ವ್ಯಾಲೆಂಟೈನ್ ಡೇಗೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡ್ತಾರಾ ನಟ ಪ್ರಭಾಸ್
ಟಾಲಿವುಡ್ ಪ್ರಿನ್ಸ್ ನಟ ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ರಾಧೆ ಶ್ಯಾಮ ಸಿನಿಮಾದ ಚಿತ್ರೀಕರಣ ಮುಗಿಸಿ, ಇದೀಗ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಈ ನಡುವೆ ಪ್ರಭಾಸ್, ವ್ಯಾಲೆಂಟೈನ್ ಡೇಗೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ವ್ಯಾಲೆಂಟೈನ್ ಡೇ ಎಂದಾಕ್ಷಣ ಪ್ರಭಾಸ್ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸುತ್ತಾರೆ ಎಂದು ಭಾವಿಸಬೇಡಿ. ಬಾಹುಬಲಿ ಸ್ಟಾರ್ ನಟನೆಯ ಹೊಸ ಸಿನಿಮಾದ ಟೀಸರ್ ರಿಲೀಸ್ ಆಗುವ ಸಾಧ್ಯತೆ ಇದೆ.
ಹೌದು, ಪ್ರಭಾಸ್ ನಟನೆಯ ಬಹುನಿರೀಕ್ಷೆಯ ರಾಧೆ ಶ್ಯಾಮ ಸಿನಿಮಾದ ಟೀಸರ್ ಮತ್ತು ರಿಲೀಸ್ ಡೇಟ್ ಅನ್ನು ವ್ಯಾಲೆಂಟೈನ್ ಡೇ ಬಹಿರಂಗ ಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಧೆ ಶ್ಯಾಮ ರೊಮ್ಯಾಂಟಿಕ್ ಥ್ರಿಲರ್ ಸಿನಿಮಾವಾಗಿದ್ದು, ತೆಲುಗು ಜೊತೆಗೆ ತಮಿಳು ಮತ್ತು ಹಿಂದಿಯಲ್ಲೂ ತೆರೆಗೆ ಬರುತ್ತಿದೆ.

ರಾಧೆ ಶ್ಯಾಮ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಇದು ಸುಳ್ಳು ಸುದ್ದಿ ಎನ್ನುವ ಮಾತುಗಳು ಚಿತ್ರತಂಡದ ಮೂಲಗಳಿಂದ ತಿಳಿದುಬರುತ್ತಿದೆ. ಅಂದಹಾಗೆ ರಾಧೆ ಶ್ಯಾಮ ರಾಧಕೃಷ್ಣ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ನಟಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಿಂದ ಸದ್ಯ ಪೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇದೀಗ ಚಿತ್ರದ ಟ್ರೈಲರ್ ಮತ್ತು ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಕುತೂಹಲಕ್ಕೆ ಫೆಬ್ರವರಿ 14ರಂದು ತೆರೆ ಬೀಳಲಿದೆಯಾ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.


Click it and Unblock the Notifications











