ಸ್ವಿಗ್ಗಿ ಜೊತೆ ಜಗಳ ಮಾಡಿದ ಪ್ರಭಾಸ್ ಸಹೋದರಿ ಪ್ರಸೀದಾ ಉಪ್ಪಲಪಟ್ಟಿ
ನಟ ಪ್ರಭಾಸ್ ಭಾರತದ ನಂಬರ್ 1 ಸ್ಟಾರ್ ನಟರಲ್ಲಿ ಒಬ್ಬರು. ನಿರ್ಮಾಪಕ ಸೂರ್ಯ ನಾರಾಯಣ ರಾಜು ಪುತ್ರರಾಗಿರುವ ಪ್ರಭಾಸ್‌ರದ್ದು ಮೊದಲಿನಿಂದಲೂ ಸಿನಿಮಾ ಕುಟುಂಬವಲ್ಲ. ಪ್ರಭಾಸ್‌ರ ದೊಡ್ಡಪ್ಪ ಕೃಷ್ಣಂ ರಾಜು ನಟರಾದ ಬಳಿಕ ಉಪ್ಪಲಪಟ್ಟಿ ಕುಟುಂಬಕ್ಕೆ ಸಿನಿಮಾ ರಂಗಕ್ಕೆ ಪ್ರವೇಶ ಸಿಕ್ಕಿದ್ದು.
ಪ್ರಭಾಸ್, ತಮ್ಮ ದೊಡ್ಡಪ್ಪ ಕೃಷ್ಣರಾಜು ಅವರ ಬಗ್ಗೆ ವಿಶೇಷ ಗೌರವ ಪ್ರೀತಿಯುಳ್ಳವರು. ಪ್ರಭಾಸ್ ನಟಿಸಿರುವ ಕೆಲವು ಸಿನಿಮಾಗಳಲ್ಲಿ ಕೃಷ್ಣಂರಾಜು, ಪ್ರಭಾಸ್‌ರ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. 'ಬಿಲ್ಲಾ', 'ರಾಧೆ-ಶ್ಯಾಮ್', 'ಮಿರ್ಚಿ' ಇನ್ನೂ ಕೆಲವು ಸಿನಿಮಾಗಳಲ್ಲಿ ಕೃಷ್ಣಂ ರಾಜು ಹಾಗೂ ಪ್ರಭಾಸ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಕೃಷ್ಣಂ ರಾಜು ಪುತ್ರಿ ಪ್ರಸೀದಾ, ಪ್ರಭಾಸ್‌ಗೆ ಸಹೋದರಿ. ನಿರ್ಮಾಪಕಿಯಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರಸೀದಾ, ಇದೀಗ ಸ್ವಿಗ್ಗಿಯೊಂದಿಗೆ ತಕರಾರು ಮಾಡಿಕೊಂಡಿದ್ದಾರೆ. ಆದರೆ ಈ ತಕರಾರನ್ನು ನೆಟ್ಟಿಗರು 'ಕ್ಷುಲ್ಲಕ' ಎಂದು ಕರೆದಿದ್ದಾರೆ.
ಬ್ಯುಸಿ ಜೀವನ ಶೈಲಿಯ ನಡುವೆ ಅಡುಗೆ ತಯಾರಿಸಿಕೊಳ್ಳಲು ಸಮಯ ಇಲ್ಲದವರಿಗೆ ಸ್ವಿಗ್ಗಿ, ಜೊಮ್ಯಾಟೊ ಇನ್ನತರೆ ಫೂಡ್ ಡೆಲಿವರಿ ಅಪ್ಲಿಕೇಶನ್‌ಗಳು ನೆರವಾಗುತ್ತಿವೆ. ಅಂತೆಯೇ ಬ್ಯುಸಿ ನಿರ್ಮಾಪಕಿ ಪ್ರಸೀದಾ ಉಪ್ಪಲಪಲ್ಲಿ ಸಹ ಮೊನ್ನೆ ಹೀಗೆ ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡಿ, ಕಾಯುತ್ತಾ ಕೂತಿದ್ದಾರೆ.
ನೆಚ್ಚಿನ ಊಟ ಆರ್ಡರ್ ಮಾಡಿ ನಿರೀಕ್ಷಿಸುತ್ತಿದ್ದ ಪ್ರಸೀದಾಗೆ ನಿರಾಸೆಯಾಗಿದೆ. ತಾವು ಆರ್ಡರ್ ಮಾಡಿದ ಊಟದ ಬದಲು ಬೇರೆಯ ಊಟವನ್ನು ಸ್ವಿಗ್ಗಿ ಡೆಲಿವರಿ ಮಾಡಿದೆ. ನಿರಾಸೆಯಾದ ಪ್ರಸೀದಾ, ಸ್ವಿಗ್ಗಿಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಆದರೆ ಸ್ವಿಗ್ಗಿಯಿಂದ ಸೂಕ್ತ ಉತ್ತರ ಬಂದಿಲ್ಲ. ಇದು ಪ್ರಸೀದಾಗೆ ಇನ್ನಷ್ಟು ಬೇಸರ ತರಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿದ್ದಾರೆ.

