"ತಾರಕ್ ಜೊತೆ ಊಹೆಗೆ ನಿಲುಕದ ಸಿನ್ಮಾ ಮಾಡ್ತೀನಿ.. ಎಲ್ಲರಿಗೂ ಕನೆಕ್ಟ್ ಆಗುತ್ತೆ": ಪ್ರಶಾಂತ್ ನೀಲ್
'ಸಲಾರ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಪ್ರಶಾಂತ್ ನೀಲ್ ಹೈದರಾಬಾದ್‌ನಲ್ಲೇ ಬೀಡು ಬಿಟ್ಟು ಸಿನಿಮಾ ಬಿಡುಗಡೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸಾಕಷ್ಟು ಸಂದರ್ಶನಗಳನ್ನು ನೀಡುತ್ತಿದ್ದಾರೆ. 'ಸಲಾರ್' ಸಿನಿಮಾ ಜೊತೆಗೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದಾರೆ.
ಈಗಾಗಲೇ 'ಸಲಾರ್' ಟ್ರೈಲರ್ ರಿಲೀಸ್ ಆಗಿದೆ. 'ಉಗ್ರಂ' ಚಿತ್ರಕ್ಕೆ ಸಾಕಷ್ಟು ಹೋಲಿಕೆ ಇದ್ದು ಅದೇ ಕತೆಯನ್ನು ದೊಡ್ಡಮಟ್ಟದಲ್ಲಿ ಕಟ್ಟಿಕೊಡುತ್ತಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಆದರೆ ಈ ಬಗ್ಗೆ ನೀಲ್ ತುಟಿಕ್‌ಪಿಟಿಕ್ ಎನ್ನುತ್ತಿಲ್ಲ. ಇನ್ನುಳಿದಂತೆ 'KGF-3' ಸಿನಿಮಾ ಕೂಡ ಬರುತ್ತೆ ಎಂದಿದ್ದಾರೆ. ಕಥೆ ಕೂಡ ಸಿದ್ಧವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

'KGF' ಸರಣಿಗೆ ಕೆಲಸ ಮಾಡಿದ ಬಹುತೇಕ ತಂಡ 'ಸಲಾರ್' ಚಿತ್ರಕ್ಕೂ ಕೆಲಸ ಮಾಡಿದೆ. ಹೊಂಬಾಳೆ ಸಂಸ್ಥೆಯೇ ಈ ಚಿತ್ರವನ್ನು ಕೂಡ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಹಾಗೂ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ ಸ್ನೇಹಿತರಾಗಿ ನಟಿಸಿದ್ದಾರೆ. ಇಬ್ಬರೂ ಆತ್ಮೀಯ ಸ್ನೇಹಿತರು ಆ ಜನ್ಮ ಶತ್ರುಗಳಾಗಿ ಬದಲಾದ್ರೆ ಆ ಕತೆ ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ದೊಡ್ಡ ಕ್ಯಾನ್ವಾಸ್‌ನಲ್ಲಿ ನೀಲ್ ಹೇಳಲು ಹೊರಟಿದ್ದಾರೆ. ಡಿಸೆಂಬರ್ 22ಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ.
'ಸಲಾರ್' ಬಳಿಕ ಪ್ರಶಾಂತ್ ನೀಲ್ ತನ್ನ ನೆಚ್ಚಿನ ನಟ ಜ್ಯೂ. ಎನ್‌ಟಿಆರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ವಿಚಾರವನ್ನು ಈಗಾಗಲೇ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷ ಮಧ್ಯಭಾಗದಲ್ಲಿ NTR31 ಸಿನಿಮಾ ಶುರುವಾಗಲಿದೆ. ಈಗಾಗಲೇ ಕಥೆ ಕೂಡ ಸಿದ್ಧಪಡಿಸಿಕೊಂಡು ನೀಲ್ ತಯಾರಿ ನಡೆಸುತ್ತಿದ್ದಾರೆ. ತಾರಕ್ ನನ್ನ ಇಷ್ಟದ ನಟ ಎಂದು ನೀಲ್ ಹೇಳಿದ್ದರು. ಹಾಗಾಗಿ ತನ್ನಿಷ್ಟದ ನಟನೊಟ್ಟಿಗೆ ಯಾವ ರೀತಿಯ ಸಿನಿಮಾ ಮಾಡ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಶಾಂತ್ ನೀಲ್ " ನಾನು ಪ್ರತಿ ಸಿನಿಮಾದಲ್ಲಿ ವಿಭಿನ್ನ ಎಮೋಷನ್ ತೋರಿಸಲು ಇಷ್ಟಪಡುತ್ತೇನೆ. NTR31 ಸಿನಿಮಾ ನಾನು ಈವರೆಗೆ ಮಾಡಿದ ಸಿನಿಮಾಗಳಿಗಿಂತ ಬಹಳ ಭಿನ್ನವಾಗಿರುತ್ತದೆ. ಅಭಿಮಾನಿಗಳು ಇದನ್ನು ಆಕ್ಷನ್ ಸಿನಿಮಾ ಎಂದುಕೊಂಡಿದ್ದಾರೆ. ಆದರೆ ಜಾನರ್ ಯಾವುದೇ ಆಗಿದ್ದರೂ ಎಲ್ಲರಿಗೂ ಕನೆಕ್ಟ್ ಆಗುತ್ತದೆ. ಮುಂದಿನ ವರ್ಷ ದ್ವಿತಿಯಾರ್ಧದಲ್ಲಿ ಸಿನಿಮಾ ಆರಂಭಿಸಲು ಸಿದ್ಧತೆ ನಡೀತಿದೆ" ಎಂದು ವಿವರಿಸಿದ್ದಾರೆ.

