'ಬಾಹುಬಲಿ'-3 ಬ್ರೇಕಿಂಗ್ ನ್ಯೂಸ್; ಮತ್ತೆ ಮಾಹಿಷ್ಮತಿ ಸಾಮ್ರಾಜ್ಯಕ್ಕೆ ಹೋಗಲು ರೆಡಿನಾ?
ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಸಿನಿಮಾಗಳು ಸೃಷ್ಟಿಸಿದ ಜಾದೂ ಅಷ್ಟಿಷ್ಟಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎರಡು ಭಾಗಗಳಾಗಿ ಬಂದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಮಾಹಿಷ್ಮತಿ ಸಾಮ್ರಾಜ್ಯದ ಕಥೆ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದರು. ದ್ವಿಪಾತ್ರದಲ್ಲಿ ಪ್ರಭಾಸ್ ಅಬ್ಬರಿಸಿ ಮೋಡಿ ಮಾಡಿದ್ದರು. ಇದೀಗ 'ಬಾಹುಬಲಿ- 3' ಸುದ್ದಿ ಬಂದಿದೆ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ 'ಬಾಹುಬಲಿ' ಸರಣಿ ಸಿನಿಮಾಗಳನ್ನು ಮರೆಯೋಕ್ಕೆ ಸಾಧ್ಯವಿಲ್ಲ. ಈ ಕಾಸ್ಟ್ಯೂಮ್ ಡ್ರಾಮಾ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಜಕ್ಕಣ್ಣ ತೆರೆಮೇಲೆ ಅದ್ಭುತ ದೃಶ್ಯಕಾವ್ಯ ತಂದು ಪ್ರೇಕ್ಷಕರನ್ನು ರಂಜಿಸಿದ್ದರು. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ಸತ್ಯರಾಜ್‌ರಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿ ಹುಬ್ಬೇರಿಸಿದರು. ಒಂದು ಹೊಸಲೋಕಕ್ಕೆ ಸಿನಿಮಾ ನೋಡುಗರನ್ನು ಕರೆದೊಯ್ದಿತ್ತು.

'ಬಾಹುಬಲಿ' ಸರಣಿ ಬಳಿಕ ರಾಜಮೌಳಿ 'RRR' ಸಿನಿಮಾ ಕಟ್ಟಿ ಕೊಟ್ಟರು. ಸದ್ಯ ಮಹೇಶ್ ಬಾಬು ನಟನೆಯ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಮುಂದಿನ ವರ್ಷ ಆ ಸಿನಿಮಾ ಸೆಟ್ಟೇರಲಿದೆ. ಯಾವಾಗ ಸಿನಿಮಾ ರಿಲೀಸ್ ಆಗುತ್ತದೆ ಎನ್ನುವ ಬಗ್ಗೆ ಗ್ಯಾರೆಂಟಿ ಇಲ್ಲ. ಈ ಬಾರಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಜಕ್ಕಣ್ಣ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಇನ್ನು ಪ್ರಭಾಸ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
'ಕಲ್ಕಿ 2898AD' ಸಕ್ಸಸ್ ಬಳಿಕ 'ದ ರಾಜಾಸಾಬ್' ಚಿತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ಬಣ್ಣ ಹಚ್ಚಿದ್ದಾರೆ. ಹನು ರಾಘವಪುಡಿ ನಿರ್ದೇಶನದ ಹೊಸ ಚಿತ್ರ ಕೂಡ ಶುರುವಾಗಿದೆ. 'ಸಲಾರ್'-2 ಹಾಗೂ 'ಕಲ್ಕಿ 2898AD'-2 ಚಿತ್ರಗಳಲ್ಲಿ ಕೂಡ ನಟಿಸಬೇಕಿದೆ. ಇದೆಲ್ಲದರ ನಡುವೆ 'ಬಾಹುಬಲಿ' ಭಾಗ-3 ಯಾವಾಗ ಬರುತ್ತದೆ? ಎನ್ನುವುದು ಅಭಿಮಾನಿಗಳ ಪ್ರಶ್ನೆ. ಆದರೆ ದಿಢೀರನೆ ಸಿನಿಮಾ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ತಮಿಳು ನಿರ್ಮಾಪಕ ಜ್ಞಾನವೇಲ್ ನೀಡಿರುವ ಹೇಳಿಕೆ.
ಜ್ಞಾನವೇಲ್ ರಾಜ ನಿರ್ಮಾಣದ 'ಕಂಗುವ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಚಾರಕ್ಕಾಗಿ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಈ ಹಾದಿಯಲ್ಲಿ 'ಬಾಹುಬಲಿ- 3' ಸಿನಿಮಾ ವಿಚಾರ ಲೀಕ್ ಮಾಡಿದ್ದಾರೆ. ಇದೇ ವಿಚಾರ ಈಗ ಟಾಲಿವುಡ್ ಅಂಗಳದಲ್ಲಿ ಹಾಟ್ ಟಾಪಿಕ್ ಆಗಿದೆ. ಹಾಗಾದರೆ ನಿಜಕ್ಕೂ 'ಬಾಹುಬಲಿ' ಮತ್ತೆ ಬರ್ತಾನಾ? ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಶುರುವಾಗಿದೆ.

"ನಾನು ಇತ್ತೀಚೆಗೆ 'ಬಾಹುಬಲಿ' ಸಿನಿಮಾ ನಿರ್ಮಾಪಕರ ಜೊತೆ ಮಾತನಾಡಿದೆ. ಅವರು ಮೂರನೇ ಭಾಗದ ಪ್ಲ್ಯಾನ್ ಮಾಡುತ್ತಿದ್ದಾರೆ. 'ಕಲ್ಕಿ'-2 ಚಿತ್ರ ಸದ್ಯಕ್ಕೆ ಬರಲ್ಲ. ಪ್ರಭಾಸ್ ಎರಡು ಬೇರೆ ಚಿತ್ರಗಳಲ್ಲಿ ನಟಿಸಿ ಬಳಿಕ 'ಕಲ್ಕಿ' ಬರುತ್ತದೆ. 'ಸಲಾರ್-2' ಚಿತ್ರಕ್ಕೂ ಮುನ್ನ ಮತ್ತೆರಡು ಬೇರೆ ಬೇರೆ ಸಿನಿಮಾಗಳು ಬರಲಿದೆ ಎಂದಿದ್ದಾರೆ. ಒಟ್ಟಾರೆ ಬಾಹುಬಲಿ ನಿರ್ಮಾಪಕರು ಪಾರ್ಟ್-3 ಬಗ್ಗೆ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೇ ಅಭಿಮಾನಿಗಳಿಗೆ ಖುಷಿ ತಂದಿದೆ.
ಈ ಹಿಂದೆ ರಾಜಮೌಳಿ ಹಾಗೂ ಅವರ ತಂದೆ ವಿಜಯೇಂದ್ರ ಪ್ರಭಾಸ್ 'ಬಾಹುಬಲಿ' ಸರಣಿ ಮುಂದುವರೆಸುವ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಮಾತನಾಡಿದ್ದರು. 'ಬಾಹುಬಲಿ' ಸರಣಿ ಚಿತ್ರಗಳಲ್ಲಿ ಸಣ್ಣ ಕಥೆ ಹೇಳಿದ್ದೇವೆ. ಅದನ್ನು ಕಾಮಿಕ್ಸ್ ಬುಕ್ ರೀತಿ ಹೊರ ತರುತ್ತೇವೆ ಎಂದಿದ್ದರು. ಇತ್ತೀಚೆಗೆ ಆನಿಮೇಷನ್ ರೂಪದಲ್ಲಿ ಕೂಡ ಸಿನಿಮಾ ಓಟಿಟಿಗೆ ಬಂದಿತ್ತು. ಆದರೆ ಫೀಚರ್ ಫಿಲ್ಮ್ ರೀತಿಯಲ್ಲಿ ಸರಣಿ ಮುಂದುವರೆಯಲಿಲ್ಲ.
ಸಂದರ್ಶನವೊಂದಲ್ಲಿ ಮಾತನಾಡಿದ್ದ ಮೌಳಿ "ಮಾಹಿಷ್ಮತಿ ಎನ್ನುವ ಒಂದು ಪ್ರಪಂಚವನ್ನು ನಾವು ಸೃಷ್ಟಿಸಿದ್ದೇವೆ. ಅದರಲ್ಲಿ ಸಣ್ಣದೊಂದು ಕಥೆ ಮಾತ್ರ ಹೇಳಿದ್ದೇವೆ. ಆ ಪ್ರಪಂಚದಲ್ಲಿ ಮತ್ತಷ್ಟು ಕಥೆ ಹೇಳಲು ಅವಕಾಶ ಇದೆ. ಮುಂದಿನ ದಿನಗಳಲ್ಲಿ ಅಂತಹ ಪ್ರಯತ್ನ ನಡೆಯಬಹುದು ಎಂದಿದ್ದರು. ವಿಜಯೇಂದ್ರ ಪ್ರಸಾದ್ ಪಾರ್ಟ್-3 ಮಾತ್ರವಲ್ಲ 4 ಹಾಗೂ 5 ಕೂಡ ಬರುತ್ತದೆ ಎಂದಿದ್ದರು.
'RRR' ಸೀಕ್ವೆಲ್ ಮಾಡುವ ಬಗ್ಗೆಯೂ ಹಿಂದೆ ಚರ್ಚೆ ಆಗಿತ್ತು. ರಾಜಮೌಳಿ ಬದಲು ಬೇರೆ ಯಾರಾದರೂ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ, ಜಕ್ಕಣ್ಣ ಸಲಹೆಗಾರಗಾಗಿ ಇರುತ್ತಾರೆ ಎನ್ನಲಾಗಿತ್ತು. 'ಬಾಹುಬಲಿ' ಸರಣಿ ವಿಚಾರದಲ್ಲೂ ಇದೇ ಐಡಿಯಾ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ರಾಜಮೌಳಿ ಹೊರತುಪಡಿಸಿ ಇನ್ನುಳಿದ ತಂಡ ಮತ್ತೊಂದು ಸೀಕ್ವೆಲ್‌ಗೆ ಕೆಲಸ ಮಾಡಬಹುದು ಎನ್ನುವುದು ಕೆಲವರ ಲೆಕ್ಕಾಚಾರ.


Click it and Unblock the Notifications











