"ನನ್ನ 21 ವರ್ಷಗಳ ಸಿನಿ ಬದುಕಿನಲ್ಲಿ ಪ್ರಶಾಂತ್ ನೀಲ್ ಅತ್ಯುತ್ತಮ ನಿರ್ದೇಶಕ": ಪ್ರಭಾಸ್
ವರ್ಷದ ಬಹುನಿರೀಕ್ಷಿತ ಸಿನಿಮಾ ' ಸಲಾರ್' ಬಿಡುಗಡೆಗೆ ಇನ್ನೊಂದು ವಾರ ಮಾತ್ರ ಬಾಕಿಯಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಈಗಾಗಲೇ ಪೋಸ್ಟರ್ಸ್, ಟೀಸರ್, ಟ್ರೈಲರ್, ಸಾಂಗ್ ರಿಲೀಸ್ ಆಗಿ ಗಮನ ಸೆಳೆದಿದೆ. ಡಿಸೆಂಬರ್ 22ಕ್ಕೆ 'ಡಂಕಿ' ಎದುರು 'ಸಲಾರ್' ಕಾರುಬಾರು ಶುರುವಾಗಲಿದೆ.
ಬಹುಕೋಟಿ ವೆಚ್ಚದಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ 'ಸಲಾರ್' ಸಿನಿಮಾ ನಿರ್ಮಿಸಿದೆ. ಘಟಾನುಘಟಿ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಪ್ರಭಾಸ್ ಅಭಿಮಾನಿಗಳಂತೂ ಚಾತಕ ಪಕ್ಷಿಗಳಂತೆ ಸಿನಿಮಾ ನೋಡಲು ಕಾಯುತ್ತಿದ್ದಾರೆ. ದೊಡ್ಡ ದೊಡ್ಡ ಸೆಟ್‌ಗಳನ್ನು ನಿರ್ಮಾಣ ಮಾಡಿ 'ಸಲಾರ್' ಪ್ರಪಂಚ ಸೃಷ್ಟಿಸಲಾಗಿದೆ.

ಪ್ರಶಾಂತ್ ನೀಲ್ ಎಲಿವೇಷನ್ಸ್ ಹಾಗೂ ಪ್ರಭಾಸ್ ಪರ್ಫಾರ್ಮನ್ಸ್ ಸಿಂಕ್ ಆದ್ರೆ ತೆರೆಮೇಲೆ ಎಂತಹ ಮ್ಯಾಜಿಕ್ ಕ್ರಿಯೇಟ್ ಆಗುತ್ತದೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ. 'KGF' ಸರಣಿ ಬಳಿಕ ಸಹಜವಾಗಿಯೇ ನೀಲ್ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆಯಿದೆ. ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿದ ಅನುಭವದ ಬಗ್ಗೆ ಸ್ವತಃ ಪ್ರಭಾಸ್ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
"ಸಲಾರ್ ಚಿತ್ರದಲ್ಲಿನ ಪಾತ್ರಗಳ ನಡುವೆ ಆಳವಾದ ಭಾವನಾತ್ಮಕ ಸನ್ನಿವೇಶಗಳು ಚಿತ್ರದಲ್ಲಿದೆ. ಪ್ರೇಕ್ಷಕರು ಇಂತಹ ಪಾತ್ರದಲ್ಲಿ ಮೊದಲಬಾರಿಗೆ ನನ್ನನ್ನು ಬೆಳ್ಳಿ ಪರದೆ ಮೇಲೆ ನೋಡಲಿದ್ದಾರೆ" ಎಂದು ಪ್ರಭಾಸ್ ಹೇಳಿದ್ದಾರೆ. ಚಿತ್ರಕ್ಕಾಗಿ ವರ್ಕ್‌ಶಾಪ್ ಮಾಡಿದ್ದರ ಬಗ್ಗೆಯೂ ವಿವರಿಸಿದ್ದಾರೆ.

