ಭಾರತದಲ್ಲಿಯೇ ಯೂರೋಪ್ ಸೃಷ್ಟಿಸಿದ 'ರಾಧೆ-ಶ್ಯಾಮ್'
ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್'ದ ಕೆಲವು ಹಾಡುಗಳು, ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಯೂರೋಪಿಯನ್ ದೇಶದಲ್ಲಿ ನಡೆವ ಈ ಕತೆಯ ಸುಂದರ ತಾಣಗಳು, ಅದ್ಧೂರಿ ಸೆಟ್‌ಗಳು ನೋಡುಗರ ಗಮನ ಸೆಳೆದಿದೆ.
'ರಾಧೆ-ಶ್ಯಾಮ್' ಸಿನಿಮಾದ ಕತೆ ಯೂರೋಪ್ ದೇಶದಲ್ಲಿಯೇ ನಡೆಯುವುದು ಅದಕ್ಕೆ ತಕ್ಕಂತೆ ಯೂರೋಪ್ ದೇಶಗಳಲ್ಲಿಯೇ ಸಿನಿಮಾದ ಬಹುತೇಕ ಚಿತ್ರೀಕರಣವನ್ನೂ ಮಾಡಲಾಗಿದೆ. ಅಸಲಿಗೆ ಪೂರ್ಣ ಚಿತ್ರೀಕರಣವನ್ನು ಯೂರೋಪ್‌ನಲ್ಲಿಯೇ ಮಾಡಲು ಯೋಜಿಸಲಾಗಿತ್ತು. ಆದರೆ ಕೋವಿಡ್‌ನಿಂದಾಗಿ ಚಿತ್ರೀಕರಣಕ್ಕೆ ತೊಡಕಾಗಿ ಭಾರತದಲ್ಲಿಯೇ ಚಿತ್ರೀಕರಿಸುವ ಅನಿವಾರ್ಯತೆ ಸೃಷ್ಟಿಯಾಯಿತು.
ಆದರೆ ಚಿತ್ರತಂಡ ಸೋಲೊಪ್ಪಿಕೊಳ್ಳಲಿಲ್ಲ ಬದಲಿಗೆ ಭಾರತದಲ್ಲಿಯೇ ಯೂರೋಪ್ ದೇಶವನ್ನು ಸೃಷ್ಟಿಸಿತು. ಸಿನಿಮಾದ ಮೇಕಿಂಗ್ ವಿಡಿಯೋವನ್ನು 'ರಾಧೆ-ಶ್ಯಾಮ್' ಚಿತ್ರತಂಡ ಬಿಡುಗಡೆ ಮಾಡಿದ್ದು, ಮೇಕಿಂಗ್ ವಿಡಿಯೋನಲ್ಲಿ ಚಿತ್ರತಂಡ ಯೂರೋಪ್‌ನಲ್ಲಿ ಹೇಗೆ ಅದ್ಧೂರಿಯಾಗಿ ಚಿತ್ರೀಕರಣ ಮಾಡಿತ್ತು ಎಂಬುದನ್ನು ತೋರಿಸುವ ಜೊತೆಗೆ ಭಾರತದಲ್ಲಿ ಹೇಗೆ ಅದು ಯೂರೋಪ್ ಅನ್ನು ಸೃಷ್ಟಿಸಿತು ಎಂಬುದನ್ನೂ ಸಹ ತೋರಿಸಿದೆ.
'ರಾಧೆ-ಶ್ಯಾಮ್' ಸಿನಿಮಾದಲ್ಲಿ ಕೆಲವು ಮೈನವಿರೇಳಿಸುವ ಆಕ್ಷನ್ ದೃಶ್ಯಗಳಿವೆ. ಅದರಲ್ಲಿಯೂ ಸಮುದ್ರದಲ್ಲಿ ನಡೆಯುವ ಮೈನವಿರೇಳಿಸುವ ಸಾಹಸ ದೃಶ್ಯಗಳಿವೆ ಇವುಗಳನ್ನೆಲ್ಲ ತಂತ್ರಜ್ಞಾನ ಬಳಸಿ ಹೇಗೆ ಚಿತ್ರೀಕರಣ ಮಾಡಲಾಯಿತು ಎಂಬ ಝಲಕ್ ಅನ್ನು ಮೇಕಿಂಗ್ ವಿಡಿಯೋದಲ್ಲಿ ತೋರಿಸಲಾಗಿದೆ. ಜೊತೆಗೆ ಭಾರತದಲ್ಲಿ ಹೇಗೆ ಸೆಟ್‌ಗಳನ್ನು ಹಾಕಿ 70ರ ದಶಕದ ಯೂರೋಪ್ ದೇಶದ ಮಾದರಿಯನ್ನು ಸೃಷ್ಟಿಸಲಾಯಿತು ಎಂಬುದನ್ನು ಸಹ ತೋರಿಸಲಾಗಿದೆ.

