'ದಿ ರಾಜಾಸಾಬ್' ಹೊಸ ಟ್ರೈಲರ್ ಬಂತು; ಬದಲಾಯ್ತು ಬಾಕ್ಸಾಫೀಸ್ ಲೆಕ್ಕಾಚಾರ
ಪ್ರಭಾಸ್ ನಟನೆಯ ಹಾರರ್ ಫ್ಯಾಂಟಸಿ 'ದಿ ರಾಜಾಸಾಬ್ ಚಿತ್ರದ ಹೊಸ ಟ್ರೈಲರ್ ಬಿಡುಗೆಯಾಗಿ ಧೂಳೆಬ್ಬಿಸಿದೆ. ಮಾರುತಿ ನಿರ್ದೇಶನದ ಈ ಹಾರರ್ ಕಾಮಿಡಿ ಚಿತ್ರದಲ್ಲಿ ಸಂಜಯ್ ದತ್ ಸೇರಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಚಿತ್ರದ ಟೀಸರ್, ಮೊದಲ ಟ್ರೈಲರ್ ನಿರಾಸೆ ಮೂಡಿಸಿತ್ತು. ಆದರೆ ಹೊಸ ಟ್ರೈಲರ್ ಗಮನ ಸೆಳೆದಿದೆ.
ಈ ಚಿತ್ರದಲ್ಲಿ ಸಂಮೋಹನ ವಿದ್ಯೆಯ ಮೂಲಕ ಭಯವನ್ನು ನಿಯಂತ್ರಿಸುವ ಶಕ್ತಿಯಾಗಿ ಸೂಪರ್‌ಸ್ಟಾರ್ ಸಂಜಯ್ ದತ್ ಅಬ್ಬರಿಸಿದ್ದಾರೆ. ಚಿತ್ರದಲ್ಲಿ ಪ್ರಭಾಸ್ 'ರಾಜಾಸಾಬ್' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಆತನ ಅಜ್ಜಿ ಪಾತ್ರದಲ್ಲಿ ಜರೀನಾ ವಹಾಬ್ ಮಿಂಚಿದ್ದಾರೆ. ತನ್ನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದ ನಾಯಕ, ಅಂತಿಮವಾಗಿ ಪಾಳುಬಿದ್ದ ಬಂಗಲೆ ತಲುಪುತ್ತಾನೆ. ಆ ಬಂಗಲೆಯೇ ಆತನ ಕರಾಳ ರಹಸ್ಯಗಳ ತಾಣ. ಮುಂದೇನಾಗುತ್ತದೆ ಎನ್ನುವುದು ಸಿನಿಮಾಕಥೆ.

ಬರೀ ಆಕ್ಷನ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ಪ್ರಭಾಸ್ ಹಾರರ್ ಕಾಮಿಡಿ ಚಿತ್ರದಲ್ಲಿ ನಟಿಸುತ್ತಾರೆ ಎಂದಾಗ ಅಭಿಮಾನಿಗಳು ಬೇಸರಗೊಂಡಿದ್ದರು. ಅದೇ ಕಾರಣಕ್ಕೆ 'ದಿ ರಾಜಾಸಾಬ್' ಹೆಚ್ಚು ನಿರೀಕ್ಷೆ ಇರಲಿಲ್ಲ. ಈ ಹಿಂದೆ ಬಂದಿದ್ದ ಚಿತ್ರದ ಸ್ಯಾಂಪಲ್‌ಗಳು ಅದಕ್ಕೆ ಇಂಬು ನೀಡುವಂತೆ ಇದ್ದವು. ಆದರೆ 2ನೇ ಟ್ರೈಲರ್ ಅಭಿಮಾನಿಗಳ ಮನಗೆದ್ದಿದೆ. ಫಸ್ಟ್ ಡೇ ಸಿನಿಮಾ ನೋಡಬೇಕು ಎನ್ನುವ ಉತ್ಸಾಹ ತಂದಿದೆ.
ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 9ರಂದು 'ದಿ ರಾಜಾಸಾಬ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಗೆ ಬರಲಿದೆ. ಬೋಮನ್ ಇರಾನಿ ನಿಗೂಢ ಮನೋವೈದ್ಯ ಮತ್ತು ಪ್ಯಾರಾನಾರ್ಮಲ್ ತನಿಖಾಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. ಭಾರೀ ಸೆಟ್‌ಗಳನ್ನು ನಿರ್ಮಿಸಿ ಅದ್ಧೂರಿ ಗ್ರಾಫಿಕ್ಸ್ ಬಳಸಿ ಸಿನಿಮಾ ಕಟ್ಟಿಕೊಡಲಾಗಿದೆ.

ಸಿನಿಮಾ ಬಗ್ಗೆ ನಟ ಪ್ರಭಾಸ್ ಮಾತನಾಡಿ "ಕಳೆದ 3 ವರ್ಷಗಳ ಪರಿಶ್ರಮ ಮತ್ತು ಜವಾಬ್ದಾರಿಯು ಚಿತ್ರದಲ್ಲಿದೆ. ಸಾಲು ಸಾಲು ಆಕ್ಷನ್ ಸಿನಿಮಾಗಳ ನಡುವೆ ಪ್ರೇಕ್ಷಕರಿಗೆ ಒಂದು ಪರಿಪೂರ್ಣ ಮನರಂಜನಾ ಸಿನಿಮಾ ನೀಡಬೇಕೆಂಬ ಹಂಬಲದಿಂದ ಈ 'ಹಾರರ್-ಕಾಮಿಡಿ' ಸಿನಿಮಾ ಮಾಡಿದ್ದೇವೆ. ಈ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಕೇಳಿನಾನು ಮಾರುತಿ ಬರವಣಿಗೆಗೆ ಫ್ಯಾನ್ ಆಗಿಬಿಟ್ಟೆ. 15 ವರ್ಷಗಳ ನಂತರ ನನ್ನ ಅಭಿಮಾನಿಗಳಿಗೆ 'ಡಾರ್ಲಿಂಗ್' ಶೈಲಿಯ ಪೂರ್ಣ ಪ್ರಮಾಣದ ಎಂಟರ್‌ಟೈನ್‌ಮೆಂಟ್ ಸಿಗಲಿದೆ. ಈ ಸಂಕ್ರಾಂತಿಗೆ ಎಲ್ಲ ಸಿನಿಮಾಗಳು ಗೆಲ್ಲಲಿ" ಎಂದಿದ್ದಾರೆ.
ಪ್ರಭಾಸ್ ಅವರಂತಹ ದೊಡ್ಡ ನಟರಿದ್ದಾಗ ನಿರೀಕ್ಷೆಗಳು ಆಕಾಶ ಮುಟ್ಟಿರುತ್ತವೆ ಎಂದು ನಿರ್ದೇಶಕ ಮಾರುತಿ ಹೇಳಿದ್ದಾರೆ. "ಪ್ರೇಕಕ್ಷರ ನಿರೀಕ್ಷೆಗೆ ತಕ್ಕಂತೆ ನಾವು ಕಳೆದ 3 ವರ್ಷಗಳಿಂದ ಹಗಲಿರುಳು ಶ್ರಮಿಸಿದ್ದೇವೆ. ಈ ಹಾರರ್-ಕಾಮಿಡಿ ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಮಿಂಚುವ ಸಾಮರ್ಥ್ಯ ಹೊಂದಿದೆ. ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ರಸದೌತಣ ನೀಡಲಿದೆ" ಎಂದು ತಿಳಿಸಿದ್ದಾರೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಬಹಳ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ಜೋಕರ್ ಗೆಟಪ್‌ನಲ್ಲಿ ಕೂಡ ದರ್ಶನ ಕೊಟ್ಟಿದ್ದಾರೆ. ಪದೇ ಪದೆ ಸಿನಿಮಾ ರಿಲೀಸ್ ಡೇಟ್ ಬದಲಾಗಿತ್ತು. ಅಂತೂ ಇಂತೂ ಇದೀಗ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಮುಂದೆ 'ಫೌಜಿ', 'ಸ್ಪಿರಿಟ್' ಹಾಗೂ 'ಸಲಾರ್- 2' ರೀತಿಯ ವಿಭಿನ್ನ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಅದೆಲ್ಲಕ್ಕಿಂತ ಮುನ್ನ 'ದಿ ರಾಜಾಸಾಬ್' ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಈ ಬಾರಿ ಸಂಕ್ರಾಂತಿಗೆ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿದೆ. ಅದರ ನಡುವೆ ಪ್ರಭಾಸ್ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ.


Click it and Unblock the Notifications











