ಪ್ರಭಾಸ್ 'ಕಣ್ಣಪ್ಪ' ಲುಕ್ ಲೀಕ್; ಕಿಡಿಗೇಡಿಯನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ
ಚಿತ್ರರಂಗದಲ್ಲಿ ಲೀಕಾಸುರರ ಕಾಟ ಹೆಚ್ಚಾಗುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬಂದ ದಿನವೇ ಆನ್‌ಲೈನ್‌ನಲ್ಲಿ ಲೀಕ್ ಆಗುತ್ತಿದೆ. ಇನ್ನು ಸ್ಟಾರ್ ನಟರ ಸಿನಿಮಾ ಮೇಕಿಂಗ್ ಸನ್ನಿವೇಶಗಳು, ಫೋಟೊಗಳು ಸೋರಿಕೆ ಆಗುವುದು ಸಹಜ ಎನ್ನುವಂತಾಗಿದೆ. ಇದೇ ವಿಚಾರ ಕೆಲವೊಮ್ಮೆ ನಟರು, ಚಿತ್ರತಂಡ ಬೇಸರಗೊಂಡಿರುವ ಘಟನೆಗಳು ನಡೆದಿದೆ.
ಸಿನಿಮಾ ಚಿತ್ರೀಕರಣದ ಸೆಟ್‌ಗೆ ಯಾರು ಫೋನ್ ತರಬೇಡಿ ಎಂದು ಕಟ್ಟುನಿಟ್ಟಿನ ನಿಯಮ ಪಾಲಿಸುತ್ತಿದ್ದಾರೆ. ಆದರೂ ಕೆಲವೊಮ್ಮೆ ಎಲ್ಲರ ಕಣ್ತಪ್ಪಿ ಹೀಗೆ ಫೋಟೊ, ವೀಡಿಯೋ ಹೊರಬರುತ್ತದೆ. ಒಂದು ಹೀಗೆ ಲೀಕ್ ಆಗುವ ಫೋಟೊ ನೋಡ ನೋಡುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿ ಸದ್ದು ಮಾಡುತ್ತದೆ. ಇದಕ್ಕಾಗಿ ಚಿತ್ರತಂಡ ಹಾಕಿದ ಶ್ರಮವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.

ಈ ಹಿಂದೆ 'ಯಜಮಾನ' ಸಿನಿಮಾ ಸೆಟ್‌ನಲ್ಲಿ ವೀಡಿಯೋ ಮಾಡುತ್ತಿದ್ದ ಸಹ ಕಲಾವಿದನ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಸಾಂಗ್ ಚಿತ್ರೀಕರಣದ ವೇಳೆ ಸಹ ಕಲಾವಿದನೊಬ್ಬ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದನಂತೆ. ಚಿತ್ರೀಕರಣಕ್ಕೆ ಸಹಕಲಾವಿದರನ್ನು ಕರೆತಂದ ವ್ಯಕ್ತಿಯನ್ನು ನಟ ದರ್ಶನ್ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ಅಷ್ಟರಮಟ್ಟಿಗೆ ಆ ವಿಚಾರ ಸದ್ದು ಮಾಡಿತ್ತು.
ಇದೀಗ ತೆಲುಗಿನ 'ಕಣ್ಣಪ್ಪ' ಚಿತ್ರದ ಫೋಟೊವೊಂದು ಲೀಕ್ ಆಗಿರುವುದು ಚಿತ್ರತಂಡದ ಅಸಮಾಧಾನಕ್ಕೆ ಕಾರಣವಾಗಿದೆ. ಚಿತ್ರದಲ್ಲಿ ನಟ ಪ್ರಭಾಸ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಮಂಚು ವಿಷ್ಣು ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಫ್ಯಾಂಟಸಿ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಚಿತ್ರದಲ್ಲಿ ಶಿವ ಗಣದ ನಾಯಕ ನಂದಿ ಪಾತ್ರದಲ್ಲಿ ಪ್ರಭಾಸ್ ಬಣ್ಣ ಹಚ್ಚಿದ್ದಾರೆ.
ಚಿತ್ರೀಕರಣದ ವೇಳೆ ನಂದಿಯ ವೇಷದಲ್ಲಿ ಪ್ರಭಾಸ್ ಕಾಣಿಸಿಕೊಂಡಿರುವ ಫೋಟೊವೊಂದು ಲೀಕ್ ಆಗಿದೆ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಶಾಕ್ ತಂದಿದೆ. ಈ ಬಗ್ಗೆ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಯಾರೂ ಕೂಡ ಈ ಫೋಟೊ ಶೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ಇದಕ್ಕೆ ಕಾರಣರಾದವರನ್ನು ಹುಡುಕಿ ಕೊಟ್ಟರೆ ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ.
"ಕಣ್ಣಪ್ಪ ಚಿತ್ರಕ್ಕಾಗಿ ನಾವು 8 ವರ್ಷಗಳಿಂದ ತನು, ಮನ, ಧನ ಅರ್ಪಿಸಿದ್ದೇವೆ. ಎರಡು ವರ್ಷಗಳಲ್ಲಿ ಸಿನಿಮಾ ಮಾಡಲು ಹಗಲಿರುಳು ಶ್ರಮಿಸುತ್ತಿದ್ದೇವೆ. ಇಂತಹ ಸಮಯದಲ್ಲಿ ಚಿತ್ರದ ವರ್ಕಿಂಗ್ ಸ್ಟಿಲ್‌ವೊಂದು ಅನಧಿಕೃತವಾಗಿ ಸೋರಿಕೆ ಆಗಿರುವುದು ನೋವುಂಟು ಮಾಡಿದೆ" ಎಂದು ಚಿತ್ರತಂಡ ತಿಳಿಸಿದೆ.
ಹೀಗೆ ಒಂದು ಫೋಟೊ ಲೀಕ್ ಮಾಡಿರುವುದು ನಮ್ಮ ಕಷ್ಟ ಮಾತ್ರವಲ್ಲ, ಚಿತ್ರಕ್ಕಾಗಿ ಕೆಲಸ ಮಾಡುತ್ತಿರುವ 2000 ಗ್ರಾಫಿಕ್ಸ್ ತಂತ್ರಜ್ಞರ ಬದುಕಿನ ಮೇಲೆ ಪರಿಣಾಮ ಬೀರಿದೆ. ಇದು ಹೇಗೆ ಆಯಿತು ಎನ್ನುವುದನ್ನು ತಿಳಿಯಲು ನಾವು ಪೊಲೀಸರಿಗೆ ದೂರು ನೀಡುತ್ತಿದ್ದೇವೆ. ಲೀಕ್ ಆಗಿರುವ ಫೋಟೊ ಹಂಚಿಕೊಳ್ಳುವವರನ್ನು ಹಿಡಿಯುವಂತೆ ಅಭಿಮಾನಿಗಳಲ್ಲಿ ಕೇಳಿಕೊಳ್ಳುತ್ತಿದ್ದೇವೆ. ಈ ಫೋಟೊ ಹಂಚಿಕೊಂಡರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹೀಗೆ ಫೋಟೊ ಲೀಕ್ ಮಾಡಿದ್ದು ಯಾರು ಎಂದು ತಿಳಿಸಿದರೆ ಅವರಿಗೆ 5 ಲಕ್ಷ ರೂ. ಬಹುಮಾನ ಕೊಡುತ್ತೇವೆ. ವಿಷಯ ಗೊತ್ತಾದರೆ ಕೂಡಲೇ 24 ಫ್ರೇಮ್ಸ್ ಫ್ಯಾಕ್ಟರಿ ಟ್ವಿಟರ್ ಖಾತೆಗೆ ಮೆಸೇಜ್ ಮಾಡಿ ಎಂದು ಮನವಿ ಮಾಡುತ್ತಿದ್ದೇವೆ ಎಂದು ಟ್ವೀಟ್ ಮಾಡಿ ತಿಳಿಸಲಾಗಿದೆ.
ಡಾ. ರಾಜ್‌ಕುಮಾರ್ ನಟನೆಯ 'ಬೇಡರ ಕಣ್ಣಪ್ಪ' ಚಿತ್ರದ ಕಥೆಯನ್ನೇ ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಮಂಚು ವಿಷ್ಣು ಜೊತೆಗೆ ಮೋಹನ್ ಬಾಬು, ಶರತ್‌ಕುಮಾರ್, ಮಧು, ಬ್ರಹ್ಮಾನಂದಂ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಶಿವನ ಪಾತ್ರದಲ್ಲಿ ಅಕ್ಷಯ್‌ಕುಮಾರ್, ಪಾರ್ವತಿಯಾಗಿ ಕಾಜಲ್ ಅಗರ್‌ವಾಲ್ ನಟಿಸಿದ್ದಾರೆ.


Click it and Unblock the Notifications











