ಪ್ರಭಾಸ್ ಹಿಂದೆ ಬಿದ್ದಿರುವ ಕಿರಾತಕರಿಗೆ ಖಡಕ್ ಎಚ್ಚರಿಕೆ ನೀಡಿದ 'ದಿ ರಾಜಾ ಸಾಬ್' ತಂಡ..!
ಒಂದು ಸಿನಿಮಾ ಯಾರೋ ಒಬ್ಬರ ಪಾಲ್ಗೊಳ್ಳುವಿಕೆಯಿಂದ ಆಗುವಂಥಾದ್ದಲ್ಲ. ಅದರಲ್ಲಿ ಡೈರೆಕ್ಟರ್, ಹೀರೋ, ಕ್ಯಾಮೆರಾದಿಂದ ಮೊದಲ್ಗೊಂಡು ಲೈಟ್ ಬಾಯ್‌ಗಳ ತನಕ ನೂರಾರು ಮಂದಿಯ ಶ್ರಮವಿರುತ್ತೆ. ನಿರ್ದೇಶನ, ಕ್ಯಾಮೆರಾ, ಕಲಾ ನಿರ್ದೇಶನ, ಎಡಿಟಿಂಗ್, ಸಂಗೀತ, ಸಾಹಸ ನಿರ್ದೇಶನ ... ಇಂಥಾ ಅದೆಷ್ಟೋ ವಿಭಾಗಗಳ, ಅದೆಷ್ಟೋ ಜನರ ಬೆವರ ಹನಿಗಳು ತಾಕದಿದ್ದರೆ ಯಾವ ಚಿತ್ರವೂ ತಯಾರಾಗೋದಿಲ್ಲ. ಆದರೆ..
ಈ ಸತ್ಯ ಕೆಲವೊಮ್ಮೆ ಕೆಲವರಿಗೆ ಅರ್ಥವೇ ಆಗುವುದಿಲ್ಲ. ಸಾಮಾನ್ಯ ಪ್ರೇಕ್ಷಕರ ಕಥೆ ಬಿಡಿ. ಚಿತ್ರರಂಗದಲ್ಲಿದ್ದವರಿಗೆ ಆ ಚಿತ್ರತಂಡದ ಭಾಗವಾದವರಿಗೆಯೇ ಈ ಮಾತು ಅರ್ಥವಾಗುವುದಿಲ್ಲ. ಯಾರದ್ದೋ ಮೇಲಿನ ದ್ವೇಷ, ಅಸೂಯೆ, ವ್ಯೆಯಕ್ತಿಕ ಅಜೆಂಡಾ, ಒಣ ಅಹಂಕಾರಗಳಿಂದ ತಮ್ಮದೇ ಚಿತ್ರಕ್ಕೆ ಇವರು ಮುಳ್ಳಾಗುತ್ತಾರೆ.

ಚಿತ್ರ ಬಿಡುಗಡೆಗೆ ಮುನ್ನವೇ ತಮ್ಮದೇ ಚಿತ್ರವನ್ನು ಸಂಪೂರ್ಣವಾಗಿ ಲೀಕ್ ಮಾಡುತ್ತಾರೆ. ಚಿತ್ರದ ಟೀಸರ್- ಟ್ರೇಲರ್‌ಗಳ ಬಿಡುಗಡೆ ಸಮಾರಂಭದ ಸಂಭ್ರಮಕ್ಕೆ ಕೂಡ ಕೊಳ್ಳಿ ಇಡುತ್ತಾರೆ. ಸದ್ಯ ಪ್ರಭಾಸ್ ಅಭಿನಯದ ದಿ ರಾಜಾ ಸಾಬ್ ಚಿತ್ರದ ಹಿಂದೆ ಕೂಡ ಇದೇ ತರಹದ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ.
ಯಾಕೆಂದರೆ.. ಚಿತ್ರತಂಡ ಅಧಿಕೃತವಾಗಿ ಟೀಸರ್ ಬಿಡುಗಡೆ ಮಾಡುವ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ದಿ ರಾಜಾ ಸಾಬ್ ಟೀಸರ್ ಇಟ್ಟಾಡುತ್ತಿದೆ.
ಹೌದು, ಅಸಲಿಗೆ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ಈ ಡಿಸೆಂಬರ್ 5ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಈಗಿಂದಲೇ ಚಿತ್ರದ ಪ್ರಚಾರ ಶುರು ಮಾಡುವ ಆಲೋಚನೆ ಮಾಡಿರುವ ಚಿತ್ರತಂಡ ಈ ಜೂನ್ 16ಕ್ಕೆ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿತ್ತು.
