ತೆಲುಗು ನಟ ವಿಜಯ್ ದೇವರಕೊಂಡ ಮನೆಗೆ ನಿರ್ದೇಶಕ ಪ್ರಶಾಂತ್ ನೀಲ್; ಕ್ರೇಜಿ ಪ್ರಾಜೆಕ್ಟ್ ಫಿಕ್ಸ್?
ಇಬ್ಬರು ಸ್ಟಾರ್ ನಟರು ಅಥವಾ ಸ್ಟಾರ್ ನಿರ್ದೇಶಕ ಹಾಗೂ ನಟನ ಭೇಟಿ ಸಾಕಷ್ಟು ಊಹಾಪೋಹಕ್ಕೆ ಕಾರಣವಾಗುತ್ತಿದೆ. 'KGF' ಸರಣಿ ಸಿನಿಮಾಗಳ ಮೂಲಕ ಪ್ರಶಾಂತ್ ನೀಲ್ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೇರಿದ್ದಾರೆ. ಬಳಿಕ 'ಸಲಾರ್' ಸಿನಿಮಾ ಮಾಡಿ ಮತ್ತೆ ಸಂಚಲನ ಸೃಷ್ಟಿಸಿದ್ದರು. ಇದೀಗ ವಿಜಯ್ ದೇವರಕೊಂಡ ಮನೆಗೆ ನೀಲ್ ಭೇಟಿ ವಿಚಾರ ಭಾರೀ ಸದ್ದು ಮಾಡ್ತಿದೆ.
'ಸಲಾರ್' ಬಳಿಕ ಪ್ರಶಾಂತ್ ನೀಲ್ ಸೀಕ್ವೆಲ್ ಪ್ಲ್ಯಾನ್ ಮಾಡುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಸಲಾರ್' ಬಳಿಕ ನೀಲ್ ಜ್ಯೂ. ಎನ್‌ಟಿಆರ್ ನಟನೆಯ 31ನೇ ಸಿನಿಮಾ ಕೈಗತ್ತಿಕೊಳ್ಳಬೇಕಿತ್ತು. ಆದರೆ ತಾರಕ್ 'ದೇವರ' ಹಾಗೂ 'ವಾರ್-2' ಬ್ಯುಸಿಯಾದ ಹಿನ್ನೆಲೆ NTR31 ತಡವಾಗುವಂತಾಗಿದೆ. ಅತ್ತ ಪ್ರಭಾಸ್ ಕೂಡ ಬೇರೆ ಬೇರೆ ಸಿನಿಮಾಗಳಲ್ಲಿ ತಲ್ಲೀನರಾಗಿದ್ದಾರೆ. 'ರಾಜಾ ಸಾಬ್' ಹಾಗೂ 'ಕಲ್ಕಿ' ಸಿನಿಮಾಗಳ ಚಿತ್ರೀಕರಣ ನಡೀತಿದೆ. ಸಂದೀಪ್ ರೆಡ್ಡಿ ವಂಗಾ ಜೊತೆ 'ಸ್ಪಿರಿಟ್' ಎನ್ನುವ ಸಿನಿಮಾ ಒಪ್ಪಿಕೊಂಡಿದ್ದಾರೆ. 'ಸೀತಾರಾಮಂ' ಚಿತ್ರದ ನಿರ್ದೇಶಕ ಜೊತೆಗೂ ಒಂದು ಸಿನಿಮಾ ಫೈನಲ್ ಮಾಡಿದ್ದಾರೆ.