ಪ್ರಶಾಂತ್ ನೀಲ್ ಮಾತು ಕೇಳಿ ತಾರಕ್ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಹಾಗೂ ಎನ್‌ಟಿಆರ್ ಆರ್ಟ್ಸ್ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಲಿವೆ. NTR31 ಬಳಿ ಪ್ರಶಾಂತ್ ನೀಲ್ 'ಸಲಾರ್' ಸೀಕ್ವೆಲ್ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
'KGF-3' ಸಿನಿಮಾ ಬಗ್ಗೆ ಕೂಡ ಪ್ರಶಾಂತ್ ನೀಲ್ ಮಾತನಾಡಿದ್ದಾರೆ. ಈಗಾಗಲೇ ಕಥೆ ಸಿದ್ಧವಾಗಿದೆ. ಆದರೆ ನಾನು ಸಿನಿಮಾ ನಿರ್ದೇಶನ ಮಾಡ್ತಿನೋ ಇಲ್ವೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
'ಸಲಾರ್' ಹಾಗೂ 'KGF' ಸಿನಿಮಾಗಳ ನಡುವೆ ಲಿಂಕ್ ಇಲ್ಲ ಎಂದು ಈ ಹಿಂದೆ ಪ್ರಶಾಂತ್ ನೀಲ್ ಹೇಳಿದ್ದರು. ಅಭಿಮಾನಿಗಳು ಎರಡೂ ಕಥೆಗಳಿಗೆ ಲಿಂಕ್ ಇರುತ್ತದೆ. ಯಶ್ ಕೂಡ ರಾಕಿ ಭಾಯ್ ಆಗಿ 'ಸಲಾರ್' ಅಖಾಡಕ್ಕೆ ಎಂಟ್ರಿ ಕೊಡುತ್ತಾರೆ ಎಂದುಕೊಂಡಿದ್ದರು. ಆದರೆ ಅಭಿಮಾನಿಗಳ ಕ್ಷಮೆ ಕೇಳಿ ನೀಲ್ ನಿರಾಸೆ ಮೂಡಿಸಿದ್ದರು.
ಮತ್ತೊಂದು ಕಡೆ ಜ್ಯೂ. ಎನ್‌ಟಿಆರ್ 'ದೇವರ' ಹಾಗೂ 'ವಾರ್-2' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಅಂದ್ರೆ 'ದೇವರ' ಸಿನಿಮಾ ಎರಡು ಭಾಗಗಳಾಗಿ ಬಹಳ ದೊಡ್ಡಮಟ್ಟದಲ್ಲಿ ತೆರೆಗೆ ಬರ್ತಿದೆ. ಹಾಗಾಗಿ ನೀಲ್ ಚಿತ್ರಕ್ಕೆ ಯಾವಾಗ ಕಾಲ್‌ಶೀಟ್ ಕೊಡುತ್ತಾರೆ? ಎನ್ನುವ ಚರ್ಚೆ ನಡೀತಿದೆ.


Click it and Unblock the Notifications










