದಹಾಗೆ ಸೀಕ್ವೆಲ್ ಟೈಟಲ್ 'ಕಲ್ಕಿ 3102 BC' ಎನ್ನಲಾಗುತ್ತಿದೆ. ಕಲಿಯುಗದಲ್ಲಿ 2898 AD ಏನೆಲ್ಲಾ ನಡೆಯುತ್ತಿದೆ ಎಂದು ಮೊದಲ ಭಾಗದಲ್ಲಿ ಹೇಳಿದ್ದಾರೆ. ಜೊತೆಗೆ ಕುರುಕ್ಷೇತ್ರ ಯುದ್ಧದ ಒಂದಷ್ಟು ಘಟನೆಗಳನ್ನು ತಿಳಿಸಲಾಗಿದೆ. ಇದೀಗ ಸೀಕ್ವೆಲ್‌ನಲ್ಲಿ ಕೃಷ್ಣನ ಅಂತ್ಯದ ಬಗ್ಗೆ ಹೇಳುತ್ತಾ ಕಥೆಯನ್ನು ಕಲಿಯುಗದಲ್ಲಿ ಮುಂದುವರೆಸುತ್ತಾರೆ. ಅಂದರೆ ಕೃಷ್ಣನ ಮರಣಕ್ಕೂ ಕಲ್ಕಿಯ ಹುಟ್ಟಿಗೂ ಲಿಂಕ್ ಕೊಟ್ಟು ಕಥೆ ಮಾಡುತ್ತಾರೆ. ಮಹಾಭಾರತದ ಪ್ರಕಾರ ಕೃಷ್ಣ ಕ್ರಿಪೂ 3102, ಫೆಬ್ರವರಿ 18ರಂದು ಕೊನೆಯುಸಿರೆಳೆದ ಎಂದು ಹೇಳಲಾಗುತ್ತದೆ.
ಟೀಸರ್, ಟ್ರೈಲರ್‌ನಲ್ಲಿದ್ದ ಒಂದಷ್ಣು ಫ್ರೇಮ್‌ಗಳು ಸಿನಿಮಾದಲ್ಲಿ ಕಾಣಿಸಲಿಲ್ಲ. ಅಂದ್ರೆ ಈಗಾಗಲೇ ಸೀಕ್ವೆಲ್‌ನ ಒಂದಷ್ಟು ದೃಶ್ಯಗಳನ್ನು ಈಗಾಗಲೇ ಸೆರೆಹಿಡಿದಿರುವಂತೆ ಕಾಣುತ್ತಿದೆ. ಅದನ್ನು ಮುಂದಿನ ಭಾಗದಲ್ಲಿ ನೋಡಬಹುದು. ಈಗಾಗಲೇ 2ನೇ ಭಾಗದ ಕಥೆ, ಚಿತ್ರಕಥೆ ಕೂಡ ಸಿದ್ಧವಿದೆ ಎನ್ನಲಾಗ್ತಿದೆ. ನಾಗ್ ಅಶ್ವಿನ್ ಶೀಘ್ರದಲ್ಲೇ ಪ್ರೀ ಪ್ರೊಡಕ್ಷನ್ ವರ್ಕ್ ಶುರು ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಮುಂದಿನ ಭಾಗ ಬರಲಿದೆ. ಮತ್ತಷ್ಟು ಕಲಾವಿದರು ಸೇರಿಕೊಳ್ಳಲಿದ್ದಾರೆ. ಎಲ್ಲದಕ್ಕೂ ಶೀಘ್ರದಲ್ಲೇ ಉತ್ತರ ಸಿಗಲಿದೆ.


Click it and Unblock the Notifications











