Kalki 2898 AD Runtime: ಸ್ವಲ್ಪ ಯಾಮಾರಿದ್ರೂ ಕಷ್ಟ ಕಷ್ಟ
ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಅದ್ಧೂರಿ ಸಿನಿಮಾ 'ಕಲ್ಕಿ 2898 AD'. ನಾಗ್ ಅಶ್ವಿನ್ ನಿರ್ದೇಶನದ ಈ ಸೈನ್ಸ್ ಫಿಕ್ಷನ್ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಈಗಾಗಲೇ ಚಿತ್ರತಂಡ ಪ್ರಚಾರ ಆರಂಭಿಸಿದೆ. ಬುಜ್ಜಿ ಕಾರ್ ದೇಶ ಪರ್ಯಟನೆ ಆರಂಭಿಸಿದೆ. ಮತ್ತಷ್ಟು ದೊಡ್ಡ ಪ್ರಮೋಷನ್ ಪ್ಲ್ಯಾನ್ ಮಾಡಲಾಗುತ್ತಿದೆ.
ಜೂನ್ 27ಕ್ಕೆ 'ಕಲ್ಕಿ 2898 AD' ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಸಣ್ಣ ಸಣ್ಣ ಗ್ಲಿಂಪ್ಸ್ ಹೊರ ಬಂದು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. 'ಮಹಾನಟಿ' ರೀತಿಯ ಕ್ಲಾಸಿಕ್ ಸಿನಿಮಾ ಕಟ್ಟಿಕೊಟ್ಟ ನಾಗ್ ಅಶ್ವಿನ್ ಮೇಲೆ ಈ ಬಾರಿ ಒತ್ತಡವಿದೆ. ಅದನ್ನೆಲ್ಲಾ ಮೀರಿ ಅದ್ಭುತ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೆದಿದೆ. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ದಿಶಾ ಪಟಾನಿ ಚಿತ್ರದ ತಾರಾಗಣದಲ್ಲಿದ್ದಾರೆ.

ಕಮಲ್ ಹಾಸನ್ ಸಹ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ಪುರಾಣ ಹಾಗೂ ಭವಿಷ್ಯದಲ್ಲಿ ಏನಾಗಬಹುದು ಎನ್ನುವುದನ್ನು ಕಲ್ಪಿಸಿಕೊಂಡು ನಾಗ್ ಅಶ್ವಿನ್ 'ಕಲ್ಕಿ 2898 AD' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ 6000 ವರ್ಷಗಳ ನಡುವಿನ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಮಹಾಭಾರತದ ಪ್ರಸ್ತಾಪ ಕೂಡ ಬರಲಿದೆ.
ಚಿತ್ರದಲ್ಲಿ ಭೈರವ ಎನ್ನುವ ಪಾತ್ರದಲ್ಲಿ ಪ್ರಭಾಸ್ ಬಣ್ಣ ಹಚ್ಚಿದ್ದಾರೆ. ಇಂಗ್ಲೀಷ್‌ನಲ್ಲಿ ಕೂಡ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಚಿತ್ರವನ್ನು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ತರುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ. ಈಗಾಗಲೇ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಚಿತ್ರದಲ್ಲಿ ಭೈರವ ಪಾತ್ರಧಾರಿ ಪ್ರಭಾಸ್ ಜೊತೆ ಒಂದು ಪುಟ್ಟ ರೋಬೊ ಬುಜ್ಜಿ ಪಾತ್ರವೂ ಇದೆ. ಅದಕ್ಕೆ ಒಂದು ಕಾರ್ ಮಾದರಿಯ ವಾಹನವೂ ಇದೆ.
ಬಹಳ ವಿಭಿನ್ನವಾಗಿ 3 ಚಕ್ರಗಳ ಈ ವಿಶೇಷ ವಾಹನವನ್ನು ಚಿತ್ರತಂಡ ಡಿಸೈನ್ ಮಾಡಿದೆ. ಅದಕ್ಕಾಗಿ ಭಾರೀ ಮೊತ್ತವನ್ನೇ ವ್ಯಯಿಸಿದೆ. ಆ ವಾಹನವನ್ನು ಚಿತ್ರದ ಪ್ರಚಾರಕ್ಕ ಬಳಸಲಾಗುತ್ತಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿ ಬುಜ್ಜಿ ಪರಿಚಯ ಮಾಡಿಕೊಡಲಾಗಿತ್ತು. ಹೈದರಾಬಾದ್ ಬಳಿಕ ಚೆನ್ನೈಗೆ ಬುಜ್ಜಿ ಕಾರು ಪ್ರಯಾಣ ಬೆಳೆಸಿತ್ತು.

