ಆದಿಪುರುಷ್ ಚಿತ್ರದ ಶೂಟಿಂಗ್ ಮುಗಿಸಿದ ಪ್ರಭಾಸ್: ಸಂಭ್ರಮದಲ್ಲಿ ಚಿತ್ರತಂಡ
ಬಾಹುಬಲಿ ಭಾಗ ಒಂದು ಮತ್ತು ಭಾಗ ಎರಡು ಸಿನಿಮಾಕ್ಕಾಗಿ ನಟ ಪ್ರಭಾಸ್ ವರ್ಷಗಳನ್ನೇ ಮೀಸಲಿಟ್ಟಿದ್ದರು. ಹಾಗಾಗಿ ಈಗ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಜೊತೆಗೆ ಒಪ್ಪಿಕೊಂಡ ಸಿನಿಮಾಗಳನ್ನು ಆದಷ್ಟು ಬೇಗ ಮಾಡಿ ಮುಗಿಸುತ್ತಿದ್ದಾರೆ. ಪ್ರಭಾಸ್ ಸಿನಿಮಾಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ನಿರಾಸೆ ಮಾಡದಿರಲು ಪ್ರಭಾಸ್ ನಿರ್ಧರಿಸಿದ್ದಾರೆ.
ಇದೇ ಕಾರಣಕ್ಕೆ ಸಿನಿಮಾ ಶೂಟಿಂಗ್ ವೇಗವಾಗಿ ಸಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಪ್ರಭಾಸ್ ಆದಿಪುರುಷ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ನಟ ಪ್ರಭಾಸ್ ಆದಿಪುರುಷ್ ಸಿನಿಮಾ ಜೊತೆಗೆ ಸಲಾರ್, ಪ್ರಾಜೆಕ್ಟ್ ಕೆ ಸಿನಿಮಾಗಳ ಕೆಲಸಗಳಲ್ಲಿ ನಿರತವಾಗಿದ್ದಾರೆ. ಏಕಕಾಲದಲ್ಲಿ ಈ ಮೂರು ಸಿನಿಮಾಗಳಿಗೆ ಪ್ರಭಾಸ್ ತಮ್ಮ ಡೇಟನ್ನು ವಿಂಗಡಿಸಿದ್ದಾರೆ. ಹಾಗಾಗಿ ಒಟ್ಟೊಟ್ಟಿಗೆ ಮೂರು ಸಿನಿಮಾಗಳಲ್ಲೂ ಪ್ರಭಾಸ್ ಬ್ಯುಸಿಯಾಗಿದ್ದಾರೆ.
ಭಾರತೀಯ ಸಿನಿಮಾ ರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಆದಿಪುರುಷ್ ಸಿನಿಮಾ ಕೂಡ ಒಂದು. ಈ ಚಿತ್ರ ಓಂ ರಾವತ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಅದಾಗಲೆ ಸಿನಿಮಾ ನೂರು ದಿನಗಳ ಶೂಟಿಂಗ್ ಮುಗಿಸಿದೆ. ಈ ಮೂಲಕ ಪ್ರಭಾಸ್ ತಮ್ಮ ಭಾಗದ ಚಿತ್ರೀಕರಣವನ್ನ ಪೂರ್ಣಗೊಳಿಸಿದ್ದಾರೆ. ಈ ಸಂಭ್ರಮವನ್ನು ಚಿತ್ರ ತಂಡ ಆಚರಿಸಿದೆ. ನೂರು ದಿನ ಚಿತ್ರೀಕರಣ ಮುಗಿಸಿರುವ ಸಂಭ್ರಮವನ್ನು ಚಿತ್ರ ತಂಡ ಹಂಚಿಕೊಂಡಿದೆ. ಕೇಕ್ ಕಟ್ ಮಾಡಿ ಚಿತ್ರ ತಂಡ ಈ ಸಂಭ್ರಮ ಆಚರಣೆ ಮಾಡಿದೆ. ಸಂಭ್ರಮದ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಚಿತ್ರದ ನಾಯಕ ನಟ ಪ್ರಭಾಸ್, ಸನ್ನಿ ಸಿಂಗ್, ನಿರ್ದೇಶಕ ಓಂ ರಾವತ್ ಸೇರಿ ಚಿತ್ರ ತಂಡದೊಂದಿಗೆ ವಿಶೇಷವಾಗಿ ಸಂಭ್ರಮವನ್ನು ಆಚರಿಸಿದ್ದಾರೆ. ಆದಿರುಷ್ ಪೌರಾಣಿಕ ಗ್ರಂಥ ರಾಮಾಯಣ ಕಥೆ ಆಧರಿಸಿದ ಚಿತ್ರ. ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಚಿತ್ರದಲ್ಲಿ ಸೈಫ್ ಅಲಿಖಾನ್, ಕೃತಿ ಸನೋನ್, ಸನ್ನಿ ಸಿಂಗ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಆದಿ ಪುರುಷನಾಗಿ ಕಾಣಿಸಿಕೊಂಡರೆ, ಕೃತಿಸನೋನ್ ಜಾನಕಿ ಆಗಿದ್ದಾಳೆ. ಇನ್ನೂ ಸೈಫ್ ಅಲಿಖಾನ್ ಲಂಕಾಸುರನ ಪಾತ್ರ ಮಾಡುತ್ತಿದ್ದಾರೆ.
