'ಸಲಾರ್' 22 ದಿನಗಳ ಒಟ್ಟು ಕಲೆಕ್ಷನ್ ಎಷ್ಟು? ಸಕ್ಸಸ್ ಪಾರ್ಟಿ ಹೈಲೆಟ್ಸ್ ಏನು?
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲುವಿನ ಓಟ ಮುಂದುವರೆದಿದೆ. 23 ದಿನಗಳನ್ನು ಪೂರೈಸಿದೆ. ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಚಿತ್ರತಂಡಕ್ಕೆ ಸಂತಸ ತಂದಿದೆ. ಇತ್ತೀಚೆಗೆ ಸಕ್ಸಸ್ ಪಾರ್ಟಿ ಮಾಡಿ ಇಡೀ ತಂಡ ಸಂಭ್ರಮಿಸಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮತ್ತೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಕನ್ನಡದ 'ಉಗ್ರಂ' ಕಥೆಯನ್ನೇ ಬಹಳ ದೊಡ್ಡದಾಗಿ 'ಸಲಾರ್' ಚಿತ್ರದಲ್ಲಿ ಹೇಳಲಾಗಿದೆ. ಸಾಕಷ್ಟು ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡು ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಸಿನಿಮಾ ತೆರೆಗೆ ತರಲಾಗಿದೆ. ಹೊಂಬಾಳೆ ಫಿಲ್ಮ್ಸ್ ಮಹತ್ವಾಕಾಂಕ್ಷೆಯ ಸಿನಿಮಾ ಬಾಕ್ಸಾಫೀಸ್‌ನಲ್ಲಿ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ.

ಡಿಸೆಂಬರ್ 22ಕ್ಕೆ 'ಸಲಾರ್' ಸಿನಿಮಾ ತೆರೆಕಂಡಿತ್ತು. ಮಾಸ್ ಪ್ರೇಕ್ಷಕರಿಗೆ ಸಿನಿಮಾ ಬಹಳ ಇಷ್ಟವಾಗಿತ್ತು. ಅದರಲ್ಲೂ 'ಉಗ್ರಂ' ನೋಡದವರಿಗೆ ಹೆಚ್ಚು ಹತ್ತಿರವಾಗಿತ್ತು. ಆದರೆ ಕನ್ನಡ ಪ್ರೇಕ್ಷಕರಿಗೆ ಸಿನಿಮಾ ರುಚಿಸಲಿಲ್ಲ. ಆದರೆ ತೆಲುಗು ವರ್ಷನ್ ಸೂಪರ್ ಹಿಟ್ ಆಗಿದೆ. ವಿದೇಶಗಳಲ್ಲೂ ಸಿನಿಮಾ ಭರ್ಜರಿ ಬ್ಯುಸಿನೆಸ್ ಮಾಡಿದೆ.
'ಸಲಾರ್' ಹಾಗೂ ಶಾರುಖ್ ಖಾನ್ ನಟನೆ 'ಡಂಕಿ' ಸಿನಿಮಾಗಳು ಒಂದು ದಿನದ ಅಂತರದಲ್ಲಿ ಬಿಡುಗಡೆಯಾಗಿದ್ದವು. ಇದರಿಂದ 'ಸಲಾರ್' ಚಿತ್ರಕ್ಕೆ ಉತ್ತರ ಭಾರತದಲ್ಲೂ 'ಡಂಕಿ' ಸೌತ್‌ನಲ್ಲೂ ಕೊಂಚ ಹಿನ್ನೆಡೆ ಆಗಿದ್ದು ಸುಳ್ಳಲ್ಲ. ಆದರೆ ಈ ಫೈಟ್‌ನಲ್ಲಿ 'ಸಲಾರ್' ಸಿನಿಮಾ ಗೆದ್ದಿತ್ತು. ಪ್ರಶಾಂತ್ ನೀಲ್ 'ಖಾನ್ಸರ್' ಎನ್ನುವ ವಿಚಿತ್ರ ಲೋಕವನ್ನು ಸೃಷ್ಟಿಸಿ ಪ್ರೇಕ್ಷಕರನ್ನು ಥ್ರಿಲ್ ಮಾಡಿದ್ದರು.
ಎರಡು ಭಾಗಗಳಾಗಿ 'ಸಲಾರ್' ಸಿನಿಮಾ ತೆರೆಗೆ ಬರಲಿದ್ದು ಮೊದಲ ಭಾಗದಲ್ಲಿ ಕಥೆಗೆ ಪೀಠಿಕೆಯನ್ನು ಮಾತ್ರ ಹಾಕಲಾಗಿದೆ. ಶೌರ್ಯಾಂಗ ಪರ್ವದ ಅಸಲಿ ಕಥೆ ಮುಂದಿನ ಭಾಗದಲ್ಲಿ ಪ್ರೇಕ್ಷಕರ ನೋಡಬಹುದು. ಮುಂದಿನ ವರ್ಷೇ 'ಸಲಾರ್- 2' ತೆರೆಗೆ ಬರುತ್ತದೆ ಎಂದು ನಿರ್ಮಾಪಕರು ಹೇಳಿದ್ದಾರೆ. 22 ದಿನಕ್ಕೆ ವಿಶ್ವದಾದ್ಯಂತ 'ಸಲಾರ್' ಸಿನಿಮಾ 712 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನುವ ಅಂದಾಜಿದೆ.
ಇನ್ನು 'ಸಲಾರ್' ಸಕ್ಸಸ್ ಬೆನ್ನಲ್ಲೇ ಚಿತ್ರತಂಡ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿತ್ತು. ನಟ ಪ್ರಭಾಸ್ ಸಹ ಈ ವೇಳೆ ಹಾಜರಿದ್ದರು. ಬೆಂಗಳೂರಿನಲ್ಲಿ ಅದ್ಧೂರಿಯಾರಿ 'ಸಲಾರ್' ಸಕ್ಸಸ್ ಪಾರ್ಟಿ ಮಾಡಿ ಚಿತ್ರತಂಡ ಖುಷಿಪಟ್ಟಿದೆ. ಖಾಸಗಿ ಹೋಟೆಲ್‌ನಲ್ಲಿ ನಡೆದ ಪಾರ್ಟಿಗೆ ಚಿತ್ರತಂಡದ ಸದಸ್ಯರು ಬ್ಲಾಕ್ ಕಲರ್ ಡ್ರೆಸ್‌ನಲ್ಲಿ ಹಾಜರಾಗಿದ್ದರು.