ಸ್ವಿಗ್ಗಿಯಿಂದ ಬಹಳ ಕೆಟ್ಟ ಅನುಭವ ಆಗಿದೆ: ಪ್ರಸೀದಾ
''ಸ್ವಿಗ್ಗಿಯಿಂದ ಬಹಳ ಕೆಟ್ಟ ಅನುಭವ ಆಗಿದೆ. ಆರ್ಡರ್ ಮಾಡಿದ ಆಹಾರ ಬಿಟ್ಟು ಬೇರೆ ಏನೋ ಡೆಲಿವರಿ ಮಾಡಿದ್ದಾರೆ. ದೂರು ನೀಡಿದರೆ, 'ನಾವೇಲೂ ಮಾಡಲಾಗಲ್ಲ' ಎಂಬ ಬೇಜವಾಬ್ದಾರಿ ಉತ್ತರ ಕೊಡ್ತಾರೆ. ಅವರು ತಮ್ಮ ಕೆಲವನ್ನು ಸರಿಯಾಗಿ ಮಾಡಿ, ಕ್ವಾಲಿಟಿ ಕಂಟ್ರೋಲ್ ವಿಭಾಗ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಗ್ರಾಹಕರು ಇಂಥಹಾ ಸಮಸ್ಯೆ ಅನುಭವಿಸಬೇಕಾಗಿ ಬರುವುದಿಲ್ಲ'' ಎಂದಿದ್ದಾರೆ.

ತಪ್ಪು ಆರ್ಡರ್, ಲೇಟ್ ಆರ್ಡರ್ ಪಡೆದಿದ್ದೇನೆ: ಪ್ರಸೀದಾ
ಮುಂದುವರೆದು, ''ಬಹಳಷ್ಟು ತಪ್ಪು ಆರ್ಡರ್‌ಗಳು, ಲೇಟ್ ಡೆಲಿವರಿಗಳನ್ನು ನಾನು ಪಡೆದುಕೊಂಡಿದ್ದೇನೆ. ದೂರು ನೀಡಿದರೆ ಗ್ರಾಹಕರದ್ದೇ ತಪ್ಪು ಎನ್ನುವ ರೀತಿ ಮಾತನಾಡುತ್ತಾರೆ. ಕೂಡಲೇ ಈ ಅತಿ ಕೆಟ್ಟ ಅಪ್ಲಿಕೇಶನ್ ಅನ್ನು, ಸರ್ವೀಸ್ ಅನ್ನು ಡಿಲೀಟ್ ಮಾಡುತ್ತಿದ್ದೇನೆ. ಭಾರತದ ದೊಡ್ಡ ಫೂಡ್ ಡೆಲಿವರಿ ಅಪ್ಲಿಕೇಶನ್ ಆಗಿರುವ ಸ್ವಿಗ್ಗಿ ತನ್ನ ಗ್ರಾಹಕರಿಗೆ ಮೊದಲ ಆದ್ಯತೆ ನೀಡುವುದು ಅದರ ಕರ್ತವ್ಯವಾಗಬೇಕಿತ್ತು'' ಎಂದಿದ್ದಾರೆ ಪ್ರಸೀದಾ.