'ರಾಧೆ-ಶ್ಯಾಮ್' ಸಿನಿಮಾದ ಕತೆಯು 70-80 ರ ದಶಕದಲ್ಲಿ ಯೂರೋಪ್‌ನಲ್ಲಿ ನಡೆವ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಪ್ರಭಾಸ್ ಹಸ್ತಸಾಮುದ್ರಿಕಾ ಜ್ಞಾನ ಹೊಂದಿರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಕೋವಿಡ್‌ಗೆ ಮುನ್ನವೇ ಯೂರೋಪ್ ದೇಶಗಳ ಸುಂದರ ತಾಣಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಹಲವು ತಿಂಗಳು ಬ್ರೇಕ್ ನೀಡಿ ಪರಿಸ್ಥಿತಿ ಸುಧಾರದೇ ಇದ್ದಾಗ ಹೈದರಾಬಾದ್‌ನಲ್ಲಿಯೇ ಸೆಟ್ ಹಾಕಿ ಇಲ್ಲಿಯೇ ಚಿತ್ರೀಕರಣ ಮುಗಿಸಲಾಯ್ತು. ಯೂರೋಪ್‌ನಲ್ಲಿ ಚಿತ್ರೀಕರಿಸಲಾದ ಕೆಲವು ಕೆಲವು ದೃಶ್ಯಗಳನ್ನು ಹೈದರಾಬಾದ್‌ನಲ್ಲಿ ಮರು ಚಿತ್ರೀಕರಣವೂ ಮಾಡಲಾಯ್ತು. ಹಾಗಾಗಿ ಸಿನಿಮಾ ಬಿಡುಗಡೆ ಆಗಲು ಇಷ್ಟು ತಡವಾಯಿತು ಎನ್ನಲಾಗುತ್ತಿದೆ.
'ರಾಧೆ-ಶ್ಯಾಮ್' ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಕಟ್ಟಪ್ಪ ಖ್ಯಾತಿಯ ಸತ್ಯರಾಜ್, ಬಾಲಿವುಡ್ ಹಿರಿಯ ನಟಿ ಭಾಗ್ಯಶ್ರೀ, ಪ್ರಭಾಸ್ ದೊಡ್ಡಪ್ಪ ಕೃಷ್ಣಂ ರಾಜು, ಜಗಪತಿ ಬಾಬು, ಮರಾಠಿಯ ಸಚಿನ್ ಖೇಡ್ಕರ್, ಹಾಸ್ಯನಟ ಪ್ರಿಯದರ್ಶಿ, ಮುರಳಿ ಶರ್ಮಾ ಇನ್ನೂ ಹಲವರು ನಟಿಸಿದ್ದಾರೆ. 'ರಾಧೆ-ಶ್ಯಾಮ್' ಸಿನಿಮಾವು ಪ್ರೀತಿ ಹಾಗೂ ವಿಧಿಯ ನಡುವಿನ ಹೋರಾಟದ ಕತೆಯನ್ನು ಹೊಂದಿದೆ. ಸಿನಿಮಾವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದು, ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಪ್ರಭಾಸ್ ಬಂಡವಾಳ ಹೂಡಿರುವ ಯುವಿ ಕ್ರಿಯೇಶನ್ಸ್ ಸಹ ನಿರ್ಮಾಣ ಮಾಡಿದೆ. ಸಿನಿಮಾವು ಮಾರ್ಚ್ 11 ಕ್ಕೆ ಬಿಡುಗಡೆ ಆಗಲಿದೆ.


Click it and Unblock the Notifications