ಪ್ರಭಾಸ್, ಪ್ರಶಾಂತ್ ನೀಲ್, ಶ್ರುತಿ ಹಾಸನ್, ಈಶ್ವರಿ ರಾವ್, ಶ್ರಿಯಾ ರೆಡ್ಡಿ, ಪ್ರಮೋದ್ ಸೇರಿದಂತೆ ಇಡೀ ಚಿತ್ರತಂಡ ಸಕ್ಸಸ್ ಪಾರ್ಟಿಯಲ್ಲಿ ಭಾಗವಹಿಸಿತ್ತು. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೊಂಬಾಳೆ ಸಂಸ್ಥೆ ಅಂತೂ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸಿ ಭರ್ಜರಿ ಬ್ಯುಸಿನೆಸ್ ಮಾಡ್ತಿದೆ.
'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ನಟನೆಯ ಮೂರು ಸಿನಿಮಾಗಳು ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದ್ದವು. ಆದರೆ 'ಸಲಾರ್' ಆಗಿ ಯಂಗ್ ರೆಬಲ್ ಸ್ಟಾರ್ ಗೆಲುವಿನ ನಗೆ ಬೀರಿದ್ದಾರೆ. ಸದ್ಯ 'ರಾಜಾ ಡೀಲಕ್ಸ್' ಹಾಗೂ 'ಕಲ್ಕಿ' ಸಿನಿಮಾಗಳಲ್ಲಿ ಪ್ರಭಾಸ್ ಬಣ್ಣ ಹಚ್ಚಿದ್ದಾರೆ. 'ಕಣ್ಣಪ್ಪ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರೆ. ಹೊಂಬಾಳೆ ಸಂಸ್ಥೆ 'ಸಲಾರ್' ಬಳಿಕ ತಮಿಳಿನ 'ರಘು ತಾತ' ಕನ್ನಡದ 'ಯುವ' ಸಿನಿಮಾಗಳ ರಿಲೀಸ್ ಕಡೆ ಮುಖ ಮಾಡುತ್ತಿದೆ. 'ರಿಚರ್ಡ್ ಆಂಟನಿ', 'ಸಲಾರ್- 2', 'ಕಾಂತಾರ-1' ಹೀಗೆ ಸಂಸ್ಥೆಯ ಮುಂದಿನ ಸಿನಿಮಾಗಳ ಲಿಸ್ಟ್ ದೊಡ್ಡದಿದೆ.


Click it and Unblock the Notifications










