'ಬಾಹುಬಲಿ' 1 & 2, 'ಸಾಹೋ', 'ರಾಧೆಶ್ಯಾಮ್' ಫಸ್ಟ್ ಡೇ ಕಲೆಕ್ಷನ್ ಎಷ್ಟು? 'ಆದಿಪುರುಷ್' ಲೆಕ್ಕಾಚಾರ ಏನು?
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಬಿಡುಗಡೆಗೆ ಒಂದು ದಿನ ಮಾತ್ರ ಬಾಕಿಯಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಒಂದಷ್ಟು ವಿವಾದಗಳ ನಡುವೆಯೂ ಸಿನಿಮಾ ಒಂದು ಮಟ್ಟಿಗೆ ನಿರೀಕ್ಷೆ ಹುಟ್ಟುಹಾಕಿದೆ. ಕರ್ನಾಟದಕದಲ್ಲೂ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸ್ತಿದೆ. ಸದ್ಯ 'ಆದಿಪುರುಷ್' ಫಸ್ಟ್ ಡೇ ಕಲೆಕ್ಷನ್ ಎಷ್ಟಾಗಬಹುದು ಎನ್ನುವ ಚರ್ಚೆ ಶುರುವಾಗಿದೆ.
ರಾಜಮೌಳಿ- ಪ್ರಭಾಸ್ ಕಾಂಬಿನೇಷನ್‌ನಲ್ಲಿ ಬಂದ 'ಬಾಹುಬಲಿ' ಸರಣಿ ಭಾರತೀಯ ಚಿತ್ರರಂಗಕ್ಕೆ ದೊಡ್ಡ ತಿರುವು ಕೊಟ್ಟಿದ್ದು ಸುಳ್ಳಲ್ಲ. ಈ ಸಿನಿಮಾ ಸಕ್ಸಸ್‌ನಿಂದ ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಯಿತು. ಜೊತೆಗೆ ಸೀಕ್ವೆಲ್ ಸಿನಿಮಾಗಳ ಭರಾಟೆ ಹೆಚ್ಚಾಯಿತು. ಈಗ ಸೂಪರ್ ಸ್ಟಾರ್‌ಗಳೆಲ್ಲಾ 5 ಭಾಷೆಗಳಲ್ಲಿ ತಮ್ಮ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾಗಳ ಕಲೆಕ್ಷನ್ ಹೆಚ್ಚಾಗುತ್ತಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣ ನಡೀತಿದೆ.

'ಬಾಹುಬಲಿ' ನಂತರ ಪ್ರಭಾಸ್ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸ್ತಿದ್ದಾರೆ. ಆದರೆ ಯಾವ ಸಿನಿಮಾ ಕೂಡ ಬಾಹುಬಲಿ ಮಟ್ಟಿಗೆ ಸದ್ದು ಮಾಡ್ತಿಲ್ಲ. ಇದೀಗ 'ಆದಿಪುರುಷ್' ಸಿನಿಮಾ ಆ ದಾಖಲೆಗಳನ್ನೆಲ್ಲಾ ಮುರಿಯುತ್ತಾ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಪ್ರಭಾಸ್ ನಟನೆಯ ಹಿಂದಿನ 4 ಸಿನಿಮಾಗಳ ಫಸ್ಟ್ ಡೇ ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟಾಗಿತ್ತು ನೋಡೋಣ ಬನ್ನಿ.
'ಬಾಹುಬಲಿ' 71 ಕೋಟಿ ರೂ.
2015ರಲ್ಲಿ ಬಂದ 'ಬಾಹುಬಲಿ ದಿ ಬಿಗಿನಿಂಗ್' ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು. ಮೊದಲ ದಿನವೇ ವಿಶ್ವದಾದ್ಯಂತ 71 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡಿತ್ತು. ರಾಜಮೌಳಿ ಟೇಕಿಂಗ್, ಪ್ರಭಾಸ್, ರಾಣಾ, ಅನುಷ್ಕಾ, ರಮ್ಯಾಕೃಷ್ಣ ಪರ್ಫಾರ್ಮನ್ಸ್ ನೋಡಿ ಪ್ರೇಕ್ಷಕರು ಥ್ರಿಲ್ಲಾಗಿದ್ದರು. ಮುಂದೆ ಸಿನಿಮಾ ಬಾಕ್ಸಾಫೀಸ್ ದೋಚಿದ್ದು ಗೊತ್ತೇಯಿದೆ. ಜೊತೆಗೆ ಸೀಕ್ವೆಲ್ ಬಗ್ಗೆ ಹೆಚ್ಚು ನಿರೀಕ್ಷೆ ಹುಟ್ಟು ಹಾಕಿತ್ತು.