"ನಾನು ಹಾಗೂ ಪ್ರಶಾಂತ್ ನೀಲ್ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾನು ಏನು ಯೋಚಿಸುತ್ತಿದ್ದೇನೆ ಎಂದು ಪ್ರಶಾಂತ್ ನೀಲ್‌ಗೆ ಹೇಳುತ್ತಿದ್ದೆ. ಆತ ನಾನು ಏನು ಮಾಡಬೇಕು ಎಂದು ಹೇಳುತ್ತಿದ್ದ. ನಾನು ಚೆನ್ನಾಗಿ ಹೊಂದಿಕೆ ಆಗುತ್ತೆ ಎನ್ನಿಸುವ ಒಂದಷ್ಟು ಬಾಡಿ ಲಾಂಗ್ವೇಜ್ ಬಗ್ಗೆ ನಾನು ಹೇಳಿದ್ದೆ. ಆತನಿಗೆ ಅದರಲ್ಲಿ ಒಂದಷ್ಟುಇಷ್ಟವಾಗುತ್ತಿತ್ತು. ಯಾವುದೇ ಹೊಸ ಸೆಷನ್ ಆರಂಭಿಸುವ ಮುನ್ನ ನಾವಿಬ್ಬರು ಮಾತನಾಡುತ್ತಿದ್ದೆವು. ನಾನು ಪಾತ್ರವನ್ನು ನೋಡುತ್ತಿದ್ದ ವಿಧಾನದ ಕಾರಣದಿಂದಾಗಿ, ರಿಲ್ಯಾಕ್ಸ್ ಮಾಡುತ್ತಾ, ಬಹಳ ಖುಷಿ ಖುಷಿಯಾಗಿ ವರ್ಕ್‌ಶಾಪ್ ಮಾಡುತ್ತಿದ್ದೆವು"
ಪ್ರಶಾಂತ್ ನೀಲ್ ಜೊತೆಗಿನ ಕೆಲಸದ ಅನುಭವದ ಬಗ್ಗೆ ಮಾತನಾಡುತ್ತಾ "ನನ್ನ 21 ವರ್ಷಗಳ ಚಿತ್ರ ಬದುಕಿನಲ್ಲಿ ಪ್ರಶಾಂತ್ ನೀಲ್ ಅತ್ಯುತ್ತಮ ನಿರ್ದೇಶಕ. ನನ್ನನ್ನು ಯಾವಾಗ ಶೂಟಿಂಗ್‌ಗೆ ಕರೆಯುತ್ತಾರೋ ಎಂಬ ಚಿಂತೆ ಕಾಡುತ್ತಿತ್ತು. ಸೆಟ್‌ಗೆ ಹೋಗುವುದು ಅಥವಾ ನಟಿಸುವುದಕ್ಕಿಂತ ನೀಡುವುದಕ್ಕಿಂತ ಹೆಚ್ಚಾಗಿ, ಪ್ರಶಾಂತ್ ಅವರೊಂದಿಗೆ ಸಮಯ ಕಳೆಯಲು ನಾನು ಬಯಸುತ್ತಿದ್ದೆ. ಇದು ಸದಾ ನನ್ನ ಮನಸ್ಸಿಗೆ ಬರುತ್ತಿದ್ದಂತಹ ವಿಷಯ. ಕಳೆದ 21 ವರ್ಷಗಳಲ್ಲಿ ನಾನು ಇದನ್ನು ಎಂದಿಗೂ ಅನುಭವಿಸಲಿಲ್ಲ. ನಾನು 6 ತಿಂಗಳ ಕಾಲ ಈ ನೋವನ್ನು ಅನುಭವಿಸಿದೆ. ಒಂದು ತಿಂಗಳೊಳಗೆ ನಾವು ತುಂಬಾ ಹತ್ತಿರವಾದೆವು ಎಂದು ನನಗೆ ಅನ್ನಿಸುತ್ತದೆ" ಎಂದು ಪ್ರಭಾಸ್ ಹೇಳಿದ್ದಾರೆ.
'ಸಲಾರ್' ಚಿತ್ರದಲ್ಲಿ ಇಬ್ಬರು ಸ್ನೇಹಿತರ ಕಥೆಯನ್ನು ಪ್ರಶಾಂತ್ ನೀಲ್ ಹೇಳುತ್ತಿದ್ದಾರೆ. ಪ್ರಭಾಸ್ ಸ್ನೇಹಿತನ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ಚಿತ್ರಕ್ಕಾಗಿ ಖಾನ್ಸಾರ್ ಎನ್ನುವ ಹೊಸ ಪ್ರಪಂಚವನ್ನೇ ನೀಲ್ ಸೃಷ್ಟಿಸಿದ್ದು ಅಲ್ಲೇ ದೇವ ಹಾಗೂ ವರದರಾಜ್ ಮನ್ನಾರ್ ಕಥೆ ಸಾಗುತ್ತದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ದೊಡ್ಡ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ.
ಜಗಪತಿ ಬಾಬು, ಈಶ್ವರಿ ರಾವ್, ಗರುಡ ರಾಮ್, ಪ್ರಮೋದ್, ಟಿನ್ನು ಆನಂದ್ ಸೇರಿದಂತೆ ಘಟಾನುಘಟಿ ಕಲಾವಿದರು 'ಸಲಾರ್' ತಂಡದಲ್ಲಿ ಇದ್ದಾರೆ. ಟ್ರೈಲರ್ ನೋಡಿ ಕೆಲವರು ಇದು ಕನ್ನಡ 'ಉಗ್ರಂ' ರೀಮೆಕ್ ಎನ್ನುತ್ತಿದ್ದಾರೆ. ಇದು ನಿಜಾನಾ? ಸುಳ್ಳಾ? ಅಥವಾ 'ಉಗ್ರಂ' ಕಥೆಯನ್ನೇ ಬಹಳ ದೊಡ್ಡದಾಗಿ ನೀಲ್ ಹೇಳಿದ್ದಾರಾ? ಎನ್ನುವ ಪ್ರಶ್ನೆಗಳಿಗೆ ಡಿಸೆಂಬರ್ 22ರಂದು ಉತ್ತರ ಸಿಗಲಿದೆ.


Click it and Unblock the Notifications











