ಪ್ರಶಾಂತ್ ನೀಲ್- ನಾಗ್ ಅಶ್ವಿನ್ ಇಬ್ಬರ ಲೆಕ್ಕಾಚಾರವೂ ಒಂದೇ: ಆದರೆ ಪ್ರೇಕ್ಷಕರಿಗೆ ತಾಳ್ಮೆ ಇರಬೇಕಲ್ಲ ಸ್ವಾಮಿ!
'ಬಾಹುಬಲಿ' ಸರಣಿ ನಂತರ ಪ್ರಭಾಸ್ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಹಾಗಂತ ಡಾರ್ಲಿಂಗ್ ಕ್ರೇಜ್ ಕೂಡ ಕಮ್ಮಿ ಆಗಿಲ್ಲ. ಸಮಸ್ಯೆ ಏನು ಅಂದ್ರೆ, 'ಬಾಹುಬಲಿ'ಯನ್ನು ಮೀರಿಸುವಂತಹ ಸಿನಿಮಾ ಮಾಡುವಲ್ಲಿ ಪ್ರಭಾಸ್ ಸೋಲುತ್ತಿದ್ದಾರೆ.
ಪ್ರಭಾಸ್ ಈಗಾಗಲೇ 'ಆದಿಪುರುಷ್' ಶೂಟಿಂಗ್ ಮುಗಿಸಿದ್ದಾರೆ. ಪ್ರಾಜೆಕ್ಟ್- K ಚಿತ್ರಕ್ಕೂ ಕುಂಬಳಕಾಯಿ ಒಡೆದಿದ್ದಾರೆ ಎನ್ನಲಾಗ್ತಿದೆ. ಆದರೆ 'ಸಲಾರ್' ಶೂಟಿಂಗ್ ಮಾತ್ರ ಇನ್ನು ಬಾಕಿಯಿದೆ. ಮತ್ತೊಂದು ಕಡೆ ಪ್ರಭಾಸ್- ನೀಲ್ ಕಾಂಬಿನೇಷನ್‌ನಲ್ಲಿ ದಿಲ್ ರಾಜು ಸಿನಿಮಾ ಮಾಡ್ತೀನಿ ಎಂದಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ಪ್ರಭಾಸ್- ಹೃತಿಕ್ ರೋಷನ್ ನಟಿಸುವ ಚಿತ್ರಕ್ಕೆ ಸಿದ್ಧಾರ್ಥ್ ಆನಂದ್ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಇನ್ನು ಸದ್ದಿಲ್ಲದೇ ಮಾರುತಿ ನಿರ್ದೇಶನದಲ್ಲಿ ರಾಜಾ ಡೀಲಕ್ಸ್ ಸಿನಿಮಾ ಚಿತ್ರೀಕರಣ ನಡೀತಿದೆ.
ಅಬ್ಬಬ್ಬಾ ಪ್ರಭಾಸ್ ನಟಿಸ್ತಿರೋ ಸಿನಿಮಾ ಲಿಸ್ಟ್ ಕೇಳಿಯೇ ಅಭಿಮಾನಿಗಳು ಶಾಕ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಸಿನಿಮಾ ಅಂದಮೇಲೆ ಅದಕ್ಕೆ ತಕ್ಕ ಮೇಕಿಂಗ್, ಪ್ರಮೋಷನ್, ರಿಲೀಸ್ ಎಲ್ಲವೂ ಪ್ಲಾನ್ ಮಾಡಬೇಕು. ಇದನ್ನೆಲ್ಲಾ ನೋಡುತ್ತಿದ್ದರೆ ಪ್ರಭಾಸ್ ನಟಿಸ್ತಾರೆ ಎನ್ನಲಾಗುತ್ತಿರುವ ಈ ಸಿನಿಮಾಗಳೆಲ್ಲಾ ಯಾವ ಕಾಲಕ್ಕೆ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ

2 ಭಾಗಗಳಾಗಿ 'ಪ್ರಾಜೆಕ್ಟ್- K'
ಹೌದು ನಾಗ್ ಅಶ್ವಿನ್ ನಿರ್ದೇಶನದ 'ಪ್ರಾಜೆಕ್ಟ್- K' ಸಿನಿಮಾ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರುತ್ತೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಕೇಳಿಬರ್ತಿದೆ. 6 ವ್ಯಯಿಸಿ 'ಬಾಹುಬಲಿ' ಚಿತ್ರವನ್ನ 2 ಭಾಗಗಳಾಗಿ ತೆರೆಗೆ ತಂದು ಪ್ರಭಾಸ್ ಗೆದ್ದಿದ್ದರು. ಅದೇ ಹಾದಿಯಲ್ಲಿ ಈಗ ದೊಡ್ಡ ದೊಡ್ಡ ಸಿನಿಮಾಗಳು ಎರಡೆರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರ್ತಿವೆ. ಇದೀಗ 'ಪ್ರಾಜೆಕ್ಟ್- K' ಕೂಡ ಅದೇ ರೀತಿ ಮೂಡಿ ಬರುತ್ತೆ ಎನ್ನಲಾಗ್ತಿದೆ. ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಮುಗಿದಿದೆ ಎನ್ನಲಾಗ್ತಿದ್ದು ಮುಂದಿನ ವರ್ಷ ಸಮ್ಮರ್‌ನಲ್ಲಿ ಸಿನಿಮಾ ತೆರೆಗಪ್ಪಳಿಸುವ ಸಾಧ್ಯತೆಯಿದೆ.