ಪ್ರಭಾಸ್ ಹಾಗೂ ತಾರಕ್ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದು ಎನ್ನುವ ಅನುಮಾನ ಶುರುವಾಗಿದೆ. 'ಸಲಾರ್'-2 ಸದ್ಯಕ್ಕೆ ಶುರುವಾಗಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಹಾಗಿದ್ದರೆ ನೀಲ್ ಮುಂದೇನು ಮಾಡುತ್ತಾರೆ ಎನ್ನುವ ಗೊಂದಲ ಕೆಲವರಲ್ಲಿದೆ. ಇದೆಲ್ಲದರ ನಡುವೆ ಪ್ರಶಾಂತ್ ನೀಲ್ ತೆಲುಗು ನಟ ವಿಜಯ್ ದೇವರಕೊಂಡ ಭೇಟಿ ಮಾಡಿರುವ ವಿಚಾರ ಎಲ್ಲರ ಗಮನ ಸೆಳೆದಿದೆ.
ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ಮನೆಗೆ ಪ್ರಶಾಂತ್ ನೀಲ್ ಭೇಟಿ ಕೊಟ್ಟಿದ್ದರು ಎನ್ನಲಾಗ್ತಿದೆ. ದೇವರಕೊಂಡ ಮ್ಯಾನೇಜರ್ ಡೈರೆಕ್ಟರ್ ನೀಲ್ ಜೊತೆ ಕ್ಲಿಕ್ಕಿಸಿಕೊಂಡುವ ಫೋಟೊ ವೈರಲ್ ಆಗುತ್ತಿದೆ. ಇದನ್ನು ನೋಡಿ ಇಬ್ಬರು ಸೇರಿ ಸಿನಿಮಾ ಮಾಡುತ್ತಾರಾ? ಎನ್ನುವ ಊಹಾಪೋಹಕ್ಕೆ ಕಾರಣವಾಗಿದೆ. 'ಲೈಗರ್' ಹಾಗೂ 'ಫ್ಯಾಮಿಲಿ ಸ್ಟಾರ್' ಸಿನಿಮಾಗಳ ಸೋಲಿನಿಂದ ವಿಜಯ್ ಕಂಗೆಟ್ಟಿದ್ದಾರೆ. ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ.
ನೀಲ್ ರೀತಿಯ ಮಾಸ್ ಡೈರೆಕ್ಟರ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ನಟಿಸಿದರೆ ಬಾಕ್ಸಾಫೀಸ್ ಶೇಕ್ ಆಗುತ್ತದೆ ಎಂದು ಅಭಿಮಾನಿಗಳು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಮೇ 9ಕ್ಕೆ ದೇವರಕೊಂಡ ಹುಟ್ಟುಹಬ್ಬ. ಅದೇ ದಿನ ನೀಲ್ ಸರ್‌ಪ್ರೈಸ್ ಕೊಡ್ತಾರಾ? ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ನಮ್ಮ ನೆಚ್ಚಿನ ಹೀರೊ ಒಂದು ಸಿನಿಮಾ ಮಾಡಿ ಎಂದು ವಿಜಯ್ ಫ್ಯಾನ್ಸ್ ಸಹ ಮನವಿ ಮಾಡುತ್ತಿದ್ದಾರೆ.

ಬಣ್ಣದಲೋಕದಲ್ಲಿ ಏನು ಬೇಕಾದರೂ ನಡೆಯಬಹುದು. ಇದು ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೆಯುತ್ತಿರುವ ಕಾಲ. ಹಿಂದೆ 'KGF' ಸರಣಿ ಬಳಿ ಪ್ರಶಾಂತ್ ನೀಲ್ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಚರ್ಚೆ ನಡೆಯುತ್ತಿದ್ದಾಗ 'ಸಲಾರ್' ಸಿನಿಮಾ ಘೋಷಣೆ ಆಗಿತ್ತು. ದೊಡ್ಡ ಸಕ್ಸಸ್ ಬಳಿಕ ನೀಲ್ ತೆಲುಗು ಚಿತ್ರರಂಗಕ್ಕೆ ಹೋಗಿದ್ದರ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಬಳಿಕ ತಾರಕ್ ಜೊತೆಗೂ ಒಂದು ಸಿನಿಮಾ ಘೋಷಿಸಿದರು. ಹಾಗಾಗಿ ಏನ್ ಬೇಕಾದರೂ ನಡೆಯಬಹುದು ಎಂದು ಕೆಲವರು ಹೇಳುತ್ತಿದ್ದಾರೆ.
ಭೇಟಿ ವೇಳೆ ಯಾವುದೇ ಸಿನಿಮಾ ಚರ್ಚೆ ನಡೆದಿಲ್ಲ ಎಂದು ಪ್ರಶಾಂತ್ ನೀಲ್ ಆಪ್ತ ಮೂಲಗಳು ಸ್ಪಷ್ಟನೆ ನೀಡಿರುವುದಾಗಿ ವರದಿಯಾಗಿದೆ. ಗೌತಮ್ ತಿನ್ನನೂರಿ ನಿರ್ದೇಶನದ ಹೊಸ ಚಿತ್ರದಲ್ಲಿ ವಿಜಯ್ ದೇವರಕೊಂಡ ನಟಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ 'ಫ್ಯಾಮಿಲಿ ಸ್ಟಾರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಚಿತ್ರದಲ್ಲಿ ವಿಜಯ್ ದೇವರಕೊಂಡ ಜೋಡಿಯಾಗಿ ಮೃಣಾಲ್ ಠಾಕೂರ್ ನಟಿಸಿದ್ದರು.


Click it and Unblock the Notifications











