'ಗೇಮ್ ಚೇಂಜರ್' ಫೇಕ್ ಕಲೆಕ್ಷನ್ ಪೋಸ್ಟರ್ ಬಿಟ್ಟಿದ್ದೇಕೆ? ದಿಲ್ ರಾಜು ಪ್ರತಿಕ್ರಿಯೆ
ರಾಮ್‌ಚರಣ್ ನಟನೆಯ 'ಗೇಮ್ ಚೇಂಜರ್' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಮೊದಲ ದಿನವೇ ಸಿನಿಮಾ ಪೈರಸಿ ಆಗಿ ಭಾರೀ ಪೆಟ್ಟು ಬಿದ್ದಿತ್ತು. ಶಂಕರ್ ನಿರ್ದೇಶನದ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು.
ದಿಲ್ ರಾಜು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಬಹಳ ತಡವಾಗಿ ಸಿನಿಮಾ ತೆರೆಗೆ ಬಂದಿತ್ತು. ಶಂಕರ್-ಚರಣ್ ಕಾಂಬಿನೇಷನ್ ರೇಂಜ್‌ಗೆ ತಕ್ಕಂತೆ ಸಿನಿಮಾ ಸದ್ದು ಮಾಡಲಿಲ್ಲ. ಚಿತ್ರಕ್ಕೆ ಮೊದಲ ದಿನವೇ ನಿರಸ ಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಚಿತ್ರತಂಡ ಕಲೆಕ್ಷನ್ ಪೋಸ್ಟರ್ ಬಿಟ್ಟು ಶಾಕ್ ಕೊಟ್ಟಿತ್ತು. ಒಂದೇ ದಿನಕ್ಕೆ 186 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಪೋಸ್ಟರ್ ಹೊರಬಂದು ಚರ್ಚೆ ಹುಟ್ಟಾಕ್ಕಿತ್ತು.

ಹೇಗೆ ಲೆಕ್ಕ ಹಾಕಿದರೂ ಒಂದು ದಿನಕ್ಕೆ 'ಗೇಮ್ ಚೇಂಜರ್' ಸಿನಿಮಾ ಅಷ್ಟು ಕಲೆಕ್ಷನ್ ಮಾಡಲು ಸಾಧ್ಯವಿಲ್ಲ. ಆದರೆ ಯಾಕೆ ಹೀಗೆ ಸುಳ್ಳು ಮಾಹಿತಿ ಕೊಡುತ್ತಿದ್ದಾರೆ ಎಂದು ಅಭಿಮಾನಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದು ಫೇಕ್ ಕಲೆಕ್ಷನ್ ಪೋಸ್ಟರ್ ಎಂದು ಸಿಕ್ಕಾಪಟ್ಟೆ ಟೀಕೆ ಎದುರಾಗಿತ್ತು. ಭಾರೀ ಟ್ರೋಲ್ ಎದುರಾಗುತ್ತಿದ್ದಂತೆ ಮತ್ತೆ ಚಿತ್ರತಂಡ ಕಲೆಕ್ಷನ್ ಬಗ್ಗೆ ಮಾತನಾಡಲಿಲ್ಲ. ಇದೀಗ ಆ ಪೋಸ್ಟರ್ ಬಗ್ಗೆ ಸ್ವತಃ ದಿಲ್ ರಾಜು ಪ್ರತಿಕ್ರಿಯಿಸಿದ್ದಾರೆ.
