ಪ್ರಭಾಸ್ ನಟನೆಯ 'ಸಲಾರ್' ರೀ-ರಿಲೀಸ್ ದಾಖಲೆ; ₹500 ಕೋಟಿ ಕ್ಲಬ್ ಸೇರುತ್ತಾ ಸಿನಿಮಾ?
ಒಂದೂವರೆ ವರ್ಷದ ಹಿಂದೆ ತೆರೆಗೆ ಬಂದಿದ್ದ 'ಸಲಾರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಂಗ್ ರೆಬಲ್ ಸ್ಟಾರ್ ಅಬ್ಬರಿಸಿ ಬೊಬ್ಬಿರಿದಿದ್ದರು. ಶಾರುಖ್ ಖಾನ್ 'ಡಂಕಿ' ಚಿತ್ರದ ಆರ್ಭಟದ ನಡುವೆಯೂ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಈ ವಾರ ಸಿನಿಮಾ ರೀ-ರಿಲೀಸ್ ಆಗುತ್ತಿದೆ.
ಕನ್ನಡದ 'ಉಗ್ರಂ' ಚಿತ್ರದ ಕಥೆಯನ್ನ 2 ಎರಡು ಭಾಗಗಳಾಗಿ ಪ್ರಶಾಂತ್ ನೀಲ್ ಕೊಟ್ಟಿ ಕೊಡುವ ಪ್ರಯತ್ನ ಮಾಡಿದ್ದರು. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಿತ್ತು. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿತ್ತು. 'ಬಾಹುಬಲಿ' ಪ್ರಭಾಸ್, 'KGF' ಪ್ರಶಾಂತ್ ಜೊತೆಯಾಗಿದ್ದಾರೆ ಎಂದಾಗಲೇ ಹೈಪ್ ಕ್ರಿಯೇಟ್ ಆಗಿತ್ತು. ಕಾರಣಾಂತರಗಳಿಂದ ಸಿನಿಮಾ ಕೊಂಚ ತಡವಾಗಿ ತೆರೆಗೆ ಬಂದಿತ್ತು. ಸಿನಿಮಾ 700 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು.

ಇದೇ ಶುಕ್ರವಾರ ದೇಶಾದ್ಯಂತ ದೊಡ್ಡಮಟ್ಟದಲ್ಲಿ 'ಸಲಾರ್' ಸಿನಿಮಾ ರೀ-ರಿಲೀಸ್ ಮಾಡಲಾಗುತ್ತಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ಭರ್ಕರಿ ರೆಸ್ಪಾನ್ಸ್ ಸಿಕ್ಕಿದೆ. ಸಾವಿರಾರು ಟಿಕೆಟ್ ಬುಕ್ ಆಗಿದೆ. ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ 1 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಆಗಿರುವ ಅಂದಾಜಿದೆ. ಈ ಹಿಂದೆ ಸಾಕಷ್ಟು ತೆಲುಗು ಸಿನಿಮಾಗಳು ರೀ-ರಿಲೀಸ್ ಆಗಿದೆ. ಆದರೆ ಅದನ್ನೆಲ್ಲಾ ಮೀರಿ 'ಸಲಾರ್' ಸದ್ದು ಮಾಡುವ ಚರ್ಚೆ ನಡೀತಿದೆ.
ಒಂದು ವರ್ಷದ ಅಂತರದಲ್ಲಿ 'ಸಲಾರ್' ಸಿನಿಮಾ ತೆರೆಗೆ ತರುತ್ತಿರುವುದು ಯಾಕೆ? ಎನ್ನುವ ಅನುಮಾನ ಮೂಡುವುದು ಸಹಜ. ಅದಕ್ಕೆ ಮುಖ್ಯ ಕಾರಣ ಓಟಿಟಿಯಲ್ಲಿ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ರೆಸ್ಪಾನ್ಸ್. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ತೆರೆಗೆ ಬಂದಾಗ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ ಓಟಿಟಿಯಲ್ಲಿ ಸತತವಾಗಿ ಟ್ರೆಂಡಿಂಗ್‌ನಲ್ಲಿದೆ. ಅಭಿಮಾನಿಗಳು ಕೂಡ ಸಿನಿಮಾ ತೆರೆಗೆ ತರುವಂತೆ ಬೇಡಿಕೆ ಇಟ್ಟಿದ್ದರು. ಇದೇ ಕಾರಣಕ್ಕೆ ಮತ್ತೆ ಚಿತ್ರಮಂದಿರಗಳಲ್ಲಿ ಪ್ರಭಾಸ್ ಆರ್ಭಟ ಶುರುವಾಗಿದೆ.
ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರದೇ ಆಂಧ್ರ, ತೆಲಂಗಾಣದಲ್ಲಿ ಚಿತ್ರಮಂದಿರಗಳು ಪ್ರೇಕ್ಷಕರ ಬರ ಎದುರಿಸುವಂತಾಗಿದೆ. ಹಾಗಾಗಿ ಟ್ರೆಂಡಿಂಗ್‌ನಲ್ಲಿರುವ 'ಸಲಾರ್' ಚಿತ್ರವನ್ನು ಬಿಡುಗಡೆ ಮಾಡುವ ಲೆಕ್ಕಾಚಾರ ನಡೀತಿದೆ. ಹೈದರಾಬಾದ್ ಸುದರ್ಶನ್ ಚಿತ್ರಮಂದಿರದಲ್ಲಿ ಶುಕ್ರವಾರದ 4 ಶೋಗಳ ಟಿಕೆಟ್ ಕೆಲವೇ ನಿಮಿಷಗಳಲ್ಲಿ ಸೋಲ್ಡೌಟ್ ಆಗಿದೆ. ಅಷ್ಟರಮಟ್ಟಿಗೆ ಸಿನಿಮಾ ಕ್ರೇಜ್ ಹುಟ್ಟಾಕ್ಕಿದೆ.
'ಸಲಾರ್' ಸಿನಿಮಾ ತೆರೆಗೆ ಬಂದಾಗಲೇ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಪ್ರಶಾಂತ್ ನೀಲ್ ಟೇಕಿಂಗ್, ಪ್ರಭಾಸ್ ಆರ್ಭಟ ಮೋಡಿ ಮಾಡಿತ್ತು. ಅದರಲ್ಲೂ ಎಲಿವೇಷನ್ ಸೀನ್ಸ್ ಧೂಳೆಬ್ಬಿಸಿತ್ತು. ಆದರೆ ಕೆಲವರು ಸಿನಿಮಾ ಚೆನ್ನಾಗಿಲ್ಲ ಎಂದುಬಿಟ್ಟಿದ್ದರು. ಆದರೆ ಓಟಿಟಿಯಲ್ಲಿ ಪದೇ ಪದೇ ಎಲಿವೇಷನ್ ಸೀನ್ಸ್, ಆಕ್ಷನ್ ಧಮಾಕ, ಸ್ಲೋ ಮೋಷನ್ ಸೀನ್ಸ್ ನೋಡಿ ಫಿದಾ ಆಗಿದ್ದಾರೆ. ರವಿ ಬಸ್ರೂರು ಮ್ಯೂಸಿಕ್ ಅದಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದೆ. ಥಿಯೇಟರ್‌ನಲ್ಲಿ ನೋಡಿ ಓಕೆ ಓಕೆ ಎಂದವರು ಕೂಡ ನೆಟ್‌ಫ್ಲಿಕ್ಸ್‌ನಲ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ. ಜಿಯೋ ಹಾಟ್‌ಸ್ಟರ್‌ನಲ್ಲಿ ಕೂಡ ಸ್ಟ್ರೀಮಿಂಗ್ ಆರಂಭಿಸಿದ ಮೇಲೆ ಆರ್ಭಟ ಹೆಚ್ಚಾಗಿತ್ತು.
ಟಿವಿಯಲ್ಲಿ ಸಿನಿಮಾ ಪ್ರಸಾರ ಆಗಿದ್ದಾಗಲೂ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಇದನ್ನೆಲ್ಲಾ ನೋಡಿ ರೀ-ರಿಲೀಸ್ ಪ್ಲ್ಯಾನ್ ಶುರುವಾಯಿತು. ನಿರೀಕ್ಷಿಸಿದಂತೆ ಅಡ್ವಾನ್ಸ್ ಬುಕ್ಕಿಂಗ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅಂದಹಾಗಿ 'ಸಲಾರ್' ಸಿನಿಮಾ ಇಂಡಿಯನ್ ಬಾಕ್ಸಾಫೀಸ್‌ನಲ್ಲಿ 482 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಇನ್ನು 18 ಕೋಟಿ ರೂ. ಸೇರಿದರೆ 500 ಕೋಟಿ ರೂ. ಕ್ಲಬ್ ಸೇರಿದಂತಾಗುತ್ತದೆ. ಸಿನಿಮಾ ರೀ-ರಿಲೀಸ್ ಆಗಿ 18 ಕೋಟಿ ಕಲೆಕ್ಷನ್ ಮಾಡುತ್ತಾ? ಎನ್ನುವ ಚರ್ಚೆ ಶುರುವಾಗಿದೆ.
