'ಸಲಾರ್' ಟೀಸರ್ ನೋಡಿ ಫ್ಯಾನ್ಸ್ ಬೇಸರ: 10 ಕೋಟಿ ವೀವ್ಸ್ ಸಾಧಿಸಿದ ಬೆನ್ನಲ್ಲೇ ಬಹಿರಂಗ ಪತ್ರ ಬರೆದ ಹೊಂಬಾಳೆ
2 ದಿನಗಳ ಹಿಂದೆ ಬಿಡುಗಡೆಯಾದ 'ಸಲಾರ್' ಟೀಸರ್ ದಾಖಲೆ ಬರೆದಿದೆ. 10 ಕೋಟಿ ವೀವ್ಸ್ ಸಾಧಿಸಿ ಎಲ್ಲರ ಹುಬ್ಬೇರಿಸಿದೆ. ಈ ಹಿಂದಿನ ಎಲ್ಲಾ ಸಿನಿಮಾ ಟೀಸರ್‌ಗಳ ದಾಖಲೆ ಅಳಿಸಿ ಹೊಸ ದಾಖಲೆ ಬರೆದಿದೆ. 24 ಗಂಟೆಗಳಲ್ಲಿ 83 ಮಿಲಿಯನ್ ವೀವ್ಸ್ ಸಾಧಿಸಿದ್ದ ಆಕ್ಷನ್ ಪ್ಯಾಕ್ಡ್ ಟೀಸರ್ 52 ಗಂಟೆಗಳಲ್ಲಿ 100 ಮಿಲಿಯನ್ ಗಡಿ ದಾಟಿದೆ.
'ಸಲಾರ್' ಟೀಸರ್‌ಗೆ ಸಿಕ್ಕ ರೆಸ್ಪಾನ್ಸ್‌ಗೆ ಚಿತ್ರತಂಡ ಖುಷಿಯಾಗಿದೆ. ಆದರೂ ಅಭಿಮಾನಿಗಳ ನಿರೀಕ್ಷೆ ತಲುಪುವಲ್ಲಿ ಟೀಸರ್ ವಿಫಲವಾಗಿದೆ ಎಂದು ಹೇಳಬಹುದು. 'ಸಲಾರ್' ಪ್ರಭಾಸ್ ದರ್ಶನ ಸರಿಯಾಗಿ ಆಗದೇ ಅಭಿಮಾನಿಗಳು ಬೇಸರಗೊಂಡಿದ್ದರು. KGF- 2 ಟೀಸರ್ ಮೀರಿಸುವಂತಹ ಸ್ಯಾಂಪಲ್ ನಿರೀಕ್ಷೆ ಮಾಡಿದ್ದವರಿಗೆ ಆ ಮಟ್ಟಿಗಿನ ಮಜಾ ಸಿಕ್ಕಿರಲಿಲ್ಲ. ಆದರೂ ಪ್ರಭಾಸ್ ಆಕ್ಷನ್ ಧಮಾಕ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಪದೇ ಪದೇ ಟೀಸರ್ ವೀಕ್ಷಿಸಿ ಖುಷಿಪಟ್ಟಿದ್ದಾರೆ. ಪರಿಣಾಮ ಟೀಸರ್ ದಾಖಲೆಯ ವೀವ್ಸ್ ಸಾಧಿಸುತ್ತಾ ಮುನ್ನುಗ್ಗುತ್ತಿದೆ.

