ರಾಕಿಂಗ್ ಸ್ಟಾರ್ ಯಶ್‌ಗೆ ಸೆಡ್ಡು ಹೊಡೆದ ಪ್ರಭಾಸ್ ; ಕಲ್ಕಿ 2898 ಎಡಿ ಮೊದಲ ದಿನ ಗಳಿಸಿದ್ದೆಷ್ಟು ಕೋಟಿ..?
ಬಾಹುಬಲಿ ನಂತರ ಬಂದ ಸಾಹೋ ಸೋತಾಗ ಅನೇಕರು ಪ್ರಭಾಸ್ ಅವರನ್ನು ಆಡಿಕೊಂಡರು. ರಾಧೆ ಶ್ಯಾಮ್ ಮಕಾಡೆ ಮಲಗಿದಾಗ ಪ್ರಭಾಸ್ ಜಾತಕದಲ್ಲಿಯೇ ದೋಷ ಇದೆ ಎಂದು ವ್ಯಂಗ್ಯ ಮಾಡಿದರು. ಆದಿಪುರುಷ್ ಬಂದಾಗ ಅನೇಕರು ಉಳ್ಳಾಡಿ..ಉಳ್ಳಾಡಿ.. ನಕ್ಕರು. ಸಲಾರ್ ಅಂದುಕೊಂಡ ಸದ್ದು ಮಾಡ್ದೇ ಇದ್ದಾಗ ಪ್ರಭಾಸ್ ಖೇಲ್ ಖತಂ ಎಂದರು.
ಆದರೆ, ಇಷ್ಟೆಲ್ಲ ಆದರೂ.. ಜನ ನಾನಾ ತರಹದ ಮಾತು ಮಾತನಾಡಿದರೂ.. ಪ್ರಭಾಸ್ ತಲೆ ಕೆಡಿಸಿಕೊಳ್ಳಲಿಲ್ಲ. ಬದಲಿಗೆ ತಮ್ಮ ಕೆಲಸವನ್ನು ಅಷ್ಟೇ ಪ್ರಾಮಾಣಿಕತೆಯಿಂದ.. ಶ್ರದ್ಧೆ ಮತ್ತು ಭಕ್ತಿಯಿಂದ ಮಾಡುತ್ತಾ ಬಂದರು. ಆ ಕೆಲಸಕ್ಕೆ ಈಗ ಫಲ ಸಿಕ್ಕಿದೆ. ಪ್ರಭಾಸ್ ಎತ್ತಿದ ಕಲ್ಕಿ ಅವತಾರಕ್ಕೆ ಪ್ರೇಕ್ಷಕರ ವಲಯವಷ್ಟೇ ಅಲ್ಲ, ವಿಮರ್ಷಕರ ಬಣ ಕೂಡ ಬೆಚ್ಚಿ ಬಿದ್ದಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಗುಡುಗು ಸಹಿತ ಭಾರೀ ಮಳೆ ಆಗುತ್ತಿದೆ.