'ಉಗ್ರಂ' ಚಿತ್ರದಲ್ಲಿ ಮುಗೋರ್ ಹಿನ್ನೆಲೆಯಲ್ಲಿ ಅಗಸ್ತ್ಯ(ಶ್ರೀಮುರಳಿ) ಹಾಗೂ ಬಾಲ(ತಿಲಕ್) ಸ್ನೇಹಿತರ ಕಥೆಯನ್ನು ಪ್ರಶಾಂತ್ ನೀಲ್ ಹೇಳಿದ್ದರು. 'ಸಲಾರ್' ಚಿತ್ರದಲ್ಲಿ ಅದನ್ನು ದೇವ ಹಾಗೂ ವರದರಾಜ್ ಕಥೆಯನ್ನಾಗಿ ಬದಲಿಸಿದ್ದರು. ಮುಗೋರ್ ರೀತಿಯಲ್ಲೇ ಖಾನ್‌ಸರ್ ಎಂಬ ಕಾಲ್ಪನಿಕ ಊರನ್ನು ಸೃಷ್ಟಿಸಿದ್ದರು. ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿತ್ತು. ಚಿತ್ರದಲ್ಲಿ ಕನ್ನಡ ಕಲಾವಿದರು, ತಂತ್ರಜ್ಞರು ಕೂಡ ಕೆಲಸ ಮಾಡಿದ್ದಾರೆ.

ಪ್ರಭಾಸ್ ಸ್ನೇಹಿತನ ಪಾತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು, ಬಾಬಿ ಸಿಂಹ, ಶ್ರೇಯಾ ರೆಡ್ಡಿ, ದೇವರಾಜ್, ಗರುಡ ರಾಮ್, ಪ್ರಮೋದ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಂದಾಜು 250 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ತೆಲಂಗಾಣ, ಇಟಲಿ ಸೇರಿ ಹಲವು ಭಾಗಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿತ್ತು. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭಾರೀ ಸೆಟ್ ಹಾಕಿ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು.
2021ರ ಸಂಕ್ರಾಂತಿ ಸಂಭ್ರಮದಲ್ಲಿ ಸೆಟ್ಟೇರಿದ್ದ 'ಸಲಾರ್' ಸಿನಿಮಾ 2023ರ ಕ್ರಿಸ್‌ಮಸ್ ಸಡಗರದಲ್ಲಿ ತೆರೆಗೆ ಬಂದಿತ್ತು. 'ಉಗ್ರಂ' ನನ್ನ ಬಹಳ ಇಷ್ಟದ ಕಥೆ. ಅದನ್ನು ದೊಡ್ಡಮಟ್ಟದಲ್ಲಿ ಜನ ತೆರೆಮೇಲೆ ನೋಡಬೇಕು ಎಂದುಕೊಂಡಿದ್ದೆ. ಆದರೆ ಬೇಗ ಸಿನಿಮಾ ಪೈರಸಿ ಆಗಿಬಿಡ್ತು, ಜನ ಮೊಬೈಲ್, ಟಿವಿಯಲ್ಲಿ ನೋಡಿದರು. ಅದೇ ಕಾರಣಕ್ಕೆ ನನ್ನ ಬಳಿ ಬೇರೆ ಕಥೆಗಳಿದ್ದರೂ 'ಉಗ್ರಂ' ಕಥೆಯನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಹೇಳಬೇಕು ಎಂದುಕೊಂಡೆ ಅಂತ ನೀಲ್ ಹೇಳಿದ್ದರು.
ಕನ್ನಡದಲ್ಲಿ 'ಉಗ್ರಂ' ಸಿನಿಮಾ ನೋಡಿದವರಿಗೆ 'ಸಲಾರ್' ಇಷ್ಟವಾಗಲಿಲ್ಲ. ಅತಿಯಾದ ಬಿಲ್ಡಪ್ ಎಂದುಬಿಟ್ಟರು. ಅಗಸ್ತ್ಯ ಪಾತ್ರದಂತೆ ದೇವನ ಪಾತ್ರ ಇಷ್ಟವಾಗಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇನ್ನು 'ಸಲಾರ್' ಬಿಡುಗಡೆ ದಿನ ದುರಂತ ಸಂಭವಿಸಿತ್ತು. ಆಂಧ್ರದ ಧರ್ಮಾವರಂನಲ್ಲಿ ವಿದ್ಯುತ್ ಶಾಕ್ ತಗುಲಿ ಪ್ರಭಾಸ್ ಅಭಿಮಾನಿಯೊಬ್ಬರು ಪ್ರಾಣ ಬಿಟ್ಟಿದ್ದರು.
