ಪ್ರಭಾಸ್ ಸಿನಿಮಾ ಮಾಡುತ್ತಿರುವುದು ಬಿಜೆಪಿಗೋಸ್ಕರವೇ! ಏನಿದು ವಿವಾದ?
ಸಿನಿಮಾಕ್ಕೂ ರಾಜಕೀಯಕ್ಕೂ ಹತ್ತಿರದ ಸಂಬಂಧವೇ ಇದೆ. ನಟರು ರಾಜಕಾರಣಿಗಳಾಗುವುದು ತೀರ ಸಾಮಾನ್ಯ ಎಂಬಂತಾಗಿದೆ. ರಾಜಕಾರಣಿಗಳು ಸಹ ಪ್ರಚಾರಕ್ಕಾಗಿ ಸಿನಿಮಾ ನಟರನ್ನು ಬಳಸಿಕೊಳ್ಳುವುದು ಮೊದಲಿನಿಂದ ರೂಢಿಯಲ್ಲಿರುವ ಪದ್ಧತಿ.
ಆದರೆ ಇತ್ತೀಚೆಗೆ ಸಿನಿಮಾಗಳನ್ನೇ ರಾಜಕೀಯಕ್ಕೆ ಬಳಸಿಕೊಳ್ಳುವ ಪದ್ಧತಿ ಆರಂಭವಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ 'ದಿ ಕಾಶ್ಮೀರ್ ಫೈಲ್ಸ್'. ಬಿಜೆಪಿ ಸಂಸದರು, ಶಾಸಕರು, ಸಚಿವರುಗಳು ಸಿನಿಮಾದ ಉಚಿತ ಶೋ ಆಯೋಜನೆ ಮಾಡಿದರು. ಸಿನಿಮಾವನ್ನು ರಾಜಕೀಯ ಟೂಲ್ ಆಗಿ ಬಿಜೆಪಿ ಬಳಸಿಕೊಂಡಿತು ಎಂಬುದು ಗುಟ್ಟೇನು ಅಲ್ಲ.
ಆದರೆ ಈಗ ಸಚಿವರೊಬ್ಬರು ನೀಡಿರುವ ಹೇಳಿಕೆಯಂತೆ ನಟ ಪ್ರಭಾಸ್ ಸಹ ಬಿಜೆಪಿಗೊಸ್ಕರ ಸಿನಿಮಾ ಮಾಡುತ್ತಿದ್ದಾರಂತೆ! ಪ್ರಭಾಸ್ ಮಾತ್ರವೇ ಅಲ್ಲ ಬಿಜೆಪಿ ಇನ್ನೂ ಕೆಲವು ಸ್ಟಾರ್‌ಗಳನ್ನು, ಅವರ ಸಿನಿಮಾಗಳನ್ನು ತನ್ನ ರಾಜಕೀಯ ಟೂಲ್ ಆಗಿ ಬಳಸಿಕೊಳ್ಳುತ್ತಿದೆಯಂತೆ.
ತೆಲಂಗಾಣ ರಾಜ್ಯ ಸರ್ಕಾರದ ನಗರಾಭಿವೃದ್ಧಿ, ಕೈಗಾರಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕೆಟಿಆರ್ (ಕೆಟಿ ರಾಮಾ ರಾವ್) ಇತ್ತೀಚೆಗೆ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡುತ್ತಾ, ''ಬಿಜೆಪಿಯು ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾಕ್ಕೆ ಪರೋಕ್ಷವಾಗಿ ಬಂಡವಾಳ ಹೂಡುತ್ತಿದೆ. ಪ್ರಭಾಸ್ ಮಾತ್ರವಲ್ಲ ಇನ್ನೂ ಕೆಲವು ಸ್ಟಾರ್ ನಟರ ಸಿನಿಮಾಗಳಿಗೆ ಬಿಜೆಪಿ ಬಂಡವಾಳ ಹೂಡುತ್ತಿದೆ'' ಎಂದಿದ್ದಾರೆ.

ಬಿಜೆಪಿ ಪರೋಕ್ಷ ಫಂಡಿಂಗ್ ಮಾಡುತ್ತಿದೆ: ಕೆಟಿಆರ್
''ಆದಿಪುರುಷ್, 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಗಳಿಗೆ ಬಿಜೆಪಿ ಪರೋಕ್ಷವಾಗಿ ಫಂಡಿಗ್ ಮಾಡುತ್ತಿದೆ. ಈ ಸಿನಿಮಾಗಳನ್ನು ಬಿಜೆಪಿಯ ತನ್ನ ರಾಜಕೀಯ ಅಜೆಂಡಾವನ್ನು ಬಿತ್ತಲು ಬಳಸಿಕೊಳ್ಳುತ್ತದೆ. ಪ್ರಸ್ತುತ 16 ಸಿನಿಮಾಗಳಿಗೆ ಬಿಜೆಪಿ ಪರೋಕ್ಷ ಫಂಡಿಂಗ್ ಮಾಡುತ್ತಿದ್ದು, ಅವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲಿದೆ. ಅವುಗಳಲ್ಲಿ ಪ್ರಭಾಸ್ ನಟನೆಯ 'ಆದಿಪುರುಷ್' ಸಹ ಒಂದು'' ಎಂದಿದ್ದಾರೆ ಕೆಟಿಆರ್.