ಆದರೆ ಈ ಸಮಾರಂಭ ನಡೆಯುವ ಮೊದಲೇ ಯಾರೋ ಕಿಡಿಗೇಡಿಗಳು ತಮ್ಮ ಕೈಚಳಕ ತೋರಿಸಿದ್ದಾರೆ. ಚಿತ್ರದ ಟೀಸರ್‌ನ ಆನ್‌ಲೈನ್‌ನಲ್ಲಿ ಲೀಕ್ ಮಾಡಿದ್ದಾರೆ. ಸಹಜವಾಗಿ ಈ ಕೃತ್ಯವನ್ನು ಚಿತ್ರರಂಗಕ್ಕೆ ಅಥವಾ ಚಿತ್ರತಂಡಕ್ಕೆ ಸಂಬಂಧಿಸದ ವ್ಯಕ್ತಿ ಮಾಡಿರಲಾರ. ಹೀಗಾಗಿಯೇ ಚಿತ್ರತಂಡದ ಒಳಗಿನವರೇ ಈ ಕೃತ್ಯ ಎಸಗಿರಬಹುದು ಎನ್ನುವ ಶಂಕೆಯನ್ನು ವ್ಯಕ್ತಪಡಿಸುತ್ತಿರುವ ಚಿತ್ರತಂಡ ಸದ್ಯ ಅದೇ ಸೋಶಿಯಲ್ ಮೀಡಿಯಾ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದೆ.
ಈ ಕುರಿತು ತಮ್ಮ ಚಿತ್ರದ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ದಿ ರಾಜಾ ಸಾಬ್ ತಂಡ 'ಚಿತ್ರದ ಲೀಕ್ ಕಂಟೆಂಟ್ಗಳನ್ನು ಶೇರ್ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಅವರ ಖಾತೆಯನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಹೇಳಿದೆ. ನಮಗೆ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡುತ್ತೇವೆ ಎಂದು ಕೇಳಿಕೊಂಡಿದೆ. ಟೀಸರ್ ಬಿಡುಗಡೆ ಸಮಾರಂಭವನ್ನು ಜವಾಬ್ದಾರಿಯಿಂದ ಸಂಭ್ರಮಿಸೋಣ, ಎಚ್ಚರದಿಂದಿರಿ ಎಂದು ಕೂಡ ಹೇಳಿದೆ.
ಅಂದ್ಹಾಗೇ 'ಮಹಾನುಭಾವುಡು', 'ಬಾಬು ಬಂಗಾರಂ',ಅಂತಹ 'ಪಕ್ಕಾ ಕಮರ್ಷಿಯಲ್' ಚಿತ್ರಗಳನ್ನು ನಿರ್ದೇಶಿಸಿರುವ ಮಾರುತಿ ಈ ದಿ ರಾಜಾ ಸಾಬ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ 'ದಿ ರಾಜಾಸಾಬ್' ಚಿತ್ರ ನಿರ್ಮಾಣವಾಗಿದೆ. ಇನ್ನು ಈ ಚಿತ್ರದಲ್ಲಿ ಪ್ರಭಾಸ್ ಅವರದ್ದು ದ್ವೀಪಾತ್ರ ಎನ್ನುವ ಮಾತು ಕೇಳಿ ಬರುತ್ತಿದೆ.
ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಇನ್ನು ಬಾಲಿವುಡ್ ಸ್ಟಾರ್‌ಗಳಾದ ಸಂಜಯ್ ದತ್, ಅನುಪಮ್ ಖೇರ್ ಕೂಡ ಚಿತ್ರದಲ್ಲಿದ್ದಾರೆ. ಕಾರ್ತಿಕ್ ಪಳನಿ ಛಾಯಾಗ್ರಹಣ, ತಮನ್ ಸಂಗೀತ ಚಿತ್ರಕ್ಕಿದೆ. ಸದ್ಯ ಈ ಜೂನ್ 16ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು ಚಿತ್ರ ಈ ಡಿಸೆಂಬರ್ 5ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಟೀಸರ್ ನೋಡಲು ಸದ್ಯ ಪ್ರಭಾಸ್ ಭಕ್ತಗಣ ಕಾತುರದಿಂದ ಕಾದು ಕುಳಿತಿದೆ.


Click it and Unblock the Notifications