ಮತ್ತೆ ಒಂದಾದ್ರು ಮೌಳಿ, ಪ್ರಭಾಸ್ ಹಾಗೂ ರಾಣಾ; ಅಭಿಮಾನಿಗಳಿಗೆ ಸಿಹಿಸುದ್ದಿ
ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಸಿನಿಮಾಗಳಲ್ಲಿ ಪ್ರಭಾಸ್ ಹಾಗು ರಾಣಾ ದಗ್ಗುಬಾಟಿ ನಟಿಸಿ ಸಕ್ಸಸ್ ಕಂಡಿದ್ದರು. ಬಾಹುಬಲಿ ಹಾಗೂ ಬಲ್ಲಾಳ ದೇವನ ಪಾತ್ರಗಳಲ್ಲಿ ಇಬ್ಬರ ನಟನೆ ಮೋಡಿ ಮಾಡಿತ್ತು. ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಇದೀಗ ಎರಡೂ ಚಿತ್ರಗಳನ್ನು ಒಟ್ಟಿಗೆ ಸೇರಿಸಿ ಬಿಡುಗಡೆ ಮಾಡಲಾಗ್ತಿದೆ.
2015ರಲ್ಲಿ ಬಿಡುಗಡೆಯಾಗಿದ್ದ 'ಬಾಹುಬಲಿ ದಿ ಬಿಗಿನಿಂಗ್' ಹಾಗೂ 2017ರಲ್ಲಿ ತೆರೆಗಪ್ಪಳಿಸಿದ್ದ 'ಬಾಹುಬಲಿ ದಿ ಕನ್‌ಕ್ಲೂಷನ್' ಚಿತ್ರಗಳನ್ನು ಸೇರಿಸಿ ಒಟ್ಟಿಗೆ ಎಡಿಟ್ ಮಾಡಿ ಒಂದೇ ಚಿತ್ರವಾಗಿ ಈ ವಾರ ಬಿಡುಗಡೆ ಮಾಡುತ್ತಿದ್ದಾರೆ. 'ಬಾಹುಬಲಿ ದಿ ಎಪಿಕ್' ಹೆಸರಿನಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

ಹಳೇ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ನಡೀತಿದೆ. ಆದರೆ ಎರಡು ಭಾಗಗಳಾಗಿ ಬಂದ 'ಬಾಹುಬಲಿ' ಸರಣಿ ಸಿನಿಮಾಗಳನ್ನು ಮರುಬಿಡುಗಡೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಪಾರ್ಟ್-1 ಅಥವಾ ಪಾರ್ಟ್- 2 ಯಾವುದನ್ನು ತೆರೆಗೆ ತರುವುದು? ಎರಡೂ ಸಿನಿಮಾ ಮರುಬಿಡುಗಡೆ ಆದರೆ ಯಾವುದನ್ನು ನೋಡುವುದು? ಐದೂವರೆ ಗಂಟೆ ಸಿನಿಮಾ ನೋಡೋಕೆ ಸಾಧ್ಯವೇ? ಈ ರಗಳೆ ಬೇಡ ಎಂದು ಎರಡೂ ಚಿತ್ರಗಳನ್ನು ಸೇರಿಸಿ ಚಿಕ್ಕದಾಗಿ 3 ಗಂಟೆ 40 ನಿಮಿಷಯಕ್ಕೆ ಒಂದೇ ಚಿತ್ರವಾಗಿ ತೆರೆಗೆ ತರುತ್ತಿದ್ದಾರೆ.
'ಬಾಹುಬಲಿ ದಿ ಎಪಿಕ್' ಸಿನಿಮಾ ಪ್ರಮೋಷನ್ ಶುರುವಾಗಿದೆ. ಅದಕ್ಕಾಗಿ ಪ್ರಭಾಸ್, ರಾಣಾ ಹಾಗೂ ರಾಜಮೌಳಿ ಮತ್ತೆ ಜೊತೆಯಾಗಿದ್ದಾರೆ. ಮೂವರು ಒಂದು ಸಂದರ್ಶನದಲ್ಲಿ ಭಾಗಿ ಆಗ ಬಾಹುಬಲಿ ಸಿನಿಮಾ ಮೇಕಿಂಗ್ ದಿನಗಳಿಗೆ ಜಾರಿದ್ದಾರೆ. ಮಾತುಕತೆ ನಡುವೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ರಿಲೀಸ್ ಆಗಿದೆ.
