ಅಬ್ಬಬ್ಬಾ..'ಆದಿಪುರುಷ್' ಆಂಧ್ರ- ತೆಲಂಗಾಣ ರೈಟ್ಸ್ 180 ಕೋಟಿ ರೂ.ಗೆ ಮಾರಾಟ: ದಾಖಲೆಗಳ ಪರ್ವ ಶುರು
ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಬಿಡುಗಡೆಗೆ 15 ದಿನ ಮಾತ್ರ ಬಾಕಿಯಿದೆ. ಈ ನಡುವೆ ಚಿತ್ರದ ಬ್ಯುಸಿನೆಸ್ ಶುರುವಾಗಿದೆ. ಕೋಟಿ ಕೋಟಿ ಕೊಟ್ಟು ವಿತರಕರು ಸಿನಿಮಾ ರೈಟ್ಸ್ ಖರೀದಿಸುತ್ತಿದ್ದಾರೆ. ರಾಮಾಯಣ ಕಾವ್ಯ ಆಧರಿಸಿದ ಸಿನಿಮಾ ಆಗಿರುವುದರಿಂದ ಕ್ರೇಜ್ ಜೋರಾಗಿದೆ. ಟೀಸರ್ ನಿರಾಸೆ ಮೂಡಿಸಿದರೂ ಟ್ರೈಲರ್ ಸೂಪರ್ ಹಿಟ್ ಆಗಿದೆ.
ಓಂ ರಾವುತ್ ನಿರ್ದೇಶನದ ಈ ಪೌರಾಣಿಕ ಕಥಾಹಂದರ ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದಾರೆ. ಸೀತೆಯಾಗಿ ಕೃತಿ ಸನೂನ್, ರಾವಣನಾಗಿ ಸೈಫ್ ಅಲಿಖಾನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಅಂದಾಜು 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಇವತ್ತಿನ ತಂತ್ರಜ್ಞಾನ ಬಳಸಿ ಬಹಳ ರೋಚಕವಾಗಿ 'ಆದಿಪುರುಷ್' ಸಿನಿಮಾ ಕಟ್ಟಿಕೊಡಲಾಗಿದೆ. ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿರುವುದು ಸುಳ್ಳಲ್ಲ.

ಟೀ ಸೀರಿಸ್ ಹಾಗೂ ರೆಟ್ರೊಫೀಲ್ಸ್ ಸಂಸ್ಥೆಗಳು ಜಂಟಿಯಾಗಿ 'ಆದಿಪುರುಷ್' ಸಿನಿಮಾ ನಿರ್ಮಾಣ ಮಾಡಿವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಟೀಸರ್ ಬಗ್ಗೆ ಸಾಕಷ್ಟು ಟೀಕೆ ಎದುರಾದ ಕಾರಣ ಸಿನಿಮಾ ಮೇಲೆ ರೀ ವರ್ಕ್ ಮಾಡಲಾಗಿತ್ತು. ಅದಕ್ಕಾಗಿ 6 ತಿಂಗಳು ಹೆಚ್ಚಿನ ಸಮಯವನ್ನು ಚಿತ್ರತಂಡ ತೆಗೆದುಕೊಂಡಿತ್ತು. ಜೂನ್ 16ಕ್ಕೆ ಸಿನಿಮಾ ತೆರೆಗಪ್ಪಳಿಸೋದು ಪಕ್ಕಾ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