'ಸಲಾರ್' ಚಿತ್ರದ ಫ್ಲೆಕ್ಸ್ ಮಾಡಿಸಲಾಗಿತ್ತು. ಆ ಫ್ಲೆಕ್ಸ್‌ನ ಕಬ್ಬಿಣದ ಫ್ರೇಮ್ ವಿದ್ಯುತ್ ತಂತಿಗೆ ತಗುಲಿ ಬಾಲರಾಜ್ ಎಂಬ ಯುವಕ ಸಾವನ್ನಪ್ಪಿದರೆ ಗಜೇಂದ್ರ ಎಂಬ ಮತ್ತೊಬ್ಬ ಗಾಯಗೊಂಡಿದ್ದನು. ಸಿನಿಮಾ ಬಿಡುಗಡೆ ಸಂಭ್ರಮಾಚರಣೆ ಸಮಯದಲ್ಲಿ ಪ್ರಭಾಸ್ ಅಭಿಮಾನಿಗಳ ಸಾವು ಬೇಸರ ತಂದಿತ್ತು. ನಾಲ್ವರು ಯುವಕರು ಅಪಘಾತದಿಂದ ಪಾರಾಗಿದ್ದರು.
ಒಟ್ಟಾರೆ 'ಸಲಾರ್' ಸಿನಿಮಾ ರೀ-ರಿಲೀಸ್ ಪ್ರಭಾಸ್ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ಕರ್ನಾಟಕದಲ್ಲಿ ಕೂಡ ಆಕ್ಷನ್ ಥ್ರಿಲ್ಲರ್ ರೀ-ರಿಲೀಸ್ ಆಗ್ತಿದೆ. ಕನ್ನಡ ವರ್ಷನ್ ನಗರದ ಪ್ರಸನ್ನ ಹಾಗೂ ವೈಷ್ಣವಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ತೆಲುಗು ವರ್ಷನ್ ಸಾಕಷ್ಟು ಕಡೆಗಳಲ್ಲಿ ತೆಗೆಗಪ್ಪಳಿಸುತ್ತಿದೆ. ಈಗಾಗಲೇ ಕೆಲವರು ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ಕೂಡ 'ಸಲಾರ್' ದರ್ಬಾರ್ ಶುರುವಾಗಲಿದೆ.
ಪ್ರಭಾಸ್ ಅಭಿಮಾನಿಗಳು 'ಸಲಾರ್' ಸೀಕ್ವೆಲ್ ನೋಡಲು ಬಹಳ ಉತ್ಸುಕರಾಗಿದ್ದಾರೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ 'ಸಲಾರ್'-2 ಶೌರ್ಯಾಂಗ ಪರ್ವ ಸಿನಿಮಾ ಮೂಡಿ ಬರಲಿದೆ. ಆದರೆ ಯಾವಾಗ ಎನ್ನುವುದು ಗ್ಯಾರಂಟಿ ಇಲ್ಲ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅದನ್ನೆಲ್ಲಾ ಮುಗಿಸಿ ಮತ್ತೆ ಜೊತೆಯಾಗಬೇಕಿದೆ. ಹೊಂಬಾಳೆ ಸಂಸ್ಥೆ ಜೊತೆ 3 ಚಿತ್ರಗಳಿಂದ ಪ್ರಭಾಸ್ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಲ್ಲಿ 'ಸಲಾರ್'-2 ಕೂಡ ಒಂದು.
ಜ್ಯೂ. ಎನ್‌ಟಿಆರ್ ನಟನೆಯ ಚಿತ್ರವನ್ನು ನೀಲ್ ಇತ್ತೀಚೆಗೆ ಆರಂಭಿಸಿದ್ದಾರೆ. ಆ ಸಿನಿಮಾ ಮುಗಿಯಲು ಕನಿಷ್ಠ 1 ವರ್ಷ ಬೇಕು. ಮತ್ತೊಂದು ಕಡೆ 'ರಾಜಾಸಾಬ್' ಹಾಗೂ 'ಫೌಜಿ' ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನಲ್ಲಿ 'ಸ್ಪಿರಿಟ್' ಸಿನಿಮಾ ಶುರುವಾಗಬೇಕಿದೆ. ಇದೆಲ್ಲದರ ನಡುವೆ 'ಸಲಾರ್-2' ಯಾವಾಗ ಎನ್ನುವುದು ಯಾರಿಗೂ ಗೊತ್ತಿಲ್ಲ. ಶೌರ್ಯಾಂಗ ಪರ್ವ ನೋಡಲು ಕನಿಷ್ಠ ಪಕ್ಷ 3 ವರ್ಷ ಆದರೂ ಕಾಯಬೇಕು ಎನ್ನುವ ಮಾತುಗಳು ಕೇಳಿಬರ್ತಿದೆ.


Click it and Unblock the Notifications











