ಹನುಮಂತನಾಗಿ ರಾಮ್‌ಚರಣ್? ಯಾವ ಸಿನಿಮಾ? ನಿರ್ಮಾಪಕರು ಹೇಳಿದ್ದೇನು?
ಚಿತ್ರರಂಗದಲ್ಲೀಗ ಪೌರಾಣಿಕ, ಐತಿಹಾಸಿಕ ಸಿನಿಮಾಗಳ ಟ್ರೆಂಡ್ ನಡೆಯುತ್ತಿದೆ. ಆಕ್ಷನ್ ಸಿನಿಮಾಗಳಲ್ಲಿ ಕೂಡ ದೇವರ ಪ್ರಸ್ತಾಪವನ್ನು ತರಲಾಗುತ್ತಿದೆ. ಇತ್ತೀಚೆಗೆ ಬಂದ 'ಕಾರ್ತಿಕೇಯ-2', 'ಕಾಂತಾರ', 'ಹನುಮಾನ್', 'ಕಲ್ಕಿ 2898 AD' ಸಿನಿಮಾಗಳಲ್ಲಿ ಈ ಪ್ಲ್ಯಾನ್ ವರ್ಕ್‌ಔಟ್ ಆಗಿದೆ. ಹಾಗಾಗಿ ಫಿಲ್ಮ್ ಮೇಕರ್ಸ್ ಇಂತಹ ಕಥೆಗಳನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ.
'ಕಲ್ಕಿ 2898 AD' ಚಿತ್ರದಲ್ಲಿ ಮಹಾಭಾರತದ ಅಂಶಗಳನ್ನು ಸೇರಿಸಿ ನಾಗ್ ಅಶ್ವಿನ್ ಮ್ಯಾಜಿಕ್ ಮಾಡಿದ್ದಾರೆ. ದ್ವಾಪರಯುಗಕ್ಕೂ ಕಲ್ಕಿ ಪುರಾಣಕ್ಕೂ ಲಿಂಕ್ ಇಟ್ಟು ಸಿನಿಮಾ ಮಾಡಿ ಗೆದ್ದಿದ್ದಾರೆ. 'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ ಪಂಜುರ್ಲಿ ಹಾಗೂ ಗುಳಿಗ ದೈವಗಳ ವಿಚಾರಗಳನ್ನು ಸೊಗಸಾಗಿ ತೆರೆಗೆ ತರುವ ಪ್ರಯತ್ನ ಮಾಡಿದ್ದರು. ಸೀಕ್ವೆಲ್‌ನಲ್ಲಿ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ.

ಟಾಲಿವುಡ್‌ನಲ್ಲಿ 'ಹನುಮಾನ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈಗಾಗಲೇ ಆ ಚಿತ್ರದ ಸೀಕ್ವೆಲ್ ಘೋಷಣೆ ಆಗಿದೆ. 'ಜೈ ಹನುಮಾನ್' ಟೈಟಲ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಆ ಚಿತ್ರದಲ್ಲಿ ರಾಮ್‌ಚರಣ್ ಹನುಮಂತನ ಪಾತ್ರ ಮಾಡುತ್ತಾರೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ಶುರುವಾಗಿದೆ. ಪ್ರಶಾಂತ್ ವರ್ಮಾ ನಿರ್ದೇಶನದ 'ಹನುಮಾನ್' ಸಿನಿಮಾ ಈ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ತೇಜಾ ಸಜ್ಜಾ ಈ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು.
ಹಿಂದಿ ಬೆಲ್ಟ್‌ನಲ್ಲಿ ಕೂಡ ಸಿನಿಮಾ ಹಿಟ್ ಆಗಿತ್ತು. ಅದೇ ಕಾರಣಕ್ಕೆ ಸಿನಿಮಾ ಸೀಕ್ವೆಲ್ ಮಾಡಲು ಚಿತ್ರತಂಡ ಮುಂದಾಗಿದೆ. ಟೈಟಲ್ ಸಮೇತ ಸಿನಿಮಾ ಘೋಷಣೆ ಆಗಿದೆ. ಆದರೆ ಸದ್ಯಕ್ಕೆ ಚಿತ್ರದ ತಾರಾಗಣದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಈ ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ ಮೆಗಾಪವರ್ ಸ್ಟಾರ್ ನಟಿಸಬೇಕು ಎನ್ನುವುದು ನನ್ನ ಆಸೆ. ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ. ಅವರು ಒಪ್ಪಿದರೆ ನೋಡೋಣ ಎಂದು ನಿರ್ಮಾಪಕರು ಹೇಳಿದ್ದಾರೆ. ಹಾಗಾಗಿ ಚರಣ್ ಇದ್ದಕ್ಕೆ ಒಪ್ಪುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
'ಕಲ್ಕಿ 2898 AD' ಚಿತ್ರದಲ್ಲಿ ಪ್ರಭಾಸ್ ಕರ್ಣನಾಗಿ, ವಿಜಯ್ ದೇವರಕೊಂಡ ಅರ್ಜುನನಾಗಿ ನಟಿಸಿದ್ದಾರೆ. ಇನ್ನು ಕಳೆದ ವರ್ಷ ಬಂದ 'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸ್ಟಾರ್ ನಟರು ಪೌರಾಣಿಕ, ಐತಿಹಾಸಿಕ ಸಿನಿಮಾಗಳನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಜೈ ಹನುಮಾನ್' ಚಿತ್ರತಂಡ ಹಾಗೂ ಮೆಗಾ ಫ್ಯಾನ್ಸ್ ಆಸೆ ಈಡೇರುತ್ತಾ ಕಾದು ನೋಡಬೇಕಿದೆ.
ಮತ್ತೊಂದು ಕಡೆ ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಚಿತ್ರದ ಚಿತ್ರೀಕರಣವನ್ನು ರಾಮ್‌ಚರಣ್ ಮುಗಿಸಿದ್ದಾರೆ. ಈ ವರ್ಷವೇ ಸಿನಿಮಾ ತೆರೆಗೆ ತರುವ ಪ್ರಯತ್ನಗಳು ನಡೆಯುತ್ತಿದೆ. ಇನ್ನು ಬುಚ್ಚಿಬಾಬು ಹಾಗೂ ಸುಕುಮಾರ್ ಕಾಂಬಿನೇಷನ್‌ನಲ್ಲಿ ಚರಣ್ ಎರಡು ಸಿನಿಮಾ ಘೋಷಿಸಿದ್ದಾರೆ. ಈ ಹಿಂದೆ 'ರಂಗಸ್ಥಳಂ' ಚಿತ್ರಕ್ಕಾಗಿ ಸುಕ್ಕು- ಚರಣ್ ಕೈ ಜೋಡಿಸಿದ್ದರು. ಇನ್ನು ಬುಚ್ಚಿಬಾಬು ಆ ಚಿತ್ರಕ್ಕೆ ಸಹಾಯಕರಾಗಿ ಕೆಲಸ ಮಾಡಿದ್ದರು. ಹಾಗಾಗಿ ಈ ಸಿನಿಮಾಗಳು ಕುತೂಹಲ ಮೂಡಿಸಿವೆ.
'RRR' ಬಳಿಕ ರಾಮ್‌ಚರಣ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. 'ಗೇಮ್ ಚೇಂಜರ್' ಸಿನಿಮಾ ಈ ವರ್ಷವೇ ಬರುತ್ತಾ ಕಾದು ನೋಡಬೇಕಿದೆ. ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.


Click it and Unblock the Notifications











