ಅದೊಂದು ದೃಶ್ಯಕ್ಕೆ ನಾನು, ಮಹೇಶ್ 93 ಟೇಕ್ ತಗೊಂಡಿದ್ದೀವಿ.. ರಾಜಮೌಳಿ ನಿರ್ದೇಶನದಲ್ಲಿ ನಟಿಸೋದು ಕಷ್ಟ ಕಷ್ಟ
ಎಸ್. ಎಸ್ ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಮುಗಿಸುತ್ತಿದ್ದಾರೆ. ಮಹೇಶ್ ಬಾಬು ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಿಯಾಂಕ ಚೋಪ್ರಾ ಬಣ್ಣ ಹಚ್ಚಿದ್ದಾರೆ. ಸಂದರ್ಶನವೊಂದರಲ್ಲಿ ಪೃಥ್ವಿರಾಜ್ ಮಾತನಾಡಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಿರ್ದೇಶಕ ರಾಜಮೌಳಿ ಮಿ. ಪರ್ಫೆಕ್ಷನಿಸ್ಟ್ ಎನ್ನುವುದು ಗೊತ್ತೇಯಿದೆ. ಅವರೊಟ್ಟಿಗೆ ಕೆಲಸ ಮಾಡಿದ ಸಾಕಷ್ಟು ಜನ ಈ ಮಾತು ಹೇಳಿದ್ದಾರೆ. ಮೌಳಿ 'ಕೆಲಸದ ವಿಚಾರದಲ್ಲಿ ರಾಕ್ಷಸ' ಎಂದು ಸ್ವತಃ ಪತ್ನಿ ರಮಾ ಹೇಳಿದ್ದರು. 'RRR' ಚಿತ್ರದ 'ನಾಟು ನಾಟು' ಗೀತೆಗೆ ನಾನು, ಚರಣ್ ಒಂದೇ ರೀತಿ ಡ್ಯಾನ್ಸ್ ಮಾಡಬೇಕು ಎಂದು ಸಾಕಷ್ಟು ಟೇಕ್ ತೆಗೆದುಕೊಳ್ಳುವಂತಾಯ್ತು. ನನಗಂತೂ ಸಾಕು ಸಾಕಾಗೋಯ್ತು ಎಂದು ಜ್ಯೂ. ಎನ್‌ಟಿಆರ್ ಹೇಳಿದ್ದರು. ಸದ್ಯ ಜಕ್ಕಣ್ಣ ಬಗ್ಗೆ ಪೃಥ್ವಿರಾಜ್ ಸುಕುಮಾರನ್ ಇದೇ ಮಾತು ಹೇಳಿದ್ದಾರೆ.

ಮಲಯಾಳಂ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಸದ್ಯ ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 'ಸಲಾರ್' ಬಳಿಕ 'ವಾರಣಾಸಿ' ಚಿತ್ರದಲ್ಲಿ ರಾಜಮೌಳಿ ಜೊತೆ ಕೈಜೋಡಿಸಿದ್ದಾರೆ. The Hollywood Reporter India ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಪೃಥ್ವಿರಾಜ್ ಭಾಗಿ ಆಗಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ರಾಜಮೌಳಿ ನಿರ್ದೇಶನದ ಬಗ್ಗೆ ಮಾಲಿವುಡ್ ನಟ ಮೆಚ್ಚಿಕೊಂಡಾಡಿದ್ದಾರೆ. ಸಿನಿಮಾ ಅದ್ಭುತವಾಗಿ ಮೂಡಿ ಬರ್ತಿದೆ ಎಂದು ತಿಳಿಸಿದ್ದಾರೆ.
'ವಾರಣಾಸಿ' ಸಿನಿಮಾ ಸೆಟ್‌ಗೆ ಹೋಗಿ ರಾಜಮೌಳಿ ಅವ್ರನ್ನು ನೋಡಿದ್ರೆ, ಹೊಸ ನಿರ್ದೇಶಕನೊಬ್ಬ ಮೊದಲ ಬಾರಿ ಸಿನಿಮಾ ನಿರ್ದೇಶನದ ಅವಕಾಶ ಸಿಕ್ಕಾಗ ಹೇಗೆ ಉತ್ಸುಕನಾಗಿ ಇರ್ತಾನೋ ಅವ್ರು ಆ ರೀತಿ ಇರ್ತಾರೆ. ನಾನು ಇಂತಹ ಫಿಲ್ಮ್ ಮೇಕರ್ ಜೊತೆ ಕೆಲಸ ಮಾಡಿಲ್ಲ. ಬೆಳಗ್ಗೆ 7.30ಕ್ಕೆ ಶಾಟ್ ಅಂದ್ರೆ, ನಾವು ಹೋಗುವಷ್ಟರಲ್ಲಿ ಜಿಮ್ಮಿ ಜಿಪ್ ಸಮೇತ 10-12 ರಿಹರ್ಸಲ್ ಮಾಡಿ ಕಾಯ್ತಿರ್ತಾರೆ. ಸರ್ ನೀವು ಎಷ್ಟು ಹೊತ್ತಿಗೆ ಬಂದಿದ್ದು ಅಂದ್ರೆ, ಬೆಳಗ್ಗೆ 5.30ಕ್ಕೆ ಅಂತಾರೆ. ಅವ್ರೇ ಸೆಟ್‌ನಿಂದ ಕೊನೆಯದಾಗಿ ಹೊರಗೆ ಬರ್ತಾರೆ. ಚಿತ್ರೀಕರಣದ ವೇಳೆ 20 ನಿಮಿಷ ಲಂಚ್ ಬ್ರೇಕ್ ತೆಗೆದುಕೊಳ್ತಿದ್ರು. ಅವ್ರಿಗೆ ತಾನು ಏನು ಸಾಧಿಸಿದ್ದೀನಿ ಎನ್ನುವುದು ಗೊತ್ತಿಲ್ಲ. ಇವತ್ತಿಗೂ ಹೊಸ ನಿರ್ದೇಶಕನಂತೆ ಕೆಲಸ ಮಾಡುತ್ತಾರೆ ಎಂದು ಪೃಥ್ವಿರಾಜ್ ವಿವರಿಸಿದ್ದಾರೆ.