ಅಕ್ಷಯ್ ಕುಮಾರ್ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ: ಕೆಟಿಆರ್
''ಉರಿ; ಸರ್ಜಿಕಲ್ ಸ್ಟ್ರೈಕ್', 'ದಿ ಕಾಶ್ಮೀರ್ ಫೈಲ್ಸ್' ಸೇರಿದಂತೆ ಈಗಾಗಲೇ ಕೆಲವು ಸಿನಿಮಾಗಳನ್ನು ಬಿಜೆಪಿಯು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಂಡಿದೆ. ಇನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಂತೂ ತಮ್ಮ ಸಿನಿಮಾಗಳ ಮೂಲಕ ಬಿಜೆಪಿಯ ಹಿಂದುತ್ವ ಐಡಿಯಾಲಜಿಯನ್ನು ಜೋರಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಬಿಜೆಪಿಯ ನೇರ ಬೆಂಬಲ ಇದೆ'' ಎಂದು ಕೆಟಿಆರ್ ಆರೋಪ ಮಾಡಿದ್ದಾರೆ.

''ಆದಿಪುರುಷ್' ಸಿನಿಮಾ ಸಹ ಬಿಜೆಪಿ ಐಡಿಯಾಲಜಿ ಪ್ರಚಾರ ಮಾಡಲಿದೆ''
''ಆದಿಪುರುಷ್' ಸಿನಿಮಾ ಸಹ ಬಿಜೆಪಿ ಐಡಿಯಾಲಜಿಯನ್ನು ಪ್ರಚಾರ ಮಾಡಲೆಂದೇ ಮಾಡಲಾಗುತ್ತಿದೆ. ಬಿಜೆಪಿ ಪರವಾದ ಇಂಥಹಾ ಸಿನಿಮಾಗಳ ಮೂಲಕ ಯುವಕರ ಬ್ರೈನ್ ವಾಶ್ ಮಾಡಲಾಗುತ್ತಿದೆ. ರಾಷ್ಟ್ರೀಯವಾದ ಹಾಗೂ ಕೋಮುವಾದವನ್ನು ಮಿಕ್ಸ್ ಮಾಡಿ ಈ ದೇಶದ ಯುವಕರನ್ನು ಬೇರೆ ಮೆಂಟಾಲಿಟಿಗೆ ಕೊಂಡೊಯ್ದು ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುತ್ತಿದೆ. ಬಿಜೆಪಿ ಹೇಗೆ ಬಹುಮುಖವಾಗಿ ಕೆಲಸ ಮಾಡುತ್ತಿದೆ ಎಂದರೆ ಸರಿಯಾಗಿ ಚುನಾವಣೆ ಸಮಯದಲ್ಲಿಯೇ ಈ ರೀತಿಯ ಸಿನಿಮಾಗಳು ತೆರೆಗೆ ಬರುತ್ತವೆ, ಬಿಜೆಪಿಗೆ ಪ್ರಚಾರ ಒದಗಿಸುತ್ತವೆ'' ಎಂದು ಕೆಟಿಆರ್ ಹೇಳಿದ್ದಾರೆ.

ರಾಮಾಯಣದ ಕತೆ ಹೊಂದಿರುವ 'ಆದಿಪುರುಷ್'
ಪ್ರಭಾಸ್ ನಟಿಸುತ್ತಿರುವ 'ಆದಿಪುರುಷ್' ಸಿನಿಮಾ ರಾಮಾಯಣದ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಕೃತಿ ಸೆನನ್ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ದೇವದತ್ತ ನಾಗೆ ಹನುಮಂತನ ಪಾತ್ರದಲ್ಲಿ ನಟಿಸಿದ್ದಾರೆ. ಓಂ ರಾವತ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಟಿ ಸೀರೀಸ್‌ನ ಭೂಷಣ್ ಕುಮಾರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಭಾರತದ ಅತಿ ದೊಡ್ಡ ಬಜೆಟ್‌ನ ಸಿನಿಮಾ ಇದಾಗಿರಲಿದ್ದು, ಸಿನಿಮಾವು ಮುಂದಿನ ವರ್ಷ ಜನವರಿ ತಿಂಗಳಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











