ನಗಬೇಡಿ 3 ವರ್ಷಗಳ ಹಿಂದೆ ಫ್ಲಾಪ್ ಆಗಿದ್ದ ಪ್ರಭಾಸ್ 'ಸಾಹೋ' ದಿಢೀರ್ ಹಿಟ್; ಎಲ್ಲಾ ಪವನ್ ಕಲ್ಯಾಣ್ ಫ್ಯಾನ್ಸ್ ಮಹಿಮೆ!
ಟಾಲಿವುಡ್ ಕಂಡ ದುರಂತ ಸಿನಿಮಾಗಳು ಯಾವುವು ಎಂಬ ಪ್ರಶ್ನೆ ಎದುರಾದಾಗ ಬಹುತೇಕ ತೆಲುಗು ಸಿನಿ ಪ್ರೇಕ್ಷಕರು ಪ್ರಭಾಸ್ ಹಾಗೂ ನಿರ್ದೇಶಕ ಸುಜಿತ್ ಕಾಂಬಿನೇಶನ್‌ನಲ್ಲಿ ಮೂಡಿ ಬಂದ ಸಾಹೋ ಚಿತ್ರದ ಹೆಸರನ್ನು ಹೇಳುವುದು ಕಾಮನ್. ಹೌದು, ಬಾಹುಬಲಿ ಸರಣಿ ಬಳಿಕ ಸಣ್ಣ ಪುಟ್ಟ ಚಿತ್ರಗಳನ್ನು ಮಾಡದ ಪರಿಸ್ಥಿತಿಯಲ್ಲಿದ್ದ ಪ್ರಭಾಸ್ ಮುಂದೆ ಯಾವ ಚಿತ್ರದಲ್ಲಿ ಅಭಿನಯಿಸಬಹುದು ಎಂಬ ನಿರೀಕ್ಷೆ ಇದ್ದಾಗ ಸಾಹೋ ಚಿತ್ರವನ್ನು ಪ್ರಭಾಸ್ ಕೈಗೆತ್ತಿಕೊಂಡಿದ್ದರು.
ಪ್ರಭಾಸ್ ಸಾಹೋ ಚಿತ್ರ ತನ್ನ ಪೋಸ್ಟರ್, ಟೀಸರ್, ಟ್ರೈಲರ್ ಹಾಗೂ ಹಾಡುಗಳಿಂದ ಬೃಹತ್ ದೊಡ್ಡ ಮಟ್ಟದ ಹೈಪ್ ಹುಟ್ಟುಹಾಕಿತ್ತು. ಆದರೆ ಈ ದೊಡ್ಡ ಮಟ್ಟದ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಸಾಹೋ ಚಿತ್ರ ಯಶಸ್ವಿಯಾಗಲಿಲ್ಲ. ಚಿತ್ರ ಬಿಡುಗಡೆ ದಿನದ ಬೆಳಗಿನ ಪ್ರದರ್ಶನದಲ್ಲಿಯೇ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಬಾಹುಬಲಿ ರೀತಿಯ ಮಹಾ ಚಿತ್ರದ ನಂತರ ಔಟ್ ಅಂಡ್ ಔಟ್ ಆಕ್ಷನ್ ಚಿತ್ರದೊಂದಿಗೆ ಬಂದ ಪ್ರಭಾಸ್ ಲೆಕ್ಕಾಚಾರ ತಲೆ ಕೆಳಗಾಗಿತ್ತು.
ಆದರೆ ಚಿತ್ರವೇನೂ ನಿರ್ಮಾಪಕರಿಗೆ ನಷ್ಟ ಉಂಟುಮಾಡಲಿಲ್ಲ. 350 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತಯಾರಾಗಿದ್ದ ಸಾಹೋ ಚಿತ್ರ ವಿಶ್ವದಾದ್ಯಂತ 451 ಕೋಟಿ ರೂಪಾಯಿಗಳನ್ನು ಕಲೆಹಾಕಿತ್ತು. ಈ ಕಲೆಕ್ಷನ್ ನಷ್ಟ ಉಂಟು ಮಾಡದಿದ್ದರೂ ಸಹ ನಿರೀಕ್ಷೆಯನ್ನು ಹುಸಿ ಮಾಡಿದ್ದಂತೂ ನಿಜ. ಹೀಗೆ 2019ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ ಅಂದು ಕಲೆಕ್ಷನ್ ಪ್ರಕಾರ ಸಾಮಾನ್ಯ ಚಿತ್ರ ಎನಿಸಿಕೊಂಡಿತ್ತು. ಇನ್ನು ಪ್ರೇಕ್ಷಕರಿಗೆ ಇಷ್ಟವಾಗದ ಕಾರಣ ಸಿನಿ ರಸಿಕರ ಪ್ರಕಾರ ಫ್ಲಾಪ್ ಎನಿಸಿಕೊಂಡಿತ್ತು. ಹೀಗೆ ಮೂರು ವರ್ಷಗಳ ಹಿಂದೆ ಸಾಮಾನ್ಯ, ಫ್ಲಾಪ್ ಎನಿಸಿಕೊಂಡಿದ್ದ ಸಾಹೊ ಚಿತ್ರ ಈಗ ಸೂಪರ್ ಹಿಟ್, ಬ್ಲಾಕ್‌ಬಸ್ಟರ್ ಸಿನಿಮಾ ಎನಿಸಿಕೊಳ್ಳುತ್ತಿದೆ. ಇದಕ್ಕೆ ಬಲವಾದ ಕಾರಣವೂ ಸಹ ಇದೆ..