ಅಯ್ಯೋ ಟೀಸರ್‌ನಲ್ಲಂತೂ ನಮ್ಮ ನೆಚ್ಚಿನ ನಟನ ದರ್ಶನ ಸರಿಯಾಗಿ ಆಗಲಿಲ್ಲ. ಕೊನೆಪಕ್ಷ ಟ್ರೈಲರ್ ಯಾವಾಗ ಹೇಳಿ? ಅದರಲ್ಲಾದರೂ ನಮಗೆ ತೃಪ್ತಿ ಸಿಗಬಹುದು ಎಂದು ಕೇಳುತ್ತಿದ್ದರು. ಇದೀಗ ಅಭಿಮಾನಿಗಳಿಗೆ ಹೊಂಬಾಳೆ ಸಂಸ್ಥೆ ಬ್ರೇಕಿಂಗ್ ನ್ಯೂಸ್ ಕೊಟ್ಟುಬಿಟ್ಟಿದೆ. ಅಭಿಮಾನಿಗಳಿಗೆ ಧನ್ಯವಾದ ತಿಳಿಸುವುದರ ಜೊತೆಗೆ ಟ್ರೈಲರ್ ರಿಲೀಸ್ ಡೇಟ್ ಘೋಷಿಸಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
ಟೀಸರ್ 10 ಕೋಟಿ ವೀವ್ಸ್
"ಹೃದಯ ತುಂಬಿದ ಧನ್ಯವಾದಗಳು.. ತಮ್ಮೆಲ್ಲರ ಪ್ರೀತಿಯ ಅಭಿಮಾನದ ಪ್ರೋತ್ಸಾಹಕ್ಕೆ ನಾವು ಆಭಾರಿ. ಭಾರತೀಯ ಸಿನಿಮಾ ಸಾಮರ್ಥ್ಯದ ಸಂಕೇತವಾಗಿ ಹೊರಹೊಮ್ಮಿರುವ 'ಸಲಾರ್' ಕ್ರಾಂತಿಗೆ ಮುನ್ನುಡಿಯಾಗಿ ಚಿತ್ರಪ್ರೇಮಿಗಳಿಂದ ದೊರಕಿದ ಪ್ರೀತಿಪೂರ್ವಕ ಬೆಂಬಲದಿಂದ ನಮ್ಮ ಮನತುಂಬಿದೆ. ಭಾರತೀಯ ಚಿತ್ರ 'ಸಲಾರ್' ಸಿನಿಮಾ ಟೀಸರ್ 10 ಕೋಟಿ ಚಿತ್ರರಸಿಕರನ್ನು ತಲುಪಿ ಭಾರತೀಯ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆದಿದೆ. ನಿಮ್ಮ ಅಭಿಮಾನದ ಬೆಂಬಲಕ್ಕೆ ನಾವು ಸದಾ ಋಣಿಗಳು. ನಿಮ್ಮ ಅಚಲ ಬೆಂಬಲವು ನಮ್ಮ ಆಸಕ್ತಿಗೆ ಚೈತನ್ಯ ತುಂಬಿ ಅಸಾಧಾರಣವಾದುದನ್ನು ಪ್ರೇಕ್ಷಕರ ಮುಂದಿಡಲು ಪ್ರೇರೇಪಿಸುತ್ತಿದೆ.
ಆಗಸ್ಟ್ ಕೊನೆ ವಾರದಲ್ಲಿ ಟ್ರೈಲರ್
"ಭಾರತೀಯ ಸಿನಿಮಾದ ಭವ್ಯತೆಯನ್ನು ಸಾರಲಿರುವ ಅತ್ಯಂತ ನಿರೀಕ್ಷಿತ ಚಿತ್ರದ ಟ್ರೈಲರ್ ಅನ್ನು ಬಿಡುಗಡೆಗೊಳಿಸಲು ನಾವು ಸಿದ್ಧರಾಗುತ್ತಿದ್ದೇವೆ. ಆಗಸ್ಟ್ ಕೊನೆಯಲ್ಲಿ ಬಿಡುವು ಮಾಡಿಕೊಳ್ಳಲು ಮರೆಯದಿರಿ. ಅವಿಸ್ಮರಣೀಯ ಅನುಭವ ನೀಡಿ ಪ್ರಪಂಚದಾದ್ಯಂತ ಸದ್ದು ಮಾಡಲಿರುವ ಟ್ರೈಲರ್‌ಗಾಗಿ ನಿರೀಕ್ಷಿಸಿ.. ಕ್ಷಣ ಕ್ಷಣದ ಅಪ್‌ಡೇಟ್‌ಗಾಗಿ ಸದಾ ನಮ್ಮೊಂದಿಗೆ ಜೊತೆಯಾಗಿ ಸಂಪರ್ಕದಲ್ಲಿರಿ. ಮರೆಯಲಾಗದ ಅನುಭವ ನಿಮ್ಮದಾಗಿಸಿಕೊಳ್ಳಲು ತಯಾರಾಗಿ. ಈ ಕುತೂಹಲಭರಿತ ರೋಮಾಂಚನಕಾರಿ ಪಯಣವನ್ನು ನಾವು ಮುಂದುವರಿಸೋಣ. ಚರಿತ್ರೆ ನಿರ್ಮಿಸೋಣ ಹಾಗೂ ಭಾರತೀಯ ಸಿನಿಮಾದ ಸಾಮರ್ಥ್ಯವನ್ನು ಸಂಭ್ರಮಿಸೋಣ."
