2025ರಲ್ಲಿ ಪ್ರಭಾಸ್ "ಸ್ಪಿರಿಟ್' ತೆರೆಗೆ!
ನಟ ಪ್ರಭಾಸ್ ಬಾಹುಬಲಿ ಸರಣಿ ಚಿತ್ರಗಳ ನಂತರ ಗ್ಯಾಪ್ ತೆಗೆದುಕೊಳ್ಳದೆ, ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಪ್ರಭಾಸ್ ಸಹಿ ಹಾಕಿರುವ ಪ್ರತಿ ಸಿನಿಮಾ ಕೂಡ ನಿರೀಕ್ಷೆಯುಳ್ಳ ಚಿತ್ರಗಳೇ. ಹಲವು ಕಾರಣಕ್ಕೆ ಪ್ರಭಾಸ್ ಸಿನಿಮಾಗಳು ಎಲ್ಲಿಲ್ಲದ ನಿರೀಕ್ಷೆ ಹುಟ್ಟಿಸಿವೆ.
ಕೊನೆಯದಾಗಿ ಪ್ರಕಟ ಆಗಿರುವ ಪ್ರಭಾಸ್ ಚಿತ್ರದ ಟೈಟಲ್ "ಸ್ಪಿರಿಟ್'. ಚಿತ್ರದ ಟೈಟಲ್ ಪ್ರಕಟವಾದ ಬಳಿಕ ಚಿತ್ರದ ಕಥೆಯ ಬಗ್ಗೆ ಸಾಕಷ್ಟು ಕುತೂಹಲಗಳು ಮನೆ ಮಾಡಿವೆ. ಈ ನಡುವೆ ಹಲವು ಚಿತ್ರಗಳ ಕೆಲಸಗಳಲ್ಲಿ ಪ್ರಭಾಸ್ ನಿರತವಾಗಿದ್ದಾರೆ. ಕೊರೊನಾ ಬಂದ ಬಳಿಕ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿತ್ತು.
ಹಾಗಾಗಿ ಸದ್ಯ ಮೂರು ಸಿನಿಮಾಗಳ ಕೆಲಸಗಳನ್ನು ಒಟ್ಟೊಟ್ಟಿಗೆ ಮಾಡುತ್ತಿದ್ದಾರೆ ನಟ ಪ್ರಭಾಸ್. ಆದಿಪುರುಷ್ ಸಿನಿಮಾದ ಜೊತೆಗೆ ಸಲಾರ್ ಮತ್ತು ಪ್ರಾಜೆಕ್ಟ್ ಕೆ ಸಿನಿಮಾ ಚಿತ್ರಗಳ ಕೆಲಸಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಸದ್ಯ ಪ್ರಭಾಸ್ ಅಭಿನಯಿಸಲಿರುವ ಸ್ಪಿರಿಟ್ ಚಿತ್ರದಿಂದ ಹೊಸ ಸುದ್ದಿ ಬಂದಿದೆ.

ಬಾಲಿವುಡ್‌ನಲ್ಲಿ ನಿರ್ದೇಶಕ ಸಂದೀಪ್ ವಂಗಾ ಬ್ಯುಸಿ!
ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು "ಅರ್ಜುನ್ ರೆಡ್ಡಿ' ನಂತರ ಅದೇ ಚಿತ್ರದ ಬಾಲಿವುಡ್ ರಿಮೇಕ್ "ಕಬೀರ್ ಸಿಂಗ್' ಮೂಲಕ ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಎರಡೇ ಚಿತ್ರಗಳ ಬಳಿಕ ಸಂದೀಪ್ ವಂಗಾ ಅವರಿಗೆ ಬೇಡಿಕೆ ಹೆಚ್ಚಾಯಿತು. ವಿಜಯ್ ದೇವರಕೊಂಡ, ಶಾಹಿದ್ ಕಪೂರ್ ನಂತರ ಈಗ ರಣ್ಬೀರ್ ಕಪೂರ್ ಮತ್ತು ಪ್ರಭಾಸ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ.
ಆದರೆ ಕೊರೊನಾ ಕಾರಣದಿಂದ ನಿರ್ದೇಶಕ ಸಂದೀಪ್ ಅಂದು ಕೊಂಡ ಹಾಗೆ ಪ್ರಭಾಸ್ ಸಿನಿಮಾವನ್ನು ಆರಂಭಿಸಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಈ ಚಿತ್ರವನ್ನು ಆರಂಭಿಸಲು ಸಂದೀಪ್ ರೆಡ್ಡಿ ವಂಗಾ ಮೊದಲು ಬಾಲಿವುಡ್ ಚಿತ್ರವನ್ನು ಮುಗಿಸ ಬೇಕು.

