ಪ್ರಭಾಸ್ ಅಭಿಮಾನಿಗಳಿಗೆ ಈ ವರ್ಷವೂ ಭಾರಿ ನಿರಾಸೆ
ಟಾಲಿವುಡ್ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಯಾವಾಗ ತೆರೆಮೇಲೆ ಬರ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಕೊರೊನಾ 2ನೇ ಅಲೆ ಕಡಿಮೆಯಾಗುತ್ತಿದ್ದಂತೆ ಬಹುತೇಕ ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದೆ. ಪ್ರಭಾಸ್ ಸಿನಿಮಾ ಕೂಡ ಈ ವರ್ಷ ತೆರೆಗೆ ಬರಲಿದೆ ಎಂದು ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು.
ಆದರೆ ಅಭಿಮಾನಿಗಳಿಗೆ ಪ್ರಭಾಸ್ ಕಡೆಯಿಂದ ಭಾರಿ ನಿರಾಸೆಯಾಗಿದೆ. ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಸಿನಿಮಾ ಮುಂದಿನ ವರ್ಷ ತೆರೆಗೆ ಬರುವುದಾಗಿ ಅಧಿಕೃತವಾಗಿ ಅನೌನ್ಸ್ ಮಾಡಿದೆ ಸಿನಿಮಾತಂಡ. ಈ ವರ್ಷ ಪ್ರಭಾಸ್ ನನ್ನು ತೆರೆಮೇಲೆ ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ನಿರಾಸೆ ಮೂಡಿಸಿದೆ. ಮುಂದೆ ಓದಿ...

ಸಂಕ್ರಾಂತಿಗೆ 'ರಾಧೆ ಶ್ಯಾಮ್'
ಬಹುನಿರೀಕ್ಷೆಯ ರಾಧೆ ಶ್ಯಾಮ್ ಮುಂದಿನ ವರ್ಷ ಜನವರಿ 14 ಅಂದರೆ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ತೆಲುಗು ಸೇರಿದಂತೆ ರಾಧೆ ಶ್ಯಾಮ್ 5 ಭಾಷೆಯಲ್ಲಿ ಬರ್ತಿದೆ. ವಿಶೇಷ ಎಂದರೆ ಕನ್ನಡದಲ್ಲೂ ಪ್ರಭಾಸ್ ದರ್ಶನ ಆಗಲಿದೆ. ಸದ್ಯ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ರಿಲೀಸ್ ಡೇಟ್ ಬಹಿರಂಗ ಪಡಿಸಿದ್ದಾರೆ.

ರಾಧೆ ಶ್ಯಾಮ್ ಹೊಸ ಪೋಸ್ಟರ್ ಬಿಡುಗಡೆ
ಪೋಸ್ಟರ್ ನಲ್ಲಿ ಪ್ರಭಾಸ್ ಸೂಟ್ ಧರಿಸಿ ಸೂಟ್ ಕೇಸ್ ಹಿಡಿದು ಹೊರಟಿರದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಪೂಜಾ, ಪ್ರಭಾಸ್ ಜೊತೆ ತೆರೆಹಂಚಿಕೊಂಡಿದ್ದು, ಚಿತ್ರದ ಬಗ್ಗೆ ಸಖತ್ ಉತ್ಸುಕರಾಗಿದ್ದಾರೆ.

ಈ ವರ್ಷ ಇಲ್ಲ ಪ್ರಭಾಸ್ ದರ್ಶನ
ಪ್ರಭಾಸ್ ರಾಧೆ ಶ್ಯಾಮ್ ಜೊತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್, ಆದಿಪುರಷ್ ಮತ್ತು ಇನ್ನು ಹೆಸರಿಡದ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಯಾವ ಸಿನಿಮಾ ಕೂಡ ಈ ವರ್ಷ ತೆರೆಗೆ ಬರುವ ಸೂಚನೆ ಕಾಣುತ್ತಿಲ್ಲ. ಸದ್ಯ ಚಿತ್ರೀಕರಣ ಮುಗಿಸಿರುವುದು ರಾಧೆ ಶ್ಯಾಮ್ ಸಿನಿಮಾ ಮಾತ್ರ. ಉಳಿದ ಸಿನಿಮಾಗಳು ಇನ್ನು ಚಿತ್ರೀಕರಣ ಹಂತದಲ್ಲಿದೆ.

2019ರಲ್ಲಿ ಸಾಹೋ ಸಿನಿಮಾ ಬಿಡುಗಡೆ
ಪ್ರಭಾಸ್ ಕೊನೆಯದಾಗಿ ಸಾಹೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 2019ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿತ್ತಾದರೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಹಾಗಾಗಿ ಪ್ರಭಾಸ್ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಆದರೆ ಮುಂದಿನ ವರ್ಷ ಸಂಕ್ರಾಂತಿವರೆಗೂ ಕಾಯಲೇಬೇಕು.


Click it and Unblock the Notifications