ತಿಂಗಳಿಗೂ ಮುನ್ನ ಟ್ರೈಲರ್ ಲೆಕ್ಕಾಚಾರ
ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೈಲರ್ ಅನ್ನು ಸಿನಿಮಾ ರಿಲೀಸ್‌ಗಿಂತ ಒಂದು ತಿಂಗಳು ಮೊದಲು ರಿಲೀಸ್ ಮಾಡುವ ಪರಿಪಾಟ ಶುರುವಾಗಿದೆ. ಹೊಂಬಾಳೆ ಸಂಸ್ಥೆ ಕೂಡ ತನ್ನ ಹಿಂದಿನ ಸಿನಿಮಾಗಳಿಗೆ ಇದೇ ಲೆಕ್ಕಾಚಾರ ಮಾಡಿತ್ತು. ಸೆಪ್ಟೆಂಬರ್ 28ಕ್ಕೆ 'ಸಲಾರ್' ಸಿನಿಮಾ ರಿಲೀಸ್ ಆಗಲಿದೆ. ಹಾಗಾಗಿ ಅದಕ್ಕಿಂತ ಒಂದು ತಿಂಗಳು ಹಿಂದೆ ಅಂದರೆ ಆಗಸ್ಟ್ ಕೊನೆ ವಾರದಲ್ಲಿ ಟ್ರೈಲರ್ ರಿಲೀಸ್ ಪ್ಲ್ಯಾನ್ ಮಾಡಲಾಗ್ತಿದೆ.
ಅಭಿಮಾನಿಗಳಿಗೆ ಸಮಾಧಾನ?
'ಸಲಾರ್' ಟೀಸರ್‌ಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಪ್ರಭಾಸ್ ಕಾಣಿಸಿಕೊಳ್ಳುವ ಇನ್ನಷ್ಟು ಶಾಟ್ಸ್ ಇರಬೇಕಿತ್ತು, ಎನ್ನುವ ಮಾತುಗಳು ಕೇಳಿಬಂದಿತ್ತು. ಪ್ರಭಾಸ್ ಅಭಿಮಾನಿಗಳು Disappointment ಎನ್ನುವ ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡಿದ್ದರು. ಹಾಗಾಗಿ ಎಚ್ಚೆತ್ತುಕೊಂಡ ಚಿತ್ರತಂಡ ಟ್ರೈಲರ್ ರಿಲೀಸ್ ಡೇಟ್ ಘೋಷಿಸಿ ಅಭಿಮಾನಿಗಳನ್ನು ಸಮಾಧಾನ ಮಾಡುವ ಕೆಲಸ ಮಾಡಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ ಹೊಂಬಾಳೆ ಸಂಸ್ಥೆ ಬಂಡವಾಳ ಹೂಡಿದೆ.


Click it and Unblock the Notifications