ಹೌದು. ವಿಶ್ವದಾಂದ್ಯಂತ ಕಲ್ಕಿ 2898 ಎಡಿ 180 ಕೋಟಿ ಹಣವನ್ನು ಮೊದಲ ದಿನ ಗಳಿಸಿದೆ. ಆ ಪೈಕಿ ಭಾರತದ ಪಾಲು 95 ಕೋಟಿ ಇದೆ. ಈ 95 ಕೋಟಿಯಲ್ಲಿ ಕೇವಲ ಆಂಧ್ರ ಪ್ರದೇಶದಲ್ಲಿಯೇ ಕಲ್ಕಿ 64.5 ಕೋಟಿ ರೂಪಾಯಿ ಹಣ ಗಳಿಸಿದೆ. ಇನ್ನೂ ತಮಿಳಿನಲ್ಲಿ 04 ಕೋಟಿಯನ್ನು ಗಳಿಸಿರುವ ಕಲ್ಕಿ 2898 ಎಡಿ, ಮಲಯಾಳಂನಲ್ಲಿ 2.2 ಕೋಟಿಯನ್ನು ಗಳಿಸಿದೆ.
ಇನ್ನೂ.. ಪ್ರಭಾಸ್ ಗೆ ಉತ್ತರ ಭಾರತದಲ್ಲಿ ಅಭಿಮಾನಿಗಳಿದ್ದಾರೆ. ನಿಜಾ.. ಇವರ ಹಿಂದಿನ ಸಿನಿಮಾಗಳು ಈ ಪ್ರೇಕ್ಷಕರನ್ನೂ ಕೂಡ ನಿರಾಸೆ ಮಾಡಿದ್ದವು. ಆದರೆ.. ಕಲ್ಕಿ 2898 ಎಡಿ ನಿರಾಸೆ ಮಾಡಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಹಿಂದಿ ಮಾರುಕಟ್ಟೆಯಲ್ಲಿ ಚಿತ್ರ ಮೊದಲ ದಿನ 24 ಕೋಟಿಯನ್ನು ಗಳಿಸಿದೆ. ಕರ್ನಾಟಕದಿಂದ ಪ್ರಭಾಸ್ ಗೆ ಸಿಕ್ಕ ಕಾಣಿಕೆ ಎಷ್ಟು ಅನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಇನ್ನೂ ಕಲ್ಕಿ 2898 ಎಡಿ ಚಿತ್ರದ ಮೂಲಕ ಪ್ರಭಾಸ್, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಹೆಸರಿನಲ್ಲಿದ್ದ ದಾಖಲೆಯನ್ನು ಪುಡಿ ಪುಡಿ ಮಾಡಿದ್ದಾರೆ. ಜವಾನ್ ಚಿತ್ರವನ್ನು ಹಿಂದಿಕ್ಕಿದ್ದಾರೆ. ಭಾರತದಲ್ಲಿ ಮೊದಲ ದಿನ 65 ಕೋಟಿಯನ್ನು ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದ ಜವಾನ್ ಚಿತ್ರವನ್ನು ನಂತರದ ಸ್ಥಾನಕ್ಕೆ ತಳ್ಳಿದ್ದಾರೆ.
ಕೇವಲ ಶಾರುಖ್ ಖಾನ್ ದಾಖಲೆಯನ್ನು ಅಷ್ಟೇ ಅಲ್ಲ ಕಲ್ಕಿ 2898 ಎಡಿ ಚಿತ್ರದ ಮೂಲಕ, ಪ್ರಭಾಸ್ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅವರನ್ನು ಕೂಡ ಸೆಡ್ಡು ಹೊಡೆದಿದ್ದಾರೆ. ವರ್ಲ್ಡ್ ಮಾರ್ಕೆಟ್‌ನಲ್ಲಿ ಕೆ.ಜಿ.ಎಫ್ 2 ಹೆಸರಿನಲ್ಲಿದ್ದ 159 ಕೋಟಿಯ ದಾಖಲೆಯನ್ನು ಮುರಿದಿದ್ದಾರೆ. ತಮ್ಮದೇ ಸಲಾರ್ ಮತ್ತು ಸಾಹೋ ಚಿತ್ರದ ಮೊದಲ ದಿನದ ಗಳಿಕೆಯನ್ನೂ ಹಿಂದಿಕ್ಕಿದ್ದಾರೆ. ದಳಪತಿ ವಿಜಯ್ ಅಭಿನಯದ ಲಿಯೋ ಚಿತ್ರದ ರೆಕಾರ್ಡ್ ಕೂಡ ಬ್ರೇಕ್ ಮಾಡಿದ್ದಾರೆ ಪ್ರಭಾಸ್

ಮೊದಲ ದಿನವೇ ಇಷ್ಟೆಲ್ಲ ಸಾಧಿಸಿ ಭೇದಿಸಿದ ಪ್ರಭಾಸ್ ಗೆ ತಮ್ಮದೇ ಬಾಹುಬಲಿ ಚಿತ್ರದ 217 ಕೋಟಿ ದಾಖಲೆಯನ್ನು ಮುರಿಯಲು ಆಗಲಿಲ್ಲ. ರಾಜ್ ಮೌಳಿ ಅವ್ರದ್ದೇ ಮತ್ತೊಂದು ಸಿನಿಮಾ ಆರ್.ಆರ್.ಆರ್ ಗಳಿಸಿದ್ದ 223 ಕೋಟಿ ಹಣದ ದಾಖಲೆಯನ್ನೂ ಕೂಡ ಪ್ರಭಾಸ್ ಮುರಿಯಲಿಲ್ಲ.
ಉಳಿದಂತೆ ಕಲ್ಕಿ 2898 ಎಡಿ ಚಿತ್ರಕ್ಕೆ ಮೊದಲ ದಿನ ಅತ್ಯುತ್ತಮವಾದ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆ ಇಂದು ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಕೇವಲ ತೆಲುಗು ಭಾಷೆಯಲ್ಲಿ ಮಾತ್ರ ಅಲ್ಲ ಹಿಂದಿ ಮಾರುಕಟ್ಟೆಯಲ್ಲಿ ಕೂಡ ಕಲ್ಕಿ 2898 ಎಡಿ ಮೊದಲ ದಿನಕ್ಕಿಂತ ಉತ್ತಮವಾದ ಪ್ರದರ್ಶನ ನೀಡುವ ಭರವಸೆ ಚಿತ್ರತಂಡಕ್ಕೆ ಇದೆ.


Click it and Unblock the Notifications











