ವೇದಿಕೆಯಲ್ಲಿ AI ಬಳಸಿ ತನ್ನ ಭಾಷಣ ಅನುವಾದ ಮಾಡಿದ ತಮಿಳು ನಟ; ವಿಡಿಯೋ ವೈರಲ್
ಎಲ್ಲೆಲ್ಲೂ ಈಗ AI ತಂತ್ರಜ್ಞಾನದ ಬಗ್ಗ ಚರ್ಚೆ ನಡೀತಿದೆ. ಕೃತಕ ಬುದ್ಧಿಮತ್ತೆ ಎನ್ನುವುದು ಮಾನವನ ಅದ್ಭುತ ಹಾಗೂ ಕ್ರಾಂತಿಕಾರಿ ಆವಿಷ್ಕಾರ. ಇದರಿಂದ ಸಾಕಷ್ಟು ಜನ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಆದರೆ ಈ ಬದಲಾವಣೆಗೆ ಒಗ್ಗಿಕೊಳ್ಳದೇ ಬೇರೆ ವಿಧಿಯಿಲ್ಲ ಎನ್ನುವಂತಾಗಿದೆ. ಸಾಕಷ್ಟು ಜನ ಈಗಾಗಲೇ AI ಬಳಸಿ ತಮ್ಮ ಕೆಲಸಗಳನ್ನು ಸುಲಭವಾಗಿಸಿಕೊಳ್ಳುತ್ತಿದ್ದಾರೆ. ತಮಿಳು ನಟ ಪ್ರದೀಪ್ ರಂಗನಾಥನ್ ವೇದಿಕೆಯಲ್ಲಿ ತಮ್ಮ ಭಾಷಣವನ್ನು chatgpt ಸಹಾಯದಿಂದ ಅನುವಾದ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಸಾಮಾನ್ಯವಾಗಿ ವೇದಿಕೆಗಳಲ್ಲಿ ಕೆಲವರು ತಮ್ಮ ಭಾಷಣವನ್ನು ಅನುವಾದ ಮಾಡಲು ಮತ್ತೊಬ್ಬರನ್ನು ಬಳಸಿಕೊಳ್ಳುತ್ತಾರೆ. ಪ್ರಧಾನಿ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಭಾಷಾ ಅನುವಾದಕರನ್ನು ಬಳಸಿಕೊಂಡು ತಮ್ಮ ಹಿಂದಿ ಭಾಷಣವನ್ನು ಆಯಾ ಭಾಷೆಗೆ ತರ್ಜುಮೆ ಮಾಡಿಸುವ ಪ್ರಯತ್ನ ಮಾಡುತ್ತಾರೆ. ಕೆಲವೊಮ್ಮೆ ಅನುವಾದ ಮಾಡುವ ವೇಳೆ ಎಡವಟ್ಟು ಆಗುವ ಸಾಧ್ಯತೆಯೂ ಇದೆ. ಆದರೆ ಇನ್ನು ಮುಂದೆ AI ಸಹಾಯದಿಂದ ಅಂತಹ ತಪ್ಪು ನಡೆಯುವುದಿಲ್ಲ ಅನಿಸುತ್ತದೆ.

ಪ್ರದೀಪ್ ರಂಗನಾಥನ್ ನಟನೆಯ 'ಲವ್ ಇನ್ಸೂರೆನ್ಸ್ ಕಂಪನಿ' ಎಂಬ ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಈಗಾಗಲೇ ಸಿನಿಮಾ ಪ್ರಚಾರ ಶುರುವಾಗಿದೆ. ತೆಲುಗಿಗೂ ಡಬ್ ಆಗಿ ಸಿನಿಮಾ ಬಿಡುಗಡೆ ಆಗ್ತಿದೆ. ಹಾಗಾಗಿ ಹೈದರಾಬಾದ್‌ನಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೀತು. ಪ್ರದೀಪ್ ತಮ್ಮ ಸಿನಿಮಾಗಳನ್ನು ವಿಭಿನ್ನವಾಗಿ ಪ್ರಚಾರ ಮಾಡುತ್ತಾರೆ. ಪ್ರದೀಪ್ ನಟನೆಯ 3 ಸಿನಿಮಾಗಳು ಹಿಟ್ ಆಗಿದೆ. ಹಾಗಾಗಿ ಆತನ ಸಿನಿಮಾಗಳ ಬಗ್ಗೆ ಕ್ರೇಜ್ ಹೆಚ್ಚಿದೆ.
ಈ ಹಿಂದೆ 'ಡ್ಯೂಡ್' ಎಂಬ ಚಿತ್ರದಲ್ಲಿ ಪ್ರದೀಪ್ ನಟಿಸಿದ್ದರು. ಆ ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್‌ಗೆ ಹೋಗಿದ್ದಾಗ ವೇದಿಕೆಯಲ್ಲಿ ತಮ್ಮ ತಮಿಳು ಭಾಷಣವನ್ನು ತೆಲುಗಿಗೆ ತರ್ಜುಮೆ ಮಾಡಲು ಆಪ್ತನಿಗೆ ಹೇಳಿದ್ದರು. ಕೊಂಚ ತಮಾಷೆಯಾಗಿ ಮಾತನಾಡಿ ಎಲ್ಲರನ್ನು ರಂಜಿಸಿದ್ದರು. ಭಾಷಾ ಅನುವಾದಕರನ್ನು ಬಳಸಿಕೊಂಡರೆ ಎಡವಟ್ಟು ಆಗುತ್ತದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಅದನ್ನು ನೆನಪಿಸುತ್ತಾ ಈ ಬಾರಿ chatgpt ಬಳಸಿ ವೇದಿಕೆಯಲ್ಲಿ ಭಾಷಣ ಮಾಡಿದ್ದಾರೆ.