ನನಗೆ ಮೊದಲ ಬಾರಿ ರಾಜಮೌಳಿ ಅವ್ರು ಕಥೆ ಹೇಳಿದಾಗ ಅದೊಂದು ಸೀಕ್ವೆನ್ಸ್ ಹೇಗೆ ಶೂಟ್ ಮಾಡ್ತೀರಾ ಎಂದು ಕೇಳ್ದೆ. ನನಗೂ ಗೊತ್ತಿಲ್ಲ, ನೋಡೋಣ ಅಂದ್ರು.. ಆ ಸೀಕ್ವೆನ್ಸ್ ಅನ್ನು ಬಹಳ ಅದ್ಭುತವಾಗಿ ಸೆರೆಹಿಡಿದರು. ಇಷ್ಟು ದೊಡ್ಡ ಸಿನಿಮಾ ನಾನಂತೂ ಮಾಡಿಲ್ಲ. ಅಷ್ಟು ದೊಡ್ಡ ಕ್ವಾನ್ವಾಸ್, ಸ್ಕೇಲ್ ಇರುವ ಸಿನಿಮಾ ಇದು. ಮೌಳಿ ಅದ್ಭುತ ನಟ. ತನಗೆ ಏನು ಬೇಕು ಎಂದು ಸ್ವತಃ ಅಭಿನಯಿಸಿ ತೋರಿಸ್ತಾರೆ. ಸುಮ್ಮನೆ ಹೇಳ್ತಿಲ್ಲ.. ಒಂದು ಶಾಟ್‌ನಲ್ಲಿ ನಾನು, ಮಹೇಶ್ ಹೆಚ್ಚು ಕಮ್ಮಿ 93ರಿಂದ 94 ಟೇಕ್ ತಗೊಂಡಿದ್ದೀವಿ. ಬೆಳಗ್ಗೆ ಶುರು ಮಾಡಿ, ಮಧ್ಯಾಹ್ನ ಲಂಚ್ ಬ್ರೇಕ್ ಮುಗೀತು.. ಆದ್ರು ಮುಗಿಯಲಿಲ್ಲ. ಸಂಜೆ ಬ್ರೇಕ್ ತಗೊಂಡು ಹೋದಾಗ್ಲು ಮುಗಿಯಲಿಲ್ಲ.. ಕೊನೆಗೆ ಇವತ್ತು ಆಗ್ಲಿಲ್ಲ, ನಾಳೆ ಬೆಳಗ್ಗೆ ಮಾಡೋಣ ಬಿಡಿ ಎಂದುಬಿಟ್ರು.. ಅಷ್ಟರಮಟ್ಟಿಗೆ ರಾಜಮೌಳಿ ಪರ್ಫೆಕ್ಷನ್ ಬಯಸ್ತಾರೆ ಎಂದು ಪೃಥ್ವಿರಾಜ್ ತಿಳಿಸಿದ್ದಾರೆ.
ಆಗಸ್ಟ್ 9ರಂದು ಮಹೇಶ್ ಬಾಬು ಹುಟ್ಟುಹಬ್ಬ. ಅದೇ ಸಂಭ್ರಮದಲ್ಲಿ ಚಿತ್ರದ ಟೀಸರ್ ಬಿಡುಗಡೆ ಆಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರದಲ್ಲಿ ರುದ್ರ ಹಾಗೂ ಶ್ರೀರಾಮನಾಗಿ ಎರಡು ಪಾತ್ರಗಳಲ್ಲಿ ಮಹೇಶ್ ನಟಿಸುತ್ತಿದ್ದಾರೆ. ದುಷ್ಠ ಕುಂಭ ಆಗಿ ಪೃಥ್ವಿರಾಜ್ ರುದ್ರನಿಗೆ ಸವಾಲು ಹಾಕಲಿದ್ದಾರೆ. ಮುಂದಿನ ವರ್ಷ ಏಪ್ರಿಲ್ 7ಕ್ಕೆ 'ವಾರಣಾಸಿ' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications