'ಸಲಾರ್' ಬಗ್ಗೆ ಹೀಗೊಂದು ಅನುಮಾನ.. ಹೊಂಬಾಳೆ ಸಂಸ್ಥೆ ಖಚಿತ ಪಡಿಸಿದ್ರೆ ಅಭಿಮಾನಿಗಳಿಗೆ ಹಬ್ಬ
ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿರೋದು ಗೊತ್ತೇಯಿದೆ. 2 ದಿನಕ್ಕೆ ಟೀಸರ್ ಬರೋಬ್ಬರಿ 10 ಕೋಟಿಗೂ ಅಧಿಕ ವೀವ್ಸ್ ಸಾಧಿಸಿದೆ. ಸೆಪ್ಟೆಂಬರ್ 28ಕ್ಕೆ ಸಿನಿಮಾ ತೆರೆಗಪ್ಪಳಿಸಲಿದ್ದು ಆಗಸ್ಟ್ ಕೊನೆವಾರ ಟ್ರೈಲರ್ ರಿಲೀಸ್ ಮಾಡೋದಾಗಿ ಹೊಂಬಾಳೆ ಸಂಸ್ಥೆ ಹೇಳಿದೆ. 5 ಭಾಷೆಗಳಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಸಿನಿಮಾ ತೆರೆಗಪ್ಪಳಿಸಲಿದೆ.
ಅಂದಾಜು 400 ಕೋಟಿ ರೂ. ಬಜೆಟ್‌ನಲ್ಲಿ 'ಸಲಾರ್' ಸಿನಿಮಾ 2 ಭಾಗಗಳಾಗಿ ತೆರೆಗಪ್ಪಳಿಸಲಿದೆ. ಟೀಸರ್‌ನಿಂದಲೇ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಇನ್ನು ಚಿತ್ರದಲ್ಲಿ ನಟಿಸಿರುವ ತೆಲುಗು ಹಾಸ್ಯ ನಟ ಸಪ್ತಗಿರಿ 'ಸಲಾರ್' 2000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಸೋಲಿನ ಸುಳಿಗೆ ಸಿಲುಕಿರುವ ಪ್ರಭಾಸ್‌ಗೆ ಈ ಸಿನಿಮಾ ಗೆಲುವಿನ ಟಾನಿಕ್ ನೀಡುತ್ತದೆ ಎನ್ನುವ ನಿರೀಕ್ಷೆ ಮೂಡಿದೆ.

ಪಕ್ಕಾ ಪ್ರಶಾಂತ್ ನೀಲ್ ಸ್ಟೈಲ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಇದು. ಯಶ್ ನಟನೆಯ 'KGF' ಸರಣಿಗೂ ಪ್ರಭಾಸ್ 'ಸಲಾರ್' ಸರಣಿಗೂ ಲಿಂಕ್ ಇದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಅನುಮಾನ ಡಾರ್ಲಿಂಗ್ ಅಭಿಮಾನಿಗಳನ್ನು ಕಾಡುತ್ತಿದೆ. ಈ ಬಗ್ಗೆ ಹೊಂಬಾಳೆ ಸಂಸ್ಥೆ ಸ್ಪಷ್ಟನೆ ನೀಡಬೇಕಿದೆ.
ಇಂಗ್ಲೀಷ್ ಭಾಷೆಗೆ 'ಸಲಾರ್' ಡಬ್
ಹೌದು ಕಳೆದ ಕೆಲ ದಿನಗಳಿಂದ ಇಂತಾದೊಂದು ಗುಸುಗುಸು ಕೇಳಿಬರ್ತಿದೆ. ಹಾಲಿವುಡ್ ರೇಂಜ್‌ನಲ್ಲಿ ಮೂಡಿ ಬಂದಿರುವ 'ಸಲಾರ್' ಚಿತ್ರವನ್ನು ಇಂಗ್ಲೀಷ್ ಭಾಷೆಗೂ ಡಬ್ ಮಾಡಿ ಏಕಕಾಲಕ್ಕೆ ರಿಲೀಸ್ ಮಾಡುತ್ತಾರೆ ಎನ್ನಲಾಗ್ತಿದೆ. ಹಾಡುಗಳನ್ನು ತೆಗೆದು ಸಿನಿಮಾ ಕಾಲಾವಧಿ ಅರ್ಧ ಗಂಟೆ ಟ್ರಿಮ್ ಮಾಡಿ ಇಂಗ್ಲೀಷ್ ಪ್ರೇಕ್ಷಕರ ಮುಂದಿಡುವ ಪ್ರಯತ್ನ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದರು. ಆದರೆ ಟೀಸರ್‌ನಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
'ಕಾಂತಾರ' ಇಂಗ್ಲೀಷ್‌ಗೆ ಡಬ್ ಆಗಿತ್ತು
ಹೊಂಬಾಳೆ ಸಂಸ್ಥೆ ನಿರ್ಮಾಣದ 'ಕಾಂತಾರ' ಸಿನಿಮಾ ಇಂಗ್ಲೀಷ್ ಭಾಷೆಗೆ ಡಬ್ ಆಗಿ ನೆಟ್‌ಫ್ಲಿಕ್ಸ್‌ಗೆ ಬಂದಿತ್ತು. ಹಾಗಾಗಿ 'ಸಲಾರ್' ಸಿನಿಮಾ ಕೂಡ ಇಂಗ್ಲೀಷ್ ಭಾಷೆಗೆ ಡಬ್ ಆದರೆ ಅಚ್ಚರಿ ಪಡಬೇಕಿಲ್ಲ. ಟೀಸರ್‌ನಲ್ಲಿ ಸಿಂಪಲ್ ಇಂಗ್ಲೀಷ್ ಡೈಲಾಗ್ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇಡೀ ಸಿನಿಮಾ ಇಂಗ್ಲೀಷ್ ಭಾಷೆಗೆ ಡಬ್ ಆಗಿ ಹೊರ ದೇಶಗಳಲ್ಲಿ ರಿಲೀಸ್ ಆದ್ರೆ ಬಾಕ್ಸಾಫೀಸ್ ಶೇಕ್ ಆಗೋದು ಗ್ಯಾರೆಂಟಿ. ಇತ್ತೀಚೆಗೆ ರಾಜಮೌಳಿ ನಿರ್ದೇಶನದ 'RRR' ಹಾಲಿವುಡ್ ಮಂದಿ ಗಮನ ಸೆಳೆದಿತ್ತು.

