ಉತ್ತರ ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ; ಪ್ರಭಾಸ್ ಅಭಿಮಾನಿಗಳಲ್ಲಿ ಆತಂಕ
ಸೋಮವಾರ(ಡಿಸೆಂಬರ್ 8) ತಡರಾತ್ರಿ ಉತ್ತರ ಜಪಾನ್‌ನಲ್ಲಿ ಭೂಕಂಪ ಸಂಭವಿಸಿದೆ. 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪೆಸಿಫಿಕ್ ಕರಾವಳಿ ಭಾಗಗಳಲ್ಲಿ ಸುನಾಮಿ ಎದ್ದಿದೆ. ಹೊನ್ಶುವಿನ ಉತ್ತರ ತುದಿಯಿಂದ 80 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ. 90 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸದ್ಯ ನಟ ಪ್ರಭಾಸ್ ಜಪಾನ್ ದೇಶದಲ್ಲಿದ್ದು ಅಭಿಮಾನಿಗಳಿಂದ ಆತಂಕ ತಂದಿದೆ.
ಪ್ರಭಾಸ್ ನಟನೆಯ 'ಬಾಹುಬಲಿ: ದಿ ಎಪಿಕ್' ಸಿನಿಮಾ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಆಗಿ ಸದ್ದು ಮಾಡಿತ್ತು. ಇದೇ ಸಿನಿಮಾ ಈಗ ಜಪಾನ್ ದೇಶದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಹಾಗಾಗಿ ನಿರ್ಮಾಪಕ ಶೋಭು ಯರ್ಲಗಡ್ಡ ಜೊತೆ ಪ್ರಭಾಸ್ ಚಿತ್ರದ ಪ್ರಚಾರಕ್ಕಾಗಿ ಅಲ್ಲಿಗೆ ಹೋಗಿದ್ದಾರೆ. ಇದೇ ವೇಳೆ ಜಪಾನ್ ದೇಶದಲ್ಲಿ ಭೂಕಂಪ ಎನ್ನುವ ಸುದ್ದಿ ಡಾರ್ಲಿಂಗ್ ಅಭಿಮಾನಿಗಳಲ್ಲಿ ಭೀತಿ ಉಂಟು ಮಾಡಿದೆ.

ನಟ ಪ್ರಭಾಸ್ ಸುರಕ್ಷಿತವಾಗಿದ್ದಾರೆ. ಯಾರೂ ಆತಂಕಪಡುವ ಅಗತ್ಯ ಇಲ್ಲ ಎಂದು ನಿರ್ದೇಶಕ ಮಾರುತಿ ಸ್ಪಷ್ಟಪಡಿಸಿದ್ದಾರೆ. ಮಾರುತಿ ನಿರ್ದೇಶನದ 'ರಾಜಾಸಾಬ್' ಚಿತ್ರದಲ್ಲಿ ಪ್ರಭಾಸ್ ನಟಿಸಿರುವುದು ಗೊತ್ತೇಯಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಈ ಹಾರರ್ ಕಾಮಿಡಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ನಿರ್ದೇಶಕ ಮಾರುತಿ ಪ್ರತಿಕ್ರಿಯಿಸಿ "ನಾನು ಪ್ರಭಾಸ್ ಅವರ ಜೊತೆ ಫೋನ್ ಮಾಡಿ ಮಾತನಾಡಿದ್ದೆ. ಯಾರೂ ಆತಂಕಪಡುವ ಅಗತ್ಯ ಇಲ್ಲ. ಅವರು ಸುರಕ್ಷಿತವಾಗಿದ್ದಾರೆ" ಎಂದು ತಿಳಿಸಿದ್ದಾರೆ.
ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬಂದಿತ್ತು. ಅದನ್ನು ಒಂದೇ ಚಿತ್ರವಾಗಿ ಎಡಿಟ್ ಮಾಡಿ 'ಬಾಹುಬಲಿ: ದಿ ಎಪಿಕ್' ಹೆಸರಿನಲ್ಲಿ ಮರುಬಿಡುಗಡೆ ಮಾಡಲಾಗ್ತಿದೆ. ಅಕ್ಟೋಬರ್ 30ರಂದು ತೆರೆಗೆ ಬಂದಿದ್ದ ಸಿನಿಮಾ 40 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಮತ್ತೆ ತೆರೆಮೇಲೆ ಬಾಹುಬಲಿ ಆರ್ಭಟ ನೋಡಿ ಸಿನಿರಸಿಕರು ಫಿದಾ ಆಗಿದ್ದರು. ರಾಣಾ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ನಾಸರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಜಪಾನ್‌ನಲ್ಲಿ ನಡೆದ 'ಬಾಹುಬಲಿ: ದಿ ಎಪಿಕ್' ಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದ ಪ್ರಭಾಸ್ ಭಾಗಿ ಆಗಿದ್ದರು. "ಕಳೆದ 10 ವರ್ಷಗಳಿಂದ ನಾನು ಈ ಕ್ಷಣಕ್ಕಾಗಿ ಕಾಯುತ್ತಿದ್ದೇನೆ. ರಾಜಮೌಳಿ ಮತ್ತು ಶೋಬು ಯಾವಾಗಲೂ ಜಪಾನಿನ ಪ್ರೇಕ್ಷಕರ ಬಗ್ಗೆ ಮಾತನಾಡುತ್ತಾರೆ. ಈಗ ನಾನು ಅದನ್ನು ಕಣ್ಣಾರೆ ನೋಡಿದ್ದೇನೆ. ಜಪಾನ್ ಈಗ ನಮಗೆಲ್ಲರಿಗೂ ನಮ್ಮದೇ ದೇಶ ಎನ್ನುವಂತಾಗಿದೆ. ನಾನು ಪ್ರತಿ ವರ್ಷ ಇಲ್ಲಿಗೆ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ" ಎಂದು ಅಲ್ಲಿನ ಅಭಿಮಾನಿಗಳನ್ನು ಉದ್ದೇಶಿಸಿ ಪ್ರಭಾಸ್ ಮಾತನಾಡಿದ್ದಾರೆ.
ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. 'ರಾಜಾಸಾಬ್' ಬಳಿಕ ಹನು ರಾಘವಪುಡಿ ನಿರ್ದೇನದ 'ಫೌಜಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಸಿನಿಮಾ ಸಹ ಆರಂಭವಾಗಿದೆ. ಮುಂದೆ 'ಸಲಾರ್- 2' ಚಿತ್ರದಲ್ಲಿ ನಟಿಸಬೇಕಿದೆ. ಹೊಂಬಾಳೆ ಫಿಲ್ಮ್ಸ್ ಜೊತೆ ಮತ್ತೆರಡು ಚಿತ್ರಗಳಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಸಂಕ್ರಾಂತಿಗೆ ಬರಬೇಕಿರುವ 'ರಾಜಾಸಾಬ್' ಸಿನಿಮಾ ಅಷ್ಟೇನು ಕುತೂಹಲ ಮೂಡಿಸಿಲ್ಲ. ಇತ್ತೀಚೆಗೆ ಚಿತ್ರದ ಹಾಡೊಂದು ರಿಲೀಸ್ ಆಗಿತ್ತು. ಆಕ್ಷನ್ ಸಿನಿಮಾಗಳಲ್ಲಿ ಪ್ರಭಾಸ್ ಅವರನ್ನು ನೋಡಿ ಹಾರರ್ ಕಾಮಿಡಿ ಚಿತ್ರದಲ್ಲಿ ಊಹಿಸಿಕೊಳ್ಳಲು ಅಭಿಮಾನಿಗಳು ಕಷ್ಟಪಡುತ್ತಿದ್ದಾರೆ. ಸಂಜಯ್ ದತ್, ಬೊಮನ್ ಇರಾನಿ, ಜರೀನಾ ವಹಾಬ್, ವೆನ್ನೆಲ ಕಿಶೋರ್, ಬ್ರಹ್ಮಾನಂದಂ ಸೇರಿ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.
ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್, ರಿದ್ದಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. ಎಸ್. ತಮನ್ ಸಂಗೀತ ಚಿತ್ರಕ್ಕಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಐವಿ ಎಂಟರ್ಟೈನ್ಮೆಂಟ್ ಸಂಸ್ಥೆಗಳು ಜಂಟಿಯಾಗಿ 'ರಾಜಾಸಾಬ್' ಸಿನಿಮಾ ನಿರ್ಮಾಣ ಮಾಡಿವೆ.


Click it and Unblock the Notifications