ಪವನ್ ಕಲ್ಯಾಣ್ ಹೊಸ ಪ್ರಾಜೆಕ್ಟ್ ಘೋಷಣೆ ಬೆನ್ನಲ್ಲೇ ಸಾಹೋ ಹಿಟ್!
ಈ ವಿಚಾರ ತಮಾಷೆ ಎನಿಸಿದರೂ ನೀವು ನಂಬಲೇಬೇಕು. ನಿನ್ನೆಯಷ್ಟೇ ( ಡಿಸೆಂಬರ್ 4 ) ಸಾಹೋ ಚಿತ್ರ ನಿರ್ದೇಶಿಸಿದ್ದ ಸುಜಿತ್ ತಮ್ಮ ಮುಂದಿನ ಚಿತ್ರವನ್ನು ಪವನ್ ಕಲ್ಯಾಣ್ ಜತೆ ಘೋಷಿಸಿದರು. 'ಫೈರ್ ಸ್ಟಾರ್ಮ್ ಈಸ್ ಕಮಿಂಗ್' ಎಂದು ರಗಡ್ ಪೋಸ್ಟರ್ ಒಂದನ್ನು ಹಂಚಿಕೊಂಡ ಸುಜಿತ್ ಪವನ್ ಕಲ್ಯಾಣ್ ಈ ಚಿತ್ರದ ಹಿರೋ ಎಂದು ಘೋಷಿಸಿದ ಬೆನ್ನಲ್ಲೇ ಟ್ವಿಟರ್‌ನಲ್ಲಿ ಸಾಹೋ ಚಿತ್ರ ಟ್ರೆಂಡಿಂಗ್ ಪಟ್ಟಿ ಸೇರಿದೆ.

ಸಾಹೋ ಚೆನ್ನಾಗಿಯೇ ಇತ್ತು ಎಂದ ಪಿಕೆ ಫ್ಯಾನ್ಸ್
ಹೀಗೆ ತಮ್ಮ ನೆಚ್ಚಿನ ನಟನ ಜತೆ ಸುಜಿತ್ ಚಿತ್ರ ಘೋಷಣೆಯಾದ ಬೆನ್ನಲ್ಲೇ ಸಾಹೋ ಚಿತ್ರ ನೋಡುತ್ತಿರುವುದಾಗಿ ಹಲವಾರು ಪವನ್ ಕಲ್ಯಾಣ್ ಫ್ಯಾನ್ಸ್ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸಾಹೋ ಚೆಂದದ ಸಿನಿಮಾ, ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡು ಹೋಗಿದ್ದರಿಂದ ಚಿತ್ರ ನಿರೀಕ್ಷಿಸಿದ ಗೆಲುವು ಪಡೆಯಲಿಲ್ಲ ಅಷ್ಟೇ ಎಂದು ಸಹ ಬರೆದುಕೊಂಡಿದ್ದಾರೆ. ಪವನ್ ಕಲ್ಯಾಣ್ ಅಭಿಮಾನಿಗಳು ಈ ರೀತಿ ಟ್ವೀಟ್ ಮಾಡಲು ಆರಂಭಿಸಿದ ಬೆನ್ನಲ್ಲೇ ಪ್ರಭಾಸ್ ಅಭಿಮಾನಿಗಳೂ ಸಹ ಸಾಹೋ ಕುರಿತು ಟ್ವೀಟ್ ಮಾಡುತ್ತಿದ್ದು, ಚಿತ್ರದ ಅಂಶಗಳ ಬಗ್ಗೆ ಸಾಲು ಸಾಲು ಪ್ರಶಂಸೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತಾಗಿಯೇ ವ್ಯಕ್ತವಾದವು ಟ್ರೋಲ್ಸ್
ಇನ್ನು ಕೆಲ ಪವನ್ ಕಲ್ಯಾಣ್ ಅಭಿಮಾನಿಗಳು ಸಾಹೋ ಚೆನ್ನಾಗಿದೆ ಎಂದು ಬರೆದುಕೊಂಡಿದ್ದನ್ನು ಕಂಡ ತೆಲುಗಿನ ಇತರೆ ನಟರ ಅಭಿಮಾನಿಗಳು ಇಷ್ಟು ದಿನ ಡಿಸಾಸ್ಟರ್ ಆಗಿದ್ದ ಸಾಹೋ ಚಿತ್ರ ಈಗ ಪವನ್ ಕಲ್ಯಾಣ್ ಅಭಿಮಾನಿಗಳ ಮಹಿಮೆಯಿಂದ ಹಿಟ್ ಚಿತ್ರವಾಗಿದೆ, ಇನ್ನೆರಡು ದಿನಗಳಲ್ಲಿ ಈ ಚಿತ್ರ ಬ್ಲಾಕ್‌ಬಸ್ಟರ್ ಹಾಗೂ ಇಂಡಸ್ಟ್ರಿ ಹಿಟ್ ಎಂದು ಘೋಷಿಸಲ್ಪಟ್ಟರೂ ಆಶ್ಚರ್ಯವಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.


Click it and Unblock the Notifications