ದಿಲ್ ರಾಜು ನಿರ್ಮಾಣದ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. 'ಗೇಮ್‌ಚೇಂಜರ್' ಸಿನಿಮಾ ರಿಲೀಸ್ ಬೆನ್ನಲ್ಲೇ ಈ ಕಾಮಿಡಿ ಎಂಟರ್‌ಟೈನರ್ ಬಂದಿತ್ತು. ಅಂದಾಜು 250 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಚಿತ್ರದ ವಿತರಕರನ್ನು ಕರೆದು ದಿಲ್ ರಾಜು ಪಾರ್ಟಿ ಮಾಡಿದ್ದಾರೆ. ಅದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿಸಿ ಮಾತನಾಡಿದ್ದಾರೆ. ಈ ವೇಳೆ 'ಗೇಮ್‌ಚೇಂಜರ್' ಫೇಕ್ ಕಲೆಕ್ಷನ್ ಪೋಸ್ಟರ್ ಬಗ್ಗೆ ಪ್ರಶ್ನೆ ಎದುರಾಗಿದೆ.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ದಿಲ್ ರಾಜು ಕಿಸಿವಿಸಿಗೊಂಡರು. "ಆ ಬಗ್ಗೆ ನಿಮಗೇ ಗೊತ್ತು. ನಮಗೂ ಕೊಂಚ ವೀಕ್‌ನೆಸ್ ಇರುತ್ತದೆ. ಅದನ್ನೆಲ್ಲಾ ಹೇಳೋಕೆ ಆಗೊಲ್ಲ. ಅದನ್ನು ಒಪ್ಪಿಕೊಳ್ಳುತ್ತೇವೆ. ನಿಮಗೂ ಗೊತ್ತಲ್ವಾ? ಪ್ರತಿ ಥಿಯೇಟರ್‌ನಲ್ಲಿ ಎಷ್ಟು ಕಲೆಕ್ಷನ್ ಆಗುತ್ತದೆ, ಎನ್ನುವ ಲೆಕ್ಕ ನಿಮ್ಮ ಬಳಿ ಇರುತ್ತದೆ ಅಲ್ವಾ? ಹಾಗಾಗಿ ಮುಂದಿನ ದಿನಗಳಲ್ಲಿ ನೀವೇ ಲೆಕ್ಕ ಹಾಕಿ ಸಿನಿಮಾಗಳ ಕಲೆಕ್ಷನ್ ಬಗ್ಗೆ ನೀವು ಪೋಸ್ಟರ್ ರಿಲೀಸ್ ಮಾಡಿ. ಆಗ ಯಾವುದೇ ಪ್ರಾಬ್ಲಂ ಇರಲ್ಲ" ಎಂದಿದ್ದಾರೆ.
ಸದ್ಯ ದಿಲ್ ರಾಜು ಹೇಳಿಕೆ ವೈರಲ್ ಆಗುತ್ತಿದೆ. ಸ್ವತಃ ನಿರ್ಮಾಪಕರೇ ಅದು ಫೇಕ್ ಕಲೆಕ್ಷನ್ ಪೋಸ್ಟರ್ ಎಂದು ಒಪ್ಪಿಕೊಂಡಿದ್ದಾರೆ. ರಾಮ್‌ಚರಣ್ ತಾಖತ್ತು ಇಷ್ಟೇ ಅಂತ ಬೇರೆ ನಟರ ಅಭಿಮಾನಿಗಳು ವ್ಯಂಗ್ಯವಾಡುತ್ತಿದ್ದಾರೆ. ಇನ್ನು ಇದೇ ಸುದ್ದಿಗೋಷ್ಠಿಯಲ್ಲಿ ವಿತರಕರೊಬ್ಬರು ಮಾತನಾಡಿ "ನಾನು ಸುಳ್ಳು ಹೇಳಿದರೂ, ನಿರ್ಮಾಪಕರು, ವಿತರಕರು ಯಾಕೆ ಸುಳ್ಳು ಕೇಳಿದರೂ ಜನ ಮಾತ್ರ ಅದನ್ನು ನಂಬುತ್ತಿಲ್ಲ. ಜನರಿಗೆ ಎಲ್ಲಾ ಗೊತ್ತು" ಎಂದಿದ್ದಾರೆ.
ಜನವರಿ 10ರಂದು 'ಗೇಮ್‌ಚೇಂಜರ್' ಸಿನಿಮಾ ತೆರೆಗೆ ಬಂದಿತ್ತು. ತಂದೆ- ಮಗನಾಗಿ ದ್ವಿಪಾತ್ರದಲ್ಲಿ ರಾಮ್‌ಚರಣ್ ಅಬ್ಬರಿಸಿದ್ದರು. ಅವರ ನಟನೆಗೆ ಒಳ್ಳೆ ಅಂಕಗಳು ಸಿಕ್ಕಿತ್ತು. ಆದರೆ ಹಳೇ ಕಥೆ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಶಂಕರ್ ತಲೆ ಖಾಲಿ ಆಯ್ತಾ? ಇಂತಹ ಕಥೆಗಳನ್ನು ಈಗಾಗಲೇ ಸಾಕಷ್ಟು ನೋಡಿಬಿಟ್ಟಿದ್ದೇವೆ, ಅದನ್ನು ಮತ್ತೆ ಮತ್ತೆ ಯಾಕೆ ಹೇಳ್ತಿದ್ದಾರೆ. ಪ್ಯಾನ್ ಇಂಡಿಯಾ ಜಮಾನದಲ್ಲಿ ಇದೆಲ್ಲಾ ವರ್ಕ್ ಆಗಲ್ಲ ಎಂದು ಪ್ರೇಕ್ಷಕರು ಬೇಸರ ಹೊರ ಹಾಕಿದ್ದರು.


Click it and Unblock the Notifications











