ಮತ್ತೆ 'ಕಲ್ಕಿ 2898AD' ಬಿಡುಗಡೆ ಮುಂದಕ್ಕೆ!; ಪ್ರಭಾಸ್ ಅಭಿಮಾನಿಗಳಿಗೆ ಬೇಸರ
ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಪ್ಯಾನ್ ವರ್ಲ್ಡ್ ಸಿನಿಮಾ 'ಕಲ್ಕಿ 2898AD' ಭಾರೀ ನಿರೀಕ್ಷೆ ಮೂಡಿಸಿದೆ. ಮೇ 9ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಿಸಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವನ್ನು ಅಶ್ವಿನಿ ದತ್ ನಿರ್ಮಾಣ ಮಾಡುತ್ತಿದ್ದಾರೆ.
ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾನಿ ಸೇರಿದಂತೆ ಘಟಾನುಘಟಿ ಕಲಾವಿದರು 'ಕಲ್ಕಿ 2898AD' ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಮಹಾನಟಿ' ಸಿನಿಮಾ ಮಾಡಿ ಗೆದ್ದಿದ್ದ ನಾಗ್ ಅಶ್ವಿನ್ ಈ ಚಿತ್ರದ ಸಾರಥ್ಯ ವಹಿಸಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. 'ಕಲ್ಕಿ' ಭಾರತೀಯ ಚಿತ್ರರಂಗದಲ್ಲೇ ಅತಿ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಳ್ಳುತ್ತಿದೆ.

ಈಗಾಗಲೇ 'ಕಲ್ಕಿ 2898AD' ಚಿತ್ರದ ಪೋಸ್ಟರ್ಸ್, ಟೀಸರ್ ರಿಲೀಸ್ ಆಗಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದಲ್ಲಿ ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಪ್ರಭಾಸ್ ಅಬ್ಬರಿಸಲಿದ್ದಾರೆ. ಅಶ್ವತ್ಥಾಮನಾಗಿ ಅಮಿತಾಬ್ ಬಚ್ಚನ್, ಕಲಿಯಾಗಿ ಕಮಲ್ ಹಾಸನ್ ನಟಿಸುತ್ತಿದ್ದಾರೆ. ಈಗಾಗಲೇ ಹಾಲಿವುಡ್‌ನಲ್ಲಿ ಕೂಡ ಸಿನಿಮಾ ಪ್ರಚಾರ ಮಾಡುವ ಪ್ರಯತ್ನ ಮಾಡಿದೆ ಚಿತ್ರತಂಡ.
'ಕಲ್ಕಿ 2898AD' ಸಿನಿಮಾ ರಿಲೀಸ್ ಡೇಟ್ ಪದೇ ಪದೆ ಬದಲಾಗುತ್ತಲೇ ಇದೆ. ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರತಂಡ ಈ ನಿರ್ಧಾರಕ್ಕೆ ಮುಂದಾಗಿದೆ. ಸದ್ಯ ಲೋಕಸಭೆ ಚುನಾವಣೆ ವೇಳಾಪಟ್ಟಿ ಹೊರಬಿದ್ದಿದೆ. ಲೋಕಸಭಾ ಚುನಾವಣೆ ಮಾತ್ರವಲ್ಲದೇ 4 ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಕೂಡ ಘೋಷಣೆಯಾಗಿದೆ. ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಒಡಿಶಾ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.
ಚುನಾವಣೆ ಪ್ರಚಾರ, ಮತದಾನ, ಫಲಿತಾಂಶದ ಸಮಯದಲ್ಲಿ ಸಿನಿಮಾಗಳು ಬಿಡುಗಡೆಯಾದರೆ ಹಿನ್ನಡೆಯಾಗುತ್ತದೆ. ಇದೇ ಕಾರಣಕ್ಕೆ ಚುನಾವಣೆಗಳ ಸಮಯದಲ್ಲಿ ಸಿನಿಮಾ ಬಿಡುಗಡೆಗೆ ಹಿಂದೇಟು ಹಾಕುತ್ತಾರೆ. 'ಕಲ್ಕಿ 2898AD' ಸಿನಿಮಾ ಬಿಡುಗಡೆಯ ವಾರದಲ್ಲಿ ಕೂಡ ಚುನಾವಣೆ ಕಾವು ತಾರಕಕ್ಕೇರಲಿದೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವನ್ನು ಈ ಸಂದರ್ಭದಲ್ಲಿ ತೆರೆಗೆ ತರುವುದು ಸರಿಯಲ್ಲ ಎನ್ನುವ ಚರ್ಚೆ ಶುರುವಾಗಿದೆ.
ಮೇ 9ರಂದು 'ಕಲ್ಕಿ 2898AD' ಸಿನಿಮಾ ಬಿಡುಗಡೆ ಆಗಬೇಕಿದೆ. ಆದರೆ ಮೇ 13ರಂದು ಕೂಡ ಕಲವೆಡೆ ಮತದಾನ ನಡೆಯಲಿದೆ. ಇಂತಹ ಸಮಯದಲ್ಲಿ ಸಿನಿಮಾ ತೆರೆಗಪ್ಪಳಿಸಿದರೆ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ ಎನ್ನುವ ಲೆಕ್ಕಾಚಾರ ನಡೀತಿದೆ. 2022 ರಲ್ಲೇ ಸನಿಮಾ ತೆರೆಗೆ ತರುವ ಪ್ರಯತ್ನ ನಡೆದಿತ್ತು. ಬಳಿಕ ಈ ವರ್ಷ ಜನವರಿಯಲ್ಲಿ ರಿಲೀಸ್ ಪ್ಲ್ಯಾನ್ ಮಾಡಲಾಗಿತ್ತು. ಬಳಿಕ ಮೇ 9ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೆ ಪೋಸ್ಟ್‌ಪೋನ್ ಎನ್ನುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ದೊಡ್ಡ ಬಜೆಟ್ ಸಿನಿಮಾಗಳನ್ನು ಲಾಂಗ್ ವೀಕೆಂಡ್ ಪ್ಲ್ಯಾನ್ ಮಾಡಿ ಬಿಡುಗಡೆ ಮಾಡುತ್ತಾರೆ. 'ಕಲ್ಕಿ 2898AD' ವಿಚಾರದಲ್ಲೂ ಅದೇ ಲೆಕ್ಕಾಚಾರ ನಡೆದಿತ್ತು. ಇದೀಗ ಮತ್ತೊಂದು ದಿನಾಂಕ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರುತ್ತಾ ಎನ್ನುವ ಕುತೂಹಲವೂ ಮೂಡಿದೆ. ಅದೇ ದಿನ ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ರಿಲೀಸ್ ಆಗುತ್ತಿದೆ.

ವಿಷ್ಣುಪುರಾಣ, ಕಲ್ಕಿ ಪುರಾಣ, ಭಾಗವತ ಪುರಾಣಗಳನ್ನು ಆಧರಿಸಿ 'ಕಲ್ಕಿ 2898AD' ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಸಂತೋಷ್ ನಾರಾಯಣ್ ಸಂಗೀತ, ಜೊರ್ಡ್ಜೆ ಸ್ಟೋಜಿಲ್ಕೋವಿಕ್ ಛಾಯಾಗ್ರಹಣ ಚಿತ್ರಕ್ಕಿದೆ. ಎಎ ಫಿಲ್ಮ್ಸ್ ಉತ್ತರ ಭಾರತದಲ್ಲಿ ಸಿನಿಮಾ ವಿತರಣೆ ಹಕ್ಕು ಖರೀದಿಸಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ.


Click it and Unblock the Notifications