''ತಮ್ಮ ತಪ್ಪಿಗೆ ನಮ್ಮನ್ನು ಹೊಣೆ ಮಾಡುತ್ತಿದೆ ಸ್ವಿಗ್ಗಿ''
''ಗ್ರಾಹಕರಿಗೆ ಸರಿಯಾದ ಸಮಯಕ್ಕೆ, ಸರಿಯಾದ ಆಹಾರ ಸೇರುವಂತೆ ನೋಡಿಕೊಳ್ಳುವುದು ಸ್ವಿಗ್ಗಿನ ಕರ್ತವ್ಯ ಆಗಬೇಕಿತ್ತು. ಅದರೆ ಅವರು ತಮ್ಮ ತಪ್ಪಿಗೆ ಗ್ರಾಹಕರನ್ನು ಹೊಣೆ ಮಾಡುತ್ತಿದ್ದಾರೆ. ನಾನು ಸಮಸ್ಯೆಯನ್ನು ಸಾಮಾನ್ಯೀಕರಣಗೊಳಿಸುತ್ತಿಲ್ಲ. ಆದರೆ, ಸೇವೆಯೊಂದರ ಮೇಲೆ ದಿನನಿತ್ಯವೂ ಡಿಪೆಂಡ್ ಆಗಿದ್ದಾಗ, ಆ ಸೇವೆ ನೀಡುವವರು ತಮ್ಮ ತಪ್ಪಿಗೆ ನಮ್ಮನ್ನು ಹೊಣೆಗಾರರನ್ನಾಗಿ ಮಾಡಿದರೆ ಹೇಗನ್ನಿಸುತ್ತದೆ ಯೋಚಿಸಿ'' ಎಂದಿದ್ದಾರೆ ಪ್ರಸೀದಾ.

ಪ್ರಸೀದಾಗೆ ಟ್ವೀಟ್ ಮಾಡಿದ ಸ್ವಿಗ್ಗಿ
''ಪುಣ್ಯಕ್ಕೆ ಸ್ವಿಗ್ಗಿ ಮಾದರಿಯಲ್ಲೇ ಫೂಡ್ ಡೆಲಿವರಿ ಮಾಡುವ ಇನ್ನೊಂದು ಅಪ್ಲಿಕೇಶನ್ ಭಾರತದಲ್ಲಿ ಕೆಲಸ ಮಾಡುತ್ತಿದೆ. ಇನ್ನೆಂದೂ ನಾನು ಸ್ವಿಗ್ಗಿಯನ್ನು ಬಳಸುವ ಅವಶ್ಯಕತೆ ಇಲ್ಲ. ಬಳಸುವುದೂ ಇಲ್ಲ'' ಎಂದಿದ್ದಾರೆ ಪ್ರಸೀದಾ. ನಿರ್ಮಾಪಕಿ ಪ್ರಸೀದಾರ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅಲ್ಲದೆ, ಪ್ರಸೀದಾರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸ್ವಿಗ್ಗಿ, ''ನಿಮಗೆ ತಪ್ಪಾದ ಊಟ ಸರಬರಾಜಿಗೆ ಎಂಬುದು ನಮಗೆ ಗೊತ್ತಾಗಿದೆ, ನೀವು ನಿರೀಕ್ಷಿಸಿದ ಮಟ್ಟಿಗೆ ನಮ್ಮಿಂದ ಸೇವೆಯೂ ನಿಮಗೆ ದೊರಕಿಲ್ಲ, ನಮಗೆ ನಿಮ್ಮ ಕಸ್ಟಮರ್ ಐಡಿ ನೀಡಿ, ನಿಮ್ಮ ಸಮಸ್ಯೆಯನ್ನು ಸರಿ ಮಾಡಿ, ನಮ್ಮ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳುತ್ತೇವೆ'' ಎಂದಿದೆ.


Click it and Unblock the Notifications