ಪ್ರಭಾಸ್ ಸ್ಪಿರಿಟ್ ದರ್ಶನಕ್ಕೆ ಇನ್ನೂ 3 ವರ್ಷ ಕಾಯಲೇ ಬೇಕು!
ಬಾಲಿವುಡ್ ನಟ ರಣ್ಬೀರ್ ಕಪೂರ್ ಅವರಿಗೆ "ಅನಿಮಲ್' ಸಿನಿಮಾವನ್ನು ಸಂದೀಪ್ ವಂಗಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣಕ್ಕೆ ಮುಹೂರ್ಥ ನಿಗದಿ ಮಾಡಲಾಗಿದೆ. ಮೊದಲು 2022ರ ದಸರಾ ಹಬ್ಬದ ಪ್ರಯುಕ್ತ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ "ಅನಿಮಲ್' ಚಿತ್ರದ ರಿಲೀಸ್ ದಿನಾಂಕವನ್ನು 2023ರ ಆಗಸ್ಟ್‌ಗೆ ಮುಂದೂಡಲಾಗಿದೆ. ಈ ಚಿತ್ರವನ್ನು ಮುಗಿಸಿ ನಂತರ ಸಂದೀಪ್ ವಂಗಾ ರೆಡ್ಡಿ ಟಾಲಿವುಡ್‌ನತ್ತ ಮುಖ ಮಾಡಲಿದ್ದಾರೆ.

ಆದಿಪುರುಷ್, ಸಲಾರ್, ಪ್ರಾಜೆಕ್ಟ್ ಕೆ ಚಿತ್ರದ ಬಳಿಕ ಸ್ಪಿರಿಟ್!
ಇತ್ತ ಪ್ರಭಾಸ್ ಕೂಡ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಸ್ಪಿರಿಟ್ ಸಿನಿಮಾ ಆರಂಭ ಆಗಲು ಇನ್ನೂ ಎರಡು ವರ್ಷಗಳು ಬೇಕಾಗುತ್ತೆ. ಹಾಗಾಗಿ ಸ್ಪಿರಿಟ್ ಸಿನಿಮಾ ಪ್ರೇಕ್ಷಕರ ಮುಂದೆ ಬರುವುದು 2025 ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.
ಸದ್ಯ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಸಿನಿಮಾ 2022ರ ಜನವರಿಯಲ್ಲಿ ರಿಲೀಸ್ ಆಗುತ್ತಿದೆ. ರಾಧೆ ಶ್ಯಾಮ್ ಬಳಿಕ ಆದಿಪುರುಷನಾಗಿ ಪ್ರಭಾಸ್ ದರ್ಶನ ನೀಡಲಿದ್ದಾರೆ. ನಂತರ ಸಲಾರ್ ಸಿನಿಮಾ ತೆರೆ ಕಾಣುವ ಸಾಧ್ಯತೆ ಇದೆ. ಬಳಿಕ ಪ್ರಾಜೆಕ್ಟ್ ಕೆ ಸರದಿ. ಆ ಬಳಿಕವೇ "ಸ್ಪಿರಿಟ್' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