9 ಭಾಷೆಗಳಲ್ಲಿ 'ಕಾಂತಾರ' ಹವಾ
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಕಾಂತಾರ' ಸಿನಿಮಾ ಸಂಚಲನ ಸೃಷ್ಟಿಸಿದ್ದು ಗೊತ್ತೇಯಿದೆ. ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಸಿನಿಮಾ ನಂತರ ಬೇಡಿಕೆ ಮೇರೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿ ಸದ್ದು ಮಾಡಿತ್ತು. ನಂತರ ಈ ಚಿತ್ರವನ್ನು ತುಳು ಹಾಗೂ ಇಂಗ್ಲೀಷ್ ಭಾಷೆಗಳಿಗೆ ಡಬ್ ಮಾಡಿದ್ದರು. ಸ್ಪ್ಯಾನಿಷ್ ಹಾಗೂ ಇಟಾಲಿಯನ್ ಭಾಷೆಗಳಿಗೆ ಸಿನಿಮಾ ಡಬ್ ಮಾಡಿ ಯೂರೋಪ್ ದೇಶಗಳಲ್ಲಿ ರಿಲೀಸ್ ಮಾಡೋದಾಗಿ ಹೊಂಬಾಳೆ ಸಂಸ್ಥೆ ಹೇಳಿತ್ತು.
ಜಪಾನೀಸ್ ಭಾಷೆಗೆ 'KGF'
ಹೊಂಬಾಳೆ ಸಂಸ್ಥೆ ತಮ್ಮ ಸಿನಿಮಾಗಳನ್ನು ವಿದೇಶದ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡುವ ಕೆಲಸ ಮುಂದುವರೆದಿದೆ. ಈ ವಾರ ಜಪಾನೀಸ್ ಭಾಷೆಯಲ್ಲಿ 'KGF' ಸರಣಿ ಸಿನಿಮಾಗಳು ಜಪಾನ್ ದೇಶದಲ್ಲಿ ರಿಲೀಸ್ ಆಗ್ತಿದೆ. ಈ ಬಗ್ಗೆ ಇತ್ತೀಚೆಗೆ ಯಶ್ ವಿಡಿಯೋ ಮಾಡಿ ಜಪಾನ್ ಪ್ರೇಕ್ಷಕರಲ್ಲಿ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು. ಈ ಹಿಂದೆ 'RRR' ಸಿನಿಮಾ ಜಪಾನ್‌ನಲ್ಲಿ ಶತದಿನೋತ್ಸವ ಆಚರಿಸಿಕೊಂಡಿತ್ತು.


Click it and Unblock the Notifications











