ಈ ವರ್ಷ 'ಪಠಾಣ್' ದಾಖಲೆ ಮುರಿಯೋಕೆ ಹೊಂಬಾಳೆ ಸಂಸ್ಥೆ ಸಿನಿಮಾನೇ ಬರ್ಬೇಕಾ? ಏನಿದು ಚರ್ಚೆ?
ಶಾರುಕ್ ಖಾನ್ ನಟನೆಯ 'ಪಠಾಣ್' ಬಾಕ್ಸಾಫೀಸ್ ಶೇಕ್ ಮಾಡಿ ಮುನ್ನುಗ್ಗುತ್ತಿದೆ. ಈ ವರ್ಷದ ಮೊದಲ ಬ್ಲಾಕ್‌ಬಸ್ಟರ್ ಸಿನಿಮಾ ಎನಿಸಿಕೊಂಡಿದೆ. 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಎಲ್ಲರ ಗಮನ ಸೆಳೆದಿದೆ. ಈ ವರ್ಷ 'ಪಠಾಣ್' ದಾಖಲೆಯನ್ನು ಯಾವ ಸಿನಿಮಾ ಮುರಿಯುತ್ತೆ ಎನ್ನುವ ಚರ್ಚೆ ಈಗ ಶುರುವಾಗಿದೆ.
ಕಿಂಗ್ ಖಾನ್ ಕರಿಯರ್‌ನಲ್ಲೂ 'ಪಠಾಣ್' ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಆಗಿ 'ಪಠಾಣ್' ನಿಂತಿದೆ. ಈ ವರ್ಷ ಸಾಕಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿವೆ. ಆದರೆ 1000 ಕೋಟಿ ಕಲೆಕ್ಷನ್ ಮಾಡುವ ಸಿನಿಮಾ ಯಾವುದು ಎಂದು ಅಷ್ಟು ಸುಲಭವಾಗಿ ಹೇಳೋಕೆ ಸಾಧ್ಯವಿಲ್ಲ. ಈ ಗಡಿ ದಾಟೋದು ಅಷ್ಟು ಸುಲಭ ಕೂಡ ಅಲ್ಲ. ಈವರೆಗೆ 'ಬಾಹುಬಲಿ'- 2, 'ದಂಗಲ್', 'ಕೆಜಿಎಫ್- 2', 'RRR' ಸಿನಿಮಾಗಳು ಮಾತ್ರ 1000 ಕೋಟಿ ಗಡಿ ದಾಟಿದ್ದವು.

ಶಾರುಕ್ ಖಾನ್ ಕೂಡ 1000 ಕೋಟಿ ಕಲೆಕ್ಷನ್ ಸಿನಿಮಾ ಸರದಾರ ಎನಿಸಿಕೊಂಡಿದ್ದಾರೆ. ಈ ವರ್ಷ 'ಪಠಾಣ್' ದಾಖಲೆ ಮುರಿಯೋ ಸಿನಿಮಾ ಯಾವುದು ಅಂದ್ರೆ ಎಲ್ಲರೂ 'ಸಲಾರ್' ಸಿನಿಮಾ ಹೆಸರು ಹೇಳುತ್ತಿದ್ದಾರೆ. ಈ ವರ್ಷ 'ಪೊನ್ನಿಯಿನ್ ಸೆಲ್ವನ್- 2', 'ಆದಿಪುರುಷ್', 'ಕಬ್ಜ', 'ಮಾರ್ಟಿನ್' ಸೇರಿದಂತೆ ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗಲಿದೆ. ಆದರೆ 'ಸಲಾರ್'ಗೆ ಮಾತ್ರ ಬಾಕ್ಸಾಫೀಸ್‌ನಲ್ಲಿ 'ಪಠಾಣ್' ದಾಖಲೆ ಮುರಿಯುವ ತಾಕತ್ತು ಇದೆ ಎನ್ನಲಾಗ್ತಿದೆ.
ಅಷ್ಟಕ್ಕೂ 'ಸಲಾರ್' ಇಷ್ಟೆಲ್ಲಾ ನಿರೀಕ್ಷೆ ಮೂಡಲು ಕಾರಣ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್. ಹೌದು ಒಂದ್ಕಡೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಮತ್ತೊಂದು ಕಡೆ 'KGF' ಸರಣಿ ಸಿನಿಮಾಗಳ ಸರದಾರ ಪ್ರಶಾಂತ್ ನೀಲ್. ಇವರಿಬ್ಬರ ಕಾಂಬಿನೇಷನ್ ಅಂದ್ಮೇಲೆ ಪಕ್ಕಾ ಮಾಸ್ ಮಾಸಲಾ ಎಂಟರ್‌ಟೈನ್‌ಮೆಂಟ್ ಸಿನಿಮಾ ಗ್ಯಾರೆಂಟಿ. ಬರೀ ಪೋಸ್ಟರ್‌ಗಳಿಂದಲೇ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ.

ಸೆಪ್ಟೆಂಬರ್ 28ಕ್ಕೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್, ಹೀರೊಯಿಜಂ, ಎಲಿವೇಷನ್ಸ್, ಪ್ರಭಾಸ್ ಇಮೇಜ್, ಒಳ್ಳೆ ಕಂಟೆಂಟ್ ಸೇರಿಸಿ ಸಿನಿಮಾ ಮಾಡೋದ್ರಲ್ಲಿ ನೀಲ್ ನಿಸ್ಸೀಮರು. 'KGF' ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ 'ಸಲಾರ್' ಚಿತ್ರಕ್ಕೂ ಕೆಲಸ ಮಾಡ್ತಿದೆ. ಹಾಗಾಗಿ ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ. ಈ ಸಿನಿಮಾ ಖಂಡಿತ 'ಪಠಾಣ್' ದಾಖಲೆ ಮುರಿಯುತ್ತೆ ಎನ್ನಲಾಗ್ತಿದೆ.
ಇನ್ನು 'ಸಲಾರ್'ಗೂ ಮುನ್ನ ಶಾರುಕ್ ಖಾನ್ ನಟನೆಯ 'ಜವಾನ್' ಸಿನಿಮಾ ತೆರೆಗೆ ಬರ್ತಿದೆ. ಈ ಸಿನಿಮಾ ಕೂಡ 1000 ಕೋಟಿ ದಾಟುತ್ತಾ ಇಲ್ವಾ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