ಈಗಾಗಲೇ ಚಿತ್ರದಲ್ಲಿ ಸೈಫ್ ಅಲಿಖಾನ್ ಮತ್ತು ಕೃತಿ ಭಾಗದ ಚಿತ್ರೀಕರಣ ಸಂಪೂರ್ಣಗೊಂಡಿದೆ. ಈ ವಿಚಾರವನ್ನ ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಕೃತಿ ಹಂಚಿ ಕೊಂಡಿದ್ದರು. "ನನ್ನ ಭಾಗದ ಜರ್ನಿ ಸಿನಿಮಾದೊಂದಿಗೆ ಇಷ್ಟು ಬೇಗ ಮುಗಿಯುತ್ತೆ ಅಂತ ಅಂದು ಕೊಂಡಿರಲಿಲ್ಲ. ಈ ಪಾತ್ರವನ್ನು ಮಾಡಲು ನನಗೆ ತುಂಬಾ ಹೆಮ್ಮೆಯಿದೆ. ನಾನು ಮಾಡಿದ ಜಾನಕಿಯ ಪಾತ್ರ ನನ್ನೊಳಗೆ ಶಕ್ತಿಯಾಗಿ ಎಂದಿಗೂ ಉಳಿಯಲಿದೆ". ಹೀಗೆಂದು ಕೃತಿ ಬರೆದುಕೊಂಡಿದ್ದರು. ಆದಿಪುರುಷನಿಗೆ ಟೀ-ಸೀರೀಸ್ ಬಂಡವಾಳ ಹೂಡಿದ್ದು, ದೊಡ್ಡ ಬಜೆಟ್‌ನಲ್ಲಿ ಸಿನಿಮಾ ರೆಡಿಯಾಗುತ್ತಿದೆ. ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ. 2022 ಆಗಸ್ಟ್‌ನಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.

ಪ್ರಭಾಸ್ ಅಭಿನಯದ ಬಾಹುಬಲಿ 2 ಸಿನಿಮಾ 2017ರಲ್ಲಿ ರಿಲೀಸ್ ಆಗಿತ್ತು. ನಂತರ ಎರಡು ವರ್ಷದ ಬಳಿಕ ಸಾಹೋ ತರೆಗೆ ಬಂದಿದ್ದು 2019 ರಲ್ಲಿ. ಸಾಹೋ ಅಂದುಕೊಂಡ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಜೊತೆಗೆ ಪ್ರಭಾಸ್ ಅಭಿಮಾನಿಗಳಿಗೂ ನಿರಾಸೆ ತಂದಿತ್ತು. ಹಾಗಾಗಿ ಪ್ರಭಾಸ್ ತಮ್ಮ ಅಭಿಮಾನಿಗಳನ್ನ ಹೆಚ್ಚು ಕಾಯಿಸೋದು ಬೇಡ ಅಂತ ಸಾಲು ಸಾಲು ಸಿನಿಮಾಗಳನ್ನ ಮಾಡಿ ಮುಗಿಸುತ್ತಾ ಇದ್ದಾರೆ. ಸದ್ಯಕ್ಕೆ ಪ್ರಭಾಸ್ ಅಭಿನಯದ ರಾಧೆಶ್ಯಾಮ್ ರಿಲೀಸ್‌ಗೆ ಸಿದ್ಧವಿದೆ. 2022 ಜನವರಿ 14ಕ್ಕೆ ರಾಧೆಶ್ಯಾಮ್ ತೆರೆಕಾಣಲಿದೆ. ನಂತರ ಸಲಾರ್ ಚಿತ್ರವಿದೆ ಆ ಬಳಿಕ ಆದಿಪುಷ್, ಪ್ರಾಕೆಕ್ಟ್ ಕೆ, ಸ್ಪಿರಿಟ್ ಸಿನಿಮಾಗಳು ಸಾಲಿನಲ್ಲಿ ಇವೆ. ಒಟ್ಟಾರೆ ಪ್ರಭಾಸ್ ಸಾಲು ಸಾಲು ಸಿನಿಮಾಗಳನ್ನ ಮಾಡುತ್ತಾ ಇದ್ದು, 2022ರಲ್ಲಿ ಕನಿಷ್ಠ 3 ಸಿನಿಮಾಗಳು ತೆರೆಗೆ ಬರಲಿವೆ.


Click it and Unblock the Notifications