ಭರ್ಜರಿ ಪ್ರೀ ರಿಲೀಸ್ ಬ್ಯುಸಿನೆಸ್
ಪ್ರಭಾಸ್ ಕ್ರೇಜ್‌ಗೆ ತಕ್ಕಂತೆ 'ಆದಿಪುರುಷ್' ಸಿನಿಮಾ ಭರ್ಜರಿ ಬ್ಯುಸಿನೆಸ್ ಶುರು ಮಾಡಿದೆ. ದೊಡ್ಡ ಮೊತ್ತಕ್ಕೆ ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಮಾರಾಟವಾಗುತ್ತಿದೆ. ಬರೀ ಆಂಧ್ರ, ತೆಲಂಗಾಣದ ರೈಟ್ಸ್ ಬರೋಬ್ಬರಿ 180 ಕೋಟಿ ರೂ.ಗೆ ಬಿಕರಿಯಾಗಿರುವ ಮಾತುಗಳು ಕೇಳಿಬರ್ತಿದೆ. ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಈ ಭಾರೀ ಡೀಲ್ ಕುದುರಿಸಿಕೊಂಡಿದೆ. ಈ ಹಿಂದೆ ಯುವ ಕ್ರಿಯೇಷನ್ಸ್ ಸಂಸ್ಥೆ ರೈಟ್ಸ್ ಖರೀದಿಸುತ್ತದೆ ಎಂದು ಹೇಳಲಾಗಿತ್ತು. ಆದರೆ ಈಗ ಡೀಲ್ ಮತ್ತೊಬ್ಬರ ಪಾಲಾಗಿದೆ.
ನೈಜಾ ರೈಟ್ಸ್ 80 ಕೋಟಿ ರೂ.
ತೆಲುಗು ರಾಜ್ಯಗಳಲ್ಲಿ ನೈಜಾಂ ಏರಿಯಾ ದೊಡ್ಡಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ತಂದು ಕೊಡುತ್ತದೆ. ಒಟ್ಟು 180 ಕೋಟಿ ರೂ. ರೈಟ್ಸ್‌ನಲ್ಲಿ ನೈಜಾ ರೈಟ್ಸ್ 80 ಕೋಟಿ ರೂ. ಮಾರಾಟವಾಗಿದೆಯಂತೆ. ಇನ್ನುಳಿದಂತೆ ಈಸ್ಟ್ ಗೋದಾವರಿ 15 ಕೋಟಿ ರೂ. ಸೀಡೆಡ್ ರೈಟ್ಸ್ 14 ಕೋಟಿ ರೂ.ಗೆ ಮಾರಾಟವಾಗಿರುವುದಾಗಿ ಹೇಳಲಾಗುತ್ತಿದೆ. ಹೆಚ್ಚು ಸ್ಕ್ರೀನ್‌ಗಳಲ್ಲಿ 'ಆದಿಪುರುಷ್' ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಲಾಗುತ್ತಿದೆ. ತ್ರೀಡಿಯಲ್ಲಿ ರಾಮಾಯಣ ಕಾವ್ಯ ಮತ್ತಷ್ಟು ಥ್ರಿಲ್ ಕೊಡುವ ನಿರೀಕ್ಷೆಯಿದೆ.
ಎಎ ಫಿಲ್ಮ್ಸ್‌ಗೆ ಹಿಂದಿ ರೈಟ್ಸ್
ಕೆಜಿಎಫ್ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ರಿಲೀಸ್ ಮಾಡುತ್ತಿರುವ ಎಎ ಫಿಲ್ಮ್ಸ್ ಸಂಸ್ಥೆ ಚಿತ್ರದ ಹಿಂದಿ ರೈಟ್ಸ್ ಕೊಂಡುಕೊಂಡಿದೆ. ಭಾರೀ ಮೊತ್ತಕ್ಕೆ ಈ ಡೀಲ್ ಕೂಡ ಕುದುರಿಸಿರುವ ಮಾತುಗಳು ಕೇಳಿಬರ್ತಿದೆ. 'ಬಾಹುಬಲಿ' ಚಿತ್ರದಿಂದ ಉತ್ತರ ಭಾರತದಲ್ಲೂ ಯಂಗ್ ರೆಬಲ್ ಸ್ಟಾರ್ ಕ್ರೇಜ್ ಹೆಚ್ಚಾಗಿದೆ. 'ಬಾಹುಬಲಿ' ನಂತರ ಬಂದ ಪ್ರಭಾಸ್ ಸಿನಿಮಾಗಳು ಹಿಂದಿ ಬೆಲ್ಟ್‌ನಲ್ಲಿ ಒಳ್ಳೆ ಬ್ಯುಸಿನೆಸ್ ಮಾಡಿತ್ತು. ಹಾಗಾಗಿ ಈ ಸಿನಿಮಾ ಕೂಡ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಕ್ತಿದೆ.
ಜೂನ್ 6ಕ್ಕೆ ಪ್ರೀ ರಿಲೀಸ್ ಈವೆಂಟ್
ತಿರುಪತಿಯಲ್ಲಿ 'ಆದಿಪುರುಷ್' ಸಿನಿಮಾ ಪ್ರೀ ರಿಲೀಸ್ ಪ್ಲ್ಯಾನ್ ನಡೀತಿದೆ. ವಿಶಾಲವಾದ ಮೈದಾನದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಚಿತ್ರತಂಡದ ಜೊತೆಗೆ ಟಾಲಿವುಡ್ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ. ಜೂನ್ 16ಕ್ಕೆ 'ಆದಿಪುರುಷ್' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ.


Click it and Unblock the Notifications