ಚಿತ್ರದಲ್ಲಿ ಬಾಹುಬಲಿಯನ್ನು ಕಟ್ಟಪ್ಪ ಕೊಲ್ಲುವ ಸನ್ನಿವೇಶಕ್ಕಿಂತ ಅದಕ್ಕಾಗಿ ಮಾನಸಿಕವಾಗಿ ಸಿದ್ಧನಾಗುವ ಸನ್ನಿವೇಶ ಮನಸ್ಸಿನಲ್ಲಿ ಉಳಿದುಬಿಟ್ಟಿದೆ ಎಂದು ರಾಜಮೌಳಿ ಹೇಳಿದ್ದಾರೆ. ಚಿತ್ರದಲ್ಲಿ ಬಲ್ಲಾಳದೇವನ ದೊಡ್ಡ ವಿಗ್ರಹ ನಿಲ್ಲಿಸುವ ಸನ್ನಿವೇಶ ಇದೆ. ಅದನ್ನು ಎತ್ತಿ ನಿಲ್ಲಿಸಲು ಕ್ರೇನ್‌ಗಳು ಶೇಕ್ ಆಗುತ್ತಿದ್ದವು ಎಂದು ಪ್ರಭಾಸ್ ಮೇಕಿಂಗ್ ದಿನಗಳಿಗೆ ಜಾರಿದ್ದಾರೆ. ಹೀಗೆ ಸಾಕಷ್ಟು ಸಂಗತಿಗಳನ್ನು ಮೂವರು ಹಂಚಿಕೊಂಡಿದ್ದಾರೆ.
ಶೀಘ್ರದಲ್ಲೇ ಈ ಸಂದರ್ಶನದ ಸಂಪೂರ್ಣ ವೀಡಿಯೋ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಸಿನಿಮಾ ಬಿಡುಗಡೆಗೆ ಇನ್ನು 3 ದಿನ ಬಾಕಿಯಿದೆ. ಇನ್ನು ಯಾವಾಗ ರಿಲೀಸ್ ಮಾಡ್ತೀರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
4 ಭಾಷೆಗಳಲ್ಲಿ 'ಬಾಹುಬಲಿ' ಸರಣಿ ಸಿನಿಮಾಗಳು ತೆರೆಗೆ ಬಂದಿತ್ತು. ಆಗ ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಇರಲಿಲ್ಲ. ಹಾಗಾಗಿ ಕನ್ನಡಕ್ಕೆ ಡಬ್ ಆಗಿ ಬಂದಿರಲಿಲ್ಲ. ಆದರೆ ಈಗ ಡಬ್ ಸಿನಿಮಾ ಬಿಡುಗಡೆಗೆ ಅವಕಾಶ ಇದ್ದರೂ 'ಬಾಹುಬಲಿ ದಿ ಎಪಿಕ್' ಸಿನಿಮಾ ಕನ್ನಡದಲ್ಲಿ ಬರ್ತಿಲ್ಲ. ಅಡ್ವಾನ್ಸ್ ಬುಕ್ಕಿಂಗ್‌ಗೆ ಬೆಂಗಳೂರಿನಲ್ಲಿ ಕೂಡ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಒಂದೆರಡು ಶೋಗಳ ಟಿಕೆಟ್ ಸೋಲ್ಡೌಟ್ ಆಗಿದೆ.
ಬುಕ್ಕಿಂಗ್ ಶುರುವಾದ 24 ಗಂಟೆಗಳಲ್ಲಿ 60 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಮಾಡಿ ಅಭಿಮಾನಿಗಳು ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಪ್ರಭಾಸ್ ಹಾಗೂ ರಾಣಾ ಜೊತೆಗೆ ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಾಕೃಷ್ಣ, ಸತ್ಯರಾಜ್, ನಾಸರ್ 'ಬಾಹುಬಲಿ' ಸರಣಿ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಪ್ರತಿಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ.
'ಬಾಹುಬಲಿ' ಪಾರ್ಟ್-1 ಅಂದಾಜು 600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಪಾರ್ಟ್-2 ಗಳಿಕೆ 1800 ಕೋಟಿ ರೂ. ದಾಟಿತ್ತು. 'ಬಾಹುಬಲಿ ದಿ ಎಪಿಕ್' ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತದೆ ಕಾದು ನೋಡಬೇಕಿದೆ.


Click it and Unblock the Notifications