ನಾಗ್ ಅಶ್ವಿನ್ ಡ್ರೀಮ್ ಪ್ರಾಜೆಕ್ಟ್
'ಮಹಾನಟಿ' ಸಿನಿಮಾ ಕಟ್ಟಿಕೊಟ್ಟು ಗೆದ್ದ ನಾಗ್ ಅಶ್ವಿನ್ ಕನಸಿನ ಸಿನಿಮಾ 'ಪ್ರಾಜೆಕ್ಟ್- K'. ಮುಖ್ಯಭೂಮಿಕೆಯಲ್ಲಿ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಕೂಡ ನಟಿಸ್ತಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನ 50ನೇ ಸಿನಿಮಾ ಇದು. ಬಜೆಟ್ ಲೆಕ್ಕ ಹಾಕದೇ ಕೇಳಿದ್ದನ್ನೆಲ್ಲಾ ಕೊಟ್ಟು ಸಿನಿಮಾ ಕಥೆಯನ್ನು ಕಟ್ಟಿಕೊಡುತ್ತಿದ್ದಾರೆ. 300, 400 ಕೋಟಿಗೂ ಅಧಿಕ ಬಜೆಟ್‌ನಲ್ಲಿ ಈ ಸಿನಿಮಾ ಮೂಡಿ ಬರ್ತಿದೆ. ಪ್ರಭಾಸ್ ಅಭಿಮಾನಿಗಳಂತೂ ಈ ಚಿತ್ರದ ಒಂದು ಪೋಸ್ಟರ್‌ಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಚಿತ್ರದಲ್ಲಿ ಟೈಂ ಟ್ರಾವೆಲಿಂಗ್ ಕಥೆ ಇದೆಯಂತೆ. ಸೂಪರ್ ಹಿರೋ ಆಗಿ ಪ್ರಭಾಸ್ ನಟಿಸ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಸಿನಿಮಾ ಕಥೆ ಬಗ್ಗೆ ಇನ್ನು ಸುಳಿವು ಸಿಕ್ಕಿಲ್ಲ.

'ಪ್ರಾಜೆಕ್ಟ್- K' ಬರೋದು ಯಾವಾಗ?
ಸಂಕ್ರಾಂತಿಗೆ ಬರಬೇಕಿದ್ದ 'ಆದಿಪುರುಷ್' ಕಾರಣಾಂತರಗಳಿಂದ ತಡವಾಗ್ತಿದೆ. 'ಸಲಾರ್' ರಿಲೀಸ್ ಡೇಟ್ ಸೆಪ್ಟೆಂಬರ್ 28ಕ್ಕೆ ಮುಂದೂಡಲಾಗಿದೆ. ಇತ್ತ 'ಸಲಾರ್' ಸೀಕ್ವೆಲ್ ಬರುತ್ತೆ ಎನ್ನಲಾಗ್ತಿದೆ. ಇದರ ಮಧ್ಯೆ ಈಗ 'ಪ್ರಾಜೆಕ್ಟ್- K' ಸೀಕ್ವೆಲ್ ಕೂಡ ಬರುತ್ತೆ ಎನ್ನಲಾಗ್ತಿದೆ. ಒಟ್ನಲ್ಲಿ ಪ್ರಭಾಸ್ ಯಾವ ಸಿನಿಮಾ ಯಾವಾಗ ಮುಗಿಸ್ತಾರೆ? ಅನ್ನೋದೇ ಅಯೋಮಯವಾಗಿದೆ. 'ಪ್ರಾಜೆಕ್ಟ್- K' ಸೆಕೆಂಡ್ ಪಾರ್ಟ್ ಇರ್ಲಿ ಫಸ್ಟ್ ಪಾರ್ಟ್ ಪೋಸ್ಟರ್ ರಿಲೀಸ್ ಮಾಡಿ ಫಸ್ಟ್ ಎಂದು ಕೇಳುತ್ತಿದ್ದಾರೆ. ಇನ್ನು ಡಾರ್ಲಿಂಗ್ ಸಿನಿಮಾ ಲೈನ್ಅಪ್ ನೋಡಿ ಖುಷಿಯಾಗಿದ್ದಾರೆ. ಆದರೆ ಯಾವ ಸಿನಿಮಾ ಯಾವಾಗ ಬರುತ್ತೋ? ಯಾವುದು ನಿಂತು ಹೋಗುತ್ತೋ ಎಂದು ಗೊಂದಲಕ್ಕೆ ಬಿದ್ದಿದ್ದಾರೆ.


Click it and Unblock the Notifications