'ಬಾಹುಬಲಿ'- 2 ಕಲೆಕ್ಷನ್ 216 ಕೋಟಿ
ಪ್ರಭಾಸ್ 'ಬಾಹುಬಲಿ' ಸರಣಿ ಚಿತ್ರಕ್ಕಾಗಿ ಐದಾರು ವರ್ಷ ಮೀಸಲಿಟ್ಟಿದ್ದರು. ಮೌಳಿ ಅಂಡ್ ಟೀಂ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಸೀಕ್ವೆಲ್ ತಿದ್ದಿ ತೀಡಿದ್ದರು. 'ಬಾಹುಬಲಿ ದಿ ಕನ್‌ಕ್ಲೂಷನ್' ಸಿನಿಮಾ ಎಲ್ಲಾ ಹಳೇ ದಾಖಲೆಗಳನ್ನು ಮುರಿದು ಸಂಚಲನ ಸೃಷ್ಟಿಸಿತ್ತು. ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ಯಾಕೆ? ಎನ್ನುವ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಲು ಮೊದಲ ದಿನವೇ ಥಿಯೇಟರ್‌ಗಳಿಗೆ ಮುಗಿಬಿದ್ದಿದ್ದರು. ಪರಿಣಾಮ ಸಿನಿಮಾ 216 ಕೋಟಿ ರೂ. ಗಳಿಕೆ ಕಂಡಿತ್ತು.
'ಸಾಹೋ' 126 ಕೋಟಿ ರೂ.
'ಬಾಹುಬಲಿ' ಸರಣಿ ಕ್ರೇಜ್‌ನಲ್ಲೇ ಬಂದ 'ಸಾಹೋ' ಸಿನಿಮಾ 2019ರಲ್ಲಿ ತೆರೆಗಪ್ಪಳಿಸಿತ್ತು. ಭರ್ಜರಿ ಬುಕ್ಕಿಂಗ್ ಕೂಡ ನಡೆದಿತ್ತು. ಆದರೆ ಚಿತ್ರಕ್ಕೆ ಮೊದಲ ಶೋನಿಂದಲೇ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪರಿಣಾಮ ಕಲೆಕ್ಷನ್ ಕಡಿಮೆ ಆಗುವಂತಾಯಿತು. ಆದರೂ ಕೂಡ ಸಿನಿಮಾ ಮೊದಲ ದಿನ 126 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ಉತ್ತರ ಭಾರತದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಗಳಿಕೆ ಚೆನ್ನಾಗಿತ್ತು.
ನಿರಾಸೆ ಮೂಡಿಸಿದ 'ರಾಧೇಶ್ಯಾಮ್'
ಕಳೆದ ವರ್ಷ ಬಂದ ಪ್ರಭಾಸ್- ಪೂಜಾ ಹೆಗ್ಡೆ ಜೋಡಿಯ 'ರಾಧೇಶ್ಯಾಮ್' ಸಿನಿಮಾ ಕೂಡ ನಿರಾಸೆ ಮೂಡಿಸಿತ್ತು. ರಾಧಾಕೃಷ್ಣ ಕುಮಾರ್ ನಿರ್ದೇಶನದ ಈ ಪೀರಿಯಡ್ ರೊಮ್ಯಾಂಟಿಕ್ ಸಿನಿಮಾ 5 ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬಂದಿತ್ತು. ಮೊದಲ ದಿನ ಸಿನಿಮಾ 67 ಕೋಟಿ ರೂ. ಗಳಿಕೆ ಮಾತ್ರ ಕಂಡಿತ್ತು. ಇದು 'ಬಾಹುಬಲಿ'- 1 ಚಿತ್ರಕ್ಕಿಂತಲೂ ಕಡಿಮೆ ಎಂದು ಹೇಳಬಹುದು.
'ಆದಿಪುರುಷ್' ಲೆಕ್ಕಾಚಾರ ಎಷ್ಟು?
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಸಿನಿಮಾ ಇದೀಗ ರಿಲೀಸ್ ಹೊಸ್ತಿಲಲ್ಲಿದೆ. ರಾಮಾಯಣ ಕಾವ್ಯ ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದರೆ ಕೃತಿ ಸನೂನ್ ಸೀತೆಯಾಗಿ ಮಿಂಚಿದ್ದಾರೆ. ರಾವಣನಾಗಿ ಸೈಫ್ ಅಲಿಖಾನ್, ಹನುಮಂತನಾಗಿ ದೇವದತ್ತ, ಲಕ್ಷ್ಮಣನಾಗಿ ಸನ್ನಿಸಿಂಗ್ ಮಿಂಚಿದ್ದಾರೆ. ತ್ರೀಡಿ ಹಾಗೂ ಟುಡಿಯಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಪ್ರಭಾಸ್ ಕ್ರೇಜ್, ಅಡ್ವಾನ್ಸ್ ಬುಕ್ಕಿಂಗ್ಸ್ ನೋಡಿ ಬಾಕ್ಸಾಫೀಸ್ ಪಂಡಿತರು ಮೊದಲ ದಿನ ಸಿನಿಮಾ 120 ರಿಂದ 130 ಕೋಟಿ ಗ್ರಾಸ್ ಕಲೆಕ್ಷನ್ ಮಾಡುತ್ತದೆ ಎನ್ನುತ್ತಿದ್ದಾರೆ.


Click it and Unblock the Notifications