ಪ್ರದೀಪ್ ತಾವು ಇಂಗ್ಲೀಷ್‌ನಲ್ಲಿ chatgpt ಜೊತೆ ಮಾತನಾಡಿ, ಅದು ಎಲ್ಲರಿಗೂ ಅರ್ಥವಾಗುವಂತೆ ತೆಲುಗಿನಲ್ಲಿ ಅನುವಾದಿಸಿದ್ದಾರೆ. ಲೈವ್‌ನಲ್ಲಿ ಇದನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಅರೇ, AI ಸಹಾಯದಿಂದ ವೇದಿಕೆಯಲ್ಲಿ ಇಷ್ಟು ಸ್ಪಷ್ಟವಾಗಿ ಭಾಷಾ ಅನುವಾದ ಮಾಡಬಹುದಾ? ಎಂದು ಹುಬ್ಬೇರಿಸಿದ್ದಾರೆ. ಮುಂದೆ ಸಾಕಷ್ಟು ಜನ ಈ ಉಪಾಯ ಬಳಸಿಕೊಳ್ಳುತ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. AI ಏಜಂಟ್ ಜೊತೆ ತಮಷೆಯಾಗಿ ಮಾತನಾಡಿ ಪ್ರದೀಪ್ ನೆರೆದವರ ಗಮನ ಸೆಳೆದಿದ್ದಾರೆ.
ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ. ಪ್ರಪಂಚದಲ್ಲಿ ಎಐ ಮತ್ತಷ್ಟು ಬದಲಾವಣೆ ತರಲಿದೆ. ಈಗ ಜನರನ್ನು ನಂಬುವುದು ಬಿಟ್ಟು ಗೂಗಲ್, ಎಐ ಅನ್ನು ನಂಬಲು ಆರಂಭಿಸಿದ್ದಾರೆ. ಇನ್ನು 15 ವರ್ಷಗಳ ಬಳಿಕ ನಾವು ಯಾರನ್ನು ಪ್ರೀತಿಸಬೇಕು, ಯಾರನ್ನು ಮದುವೆ ಆಗಬೇಕು ಎಂದು ಎಐ ಕೇಳಿ ನಿರ್ಧರಿಸುವಂತಾಗಬಹುದು. 2040ರ ಲವ್ ಸ್ಟೋರಿ ಹೇಗಿರಬಹುದು ಎನ್ನುವುದನ್ನು 'ಲವ್ ಇನ್ಸೂರೆನ್ಸ್ ಕಂಪನಿ' ಚಿತ್ರದಲ್ಲಿ ಹೇಳಲಾಗ್ತಿದೆ. ಅದೇ ಕಾರಣಕ್ಕೆ ಪ್ರದೀಪ್ ಎಐ ಏಜೆಂಟ್ ಬಳಸಿ ತಮ್ಮ ಭಾಷಣ ಅನುವಾದ ಮಾಡಿ ತೋರಿಸುವ ಪ್ರಯತ್ನ ಮಾಡಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ರೋಬೊ ಶ್ವಾನ ಕೂಡ ಗಮನ ಸೆಳೆಯಿತು. ಸಭಾಂಗಣದಲ್ಲಿ ಓಡಾಡುತ್ತಾ ಅತಿಥಿಗಳಿಗೆ ಶೇಕ್ ಹ್ಯಾಂಡ್ ಮಾಡುತ್ತಾ ಹೈಲೆಟ್ ಆಗಿತ್ತು. ನಯನತಾರಾ ಪತಿ ವಿಘ್ನೇಶ್ ಶಿವನ್ ನಿರ್ಮಿಸಿ ನಿರ್ದೇಶನ ಮಾಡುತ್ತಿರುವ ಸಿನಿಮಾ 'ಲವ್ ಇನ್ಸೂರೆನ್ಸ್ ಕಂಪನಿ'. ಕರಾವಳಿ ಮೂಲದ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಎಸ್. ಜೆ ಸೂರ್ಯ, ಯೋಗಿ ಬಾಬು, ಮಾಳವಿಕಾ, ಆನಂದ್ ರಾಜ್, ಸುನಿಲ್ ರೆಡ್ಡಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.
'ಲವ್ ಇನ್ಸೂರೆನ್ಸ್ ಕಂಪನಿ' ಚಿತ್ರದ ಟೀಸರ್‌ನಲ್ಲಿ ನಟ ಯಶ್ ಪೋಸ್ಟರ್ ಬಳಸಿದ್ದು ಹೈಲೆಟ್ ಆಗಿತ್ತು. ಈಗಾಗಲೇ ಚಿತ್ರದ ಸಾಂಗ್ಸ್, ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. ಪ್ರದೀಪ್ ನಟಿಸಿದ 3 ಸಿನಿಮಾಗಳು 100 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಹಾಗಾಗಿ 4ನೇ ಸಿನಿಮಾ ಮೇಲೆ ಕೂಡ ನಿರೀಕ್ಷೆ ಹೆಚ್ಚಾಗಿದೆ. ಏಪ್ರಿಲ್ 10ರಂದು ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