ಬೆಂಗಳೂರಿಗೂ ಬುಜ್ಜಿ ವಾಹನ ಬರಲಿದೆ. ಇನ್ನು 'ಕಲ್ಕಿ 2898 AD' ಚಿತ್ರದ ರನ್‌ಟೈಮ್ ರಿವೀಲ್ ಆಗಿದೆ. 2 ಗಂಟೆ 50 ನಿಮಿಷಗಳ ಸುದೀರ್ಘ ಸಿನಿಮಾ ಇದು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳ ಕಾಲಾವಧಿ ಹೆಚ್ಚಾಗುತ್ತಿದೆ. ಚಿತ್ರದಲ್ಲಿ ಧಮ್ ಇದ್ದರೆ 2 ಗಂಟೆ ಅಲ್ಲ 3 ಗಂಟೆ ಕೂಡ ಪ್ರೇಕ್ಷಕರು ಸಿನಿಮಾ ನೋಡಿ ಎಂಜಾಯ್ ಮಾಡುತ್ತಾರೆ ಎನ್ನುವ ಲೆಕ್ಕಾಚಾರ ನಡೀತಿದೆ.
ರನ್‌ಟೈಮ್ ಕಾರಣಕ್ಕೆ ಸಿನಿಮಾಗಳು ಲ್ಯಾಗ್ ಎನಿಸಿ ನಿರಾಸೆ ಮೂಡಿಸುವ ಸಾಧ್ಯತೆಗಳು ಇವೆ. ಅದೇ ಕಾರಣಕ್ಕೆ ರನ್‌ಟೈಮ್ ಬಗ್ಗೆ ಇತ್ತೀಚೆಗೆ ಚರ್ಚೆ ಹೆಚ್ಚಾಗುತ್ತಿದೆ. ಬಹಳ ಚಿಕ್ಕದಾಗಿ, ಚೊಕ್ಕವಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಸಿನಿಮಾಗಳು ಇರಬೇಕು. ಸಿನಿಮಾಗಳನ್ನು ಟ್ರಿಮ್ ಮಾಡಲು ನಿರ್ದೇಶಕರು, ಸಂಕಲನಕಾರರು ನಡೆಸುವ ಕಸರತ್ತು ಅಷ್ಟಿಷ್ಟಲ್ಲ. ಆದರೂ ಕೆಲವೊಮ್ಮೆ ಸಿನಿಮಾಗಳು ಬಹಳ ದೊಡ್ಡದಾಗಿಬಿಡುತ್ತವೆ. ಕಳೆದ ವರ್ಷ ಬಾಲಿವುಡ್‌ನಲ್ಲಿ ಸೂಪರ್ ಹಿಟ್ ಆಗಿದ್ದ 'ಅನಿಮಲ್' ಸಿನಿಮಾ ರನ್‌ಟೈಮ್ 3 ಗಂಟೆ 21 ನಿಮಿಷಗಳಷ್ಟಿತ್ತು.
ಅದ್ಯಾಕೋ 'ಕಲ್ಕಿ 2898 AD' ಸಿನಿಮಾ ಹೈಪ್ ಕಮ್ಮಿಯಿದೆ ಎನ್ನುವ ಚರ್ಚೆ ಶುರುವಾಗಿದೆ. ಪ್ರಭಾಸ್ ನಟನೆಯ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾ ಮೇಲಿನ ನಿರೀಕ್ಷೆ ಕೊಂಚ ಕಮ್ಮಿಯಿದೆ. ಬುಜ್ಜಿ ಕಾರ್ ಪ್ರಚಾರ ನಡೆಸಿದರೂ ಪ್ರಯೋಜನವಾಗುತ್ತಿಲ್ಲ. ಇನ್ನು ಸಿನಿಮಾ ಬಿಡುಗಡೆಗೆ 25 ದಿನಗಳು ಮಾತ್ರ ಬಾಕಿಯಿದ್ದು ಮುಂದೆ ಏನಾಗುತ್ತದೆ? ಎನ್ನುವುದನ್ನು ಕಾದುನೋಡಬೇಕಿದೆ.


Click it and Unblock the Notifications











