ಸೂರ್ಯನ ಭೀತಿಗೆ ನಡುಗಿದ ದ್ವಾರಕೀಶ್ ಚಾರುಲತಾ
ಬಹುಭಾಷಾ ತಾರೆ ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿರುವ 'ಚಾರುಲತಾ', ಕನ್ನಡ, ತಮಿಳು ಹಾಗೂ ತೆಲುಗು ಹೀಗೆ ಮೂರು ಭಾಷೆಗಳಲ್ಲಿ ನಿರ್ಮಾಣವಾಗಿರುವ ಚಿತ್ರ. ಈ ಚಿತ್ರವನ್ನು ತೆರೆಗೆ ತರಲು ದ್ವಾರಕೀಶ್ ಮಗ ಯೋಗಿ, ಬಹಳಷ್ಟು ಅರ್ಜೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಸಿಗುವ ಮೊದಲ ಕಾರಣ ತಮಿಳು ನಟ ಸೂರ್ಯರ ಭೀತಿ. ಅದಕ್ಕೆ ಕಾರಣ, ಸದ್ಯದಲ್ಲೇ ತಮಿಳು ಸೂಪರ್ ಸ್ಟಾರ್ ಸೂರ್ಯರ 'ಮಾತ್ರಾನ್' ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಶಿವರಾಜ್ ಕುಮಾರ್ ನಾಯಕತ್ವ ಹಾಗೂ ಓಂ ಪ್ರಕಾಶ್ ರಾವ್ ನಿರ್ದೇಶನದ 'ಶಿವ' ಚಿತ್ರದ ಬಿಡುಗಡೆ ದಿನವೇ ಈ 'ಚಾರುಲತಾ' ಚಿತ್ರ ಕೂಡ ಬಿಡಗಡೆಯಾಗುತ್ತಿದೆ. ಇನ್ನೂ ಆಡಿಯೋ ಬಿಡುಗಡೆಯಾಗಿಲ್ಲ, ಅದಿರಲಿ, ಚಾರುಲತಾ ಚಿತ್ರ ಸೆನ್ಸಾರ್ ಕೂಡ ಆಗಿಲ್ಲ. ಪ್ರಚಾರವನ್ನು ಇನ್ನೂ ಪ್ರಾರಂಭಿಸಿಲ್ಲ. ಹೀಗಿರುವಾಗ ಇದ್ದಕ್ಕಿಂದಂತೆ ಬಿಡುಗಡೆ ಮಾಡಲು ಇರುವ ಏಕೈಕ ಕಾರಣ ಸೂರ್ಯರ 'ಮಾತ್ರನ್' ಎಂಬುದು ಪಕ್ಕಾ ಎನ್ನಲಾಗುತ್ತಿದೆ.
ಜೊತೆಗೆ 'ಮಾತ್ರಾನ್' ಹಾಗೂ 'ಚಾರುಲತಾ' ಚಿತ್ರದ ಕಥೆಗಳಲ್ಲಿರುವ ಸಾಮ್ಯತೆ ಮತ್ತೊಂದು ಕಾರಣ. ಈ ಎರಡರಲ್ಲೂ ಸಯಾಮಿ ಅವಳಿಗಳ ಕಥೆಯಿದ್ದು ಯಾವುದು ಮೊದಲು ಬಿಡುಗಡೆಯಾಗುವುದೋ ಅದಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುವುದೆಂಬ ಲೆಕ್ಕಾಚಾರವೂ ದ್ವಾರಕೀಶ್ ತಲೆಯಲ್ಲಿದ ಎಂಬುದು ಗಾಂಧಿನಗರಿಗರ ಮಾತು. ಅದೇನೇ ಇರಲಿ, ಚಾರುಲತಾ ತರಾತುರಿಯ ಬಿಡುಗಡೆಗೆ ಸಜ್ಜಾಗಿರುವುದಂತೂ ನಿಜ.
ಈ ಬಗ್ಗೆ ಚಾರುಲತಾ ನಿರ್ಮಾಪಕ ಯೋಗಿ ದ್ವಾರಕೀಶ್, "ಕೆಲವೇ ದಿನಗಳಲ್ಲಿ ನಮ್ಮ ಚಿತ್ರದ ಪ್ರಚಾರಕಾರ್ಯು ಪ್ರಾರಂಭಿಸಲಿದ್ದೇವೆ. ಮೂರು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿರುವುದರಿಂದ ಪ್ರಚಾರವೂ ಒಟ್ಟಿಗೆ ಸಾಗಲಿದೆ. ಶೀಘ್ರದಲ್ಲೇ ಮೂರೂ ಭಾಷೆಗಳಲ್ಲಿ ಆಡಿಯೋ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಈ ಕುರಿತ ಪತ್ರಿಕಾಗೋಷ್ಠಿ, ಟ್ರೇಲರ್ ಗಳ ಬಿಡುಗಡೆ, ಪತ್ರಿಕೆ-ಟಿವಿ ಮಾಧ್ಯಮಗಳಲ್ಲಿ ಪ್ರಚಾರ ಎಲ್ಲವೂ ಪ್ರಾರಂಭ" ಎಂದಿದ್ದಾರೆ. ಮುಂದೇನಾಗಲಿದೆಯೋ...! (ಒನ್ ಇಂಡಿಯಾ ಕನ್ನಡ)


Click it and Unblock the Notifications












