Kannappa: ರಾಮ, ವಿಷ್ಣು ಬಳಿಕ ಶಿವನ ಅವತಾರದಲ್ಲಿ ಪ್ರಭಾಸ್: 'ಕನ್ನಪ್ಪ' ಚಿತ್ರಕ್ಕೆ ಗ್ರೀನ್ ಸಿಗ್ನಲ್
ಬಾಹುಬಲಿ ಪ್ರಭಾಸ್ ಇತ್ತೀಚೆಗೆ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಪೌರಾಣಿಕ ಪಾತ್ರಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. 'ಆದಿಪುರುಷ್' ಚಿತ್ರದಲ್ಲಿ ಶ್ರೀರಾಮನಾಗಿ ನಟಿಸಿದ್ದ ಪ್ರಭಾಸ್, 'ಕಲ್ಕಿ 2898AD' ಚಿತ್ರದಲ್ಲಿ ವಿಷ್ಣುವಿನ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಪರಮಶಿವನ ಪಾತ್ರದಲ್ಲಿ ನಟಿಸೋಕೆ ಸೈ ಎಂದಿದ್ದಾರೆ.
ಮಂಚು ವಿಷ್ಣು ಹೀರೊ ಆಗಿ 'ಕನ್ನಪ್ಪ' ಸಿನಿಮಾ ಘೋಷಣೆಯಾಗಿದೆ. ಬಹುಕೋಟಿ ವೆಚ್ಚದಲ್ಲಿ ಈ ಪೌರಾಣಿಕ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಡಾ. ರಾಜ್‌ಕುಮಾರ್ ನಟಿಸಿದ್ದ 'ಬೇಡರ ಕಣ್ಣಪ್ಪ' ಕತೆಯನ್ನೇ ಹೊಸ ರೂಪದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಈ ಚಿತ್ರದಲ್ಲಿ ಕಣ್ಣಪ್ಪನ ಮುಗ್ಧ ಪ್ರೀತಿಗೆ ಒಲಿಯುವ ಶಿವನಾಗಿ ಪ್ರಭಾಸ್ ನಟಿಸುತ್ತಾರೆ ಎನ್ನಲಾಗ್ತಿದೆ. ಪರೋಕ್ಷವಾಗಿ ಚಿತ್ರತಂಡದ ಇದನ್ನು ಖಚಿತ ಪಡಿಸಿದೆ.

ಪ್ರಭಾಸ್ ಚಿಕ್ಕಪ್ಪ ಕೃಷ್ಣಂರಾಜು ದಶಕಗಳ ಹಿಂದೆ 'ಭಕ್ತ ಕನ್ನಪ್ಪ' ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರವನ್ನು ಮತ್ತೆ ರೀಮೆಕ್ ಮಾಡಬೇಕು, ಪ್ರಭಾಸ್ ಕಣ್ಣಪ್ಪ ಆಗಿ ನಟಿಸಬೇಕು ಎನ್ನುವುದು ಅವರ ಆಸೆಯಾಗಿತ್ತು. ಆದರೆ ಅದು ಸಾಧ್ಯವಾಗಲೇ ಇಲ್ಲ. ಹಿರಿಯ ನಟ ಮೋಹನ್ ಬಾಬು ಐದಾರು ವರ್ಷಗಳ ಹಿಂದೆ ಇಂತಾದೊಂದು ಸಿನಿಮಾ ಆರಂಭಿಸಲು ಪ್ರಯತ್ನಿಸಿದ್ದರು. ಆದರೆ ಕೊರೊನಾ ಹಾವಳಿ ಹಿನ್ನೆಲೆ ಸಾಧ್ಯವಾಗಿರಲಿಲ್ಲ.
ಇತ್ತೀಚೆಗಷ್ಟೆ ಕಾಳಹಸ್ತಿಯಲ್ಲಿ ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು. 24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಎವಿಎ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ಗಳ ಅಡಿಯಲ್ಲಿ 'ಕನ್ನಪ್ಪ' ಚಿತ್ರವನ್ನು ಮೋಹನ್ ಬಾಬು ನಿರ್ಮಿಸುತ್ತಿದ್ದಾರೆ. ಜೊತೆಗೆ ಒಂದು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಣ್ಣಪ್ಪ ಆಗಿ ನಟಿಸದೇ ಇದ್ದರೂ ಈ ಮೆಗಾ ಪ್ರಾಜೆಕ್ಟ್‌ನ ಭಾಗವಾಗುತ್ತಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ. ಪ್ರಭಾಸ್ ಶಿವನ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಪಾತ್ರಗಳನ್ನು ಅನುಚಿತವಾಗಿ ತೋರಿಸಿದ್ದಾರೆ ಎನ್ನುವ ಕಾರಣಕ್ಕೆ ಭಾರೀ ವಿವಾದ ಸೃಷ್ಟಿಯಾಗಿತ್ತು. ಭಾರೀ ಟೀಕೆ ಎದುರಿಸುವಂತಾಯಿತು. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದರೂ ಫಸ್ಟ್ ವೀಕೆಂಡ್ ಕಲೆಕ್ಷನ್ ಎಲ್ಲರ ಹುಬ್ಬೇರಿಸಿತ್ತು. ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.
ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898AD' ಚಿತ್ರದಲ್ಲಿ ಪ್ರಭಾಸ್ ಶ್ರೀವಿಷ್ಣುವಿನ ರೂಪವಾಗಿಯೇ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಭವಿಷ್ಯದ ಕಥೆಯನ್ನು ಚಿತ್ರದಲ್ಲಿ ರೋಚಕವಾಗಿ ಕಟ್ಟಿಕೊಡಲಾಗುತ್ತಿದೆ. ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಚಿತ್ರದ ತಾರಾಗಣದಲ್ಲಿದ್ದಾರೆ. ಈ ಚಿತ್ರದಲ್ಲಿ ಮಹಾಭಾರತದ ಪ್ರಸ್ತಾಪ ಕೂಡ ಇರಲಿದೆಯಂತೆ. 600 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಈ ಸೈನ್ಸ್ ಫಿಕ್ಷನ್ ಸಿನಿಮಾ ತೆರೆಗೆ ಬರಲಿದೆ.
'ಭಕ್ತ ಕನ್ನಪ್ಪ' ಚಿತ್ರಕ್ಕೆ ಬಾಲಿವುಡ್ ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಆಕ್ಷನ್ ಕಟ್ ಹೇಳಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಲಿದೆ. ವಿದೇಶದಲ್ಲೇ ಬಹುತೇಕ ಚಿತ್ರೀಕರಣ ನಡೆಸಲು ತೀರ್ಮಾನಿಸಲಾಗಿದೆ. ಸುಮಾರು 90 ಕೋಟಿ ರೂ. ಬಜೆಟ್‌ನಲ್ಲಿ 5 ವರ್ಷಗಳ ಹಿಂದೆ ಸಿನಿಮಾ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಈಗ ಆ ಬಜೆಟ್ ಹೆಚ್ಚಾಗುವ ಸಾಧ್ಯತೆಯಿದೆ. ಬಾಲಿವುಡ್ ನಟಿ ನೂಪುರ್ ಸನೋನ್ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಪ್ರಭಾಸ್ 'ಕನ್ನಪ್ಪ' ಆಗಿ ನಟಿಸಬೇಕು ಎಂದು ಕೃಷ್ಣಂರಾಜು ಆಸೆಪಟ್ಟಿದ್ದರು. ಆದರೆ ಆ ಚಿತ್ರದಲ್ಲಿ ಒಂದು ಮುಖ್ಯ ಪಾತ್ರವನ್ನು ನಿಭಾಯಿಸಿ ಅವರ ಆಸೆಯನ್ನು ಈಡೇರಿಸಲು ಪ್ರಭಾಸ್ ತೀರ್ಮಾನಿಸಿದ್ದಂತಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಚಿತ್ರಕ್ಕೆ ಪರುಚೂರಿ ಗೋಪಾಲಕೃಷ್ಣ, ತೋಟ ಪ್ರಸಾದ್, ತೋಟಪಲ್ಲಿ ಸಾಯಿನಾಥ್ ಮತ್ತು ಬುರ್ರಾ ಸಾಯಿ ಮಾಧವ್ ಚಿತ್ರಕಥೆ ಮತ್ತು ಸಂಭಾಷಣೆ ಸಿದ್ಧಪಡಿಸುತ್ತಿದ್ದಾರೆ. ಮಣಿಶರ್ಮಾ ಮತ್ತು ಸ್ಟೀಫನ್ ದೇವಸ್ಸೆ ಸಂಗೀತ ಹಾಗೂ ಶೆಲ್ಡನ್ ಶಾ ಅವರ ಛಾಯಾಗ್ರಹಣ ಚಿತ್ರಕ್ಕಿದೆ.


Click it and Unblock the Notifications











